ಜುವೆಲ್ಲರಿ ಉದ್ಯೋಗಿ ಹತ್ಯೆ ; ಸುಳಿವೇ ಇಲ್ಲದೆ ಆರೋಪಿ ಸೆರೆಹಿಡಿದಿದ್ದೇ ರೋಚಕ, ಕಾಸರಗೋಡು ಪೊಲೀಸರಿಗೆ ಕ್ಲೂ ಕೊಟ್ಟಿದ್ದ ಕಪ್ಪು ಬ್ಯಾಗ್, ಕಪ್ಪು ಶರ್ಟ್ !

04-03-23 07:34 pm       Mangalore Correspondent   ಕರಾವಳಿ

ಜುವೆಲ್ಲರಿ ಉದ್ಯೋಗಿಯ ಹತ್ಯೆ ಪ್ರಕರಣದಲ್ಲಿ ಆರೋಪಿ ಪತ್ತೆ ಮಾಡುವುದು ಪೊಲೀಸರಿಗೆ ಸವಾಲಾಗಿತ್ತು. ಸುಳಿವು ಇಲ್ಲದೇ ಇದ್ದ ಕಾರಣ ಕೇವಲ ಸಿಸಿಟಿವಿಯನ್ನು ಅನುಸರಿಸಿಯೇ ಕಾರ್ಯಾಚರಣೆ ನಡೆಸಲಾಗಿತ್ತು.

ಮಂಗಳೂರು, ಮಾ.4: ಜುವೆಲ್ಲರಿ ಉದ್ಯೋಗಿಯ ಹತ್ಯೆ ಪ್ರಕರಣದಲ್ಲಿ ಆರೋಪಿ ಪತ್ತೆ ಮಾಡುವುದು ಪೊಲೀಸರಿಗೆ ಸವಾಲಾಗಿತ್ತು. ಸುಳಿವು ಇಲ್ಲದೇ ಇದ್ದ ಕಾರಣ ಕೇವಲ ಸಿಸಿಟಿವಿಯನ್ನು ಅನುಸರಿಸಿಯೇ ಕಾರ್ಯಾಚರಣೆ ನಡೆಸಲಾಗಿತ್ತು. ಕಾಸರಗೋಡು ಪೊಲೀಸರ ಜೊತೆಗೆ ನಿಕಟ ಸಂಪರ್ಕ ಇರಿಸಿ ತನಿಖಾ ತಂಡ ಆರೋಪಿಯನ್ನು ಬೆನ್ನತ್ತಿತ್ತು. ಕಾಸರಗೋಡು ಪೊಲೀಸರ ಸಹಕಾರದಿಂದಾಗಿ ಆರೋಪಿಯನ್ನು ಪತ್ತೆ ಮಾಡುವುದು ಸಾಧ್ಯವಾಯ್ತು ಎಂದು ಪೊಲೀಸ್ ಕಮಿಷನರ್ ಕುಲದೀಪ್ ಆರ್ ಜೈನ್ ತಿಳಿಸಿದ್ದಾರೆ.

ಸುದ್ದಿಗೋಷ್ಟಿ ನಡೆಸಿ ಮಾಹಿತಿ ನೀಡಿದ ಅವರು, ಮಾ.2ರಂದು ಕಾಸರಗೋಡು ಪೊಲೀಸರು ಶಂಕೆ ಮೇರೆಗೆ ಯುವಕನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. ಆನಂತರ, ನಮ್ಮ ಮಂಗಳೂರಿನ ಪೊಲೀಸರ ತಂಡ ಅಲ್ಲಿಗೆ ತೆರಳಿ ತನಿಖೆ ನಡೆಸಿದಾಗ ಕೃತ್ಯವನ್ನು ಒಪ್ಪಿಕೊಂಡಿದ್ದಾನೆ ಎಂದು ತಿಳಿಸಿದ್ದಾರೆ. ಆರೋಪಿ ಶಿಫಾಸ್ ಕ್ಯಾಲಿಕಟ್ ನಿವಾಸಿಯಾಗಿದ್ದು, ಇದೇ ರೀತಿ ಕರ್ನಾಟಕ, ಕೇರಳ, ತಮಿಳುನಾಡಿನ ಗಡಿಭಾಗದಲ್ಲಿ ದರೋಡೆ ನಡೆಸುವ ಉದ್ದೇಶ ಹೊಂದಿರುವುದು ವಿಚಾರಣೆ ವೇಳೆ ಪತ್ತೆಯಾಗಿದೆ. ಈ ಹಿಂದೆ ಇಂತಹ ಕೃತ್ಯ ಎಸಗಿದ್ದಾನೆಯೇ ಅನ್ನುವುದರ ಬಗ್ಗೆ ಮಾಹಿತಿ ಸಂಗ್ರಹಿಸುತ್ತಿದ್ದೇವೆ ಎಂದರು.

ಜುವೆಲ್ಲರಿ ಅಂಗಡಿಯಲ್ಲಿ ಒಬ್ಬರೇ ಇದ್ದಾಗ ಕೃತ್ಯ ಎಸಗುವುದು ಆತನ ಉದ್ದೇಶವಾಗಿತ್ತು. ಫೆ.3ರಂದು ಮಿಲಾಗ್ರಿಸ್ ಬಳಿಯ ಜುವೆಲ್ಲರಿಯಲ್ಲಿ ಒಬ್ಬನೇ ಸಿಬಂದಿ ಇರುವುದನ್ನು ತಿಳಿದು ಗ್ರಾಹಕರ ಸೋಗಿನಲ್ಲಿ ಒಳನುಗ್ಗಿದ್ದು, ಬಳಿಕ ಜಗಳವಾಡಿ ಚಾಕು ಇರಿತ ಮಾಡಿದ್ದಾನೆ. ಅದೇ ಸಂದರ್ಭದಲ್ಲಿ ಜುವೆಲ್ಲರಿ ಮಾಲಕ ಒಳಗೆ ಬಂದಿದ್ದನ್ನು ನೋಡಿ ಕೈಗೆ ಸಿಕ್ಕಿದ್ದನ್ನು ಹಿಡಿದು ಪರಾರಿಯಾಗಿದ್ದ. ಆದರೆ ಅಲ್ಲಿ ಹೆಚ್ಚಿನವು ರೋಲ್ಡ್ ಗೋಲ್ಡ್ ಆಗಿರುವುದನ್ನು ಎದುರಿನಲ್ಲಿ ಇರಿಸಿದ್ದರಂತೆ. ಹಾಗಾಗಿ ಯಾವುದೇ ಚಿನ್ನದ ಆಭರಣಗಳು ಕಳವಾಗಿರಲಿಲ್ಲ. ಶಿಫಾಸ್ ವಿಚಾರಣೆ ಮಾಡಿದಾಗಲೂ ಯಾವುದೇ ಚಿನ್ನ ಸಿಕ್ಕಿಲ್ಲ ಎಂದಿದ್ದಾನೆ. ಆ ಬಗ್ಗೆ ಕುಟುಂಬಸ್ಥರನ್ನು ವಿಚಾರಣೆ ಮಾಡಬೇಕಷ್ಟೆ ಎಂದು ಕಮಿಷನರ್ ಹೇಳಿದ್ದಾರೆ.

ಬಂಧನದ ದಿನವೂ ಕಪ್ಪು ಶರ್ಟ್ ಹಾಕ್ಕೊಂಡಿದ್ದ. ಅಲ್ಲದೆ, ಒಳಭಾಗದಲ್ಲಿ ಇನ್ನೆರಡು ಶರ್ಟ್ ಹಾಕ್ಕೊಂಡಿದ್ದ. ಕಪ್ಪು ಬ್ಯಾಗ್ ಹಾಕ್ಕೊಂಡಿದ್ದ. ಮಂಗಳೂರಿನಲ್ಲಿ ಕೃತ್ಯ ಎಸಗಿ ಪರಾರಿಯಾಗಿದ್ದ ಸಂದರ್ಭದಲ್ಲಿಯೂ ಕಪ್ಪು ಶರ್ಟ್ ಮತ್ತು ಕಪ್ಪು ಬ್ಯಾಗ್ ಹೊಂದಿದ್ದರಿಂದ ಈತನ ಚಹರೆ ಅದೇ ವ್ಯಕ್ತಿಗೆ ಹೋಲುತ್ತಿದೆಯೆಂದು ಅಂದ್ಕೊಂಡು ಕಾಸರಗೋಡು ಪೊಲೀಸರು ವಿಚಾರಣೆ ನಡೆಸಿದ್ದಾರೆ. ಕಪ್ಪು ಬ್ಯಾಗ್ ಆರೋಪಿಯ ಸುಳಿವು ಕೊಟ್ಟಿತ್ತು ಎಂದು ಕುಲದೀಪ್ ತಿಳಿಸಿದರು. ಕಾಸರಗೋಡು ಡಿವೈಎಸ್ಪಿ ಸುಧಾಕರನ್, ಸಿಬಂದಿಗಳಾದ ಪ್ರೇಮ್, ಅಜಿತ್, ನಿಜಿನ್ ಮತ್ತು ರಾಜೇಶ್ ಆರೋಪಿಯನ್ನು ವಶಕ್ಕೆ ಪಡೆಯಲು ಸಾಥ್ ನೀಡಿದ್ದಾರೆ. ಅದಕ್ಕಾಗಿ ಡಿವೈಎಸ್ಪಿ ಸೇರಿ ಮೂವರನ್ನು ಮಂಗಳೂರಿನ ಕಮಿಷನರ್ ಕಚೇರಿಗೆ ಕರೆದು ಮಂಗಳೂರು ಪೊಲೀಸರ ಪರವಾಗಿ ಕಮಿಷನರ್ ಕುಲದೀಪ್ ಜೈನ್ ಸನ್ಮಾನ ಮಾಡಿದ್ದಾರೆ. ಅಲ್ಲದೆ, ಪ್ರಕರಣದ ಬೆನ್ನು ಬಿದ್ದು ಆರೋಪಿ ಸೆರೆಹಿಡಿದ ಮಂಗಳೂರಿನ ಸಿಸಿಬಿ ಮತ್ತು ಇತರ ಪೊಲೀಸರ ತಂಡಕ್ಕೆ 25 ಸಾವಿರ ಬಹುಮಾನ ನೀಡಿದ್ದಾರೆ.

Mangalore Commisoneer kuldeep Kumar felicitate Kasargod Police in jewellery staff murder case in Hampankatta. It was revealed that the accused had worn multiple layers of shirts to evade identification after committing the crime, which was a murder with the intention of robbery. The accused has confessed to the crime, and the police have sought him for further investigation after seeking police custody.