ಸುರತ್ಕಲ್ ಟೋಲ್ ಸುಲಿಗೆ ;  ಅ.28ರಿಂದ ಹಗಲು ರಾತ್ರಿ ಅನಿರ್ದಿಷ್ಟ ಧರಣಿಗೆ ನಿರ್ಧಾರ 

19-10-22 10:41 pm       Mangalore Correspondent   ಕರಾವಳಿ

ಸುರತ್ಕಲ್ ಅಕ್ರಮ ಟೋಲ್ ಗೇಟ್ ತೆರವಿಗೆ ಒತ್ತಾಯಿಸಿ ನಡೆಯುತ್ತಿರುವ ಹೋರಾಟವನ್ನು ಟೋಲ್ ಸಂಗ್ರಹ ಸ್ಥಗಿತಗೊಳ್ಳುವ ವರೆಗೂ ಮುಂದುವರಿಸಲು ನಿರ್ಧರಿಸಲಾಗಿದೆ.

ಮಂಗಳೂರು, ಅ.19 : ಸುರತ್ಕಲ್ ಅಕ್ರಮ ಟೋಲ್ ಗೇಟ್ ತೆರವಿಗೆ ಒತ್ತಾಯಿಸಿ ನಡೆಯುತ್ತಿರುವ ಹೋರಾಟವನ್ನು ಟೋಲ್ ಸಂಗ್ರಹ ಸ್ಥಗಿತಗೊಳ್ಳುವ ವರೆಗೂ ಮುಂದುವರಿಸಲು ನಿರ್ಧರಿಸಲಾಗಿದೆ. ಅಕ್ಟೋಬರ್ 28 ರಿಂದ ಸುರತ್ಕಲ್ ಟೋಲ್ ಗೇಟ್ ಸಮೀಪ ಅನಿರ್ದಿಷ್ಟ ಕಾಲ ಹಗಲು ರಾತ್ರಿ ಧರಣಿ ನಡೆಸಲು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿ ಸಭೆಯಲ್ಲಿ ತೀರ್ಮಾನಿಸಲಾಗಿದೆ. 

ಅವಿಭಜಿತ ದಕ್ಷಿಣ ಕನ್ನಡ ಜಿಲ್ಲೆಯ ಜನರು ಸಾವಿರಾರು ಸಂಖ್ಯೆಯಲ್ಲಿ ಟೋಲ್ ಗೇಟ್ ಮುತ್ತಿಗೆ ಹೋರಾಟದಲ್ಲಿ ಭಾಗವಹಿಸಿ ಒಕ್ಕೊರಲಿನಿಂದ ಆಗ್ರಹಿಸಿದರೂ ಬಿಜೆಪಿ ಸರಕಾರ ಟೋಲ್ ಸಂಗ್ರಹ ಸ್ಥಗಿತಗೊಳಿಸದೆ ಭಂಡತನ ಪ್ರದರ್ಶಿಸಿದೆ. ಪೊಲೀಸ್ ಬಲವನ್ನು ಪ್ರಯೋಗಿಸಿ ಪ್ರತಿಭಟನಾಕಾರರ ಮೇಲೆ ಮುಗಿಬಿದ್ದು ಚದುರಿಸಿದೆ. ಇದು ಬಿಜೆಪಿ ಸರಕಾರ ಹಾಗೂ ಸಂಸದ, ಶಾಸಕರುಗಳ ಜನವಿರೋಧಿ ಧೋರಣೆಯನ್ನು ತೋರಿಸಿದೆ. ಇದೇ ಸಂದರ್ಭ ಮುತ್ತಿಗೆ ಪ್ರತಿಭಟನೆಗೆ ವ್ಯಾಪಕ ಜನಬೆಂಬಲ ವ್ಯಕ್ತವಾಗಿದ್ದರಿಂದ 15-20 ದಿನಗಳ ಅವಧಿಯನ್ನು ಟೋಲ್ ಗೇಟ್ ಮುಚ್ಚಲು ನೀಡಬೇಕು ಎಂದು ಜಿಲ್ಲಾಡಳಿತ, ಹೆದ್ದಾರಿ ಪ್ರಾಧಿಕಾರ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ಹೋರಾಟ ಸಮಿತಿಯಲ್ಲಿ ಮನವಿ ಮಾಡಿದ್ದರು. ಟೋಲ್ ತೆರವಿಗೆ ಸಂಬಂಧಿಸಿ ಇದೇ ರೀತಿಯ ಭರವಸೆಗಳನ್ನು ಈ ಹಿಂದೆಯೂ ನೀಡಿದ್ದು ಜನತೆ ಇವರ ಮೇಲಿನ ನಂಬಿಕೆಯನ್ನು ಕಳೆದುಕೊಂಡಿದ್ದಾರೆ. ಇವರ ಭರವಸೆಗಳನ್ನು ನಂಬಿ ಹೋರಾಟ ಸ್ಥಗಿತಗೊಳಿಸಿದರೆ ಸುರತ್ಕಲ್  ಟೋಲ್ ಸುಲಿಗೆ ಶಾಶ್ವತಗೊಳ್ಳಲಿದೆ‌ ಎಂಬ ಜನಾಭಿಪ್ರಾಯ ಸಾರ್ವತ್ರಿಕವಾಗಿದೆ.

ಜಿಲ್ಲಾಡಳಿತ, ಸಂಸದರ ಕಾಲಮಿತಿ ನವಂಬರ್ 7ಕ್ಕೆ ಅಂತ್ಯಗೊಳ್ಳುತ್ತದೆ. ಅದಕ್ಕೆ ಹತ್ತು ದಿನ ಮುಂಚಿತವಾಗಿ ಅಕ್ಟೋಬರ್ 28 ಕ್ಕೆ ಅನಿರ್ದಿಷ್ಟ ಧರಣಿ ಆರಂಭಿಸುವುದು. ಆ ಮೂಲಕ ನವೆಂಬರ್ 7ಕ್ಕೆ ಟೋಲ್ ಸಂಗ್ರಹ ಸ್ಥಗಿತಗೊಳಿಸಲು ಜನಾಭಿಪ್ರಾಯವನ್ನು ಕ್ರೋಢೀಕರಿಸುವ, ಒತ್ತಡ ಸೃಷ್ಟಿಸುವ ಪ್ರಯತ್ನವನ್ನು  ಅನಿರ್ಧಿಷ್ಟಾವಧಿ ಧರಣಿ ಮೂಲಕ ಮಾಡುವುದು. ಒಟ್ಟು ಟೋಲ್ ಗೇಟ್ ತೆರವುಗೊಳ್ಳುವವರೆಗೂ ಹೋರಾಟ ಮುಂದುವರಿಸುವುದು ಎಂದು ಸಭೆಯಲ್ಲಿ ನಿರ್ಧರಿಸಲಾಯಿತು.

ಸಭೆಯ ಅಧ್ಯಕ್ಷತೆಯನ್ನು ಸಮಿತಿಯ ಸಹ ಸಂಚಾಲಕ, ಮಾಜಿ ಉಪಮೇಯರ್ ಪುರುಷೋತ್ತಮ ಚಿತ್ರಾಪುರ ವಹಿಸಿದ್ದರು. ಸಂಚಾಲಕ ಮುನೀರ್ ಕಾಟಿಪಳ್ಳ, ನ್ಯಾಯವಾದಿ ದಿನೇಶ್ ಹೆಗ್ಡೆ ಉಳೆಪಾಡಿ, ದಲಿತ ಮುಖಂಡರಾದ ಎಂ ದೇವದಾಸ್, ರಘು ಎಕ್ಕಾರು, ಸಾಮಾಜಿಕ ಮುಖಂಡರಾದ ಎಂ.ಜಿ ಹೆಗ್ಡೆ, ವೈ ರಾಘವೇಂದ್ರ ರಾವ್, ಡಿವೈಎಫ್ಐ ಮುಖಂಡರಾದ ಬಿ.ಕೆ ಇಮ್ತಿಯಾಜ್, ಶ್ರೀನಾಥ್ ಕುಲಾಲ್, ವಿವಿಧ ಸಂಘಟನೆಗಳ ಪ್ರಮುಖರಾದ ಕಿಶನ್ ಕುಮಾರ್ ಕೊಳ್ಕೆಬೈಲು, ವಸಂತ ಬರ್ನಾಡ್, ರಾಜೇಶ್ ಪೂಜಾರಿ ಕುಳಾಯಿ, ದಿನೇಶ್ ಕುಂಪಲ, ಹರೀಶ್ ಪೇಜಾವರ, ಶೇಖರ ಹೆಜಮಾಡಿ, ರಮೇಶ್ ಟಿ.ಎನ್, ಶ್ರೀಕಾಂತ್ ಸಾಲ್ಯಾನ್, ಮಾಜಿ ಕಾರ್ಪೊರೇಟರ್ ಗಳಾದ ಪ್ರತಿಭಾ ಕುಳಾಯಿ, ಅಯಾಝ್ ಕೃಷ್ಣಾಪುರ ಉಪಸ್ಥಿತರಿದ್ದರು‌.

Mangalore illegal toll at Surathkal, day night protest decided from October 28th.