ಮಂಗಳೂರು ಪಾಲಿಕೆಯ ಭ್ರಷ್ಟ ಅಧಿಕಾರಿಗೆ ಕೋರ್ಟ್ ಕಪಾಳಮೋಕ್ಷ ; ನಾಲ್ಕು ವರ್ಷ ಶಿಕ್ಷೆ, ಒಂದು ಕೋಟಿ ದಂಡ ! 

14-10-22 06:25 pm       Mangalore Correspondent   ಕರಾವಳಿ

ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಹಿರಿಯ ನೈರ್ಮಲ್ಯ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿವಲಿಂಗ ಕೊಂಡಗುಳಿ ಎಂಬ ಭ್ರಷ್ಟ ಅಧಿಕಾರಿಯ ಮೇಲೆ 3ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಕಪಾಳಮೋಕ್ಷ ಮಾಡಿದೆ.

ಮಂಗಳೂರು, ಅ.14 : ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಹಿರಿಯ ನೈರ್ಮಲ್ಯ ನಿರೀಕ್ಷಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದ ಶಿವಲಿಂಗ ಕೊಂಡಗುಳಿ ಎಂಬ ಭ್ರಷ್ಟ ಅಧಿಕಾರಿಯ ಮೇಲೆ 3ನೇ ಹೆಚ್ಚುವರಿ ಜಿಲ್ಲಾ ಸತ್ರ ನ್ಯಾಯಾಲಯ ಕಪಾಳಮೋಕ್ಷ ಮಾಡಿದೆ. ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಸಿದ್ದ ಕಾರಣಕ್ಕೆ ಆರೋಪಿ ಅಧಿಕಾರಿಗೆ ನಾಲ್ಕು ವರ್ಷಗಳ ಶಿಕ್ಷೆ ಮತ್ತು ಒಂದು ಕೋಟಿ ರೂಪಾಯಿ ದಂಡ ವಿಧಿಸಿದೆ. 

ಶಿವಲಿಂಗ ಕೊಂಡಗುಳಿ ಭ್ರಷ್ಟ ಅಧಿಕಾರಿಯಾಗಿದ್ದಲ್ಲದೆ, ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಹತ್ತಾರು ವರ್ಷಗಳಿಂದ ಝಂಡಾ ಊರಿ ಲಂಚ ತಿಂದು ತೇಗಿದ್ದ. 2013ರಲ್ಲಿ ಹೆಚ್ಚಿನ ಪ್ರಮಾಣದ ಆಸ್ತಿ ಗಳಿಸಿದ್ದಾಗಿ ಖಚಿತ ಮಾಹಿತಿಗಳೊಂದಿಗೆ ಲೋಕಾಯುಕ್ತ ಅಧಿಕಾರಿಗಳು ಈತನ ಮನೆಗೆ ದಾಳಿ ನಡೆಸಿದ್ದರು. ಪರಿಶೀಲನೆ ಸಂದರ್ಭದಲ್ಲಿ ಜಮೀನು, ಬಂಗಾರ ಸೇರಿ ನಿಗದಿತ ಆದಾಯಕ್ಕಿಂತ ಹೆಚ್ಚುವರಿಯಾಗಿ 70 ಲಕ್ಷ ರೂ. ಮೌಲ್ಯದ ಆಸ್ತಿ ಗಳಿಸಿರುವುದು ಪತ್ತೆಯಾಗಿತ್ತು. 

Decade-old cases await clearance by Karnataka Lokayukta | Deccan Herald

ಆಗಿನ ಲೋಕಾಯುಕ್ತ ಡಿವೈಎಸ್ಪಿ ಉಮೇಶ್ ಜಿ. ಶೇಟ್ ತನಿಖೆ ನಡೆಸಿ ಜಿಲ್ಲಾ ಸತ್ರ ನ್ಯಾಯಾಲಯಕ್ಕೆ ದೋಷಾರೋಪ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶ ಬಿಬಿ ಜಕಾತಿ ಅವರು, ಆರೋಪಿ ಅಧಿಕಾರಿ ಅಕ್ರಮ ಆಸ್ತಿ ಗಳಿಸಿರುವುದು ಸಾಬೀತಾದ ಹಿನ್ನೆಲೆಯಲ್ಲಿ ಅ.14 ರಂದು ತೀರ್ಪು ನೀಡಿದ್ದಾರೆ. ‌

ಲೋಕಾಯುಕ್ತ ಕಾಯ್ದೆಯಡಿ ದಾಖಲಾದ ಸೆಕ್ಷನ್ 13(1) ಇ ಮತ್ತು ಲಂಚ ವಿರೋಧಿ ಕಾಯ್ದೆ 13(2) ಪ್ರಕರಣದಲ್ಲಿ ಆರೋಪಿ ಶಿವಲಿಂಗ ಕೊಂಡಗುಳಿಗೆ ನಾಲ್ಕು ವರ್ಷಗಳ ಸಜೆ ಪ್ರಕಟಿಸಿದ್ದಾರೆ. ಅಲ್ಲದೆ, ಅಕ್ರಮ ಗಳಿಸಿದ ಸಂಪತ್ತನ್ನು ಸರಕಾರಕ್ಕೆ ಹಿಂದಿರುಗಿಸುವ ಸಲುವಾಗಿ ಒಂದು ಕೋಟಿ ರೂಪಾಯಿ ದಂಡ ವಿಧಿಸಿದ್ದಾರೆ. ದಂಡ ಕಟ್ಟಲು ವಿಫಲವಾದಲ್ಲಿ ಒಂದು ವರ್ಷ ಹೆಚ್ಚುವರಿ ಶಿಕ್ಷೆ ಅನುಭವಿಸಬೇಕೆಂದು ತೀರ್ಪಿನಲ್ಲಿ ತಿಳಿಸಿದ್ದಾರೆ. 

Mangaluru City Corporation to Get a New Mayor & Deputy Mayor on 2 March -  Mangalorean.com

ಶಿವಲಿಂಗ ಕೊಂಡಗುಳಿ 2013ರಲ್ಲಿ ಒಮ್ಮೆಗೆ ಕರ್ತವ್ಯದಿಂದ ಅಮಾನತು ಆಗಿದ್ದರೂ, ಆನಂತರ ಅದೇ ಜಾಗಕ್ಕೆ ಬಂದು ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಒಂಬತ್ತು ವರ್ಷಗಳಿಂದಲೂ ಕರ್ತವ್ಯ ನಿರ್ವಹಿಸುತ್ತಿದ್ದ. ಶುಕ್ರವಾರ ನ್ಯಾಯಾಲಯಕ್ಕೆ ಹಾಜರಾಗಿದ್ದ ಶಿವಲಿಂಗ ವಿರುದ್ಧ ಕೋರ್ಟ್ ಶಿಕ್ಷೆ ಪ್ರಕಟಿಸುತ್ತಿದ್ದಂತೆ ಭ್ರಷ್ಟ ಅಧಿಕಾರಿಯನ್ನು ಪೊಲೀಸರು ಕೈತೋಳ ತೊಡಿಸಿ ಜೈಲಿಗೆ ಒಯ್ದಿದ್ದಾರೆ.

Mangalore MCC corrupted officer Shivalinga punished with four years of jail and one crore fine.