ಚಿರತೆ ಹೆಸರಲ್ಲಿ ಗರ್ಭಿಣಿ ಮಹಿಳೆಗೆ ಅವಮಾನ ; ಫೇಸ್ಬುಕ್ ಪೋಸ್ಟ್ ಹಾಕಿದ್ದ ಸುನಿಲ್ ಬಜಿಲಕೇರಿ ಬಂಧನ 

08-10-22 05:13 pm       Mangalore Correspondent   ಕರಾವಳಿ

ನಮೀಬಿಯಾದಿಂದ ಭಾರತಕ್ಕೆ ತರಲಾಗಿರುವ ಚೀತಾ ಗರ್ಭಿಣಿಯಾದ ಸುದ್ದಿಗೆ ಗರ್ಭಿಣಿ ಮಹಿಳೆಯೊಬ್ಬರ ಪೋಟೋವನ್ನು ಪೋಟೋಶಾಪ್ ಮಾಡಿ ಮುಖಕ್ಕೆ ಚಿರತೆ ಮುಖವನ್ನು ಜೋಡಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಸಾಮಾಜಿಕ ಕಾರ್ಯಕರ್ತ ಸುನಿಲ್ ಬಜಿಲಕೇರಿ ಅವರನ್ನು ಪೊಲೀಸರು ಶುಕ್ರವಾರ ರಾತ್ರಿ ಬಂಧಿಸಿದ್ದಾರೆ. 

ಮಂಗಳೂರು, ಅ.8 : ನಮೀಬಿಯಾದಿಂದ ಭಾರತಕ್ಕೆ ತರಲಾಗಿರುವ ಚೀತಾ ಗರ್ಭಿಣಿಯಾದ ಸುದ್ದಿಗೆ ಗರ್ಭಿಣಿ ಮಹಿಳೆಯೊಬ್ಬರ ಪೋಟೋವನ್ನು ಪೋಟೋಶಾಪ್ ಮಾಡಿ ಮುಖಕ್ಕೆ ಚಿರತೆ ಮುಖವನ್ನು ಜೋಡಿಸಿ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದ ಸಾಮಾಜಿಕ ಕಾರ್ಯಕರ್ತ ಸುನಿಲ್ ಬಜಿಲಕೇರಿ ಅವರನ್ನು ಪೊಲೀಸರು ಶುಕ್ರವಾರ ರಾತ್ರಿ ಬಂಧಿಸಿದ್ದಾರೆ. 

ಇವರು ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಗರ್ಭಿಣಿ ಮಹಿಳೆಯೊಬ್ಬರ ದೇಹಕ್ಕೆ ಚಿರತೆಯ ತಲೆ ಅಂಟಿಸಿ ವಿಕೃತವಾಗಿರುವ ಚಿತ್ರವನ್ನು ಹಂಚಿಕೊಂಡಿದ್ದಲ್ಲದೆ, ‘ನಮೀಬಿಯಾ ಚೀತಾಗೆ ಸೀಮಂತ ಯಾವಾಗ?’ ಎಂದು ಪ್ರಶ್ನೆ ಮಾಡಿದ್ದರು. ಇದು ಗರ್ಭಿಣಿ ಮಹಿಳೆ ಮತ್ತು ಭಾರತೀಯ ಸಂಸ್ಕೃತಿಗೆ ಮಾಡಿರುವ ಅವಹೇಳನ ಎಂದು ಆರೋಪಿಸಿ ಎಡಪದವು ಗ್ರಾಮದ ಮಹಿಳೆಯೊಬ್ಬರು ಬಜ್ಪೆ ಪೊಲೀಸ್ ಠಾಣೆಗೆ ದೂರು ನೀಡಿದ್ದರು. 

ಮಹಿಳೆ ನೀಡಿದ ದೂರಿನ ಆಧಾರದಲ್ಲಿ ಪೊಲೀಸರು ಶುಕ್ರವಾರ ರಾತ್ರಿ ಸುನಿಲ್ ಬಜಿಲಕೇರಿ ಅವರನ್ನು ಬಂಧಿಸಿದ್ದರು. ಬಂಧನ ಕ್ರಮಕ್ಕೆ ಭಾರೀ ಖಂಡನೆಯೂ ವ್ಯಕ್ತವಾಗಿತ್ತು. ಶನಿವಾರ ಹಿರಿಯ ವಕೀಲ ಅರುಣ್ ಬಂಗೇರ ಬಂಧನ ಕ್ರಮವನ್ನು ಜಿಲ್ಲಾ ನ್ಯಾಯಾಲಯದಲ್ಲಿ ಪ್ರಶ್ನಿಸಿದ್ದು ಜಾಮೀನು ನೀಡುವಂತೆ ವಾದಿಸಿದ್ದಾರೆ. ಪೊಲೀಸರು ಮೂರು ದಿನ ಕಸ್ಟಡಿ ನೀಡಲು ಕೇಳಿಕೊಂಡಿದ್ದರು.‌ ಆದರೆ ವಕೀಲರ ಮನವಿ ಪರಿಗಣಿಸಿ ನ್ಯಾಯಾಧೀಶರು ಜಾಮೀನು ನೀಡಿದ್ದಾರೆ. 

ಉರ್ವಾ ಠಾಣೆ ವ್ಯಾಪ್ತಿಯ ಮನೆಯಿಂದ ಸುನೀಲ್ ಬಜಿಲಕೇರಿ ಅವರನ್ನು ಬಜ್ಪೆ ಪೊಲೀಸರು ಬಂಧಿಸಿದ್ದರು. ಇದರ ಬೆನ್ನಲ್ಲೇ ಸುನಿಲ್ ವಿರುದ್ಧ ಉರ್ವಾ ಠಾಣೆಯಲ್ಲಿ ಮತ್ತೊಂದು ಪ್ರಕರಣ ದಾಖಲಾಗಿದ್ದು ಐಪಿಸಿ ಸೆಕ್ಷನ್ 353 ಅಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

Bajpe police arrested social worker Sunil Bajilakeri on the accusation of insulting pregnant women using the face of a leopard. Sunil is accused of writing derogatory comments along with the post.