ಸುರತ್ಕಲ್ ಟೋಲ್ ಗೇಟ್ ತೆರವಿಗಾಗಿ ಸೆ.13ರಂದು ಸಾಮೂಹಿಕ ಧರಣಿ ; ತೆರವಿನ ದಿನಾಂಕ ಘೋಷಿಸಲು ಜಿಲ್ಲಾಡಳಿತಕ್ಕೆ ಸವಾಲು

12-09-22 09:18 pm       Mangalore Correspondent   ಕರಾವಳಿ

ಸುರತ್ಕಲ್ ಟೋಲ್ ಗೇಟ್ ತೆರವು ಮಾಡಲಾಗುತ್ತದೆ ಎಂದು ಜನರನ್ನು ನಂಬಿಸಿಕೊಂಡು ಬಂದ ಶಾಸಕ, ಸಂಸದರಿಗೆ ಬಿಸಿ ಮುಟ್ಟಿಸಲು ಸ್ಥಳೀಯರು ರೆಡಿಯಾಗುತ್ತಿದ್ದಾರೆ.

ಮಂಗಳೂರು, ಸೆ.12: ಸುರತ್ಕಲ್ ಟೋಲ್ ಗೇಟ್ ತೆರವು ಮಾಡಲಾಗುತ್ತದೆ ಎಂದು ಜನರನ್ನು ನಂಬಿಸಿಕೊಂಡು ಬಂದ ಶಾಸಕ, ಸಂಸದರಿಗೆ ಬಿಸಿ ಮುಟ್ಟಿಸಲು ಸ್ಥಳೀಯರು ರೆಡಿಯಾಗುತ್ತಿದ್ದಾರೆ. ಟೋಲ್ ಗೇಟ್ ತೆರವಿನ ಬಗ್ಗೆ ನಿಶ್ಚಿತ ದಿನಾಂಕ ಘೋಷಣೆ ಮಾಡಬೇಕು ಎಂದು ಸುರತ್ಕಲ್ ಟೋಲ್ ಗೇಟ್ ಮುಂದೆ ಸೆ.13ರಂದು ಒಂದು ದಿನದ ಸತ್ಯಾಗ್ರಹ ನಡೆಸಲಿದ್ದಾರೆ.

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳ ಸಮಾನ ಮನಸ್ಕ ಸಂಘಟನೆಗಳೊಂದಿಗೆ ಸೇರಿ ಸುರತ್ಕಲ್ ಎನ್ಐಟಿಕೆ ಟೋಲ್ ಗೇಟ್ ಬಳಿ ಸಾಮೂಹಿಕ ಧರಣಿ ಕೈಗೊಳ್ಳಲಾಗಿದ್ದು, ಇದಕ್ಕಾಗಿ ಕಳೆದ ಹತ್ತು ದಿನಗಳಿಂದ ಸಿದ್ಧತೆ ನಡೆಸಲಾಗಿದೆ. ಮುನೀರ್ ಕಾಟಿಪಳ್ಳ, ಪ್ರತಿಭಾ ಕುಳಾಯಿ, ಪುರುಷೋತ್ತಮ ಚಿತ್ರಾಪುರ ಸೇರಿದಂತೆ ಜಿಲ್ಲೆಯ ವಿವಿಧ ಸಂಘಟನೆಗಳ ಪ್ರಮುಖರು ವಿವಿಧೆಡೆ ಸಭೆಯನ್ನೂ ನಡೆಸಿದ್ದಾರೆ.

ಕಳೆದ ನಾಲ್ಕು ವರ್ಷಗಳ ಹಿಂದೆಯೇ ಟೋಲ್ ಗೇಟನ್ನು ತೆರವುಗೊಳಿಸಿ, ಹೆಜಮಾಡಿ ಟೋಲ್ ಗೇಟ್ ಜೊತೆಗೆ ವಿಲೀನ ಮಾಡುವ ಬಗ್ಗೆ ರಾಜ್ಯ ಸರಕಾರ ನಿರ್ಣಯ ಕೈಗೊಂಡಿತ್ತು. ಆದರೆ, ಇದನ್ನು ಕಾರ್ಯಗತಗೊಳಿಸಲು ಸ್ಥಳೀಯ ಜನಪ್ರತಿನಿಧಿಗಳು ವಿಫಲರಾಗಿದ್ದಾರೆ. ತಾತ್ಕಾಲಿಕ ನೆಪದಲ್ಲಿ ಆರಂಭಿಸಿದ್ದ ಟೋಲ್ ಗೇಟನ್ನು ನಿರಂತರವಾಗಿ ನಡೆಸಿಕೊಂಡು ಬಂದಿದ್ದು, ಜನರನ್ನು ನೇರವಾಗಿ ಲೂಟಿ ಮಾಡಲಾಗುತ್ತಿದೆ. ಕಳೆದ ಮಾರ್ಚ್ ತಿಂಗಳಲ್ಲಿ ಸಂಸತ್ತಿನಲ್ಲಿ ಮಾತನಾಡಿದ್ದ ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ, 60 ಕಿಮೀ ಒಳಗಿನ ಎಲ್ಲ ಟೋಲ್ ಗೇಟ್ ಗಳನ್ನು ತೆರವುಗೊಳಿಸಲಾಗುವುದು ಎಂದು ಹೇಳಿದ್ದರು. ಅದರಂತೆ, ಸುರತ್ಕಲ್ ಅಕ್ರಮ ಟೋಲ್ ಗೇಟ್ ತೆರವಾಗುವ ಬಗ್ಗೆ ಮಾತುಗಳು ಕೇಳಿಬಂದಿದ್ದವು.

ಈ ನಡುವೆ, ಹೆದ್ದಾರಿ ಪ್ರಾಧಿಕಾರದ ಅಧಿಕಾರಿಗಳು ಎನ್ಎಂಪಿಟಿ ಒಳಗಡೆ ಟೋಲ್ ಗೇಟ್ ಸ್ಥಳಾಂತರಿಸುವ ಬಗ್ಗೆ ಪ್ರಕ್ರಿಯೆ ನಡೆಯುತ್ತಿದೆ. ಸದ್ಯದಲ್ಲೇ ಸುರತ್ಕಲ್ ಟೋಲ್ ಗೇಟ್ ತೆರವಾಗುತ್ತದೆ ಎಂದು ಪತ್ರಕರ್ತರ ಪ್ರಶ್ನೆಗೆ ಮಾಹಿತಿ ನೀಡಿದ್ದರು. ಆದರೆ, ಈ ಬಗ್ಗೆ ಯಾವುದೇ ಅಧಿಕೃತ ಮಾಹಿತಿಗಳು ಲಭ್ಯವಾಗಿಲ್ಲ. ಇದರ ನಡುವಲ್ಲೇ ಟೋಲ್ ಗೇಟ್ ಗುತ್ತಿಗೆಯನ್ನು ಒಂದು ವರ್ಷದ ಅವಧಿಗೆ ವಿಸ್ತರಣೆ ಮಾಡಲಾಗಿತ್ತು. ಸಂಸದ ನಳಿನ್ ಕುಮಾರ್, ಶಾಸಕ ಭರತ್ ಶೆಟ್ಟಿಯ ವಿರುದ್ಧ ಸ್ಥಳೀಯರ ಆಕ್ರೋಶ ಎದ್ದಿದ್ದರೂ, ಅದನ್ನು ನಿರ್ಲಕ್ಷಿಸುತ್ತಾ ಬರಲಾಗಿದೆ. ಹೀಗಾಗಿ ಇದೀಗ ಮತ್ತೆ ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ನೇತೃತ್ವದಲ್ಲಿ ಸಾಮೂಹಿಕ ಧರಣಿ ಹಮ್ಮಿಕೊಳ್ಳಲಾಗಿದೆ. ಟೋಲ್ ಗೇಟ್ ತೆರವು ಮಾಡುವ ಬಗ್ಗೆ ಜಿಲ್ಲಾಡಳಿತ ದಿನಾಂಕ ಘೋಷಣೆ ಮಾಡದೇ ಇದ್ದಲ್ಲಿ ಇದೇ ದಿನ ಟೋಲ್ ಗೇಟ್ ತೆರವುಗೊಳಿಸುವ ಬಗ್ಗೆ ದಿನಾಂಕ ಘೋಷಿಸುತ್ತೇವೆ ಎಂದು ಹೋರಾಟಗಾರರು ಎಚ್ಚರಿಸಿದ್ದಾರೆ.

Mangalore Surathkal toll gate, DYFI to sit dharna as toll gate still not vacated from spot even after promises.