ಮೋದಿ ಬರ್ತಿದ್ದಾರೆ, ಜಾಗ ಬಿಡಿ.. ಕುಳೂರಿನಲ್ಲಿ ಬಸವನ ಮೇಯಿಸಿ ಟೆಂಟ್ ಕಟ್ಟಿಕೊಂಡಿದ್ದೋರಿಗೂ ಸಂಚಕಾರ, ಮಕ್ಕಳು, ಬಾಣಂತಿಯರು ಬೀದಿಪಾಲು !

28-08-22 10:54 pm       Mangalore Correspondent   ಕರಾವಳಿ

ಮೋದಿ ಕಾರ್ಯಕ್ರಮ ನಡೆಯುವ ಕುಳೂರಿನ ಗೋಲ್ಡ್ ಫಿಂಚ್ ಮೈದಾನದ ಹೊರಭಾಗದಲ್ಲಿ ಕಳೆದ ಹತ್ತಾರು ವರ್ಷಗಳಿಂದ ಬಸವನ ಕಟ್ಟಿಕೊಂಡು ಟೆಂಟಲ್ಲಿದ್ದವರಿಗೂ ಸಂಚಕಾರ ಬಂದಿದೆ.

ಮಂಗಳೂರು, ಆಗಸ್ಟ್ 29: ಪ್ರಧಾನಿ ಮೋದಿ ಬರುತ್ತಿರುವ ಕಾರಣಕ್ಕೆ ಮಂಗಳೂರಿನಲ್ಲಿ ರಸ್ತೆಗೆ ಸುಣ್ಣ ಬಳಿಯಲಾಗುತ್ತಿದೆ. ಗುಂಡಿ ಬಿದ್ದ ಜಾಗಕ್ಕೆ ತೇಪೆ ಹಾಕಲಾಗುತ್ತಿದೆ. ಆದರೆ, ಮೋದಿ ಕಾರ್ಯಕ್ರಮ ನಡೆಯುವ ಕುಳೂರಿನ ಗೋಲ್ಡ್ ಫಿಂಚ್ ಮೈದಾನದ ಹೊರಭಾಗದಲ್ಲಿ ಕಳೆದ ಹತ್ತಾರು ವರ್ಷಗಳಿಂದ ಬಸವನ ಕಟ್ಟಿಕೊಂಡು ಟೆಂಟಲ್ಲಿದ್ದವರಿಗೂ ಸಂಚಕಾರ ಬಂದಿದೆ.

ಕುಳೂರಿನ ಮೈದಾನದಿಂದ ಸಮೀಪದಲ್ಲೇ ಇರುವ ಸಿಖ್ ಗುರುದ್ವಾರದ ಬಳಿಯಲ್ಲಿ ಒಂಬತ್ತು ಕುಟುಂಬಗಳು ಟೆಂಟ್ ಹಾಕ್ಕೊಂಡು ಜೀವನ ಕಟ್ಟಿಕೊಂಡಿವೆ. ಆದರೆ ಈಗ ಮೋದಿ ಅವರಿಗೆ ಮೈದಾನದ ಹೊರಗೆ ಟೆಂಟ್ ಕಾಣಿಸಬಾರದೆಂದು ಕಾವೂರು ಪೊಲೀಸರು ಬಂದು ಟೆಂಟ್ ತೆಗೆಸಿದ್ದಾರೆ. ಇದರಿಂದ ಅಲ್ಲಿದ್ದ ಮಕ್ಕಳು, ಬಾಣಂತಿಯರು ಬೀದಿ ಪಾಲಾಗಿದ್ದು, ವಾರ ಕಾಲ ಇಲ್ಲಿ ಟೆಂಟ್ ಹಾಕ್ಕೊಳ್ಳುವಂತಿಲ್ಲ ಎಂದು ಪೊಲೀಸರು ಗದರಿದ್ದಾರೆ.

ಪೊಲೀಸರು ಬಂದು ನೋಟೀಸ್ ಕೊಟ್ಟು ಹೋಗಿದ್ದಾರೆ. ಒಂಬತ್ತು ಕುಟುಂಬಗಳು, ಮಕ್ಕಳು, ಹೆಂಗಸರು ಸೇರಿ ಒಟ್ಟು 30 ಮಂದಿ ಇದ್ದೇವೆ. ಒಮ್ಮೆಲೇ ಬಂದು ಟೆಂಟ್ ತೆಗೀಬೇಕು ಅಂದ್ರೆ ನಾವು ಎಲ್ಲಿ ಹೋಗಬೇಕು. ಸಜ್ಜೆ, ನವಣಿ ಎಲ್ಲ ಟೆಂಟಲ್ಲಿದೆ, ಮಳೆ ಬಂದರೆ ಏನು ಮಾಡೋದು. ಈಗ ಟೆಂಟ್ ತೆಗಿದಿದ್ದೀವಿ, ಮೋದಿಯವ್ರಿಗೆ ಟೆಂಟ್ ಕಾಣಿಸೋದು ಬೇಡ. ನಾವು ಇಲ್ಲೇ ಪಕ್ಕದಲ್ಲಿ ಒಂದು ಸಣ್ಣ ರೂಮಿನಲ್ಲಿ ಇದ್ದೇವೆ. ಮಕ್ಕಳು, ತಾಯಂದಿರು ಒಳಗಡೆ ಮಲಗುತ್ತಾರೆ, ನಾವು ಹೊರಗಡೆ ಟರ್ಪಾಲ್ ಹೊದ್ದುಕೊಂಡು ಮಲಗುತ್ತೇವೆ. ಮಳೆ ಬಂದರೆ ಕಷ್ಟ ಆಗುತ್ತದೆ. ಊಟ ಎಲ್ಲ ಹೊರಗಡೆಯೇ ಮಾಡಬೇಕು ಎಂದು ಕಷ್ಟ ಹೇಳಿಕೊಂಡಿದ್ದಾರೆ ಶೇಷಪ್ಪಯ್ಯ.

ಇವರು ದೂರದ ಆಂಧ್ರಪ್ರದೇಶದ ಪ್ರಕಾಶಂ ಜಿಲ್ಲೆಯವರು. ಇವರು ಹೇಳೋ ಪ್ರಕಾರ, ಕಳೆದ 20-30 ವರ್ಷಗಳಿಂದಲೂ ಬಸವನ ಕಟ್ಟಿಕೊಂಡು ಮಂಗಳೂರು ನಗರದಲ್ಲಿ ಊರೆಲ್ಲ ತಿರುಗುತ್ತಾರೆ. ಈಗ 14 ಬಸವ ಇದೆಯಂತೆ. ಮೋದಿ ಬರ್ತಿರೋದ್ರಿಂದ ಒಂದು ವಾರ ಎಲ್ಲಿಯೂ ಹೊರಗೆ ಹೋಗಬಾರದು ಎಂದು ಹೇಳಿದ್ದಾರಂತೆ, ಪೊಲೀಸರು. ದನಕ್ಕೆ ಮೇವು ಆಗಬೇಕು. ಕ್ರಯಕ್ಕೆ ಮೇವು ತಂದು ಹಾಕೋದಾದ್ರೆ, ದಿನಕ್ಕೆ ಮುನ್ನೂರು ರೂಪಾಯಿ ಮೇವು ಬೇಕಾಗುತ್ತದೆ. ಇಲ್ಲಿಯೇ ಮೇವಿರುವಲ್ಲಿ ಕಟ್ಟಿ ಹೊಟ್ಟೆ ತುಂಬಿಸುತ್ತೇವೆ. ಇನ್ನು ಒಂದು ವಾರ ಕಾಲ ಅವು ಉಪವಾಸ ಇರಬೇಕು ಎಂದಿದ್ದಾರೆ ಸಂತ್ರಸ್ತರು. ಕಳೆದ ಬಾರಿ ಮೋದಿ ಇಲ್ಲಿ ಬಂದಾಗ, ಎಬ್ಬಿಸಿದ್ದಾರೆಯೇ ಎಂದು ಕೇಳಿದ್ದಕ್ಕೆ, ಇಲ್ಲರೀ, ಕಳೆದ ಬಾರಿ ಎಬ್ಬಿಸಿಲ್ಲ. ಈ ಬಾರಿ ಟೆಂಟ್ ಕಾಣಿಸಬಾರದು ಅಂದಿದ್ದಾರೆ. ಸಿಸಿಟಿವಿ, ಕ್ಯಾಮರಾ ಎಲ್ಲ ಹಾಕ್ದಾಗ ಅದರಲ್ಲಿ ಟೆಂಟ್ ಬರಬಾರದು ಅಂತ. ನಮ್ದೇನೂ ತಕರಾರಿಲ್ಲ. ಒಂದ್ವಾರ ಏನಾದ್ರೂ ಮಾಡ್ಕೋಬೇಕು. ಏನ್ಮಾಡೋದು, ದೊಡ್ಡವರು ಹೇಳಿದ್ದನ್ನು ಕೇಳಬೇಕಲ್ಲ ಎಂದ್ರು ಶೇಷಪ್ಪ.

ಪ್ರತಿ ಬಾರಿ ಮಳೆಗಾಲಕ್ಕೆ ಊರು ಕಡೆ ಹೋಗುತ್ತೇವೆ. ಬಸವ ಹೇರಿಕೊಂಡೇ ಹೋಗುವುದು, ಆಮೇಲೆ ಇಲ್ಲಿ ಬಂದು ಐದಾರು ತಿಂಗಳು ಇರುತ್ತೇವೆ. ಟೆಂಟ್ ಹಾಕಿಯೇ ಇರೋದು. ನಾವು ಮೊದಲು ಬಂದಾಗ ಇಲ್ಲಿ ಕಾಲೇಜು ಇರಲಿಲ್ಲ. ಇಷ್ಟೊಂದು ಬಿಲ್ಡಿಂಗೂ ಇರಲಿಲ್ಲ ಎಂದು ನೆನಪಿಸಿಕೊಂಡರು ಶೇಷಪ್ಪಯ್ಯ. ಮೋದಿ ಬರ್ತಾರೆಂದು ಬಡಪಾಯಿಗಳನ್ನು ಬೀದಿ ಪಾಲು ಮಾಡಿದ್ದು ಮಾತ್ರ ಸ್ಥಳೀಯರನ್ನು ಕಣ್ಣು ಮಂಜಾಗಿಸಿದೆ. ಮೋದಿಗೇನು ಗೊತ್ತು ಇವರ ಪಾಡು ಅಂತ ಕೇಳುತ್ತಿದ್ದಾರೆ, ಸ್ಥಳೀಯರು.

Mangalore poor families living in tent vacated from Kulur as Modi arrives on Sep 2nd to attend the program held at Kulur Gold Finch city.