ಮಂಗಳೂರಿನ ರಸ್ತೆ ಗುಂಡಿ ತೋರಿಸಿ, ಬಹುಮಾನ ಗೆಲ್ಲಿ ; ರಸ್ತೆ ಗುಂಡಿ ಪತ್ತೆಗೆ ಐವಾನ್ ಡಿಸೋಜ ಸ್ಪರ್ಧೆ 

24-08-22 11:43 am       Mangalore Correspondent   ಕರಾವಳಿ

ಮಂಗಳೂರಿನಲ್ಲಿ ರಸ್ತೆ ಗುಂಡಿಗಳಿಂದ ಪ್ರಾಣಾಪಾಯ ಹೆಚ್ಚುತ್ತಿದೆ. ಇದೇ ವೇಳೆ, ಕಾಂಗ್ರೆಸ್ ಮುಖಂಡ ಐವಾನ್ ಡಿಸೋಜ ರಸ್ತೆ ಗುಂಡಿ ಬಗ್ಗೆ ಗಮನ ಸೆಳೆಯಲು ಸ್ಪರ್ಧೆ ಹಮ್ಮಿಕೊಂಡಿದ್ದಾರೆ.‌

ಮಂಗಳೂರು, ಆಗಸ್ಟ್ 24: ಮಂಗಳೂರಿನಲ್ಲಿ ರಸ್ತೆ ಗುಂಡಿಗಳಿಂದ ಪ್ರಾಣಾಪಾಯ ಹೆಚ್ಚುತ್ತಿದೆ. ಇದೇ ವೇಳೆ, ಕಾಂಗ್ರೆಸ್ ಮುಖಂಡ ಐವಾನ್ ಡಿಸೋಜ ರಸ್ತೆ ಗುಂಡಿ ಬಗ್ಗೆ ಗಮನ ಸೆಳೆಯಲು ಸ್ಪರ್ಧೆ ಹಮ್ಮಿಕೊಂಡಿದ್ದಾರೆ.‌ ಮಹಾನಗರಪಾಲಿಕೆ ವ್ಯಾಪ್ತಿಯ ರಸ್ತೆಗಳ ಅಪಾಯಕಾರಿ ಗುಂಡಿಗಳ ಛಾಯಾಚಿತ್ರಗಳನ್ನು ವಾಟ್ಸಪ್‌ ಮೂಲಕ 9731485875 ನಂಬರ್‌ಗೆ ಕಳುಹಿಸಿ, 5,000 ರೂ. ಬಹುಮಾನ ಗೆಲ್ಲಿ ಎಂದು ಸ್ಪರ್ಧೆ ಏರ್ಪಡಿಸಿದ್ದಾರೆ‌‌.‌

ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದ ಐವನ್‌ ಡಿ’ಸೋಜ, ಮಂಗಳೂರು ಮಹಾನಗರಪಾಲಿಕೆ ವ್ಯಾಪ್ತಿಯ ರಸ್ತೆಗಳಲ್ಲಿ ಗುಂಡಿಗಳೇ ಜಾಸ್ತಿಯಾಗಿದ್ದು ಅಮಾಯಕರು ಬಲಿಯಾಗುತ್ತಿದ್ದಾರೆ. ಈ ಬಗ್ಗೆ ಸ್ಮಾರ್ಟ್‌ ಸಿಟಿ ಅಧಿಕಾರಿಗಳಿಗೆ, ಮಹಾನಗರ ಪಾಲಿಕೆಗೆ ಮನವಿ ಮಾಡಿದರೂ ಪ್ರಯೋಜನವಾಗಿಲ್ಲ. ಆದ್ದರಿಂದ ನಗರ ಪಾಲಿಕೆ ಮತ್ತು ಸ್ಮಾರ್ಟ್‌ ಸಿಟಿಯ ಆಡಳಿತ ವಿರೋಧಿಸಿ ಸರ್ಕಾರದ ಗಮನ ಸೆಳೆಯಲು ರಸ್ತೆ ಗುಂಡಿಗಳ ಬಗ್ಗೆಯೇ ಫೋಟೊ ಸ್ಪರ್ಧೆ ಆಯೋಜಿಸಿದ್ದೇವೆ ಎಂದರು. 

ಸ್ಪರ್ಧೆ ಆ.24 ರಿಂದ ಆ.28ರ ಸಂಜೆ 5 ಗಂಟೆಯ ವರೆಗೆ ನಡೆಯಲಿದೆ. ಮಂಗಳೂರು ನಗರದ ಸ್ಮಾರ್ಟ್‌ ಸಿಟಿ ವ್ಯಾಪ್ತಿಯ ಅತ್ಯಂತ ದೊಡ್ಡ ಮತ್ತು ಅಪಾಯಕಾರಿ ಗುಂಡಿ ಗುರುತಿಸಿದ ಮೂವರು ಸ್ಪರ್ಧಿಗಳಿಗೆ ಬಹುಮಾನ ವಿತರಿಸಲಾಗುವುದು.

Former MLC Ivan D'souza, wife test positive for Covid19 | udayavani

ಪ್ರಥಮ ಬಹುಮಾನವನ್ನು ದ.ಕ ಜಿಲ್ಲಾ ಕಾರ್ಮಿಕ ಪರಿಷತ್‌ ಬಸ್‌ ಸಂಘದ ನೌಕರರ ವತಿಯಿಂದ 5 ಸಾವಿರ ರೂ., ದ್ವಿತೀಯ ಬಹುಮಾನ ತ್ರಿಚಕ್ರ, ಗೂಡ್ಸ್‌, ಟೆಂಪೋ ಮಾಲಕ/ಚಾಲಕರ ಸಂಘದ ವತಿಯಿಂದ 3 ಸಾವಿರ ರೂ, ತೃತೀಯ ಬಹುಮಾನವಾಗಿ ಕುಲಶೇಖರ ಮಹಿಳಾ ದ್ವಿಚಕ್ರ ವಾಹನ ಚಾಲಕ/ಮಾಲಕರ ಪರವಾಗಿ 2 ಸಾವಿರ ರೂ. ನೀಡಲು ತೀರ್ಮಾನಿಸಿದ್ದೇವೆ. ಗುಂಡಿ ಸ್ಪರ್ಧೆಯಲ್ಲಿ ಭಾಗವಹಿಸುವವರು 9731485875 ವಾಟ್ಸಪ್‌ ಸಂಖ್ಯೆಗೆ ಗುಂಡಿಗಳ ಚಿಕ್ಕ ವೀಡಿಯೋ, ಫೋಟೋ ಮತ್ತು ಜಿಪಿಎಸ್‌ ಲೊಕೇಷನ್ ಅನ್ನು ಕಳುಹಿಸಿಕೊಡತಕ್ಕದ್ದು, ಇದು ಮನೋರಂಜನೆಗೆ ಅಲ್ಲ, ಜನಜಾಗೃತಿ ಕಾರ್ಯಕ್ರಮ. ಆ.30 ರಂದು ಪಾಲಿಕೆ ಕಚೇರಿ ಮುಂದೆ ಬಹುಮಾನ ವಿತರಿಸಲಾಗುವುದು ಎಂದು ಹೇಳಿದ್ದಾರೆ.

Worst potholes in Mangalore send WhatsApp pictures and get price money of 5000 Rs says congress leader Ivan Dsouza.