76ನೇ ಸ್ವಾತಂತ್ರ್ಯೋತ್ಸವ ; ಕನಸಿನ ಮಂಗಳೂರು ತೆರೆದಿಟ್ಟ ಸಚಿವ ಸುನಿಲ್, ಮಳೆಹಾನಿಗೆ 110 ಕೋಟಿ ಪ್ಯಾಕೇಜ್, ಮಂಗಳೂರಿಗೆ ನೂರು ಚಾರ್ಜಿಂಗ್ ಯುನಿಟ್, 300 ಕೆವಿ ಸಬ್ ಸ್ಟೇಶನ್

15-08-22 01:06 pm       Mangalore Correspondent   ಕರಾವಳಿ

ನಗರದ ನೆಹರು ಮೈದಾನದಲ್ಲಿ ಜಿಲ್ಲಾ ಮಟ್ಟದ 76ನೇ ಸ್ವಾತಂತ್ರ್ಯೋತ್ಸವ ನಡೆದಿದ್ದು, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಧ್ವಜಾರೋಹಣ ನೆರವೇರಿಸಿದ್ದಾರೆ.

ಮಂಗಳೂರು, ಆಗಸ್ಟ್ 15: ನಗರದ ನೆಹರು ಮೈದಾನದಲ್ಲಿ ಜಿಲ್ಲಾ ಮಟ್ಟದ 76ನೇ ಸ್ವಾತಂತ್ರ್ಯೋತ್ಸವ ನಡೆದಿದ್ದು, ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ಸುನಿಲ್ ಕುಮಾರ್ ಧ್ವಜಾರೋಹಣ ನೆರವೇರಿಸಿದ್ದಾರೆ. ಆಬಳಿಕ ಸ್ವಾತಂತ್ರ್ಯೋತ್ಸವ ಸಂದೇಶದಲ್ಲಿ ಕನಸಿನ ಮಂಗಳೂರು, ಅಭಿವೃದ್ಧಿಯ ಮಂಗಳೂರು ಬಗೆಗೆ ತನ್ನ ಯೋಜನೆಗಳನ್ನು ಹರವಿಟ್ಟಿದ್ದಾರೆ.

ಮಂಗಳೂರು ತೀವ್ರ ಗತಿಯಲ್ಲಿ ಬೆಳೆಯುತ್ತಿದ್ದು, ಹತ್ತು ವರ್ಷಗಳ ನಂತರ ಮಂಗಳೂರಿನ ಜನತೆಗೆ ಒಂದು ಸಾವಿರ ಮೆಗಾ ವ್ಯಾಟ್ ವಿದ್ಯುತ್ ಬೇಕಾಗುತ್ತದೆ. ಸದ್ಯಕ್ಕೆ 750 ಮೆಗಾವ್ಯಾಟ್ ಖರ್ಚಾಗುತ್ತಿದೆ. ಈ ನಿಟ್ಟಿನಲ್ಲಿ ಮಂಗಳೂರಿನಲ್ಲಿ ಹೊಸತಾಗಿ 300 ಕೆವಿ ಸಬ್ ಸ್ಟೇಶನ್ ಸ್ಥಾಪಿಸಲಾಗುವುದು ಎಂದು ಇಂಧನ ಸಚಿವರೂ ಆಗಿರುವ ಸುನಿಲ್ ಕುಮಾರ್ ಹೇಳಿದ್ದಾರೆ. ಇದಲ್ಲದೆ, ಮಂಗಳೂರು ನಗರದ ವ್ಯಾಪ್ತಿ ಬೆಳೆಯುತ್ತಿರುವುದರಿಂದ ತ್ಯಾಜ್ಯ ವಿಲೇವಾರಿ ಸವಾಲನ್ನು ಎದುರಿಸಲು ಜಿಲ್ಲೆಯ ನಾಲ್ಕು ಕಡೆ ತ್ಯಾಜ್ಯ ವಿಲೇ ಘಟಕ ಸ್ಥಾಪಿಸಲಾಗುವುದು. ಮಂಗಳೂರಿನ ತೆಂಕ ಎಡಪದವು, ಬಂಟ್ವಾಳ, ಉಜಿರೆ ಮತ್ತು ಪುತ್ತೂರಿನಲ್ಲಿ ತ್ಯಾಜ್ಯ ಘಟಕ ನಿರ್ಮಾಣ ಆಗಲಿದೆ ಎಂದರು.

ಇದಲ್ಲದೆ, ನಗರ ಭಾಗದಲ್ಲಿ ಇಲೆಕ್ಟ್ರಿಕ್ ವಾಹನಗಳ ಬಳಕೆ ಹೆಚ್ಚುತ್ತಿದ್ದು, ನಿಗದಿತ 75 ಚಾರ್ಜಿಂಗ್ ಸೆಂಟರ್ ಅಲ್ಲದೆ ಒಟ್ಟು ನೂರು ಚಾರ್ಜಿಂಗ್ ಯುನಿಟ್ ಮಾಡಲಾಗುವುದು. ಉಡುಪಿಯಲ್ಲಿ 50 ಚಾರ್ಜಿಂಗ್ ಯುನಿಟ್ ಸ್ಥಾಪಿಸಲಾಗುವುದು. ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅಂತರ್ಜಲ ಹೆಚ್ಚಿಸಲು 75 ಕೆರೆಗಳನ್ನು ಅಭಿವೃದ್ಧಿ ಪಡಿಸುವ ಗುರಿಯಿದೆ. ಕನಸಿನ ಮಂಗಳೂರು ಭಾಗವಾಗಿ ಹೆಚ್ಚುವರಿಯಾಗಿ ಒಂದೂ ಕಾಲು ಲಕ್ಷ ಮನಗಳಿಗೆ ನೀರು ಒದಗಿಸುವ ಗುರಿಯಿದೆ. ಪುಂಜಾಲಕಟ್ಟೆಯಲ್ಲಿ ಈಗಾಗಲೇ ನಾರಾಯಣ ಗುರು ವಸತಿ ಶಾಲೆ ಮಂಜೂರಾಗಿದ್ದು, ಶೀಘ್ರದಲ್ಲಿ ನಿರ್ಮಾಣ ಆಗಲಿದೆ.

ಈ ಬಾರಿ ಭೂಕುಸಿತ, ಅತಿ ವೃಷ್ಟಿಯಿಂದಾಗಿ ಬಹಳಷ್ಟು ಹಾನಿಯಾಗಿದೆ. ಪ್ರವಾಹ ಎದುರಿಸುವಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು ಶ್ರಮ ಪಟ್ಟಿದ್ದಾರೆ. ಭೂಕುಸಿತಕ್ಕೆ ಏನು ಕಾರಣ ಅನ್ನೋದ್ರ ಬಗ್ಗೆ ತಜ್ಞರ ವರದಿ ಪಡೆಯುತ್ತೇವೆ. ಇದೇ ವೇಳೆ, ಭೂಕುಸಿತ ಮತ್ತು ಮಳೆಹಾನಿಗೆ 110 ಕೋಟಿ ಪರಿಹಾರದ ಪ್ಯಾಕೇಜ್ ಕೇಳಿ ಮುಖ್ಯಮಂತ್ರಿಗೆ ಮನವಿ ಮಾಡಲಾಗುವುದು. ಮಂಗಳೂರು ಮತ್ತು ಉಡುಪಿಗೆ ಟೆಂಪಲ್ ಟೂರಿಸಂ ಯೋಜನೆಯಿದ್ದು, ದೇವಸ್ಥಾನಗಳ ವೀಕ್ಷಣೆಗೆ ವಿಶೇಷ ವ್ಯವಸ್ಥೆ ಮಾಡಲಾಗುವುದು ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಶಾಸಕರಾದ ವೇದವ್ಯಾಸ ಕಾಮತ್, ಭರತ್ ಶೆಟ್ಟಿ, ಮೇಯರ್ ಪ್ರೇಮಾನಂದ ಶೆಟ್ಟಿ, ಜಿಲ್ಲಾಧಿಕಾರಿ ರಾಜೇಂದ್ರ ಕೆವಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಋಷಿಕೇಶ್ ಸೋನವಾಣೆ, ಜಿಪಂ ಸಿಇಓ ಡಾ.ಕುಮಾರ್ ಮತ್ತಿತರ ಅಧಿಕಾರಿಗಳು ಉಪಸ್ಥಿತರಿದ್ದರು.

The Independence Day celebrations were held at Nehru Maidan here on Monday August 15 with pomp, colour and patriotic fervour.