ಮಕ್ಕಳ ಕೈಯಲ್ಲಿದ್ದ ರಾಖಿ ತೆಗೆಸಿದ ಆರೋಪ ; ಶಾಲೆಯ ಮುಂದೆ ಸೇರಿದ ಪೋಷಕರು, ವಾಗ್ವಾದ

12-08-22 07:30 pm       Mangalore Correspondent   ಕರಾವಳಿ

ಶಾಲಾ ಮಕ್ಕಳು ಧರಿಸಿದ್ದ ರಾಖಿಯನ್ನು ತರಗತಿಯಲ್ಲಿ ಶಿಕ್ಷಕರು ತೆಗೆಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪೋಷಕರು ಮತ್ತು ಹಿಂದು ಸಂಘಟನೆ ಕಾರ್ಯಕರ್ತರು ಶಾಲೆಗೆ ನುಗ್ಗಿ ಪ್ರತಿಭಟನೆ ನಡೆಸಿದ ಘಟನೆ ಕಾಟಿಪಳ್ಳದಲ್ಲಿ ನಡೆದಿದೆ.

ಮಂಗಳೂರು, ಆಗಸ್ಟ್ 12: ಶಾಲಾ ಮಕ್ಕಳು ಧರಿಸಿದ್ದ ರಾಖಿಯನ್ನು ತರಗತಿಯಲ್ಲಿ ಶಿಕ್ಷಕರು ತೆಗೆಸಿದ್ದಾರೆ ಎಂಬ ಆರೋಪದ ಹಿನ್ನೆಲೆಯಲ್ಲಿ ಪೋಷಕರು ಮತ್ತು ಹಿಂದು ಸಂಘಟನೆ ಕಾರ್ಯಕರ್ತರು ಶಾಲೆಗೆ ನುಗ್ಗಿ ಪ್ರತಿಭಟನೆ ನಡೆಸಿದ ಘಟನೆ ಕಾಟಿಪಳ್ಳದಲ್ಲಿ ನಡೆದಿದೆ.

ಸುರತ್ಕಲ್ ಬಳಿಯ ಕಾಟಿಪಳ್ಳದ ಇನ್ ಫ್ಯಾಂಟ್ರಿ ಮೇರಿ ಆಂಗ್ಲ ಮಾಧ್ಯಮ ಪ್ರೌಢಶಾಲೆಯಲ್ಲಿ ಘಟನೆ ನಡೆದಿದ್ದು, ಶಿಕ್ಷಕರ ಧೋರಣೆಯನ್ನು ಖಂಡಿಸಿ ವಿದ್ಯಾರ್ಥಿಗಳ ಪೋಷಕರು, ಹಿಂದು ಸಂಘಟನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದಾರೆ. ಶಾಲಾ ನಿಯಮದ ಪ್ರಕಾರ ರಕ್ಷಾ ಬಂಧನ ಕಟ್ಟುವಂತಿಲ್ಲ ಎಂದು ಶಾಲೆಯ ಶಿಕ್ಷಕರು ಗುರುವಾರ ರಾಖಿ ಕಟ್ಟಿದ್ದ ಮಕ್ಕಳನ್ನು ಬಿಚ್ಚಿಸಿದ್ದಾರೆ ಎನ್ನಲಾಗಿದೆ.

ಇದರ ಬಗ್ಗೆ ಮಕ್ಕಳು ಪೋಷಕರಲ್ಲಿ ತಿಳಿಸಿದ್ದು, ಇಂದು ಬೆಳಗ್ಗೆ ಆಸುಪಾಸಿನ 50ಕ್ಕೂ ಹೆಚ್ಚು ಪೋಷಕರು ಶಾಲೆಯ ಮುಂದೆ ಸೇರಿದ್ದಾರೆ. ಇದೇ ವೇಳೆ, ವಿಷಯ ತಿಳಿದು ಸಂಘಟನೆಯ ಕಾರ್ಯಕರ್ತರು ಕೂಡ ಬಂದಿದ್ದು, ಹಿಂದು ಮಕ್ಕಳ ಭಾವನೆಗೆ ಧಕ್ಕೆ ತಂದಿದ್ದೀರಿ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಬಳಿಕ ಸುರತ್ಕಲ್ ಪೊಲೀಸರು ಕೂಡ ಸ್ಥಳಕ್ಕೆ ಬಂದಿದ್ದು ಪೋಷಕರನ್ನು ಸಮಾಧಾನಗೊಳಿಸಿದ್ದಾರೆ. ರಾಖಿಯನ್ನು ತೆಗೆಸಲು ಹೇಳಿರುವ ಶಿಕ್ಷಕರು ಬಂದು ಕ್ಷಮೆ ಕೇಳಬೇಕೆಂದು ಕಾರ್ಯಕರ್ತರು ಪಟ್ಟು ಹಿಡಿದಿದ್ದಾರೆ.

ಕೊನೆಗೆ, ಶಾಲಾಡಳಿತ ಮಂಡಳಿ ನೋಡಿಕೊಳ್ಳುವ ಫಾದರ್ ಸಂತೋಷ್ ಲೋಬೊ ಸ್ಥಳಕ್ಕೆ ಬಂದು ವಿವಾದವನ್ನು ಇಲ್ಲಿಗೇ ಮುಕ್ತಾಯಗೊಳಿಸುವ ಎಂದು ಕಾರ್ಯಕರ್ತರನ್ನು ಸಮಾಧಾನ ಪಡಿಸಿದ್ದಾರೆ. ಅಲ್ಲದೆ, ರಾಖಿ ಕಟ್ಟುವುದಕ್ಕೇನು ನಮ್ಮ ಆಕ್ಷೇಪವಿಲ್ಲ. ಕೆಲವು ವಿದ್ಯಾರ್ಥಿಗಳು ಬಲವಂತದಿಂದ ರಾಖಿ ಕಟ್ಟಲು ಮುಂದಾಗಿದ್ದರು. ಇದರ ಬಗ್ಗೆ ಶಿಕ್ಷಕಿ ವಿರೋಧಿಸಿ ಗದರಿದ್ದರು ಅಷ್ಟೇ. ನಾವು ಎಲ್ಲರ ಭಾವನೆಯನ್ನೂ ಗೌರವಿಸುತ್ತೇವೆ ಎಂದು ಹೇಳಿ ಪೋಷಕರು ಮತ್ತು ಸೇರಿದ್ದ ಕಾರ್ಯಕರ್ತರಲ್ಲಿ ಆಗಿರುವ ಪ್ರಮಾದಕ್ಕೆ ಕ್ಷಮೆ ಕೇಳಿದ್ದಾರೆ.

Mangalore Parents hold protest at Infant Mary English school in Katipalla Surathkal after teachers remove rakhi from students.We conducted a meeting of all staff. Those who did the mistake have apologized & issue has been resolved: Father Santosh Lobo, Convenor of the school.