ಸರಕಾರದಿಂದ ತಾರತಮ್ಯ, ತನಿಖೆಯಲ್ಲೂ ದ್ವಿಮುಖ ನೀತಿ ; ಫಾಜಿಲ್, ಮಸೂದ್ ಪ್ರಕರಣ ಎನ್ಐಎಗೆ ವಹಿಸದಿದ್ದರೆ ಪ್ರತಿಭಟನೆ ಎಚ್ಚರಿಕೆ 

09-08-22 01:42 pm       Mangalore Correspondent   ಕರಾವಳಿ

ಪೊಲೀಸರ ತನಿಖೆ ಹಾಗು ಪರಿಹಾರ ನೀಡುವಲ್ಲಿಯೂ ರಾಜ್ಯ ಸರಕಾರ ದ್ವಿಮುಖ ನೀತಿ ತೋರಿದೆ ಎಂದು ಮುಸ್ಲಿಂ ಐಕ್ಯತಾ ವೇದಿಕೆ ಹೆಸರಲ್ಲಿ ಮುಸ್ಲಿಂ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.‌

ಮಂಗಳೂರು, ಆಗಸ್ಟ್ 9: ಜಿಲ್ಲೆಯಲ್ಲಿ ನಡೆದ ಮೂರು ಸರಣಿ ಹತ್ಯೆ ಪ್ರಕರಣಗಳಲ್ಲಿ ರಾಜ್ಯ ಸರಕಾರ ತಾರತಮ್ಯ ನೀತಿ ಅನುಸರಿಸಿದೆ. ಪೊಲೀಸರ ತನಿಖೆ ಹಾಗು ಪರಿಹಾರ ನೀಡುವಲ್ಲಿಯೂ ರಾಜ್ಯ ಸರಕಾರ ದ್ವಿಮುಖ ನೀತಿ ತೋರಿದೆ ಎಂದು ಮುಸ್ಲಿಂ ಐಕ್ಯತಾ ವೇದಿಕೆ ಹೆಸರಲ್ಲಿ ಮುಸ್ಲಿಂ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.‌

ಸುರತ್ಕಲ್ ನಲ್ಲಿ ಸುದ್ದಿಗೋಷ್ಠಿಯಲ್ಲಿ ಆಕ್ರೋಶ ವ್ಯಕ್ತಪಡಿಸಿದ ಸುರತ್ಕಲ್ ವಲಯದ 27 ಮಸೀದಿಗಳ ಆಡಳಿತ ಕಮಿಟಿಯ ಒಕ್ಕೂಟದ ಮುಸ್ಲಿಂ ಐಕ್ಯತಾ ವೇದಿಕೆ ಮುಖಂಡರು, ಸರಣಿ ಹತ್ಯೆ ಪ್ರಕರಣದ ಬಳಿಕ ಜಿಲ್ಲೆಯಲ್ಲಿ ಜನರು ಭಯಭೀತರಾಗಿದ್ದಾರೆ.‌ ಜನರು ಮನೆಯಿಂದ ಹೊರಬರಲು ಭಯಪಡುವಂತಹ ಪರಿಸ್ಥಿತಿ ಇದೆ. ಜಿಲ್ಲೆಯಲ್ಲಿ ನಡೆದ ಮೂರು ಹತ್ಯೆ ಪ್ರಕರಣಗಳ ತನಿಖೆ ವಿಚಾರದಲ್ಲಿ ರಾಜ್ಯ ಸರ್ಕಾರ ತಾರತಮ್ಯ ತೋರಿದೆ.‌ ಪ್ರವೀಣ್ ಹತ್ಯೆ ಕೇಸನ್ನು ಎನ್ಐಎ ತನಿಖೆಗೆ ನೀಡಿದ್ದಾರೆ.  ಮಸೂದ್ ಹಾಗು ಫಾಝಿಲ್ ಹತ್ಯೆ ಪ್ರಕರಣವನ್ನು ಯಾಕೆ ಎನ್ಐಎಗೆ ನೀಡಿಲ್ಲ. ಮಸೂದ್ ಹಾಗು ಫಾಝಿಲ್ ಕೊಲೆ ಪ್ರಕರಣವೂ ಅದೇ ರೀತಿ ದ್ವೇಷದಲ್ಲಿ ನಡೆದಿದ್ದು ಅದನ್ನೂ ಎನ್ಐಎ ತನಿಖೆಗೆ ನೀಡಬೇಕು ಎಂದು ಒತ್ತಾಯಿಸಿದರು.‌

ಮಸೂದ್ ಹಾಗು ಫಾಝಿಲ್ ಕುಟುಂಬಗಳಿಗೂ ರಾಜ್ಯ ಸರಕಾರ ಪರಿಹಾರ ನೀಡಬೇಕು. ಮುಖ್ಯಮಂತ್ರಿ ಬೆಳ್ಳಾರೆಗೆ ಭೇಟಿ ನೀಡಿದ್ದಾರೆ. ಆದರೆ ಫಾಝಿಲ್ ಹಾಗು ಮಸೂದ್ ಮನೆಗಳಿಗೆ ಭೇಟಿ ನೀಡದೆ ತಾರತಮ್ಯ ಎಸಗಿದ್ದಾರೆ. ಸಾಂತ್ವನ ಹೇಳಲು ಮುಖ್ಯಮಂತ್ರಿಯವರಿಗೆ ತಾರತಮ್ಯ ಏಕೆ.‌ ರಾಜ್ಯದ ಪೊಲೀಸ್ ಅಧಿಕಾರಿಗಳು ನಡೆಸುವ ತನಿಖೆಯ ಮೇಲೆ ಸರಕಾರಕ್ಕೇ ವಿಶ್ವಾಸ ಇಲ್ಲ.  ಅದಕ್ಕಾಗಿ ಎನ್ಐಎಗೆ ವಹಿಸಲಾಗಿದೆ.‌ ಹಾಗಾದಲ್ಲಿ ಮಸೂದ್ ಮತ್ತು ಫಾಝಿಲ್ ಪ್ರಕರಣವನ್ನೂ ಎನ್ಐಎಗೆ ನೀಡಬೇಕು. ಪ್ರಕರಣದಲ್ಲಿ ಬಂಧಿತರಿಗೆ ಕಠಿಣ ಶಿಕ್ಷೆಯಾಗುವಂತೆ ನೋಡಿಕೊಳ್ಳಬೇಕು.‌ 

ಕಾನೂನು ಸಲಹೆಗಾರ ಉಮರ್ ಫಾರೂಕ್ ಮಾತನಾಡಿ, ಫಾಜಿಲ್‌ ಹತ್ಯೆಯಾಗಿರುವ ದಿನವೇ ಕಾನ ನಿವಾಸಿ ಸಲಾಂ ಎಂಬುವರನ್ನು ಹಿಂಬಾಲಿಸಿಕೊಂಡು ಬಂದ ವಾಹನದ ಕುರಿತು ತನಿಖೆಯಾಗಬೇಕು. ಪಾಝಿಲ್ ಹತ್ಯೆಯಲ್ಲಿ ಬಳಸಿದ ವಾಹನಗಳನ್ನು ನಿಖರವಾದ ಜಪ್ತಿ ಮಾಡಿಲ್ಲ. ತನಿಖಾಧಿಕಾರಿಗಳ ನಡೆ ಸಂಶಯಕ್ಕೆ ಎಡೆಮಾಡಿಕೊಟ್ಟಿದೆ. ಸರಕಾರಕ್ಕೆ ಪೊಲೀಸರ ತನಿಖೆ ಬಗ್ಗೆಯೇ ವಿಶ್ವಾಸ ಇಲ್ಲ. ಹೀಗಾಗಿ ನಾವು ಇವರ ತನಿಖೆ ಬಗ್ಗೆ ವಿಶ್ವಾಸ ಇಡುವುದು ಹೇಗೆ? ರಾಜ್ಯ ಸರ್ಕಾರವು 10 ದಿನಗಳ ಒಳಗೆ ಮಸೂದ್ ಮತ್ತು ಫಾಜಿಲ್ ಪ್ರಕರಣಗಳನ್ನು ಎನ್‌ಐಎಗೆ ವಹಿಸದಿದ್ದರೆ ಸುರತ್ಕಲ್ ಪ್ರದೇಶದಲ್ಲಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಕೆ ನೀಡಿದರು.

ಮೃತ ಪಾಝಿಲ್‍ನ ತಂದೆ ಉಮರ್ ಫಾರೂಕ್‌ ಮಾತನಾಡಿ, ‘ಮಗನ ಹತ್ಯೆಯ ನಿಖರ ಕಾರಣ ಹಾಗೂ ತನಿಖೆಯಲ್ಲಿ ಲೋಪಗಳ ಬಗ್ಗೆ ಹೆಚ್ಚಿನ ತನಿಖೆ ನಡೆಸುವ ಅವಶ್ಯಕತೆ ಇದೆ ಎಂದರು. ‌ಚೊಕ್ಕಬೆಟ್ಟು ಮೊಹಿಯುದ್ದೀನ್ ಜುಮ್ಮಾ ಮಸೀದಿ ಧರ್ಮಗುರು ಅಝೀಝ್ ದಾರಿಮಿ ಮಾತನಾಡಿ, ರಾಜ್ಯ ಸರ್ಕಾರವು ಪರಿಹಾರ ನೀಡುವಲ್ಲಿ ತಾರತಮ್ಯ ಸರಿಯಲ್ಲ. ಒಬ್ಬ ವ್ಯಕ್ತಿ ಮಾಡಿದ ತಪ್ಪಿಗೆ ಮುಸ್ಲಿಂ ಸಮಾಜವನ್ನು ಬಿಂಬಿಸುವ ಪ್ರವೃತ್ತಿ ಸರಿಯಲ್ಲ ಎಂದು ಬೇಸರ ವ್ಯಕ್ತಪಡಿಸಿದರು.

Muslims leaders demand NIA investigation in Fazil and Masood murder case in Mangalore during a press meet held at Surathkal.