ಹೊಳೆಗೆ ಬಿದ್ದ ಯುವಕನ ರಕ್ಷಣೆ ; ಕೋಮು ದ್ವೇಷದ ಮಧ್ಯೆ ಮಾನವೀಯ ಧರ್ಮ ಸಾರಿದ ಯುವಕನಿಗೆ ಅಪಾರ ಮೆಚ್ಚುಗೆ

03-08-22 10:37 pm       Mangalore Correspondent   ಕರಾವಳಿ

ಕೋಮು ಸಾಮರಸ್ಯ ಕದಡಿ ಹೋಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಸಾಮರಸ್ಯ ಸಾರುವ ವಿಡಿಯೋ ವೈರಲ್ ಆಗಿದೆ. ಮುಸ್ಲಿಂ ಯುವಕನೊಬ್ಬ ಆಯತಪ್ಪಿ ಹೊಳೆಗೆ ಬಿದ್ದು ರಕ್ಷಣೆಗಾಗಿ ಕೂಗಿಕೊಂಡರೆ, ಹಿಂದು ಯುವಕನೊಬ್ಬ ಹೊಳೆಗೆ ಹಾರಿ ಮುಸ್ಲಿಂ ಯುವಕನನ್ನು ರಕ್ಷಣೆ ಮಾಡಿ ಮಾನವೀಯ ಧರ್ಮವನ್ನು ಎತ್ತಿಹಿಡಿದಿದ್ದಾನೆ.

ಪುತ್ತೂರು, ಆಗಸ್ಟ್ 3: ಕೋಮು ಸಾಮರಸ್ಯ ಕದಡಿ ಹೋಗಿರುವ ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯದಲ್ಲಿ ಸಾಮರಸ್ಯ ಸಾರುವ ವಿಡಿಯೋ ವೈರಲ್ ಆಗಿದೆ. ಮುಸ್ಲಿಂ ಯುವಕನೊಬ್ಬ ಆಯತಪ್ಪಿ ಹೊಳೆಗೆ ಬಿದ್ದು ರಕ್ಷಣೆಗಾಗಿ ಕೂಗಿಕೊಂಡರೆ, ಹಿಂದು ಯುವಕನೊಬ್ಬ ಹೊಳೆಗೆ ಹಾರಿ ಮುಸ್ಲಿಂ ಯುವಕನನ್ನು ರಕ್ಷಣೆ ಮಾಡಿ ಮಾನವೀಯ ಧರ್ಮವನ್ನು ಎತ್ತಿಹಿಡಿದಿದ್ದಾನೆ.

ಹತ್ತು ದಿನಗಳಲ್ಲಿ ಮೂವರು ಯುವಕರ ಹತ್ಯೆಯಾಗಿ ಬಿಸಿಯೇರಿದ್ದ ಕರಾವಳಿಯಲ್ಲಿ ಮಾನವೀಯತೆ ಸಾರುವ ಘಟನೆಯಿದು. ಸುಬ್ರಹ್ಮಣ್ಯ ಬಳಿಯ ಹರಿಹರ ಪಳ್ಳತ್ತಡ್ಕದಲ್ಲಿ ಭಾರೀ ಮಳೆಯಿಂದಾಗಿ ಸೇತುವೆಗಳು ಮರದ ದಿಮ್ಮಿಗಳಿಂದಾಗಿ ಬ್ಲಾಕ್ ಆಗಿತ್ತು. ಸೇತುವೆಯ ಮೇಲೂ ಬೃಹತ್ ಮರದ ದಿಮ್ಮಿಗಳು ಬಂದು ಬಿದ್ದಿದ್ದವು. ಅದನ್ನು ತೆರವುಗೊಳಿಸಲು ಕ್ರೇನಲ್ಲಿ ಕಾರ್ಯಾಚರಣೆ ನಡೆಸುತ್ತಿದ್ದರು. ಇದೇ ವೇಳೆ, ಕ್ರೇನ್ ಆಪರೇಟರ್ ಶರೀಫ್ ಆಯತಪ್ಪಿ ಹೊಳೆಗೆ ಬಿದ್ದಿದ್ದು ರಕ್ಷಣೆಗಾಗಿ ಕೂಗಿಕೊಂಡಿದ್ದಾನೆ.

ಶರೀಫ್ ಅವರು ಸ್ಥೂಲ ಕಾಯದ ವ್ಯಕ್ತಿಯಾಗಿದ್ದರಿಂದ ಮತ್ತು ಹೊಳೆ ತುಂಬಿ ಹರಿಯುತ್ತಿದ್ದ ಕಾರಣ ಈಜಲು ಆಗಿರಲಿಲ್ಲ. ರಕ್ಷಣೆಗಾಗಿ ಕೂಗಿದ ಬೆನ್ನಲ್ಲೇ ಅಲ್ಲಿದ್ದ ಸೋಮಶೇಖರ್ ಎಂಬ ಯುವಕನೊಬ್ಬ ಹೊಳೆಗೆ ಹಾರಿ, ಶರೀಫ್ ಜೀವ ರಕ್ಷಣೆಗೆ ಮುಂದಾಗಿದ್ದಾನೆ. ನೀರಿನಲ್ಲಿ ಮುಳುಗದಂತೆ ನೋಡಿಕೊಂಡಿದ್ದಲ್ಲದೆ, ಕೆಲಹೊತ್ತಿನಲ್ಲಿ ಸಾರ್ವಜನಿಕರು ನೀಡಿದ ಹಗ್ಗದ ಮೂಲಕ ಜೀವ ಉಳಿಸಲು ನೆರವಾಗಿದ್ದಾನೆ. ಬಳಿಕ ಜೆಸಿಬಿ ಬಳಸಿ ಶರೀಫ್ ನನ್ನು ಸಾರ್ವಜನಿಕರು ಮೇಲೆತ್ತಿದ್ದಾರೆ. ಹಿಂದು- ಮುಸ್ಲಿಂ ಹೆಸರಲ್ಲಿ ಕೋಮು ದ್ವೇಷ ಹರಡಿರುವಾಗಲೇ ಮುಸ್ಲಿಂ ಯುವಕನ ಜೀವ ಉಳಿಸಲು ತನ್ನ ಪ್ರಾಣದ ಹಂಗು ತೊರೆದು ಹೊಳೆಗೆ ಹಾರಿದ ಯುವಕ ಮಾನವೀಯತೆಯೇ ಶ್ರೇಷ್ಠ ಎನ್ನುವುದನ್ನು ಸಾರಿದ್ದು ನಾಡಿನ ಗಮನ ಸೆಳೆದಿದೆ.

ಭಾರೀ ಮಳೆಯ ಕಾರಣ ಸುಬ್ರಹ್ಮಣ್ಯಕ್ಕೆ ಭೇಟಿಯಿತ್ತ ಉಸ್ತುವಾರಿ ಸಚಿವ ಸುನಿಲ್ ಕುಮಾರ್, ಯುವಕ ಸೋಮಶೇಖರ್ ಕೆಲಸದ ಬಗ್ಗೆ ತಿಳಿದು ಬೆನ್ನು ತಟ್ಟಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Puttur Amid tension in Mangalore two communities share harmony by helping a crane driver who fell into lake. A Muslim crane driver who fell into the lake accidently was helped by a Hindu boy who jumped into the lake risked his life by showing harmony amid communal fights in Dakshina Kannada.