ದಕ್ಷಿಣ ಕನ್ನಡ, ಉಡುಪಿ ಜಿಲ್ಲೆಗೆ ರೆಡ್ ಅಲರ್ಟ್ ; ಮತ್ತೆರಡು ದಿನ ಭಾರೀ ಮಳೆ, ಗಾಳಿ ಎಚ್ಚರಿಕೆ

03-08-22 09:48 pm       Mangalore Correspondent   ಕರಾವಳಿ

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಮುಂದಿನೆರಡು ದಿನಗಳ ಕಾಲ ಭಾರೀ ಮಳೆಯಾಗುವ ಮುನ್ಸೂಚನೆ ನೀಡಲಾಗಿದ್ದು, ರೆಡ್ ಎಲರ್ಟ್ ಘೋಷಣೆ ಮಾಡಲಾಗಿದೆ.

ಮಂಗಳೂರು, ಆಗಸ್ಟ್ 3: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಯಲ್ಲಿ ಮುಂದಿನೆರಡು ದಿನಗಳ ಕಾಲ ಭಾರೀ ಮಳೆಯಾಗುವ ಮುನ್ಸೂಚನೆ ನೀಡಲಾಗಿದ್ದು, ರೆಡ್ ಎಲರ್ಟ್ ಘೋಷಣೆ ಮಾಡಲಾಗಿದೆ.

ಹವಾಮಾನ ಇಲಾಖೆಯಿಂದ ಆಗಸ್ಟ್ 4 ಮತ್ತು 5ರಂದು ಭಾರೀ ಮಳೆಯಾಗುವ ಬಗ್ಗೆ ರೆಡ್ ಅಲರ್ಟ್ ನೀಡಲಾಗಿದೆ. ಇದರ ಪ್ರಕಾರ, ದಿನದಲ್ಲಿ 20 ಸೆಂಟಿ ಮೀಟರಿಗಿಂತ ಹೆಚ್ಚು ಮಳೆ ಬೀಳುವ ಸಾಧ್ಯತೆ ಇದೆ. ಆಗಸ್ಟ್ 6 ಮತ್ತು 7ರಂದು ಆರೆಂಜ್ ಮತ್ತು ಯೆಲ್ಲೋ ಅಲರ್ಟ್ ನೀಡಲಾಗಿದೆ. ಆಗಸ್ಟ್ 5ರಂದು ಉತ್ತರ ಕನ್ನಡ ಜಿಲ್ಲೆಯಲ್ಲೂ ರೆಡ್ ಅಲರ್ಟ್ ಇದೆ. ಹೀಗಾಗಿ ಕರಾವಳಿ ಭಾಗದಲ್ಲಿ ಕಟ್ಟೆಚ್ಚರ ಇರುವಂತೆ ಅಧಿಕಾರಿಗಳಿಗೆ ರಾಜ್ಯ ಸರಕಾರ ಸೂಚನೆ ನೀಡಿದೆ.

ಈಗಾಗಲೇ ಕರಾವಳಿ ಭಾಗದಲ್ಲಿ ಮಳೆಯಾಗಿದ್ದು ಜುಲೈ ಆರಂಭದಲ್ಲಿ ಬಿದ್ದ ನಿರಂತರ ಮಳೆಯಿಂದಾಗಿ ಕರಾವಳಿ ಜನರು ತತ್ತರಿಸಿದ್ದರು. ಎರಡು ದಿನಗಳ ಹಿಂದೆ ಮತ್ತೆ ಸುಬ್ರಹ್ಮಣ್ಯ, ಸಂಪಾಜೆ ಆಸುಪಾಸಿನಲ್ಲಿ ಬಿದ್ದ ಮಳೆಯಿಂದಾಗಿ ದುರಂತವೇ ನಡೆದುಹೋಗಿದೆ. ಈಗ ಮತ್ತೆ ರೆಡ್ ಅಲರ್ಟ್ ಸೂಚನೆ ನೀಡಲಾಗಿದ್ದು, ಮಳೆಯೊಂದಿಗೆ ಗಂಟೆಗೆ 40ರಿಂದ 50 ಕಿಮೀ ವೇಗದಲ್ಲಿ ಬಿರುಗಾಳಿ ಬೀಸುವ ಸಾಧ್ಯತೆ ಹೇಳಲಾಗಿದೆ. ಹೀಗಾಗಿ ಮೀನುಗಾರರು ಸಮುದ್ರಕ್ಕೆ ತೆರಳದಂತೆ ಸೂಚಿಸಲಾಗಿದೆ.

Red alert declared in Mangalore and Udupi due to heavy rains.