ನಿಂತಿದ್ದ ಟ್ಯಾಂಕರ್​ಗೆ ಕಾರ್​ ಡಿಕ್ಕಿ ; ಭೀಕರ ಅಪಘಾತದಲ್ಲಿ 6 ವಿದ್ಯಾರ್ಥಿಗಳ ಸಾವು

23-02-21 12:26 pm       Headline Karnataka News Network   ದೇಶ - ವಿದೇಶ

ವೇಗವಾಗಿ ಚಲಿಸುತ್ತಿದ್ದ ಕಾರು ಪೆಟ್ರೋಲ್ ಬಂಕ್​ ಸಮೀಪದಲ್ಲಿ ನಿಂತಿದ್ದ ತೈಲ ಸಾಗಣೆ ಟ್ಯಾಂಕರ್​ಗೆ ಡಿಕ್ಕಿ ಹೊಡೆದ ಘಟನೆ ತಲವಾಲಿ ಚಾಂದ್​ ಬಳಿ ನಡೆದಿದೆ. 

ಭೋಪಾಲ್, ಫೆ.23: ನಿಂತಿದ್ದ ಟ್ಯಾಂಕರ್​ಗೆ ಕಾರು ಡಿಕ್ಕಿ ಹೊಡೆದ ಪರಿಣಾಮ 6 ಜನ ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತಪಟ್ಟಿರುವ ಹೃದಯ ವಿದ್ರಾವಕ ಘಟನೆ ಮಧ್ಯಪ್ರದೇಶದ ಇಂದೋರ್​ನ ತಲವಾಲಿ ಚಾಂದ್​ ಬಳಿ ನಡೆದಿದೆ. 

ಬೆಳಗಿನ ಜಾವ 2 ಗಂಟೆ ಸುಮಾರಿಗೆ ಘಟನೆ ನಡೆದಿರುವುದಾಗಿ ಅಂದಾಜಿಸಲಾಗಿದ್ದು, ವೇಗವಾಗಿ ಚಲಿಸುತ್ತಿದ್ದ ಕಾರು ಪೆಟ್ರೋಲ್ ಬಂಕ್​ ಸಮೀಪದಲ್ಲಿ ನಿಂತಿದ್ದ ತೈಲ ಸಾಗಣೆ ಟ್ಯಾಂಕರ್​ಗೆ ಗುದ್ದಿದೆ. ಗುದ್ದಿದ ರಭಸಕ್ಕೆ ಕಾರು ಸಂಪೂರ್ಣ ಜಖಂ ಆಗಿದ್ದು, ಕಾರಿನಲ್ಲಿದ್ದ 6 ಜನ ವಿದ್ಯಾರ್ಥಿಗಳು ಸ್ಥಳದಲ್ಲೇ ಮೃತರಾಗಿದ್ದಾರೆ.

ಮೃತ ಯುವಕರೆಲ್ಲರೂ ಇಂದೋರ್​ನ ನಿವಾಸಿಗಳಾಗಿದ್ದು, 18 ರಿಂದ 28 ವರ್ಷ ಪ್ರಾಯದವರೆಂದು ತಿಳಿದುಬಂದಿದೆ. ಈ ಯುವಕರ ತಂಡವು ಇಂದೋರ್​ನ ಹೊರ ಪ್ರಾಂತ್ಯದಲ್ಲಿರುವ ಮಾಂಗ್ಲಿಯಾದಿಂದ ತಮ್ಮ ನಗರಕ್ಕೆ ಮರಳುತ್ತಿದ್ದರು ಎಂದು ಲಸುದಿಯ ಪೊಲೀಸ್​ ಠಾಣೆಯ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. 

ಘಟನೆ ನಡೆದ ಸ್ಥಳಕ್ಕೆ ಆಗಮಿಸಿದ ಪೊಲೀಸರು ಮೃತದೇಹಗಳನ್ನು ಮರಣೋತ್ತರ ಪರೀಕ್ಷೆಗಾಗಿ ಸರ್ಕಾರಿ ಆಸ್ಪತ್ರೆಗೆ ಕಳುಹಿಸಿಕೊಟ್ಟಿದ್ದು, ಮೃತರನ್ನು ರಿಶಿ ಪವಾರ್, ಸೂರಜ್​, ಚಂದ್ರಭಾನ್ ರಘುವಂಶಿ, ಸೋನು ಜತ್, ಸುಮಿತ್ ಸಿಂಗ್​ ಮತ್ತು ದೇವ್​ ಎಂದು ಗುರುತಿಸಲಾಗಿದೆ.

ಅಪಘಾತವು ನಸುಕಿನ ವೇಳೆಯಲ್ಲಿ ನಡೆದಿರುವುದರಿಂದ ಚಾಲಕನಿಗೆ ನಿದ್ರೆ ಮಂಪರು ಆವರಿಸಿರುವುದು ಕಾರಣವಾಗಿರಬಹುದು ಎಂದು ಅನುಮಾನಿಸಲಾಗಿದೆ. ಜೊತೆಗೆ, ಅತಿಯಾದ ವೇಗ ಮತ್ತು ಅಜಾಗರೂಕತೆಯೂ ಅಪಘಾತಕ್ಕೆ ದಾರಿಯಾಗಿರಬಹುದು ಎಂಬ ಶಂಕೆ ವ್ಯಕ್ತವಾಗಿದೆ. ಈ ಬಗ್ಗೆ ಪೊಲೀಸರು ಪರಿಶೀಲನೆ ನಡೆಸುತ್ತಿರುವರಾದರೂ ಬದುಕಿ ಬಾಳಬೇಕಿದ್ದ ಆರು ಯುವಕರು ಹೀಗೆ ರಸ್ತೆ ಅಪಘಾತದಲ್ಲಿ ಅಕಾಲಿಕ ಮರಣ ಹೊಂದಿರುವುದು ಅತ್ಯಂತ ಖೇದಕರ ಸಂಗತಿ.

After a Car ramed a parked tanker truck six students in car died on spot in Bhopal, Indore.