ಕುಂಬಳೆ ಟೋಲ್ ಗೇಟ್ ವಿರುದ್ಧ ರಸ್ತೆ ತಡೆದು ಪ್ರತಿಭಟನೆ ; ಮಂಜೇಶ್ವರ ಶಾಸಕ ಅಶ್ರಫ್ ಬಂಧನ, ಠಾಣೆಯ ಮುಂದೆಯೂ ಧರಣಿ, ವಿರೋಧ ಮಧ್ಯೆ ಟೋಲ್ ಪ್ಲಾಜಾ ಆರಂಭ 

12-01-26 05:01 pm       Mangaluru Staffer   ದೇಶ - ವಿದೇಶ

ರಾಷ್ಟ್ರೀಯ ಹೆದ್ದಾರಿ 66ರ ಕುಂಬಳೆಯ ಆರಿಕ್ಕಾಡಿಯಲ್ಲಿ ತಾತ್ಕಾಲಿಕ ಟೋಲ್ ಪ್ಲಾಜಾ ಆರಂಭಿಸುವುದನ್ನು ವಿರೋಧಿಸಿ ಮಂಜೇಶ್ವರ ಶಾಸಕ ಎಕೆಎಂ ಶರೀಫ್ ನೇತೃತ್ವದಲ್ಲಿ ಸಾವಿರಾರು ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಮೂರು ಗಂಟೆ ಕಾಲ ಧರಣಿ ಕುಳಿತ ಶಾಸಕ ಮತ್ತು ಇತರ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.

ಕಾಸರಗೋಡು, ಜ.12: ರಾಷ್ಟ್ರೀಯ ಹೆದ್ದಾರಿ 66ರ ಕುಂಬಳೆಯ ಆರಿಕ್ಕಾಡಿಯಲ್ಲಿ ತಾತ್ಕಾಲಿಕ ಟೋಲ್ ಪ್ಲಾಜಾ ಆರಂಭಿಸುವುದನ್ನು ವಿರೋಧಿಸಿ ಮಂಜೇಶ್ವರ ಶಾಸಕ ಎಕೆಎಂ ಶರೀಫ್ ನೇತೃತ್ವದಲ್ಲಿ ಸಾವಿರಾರು ಕಾರ್ಯಕರ್ತರು ಪ್ರತಿಭಟನೆ ನಡೆಸಿದ್ದು, ಮೂರು ಗಂಟೆ ಕಾಲ ಧರಣಿ ಕುಳಿತ ಶಾಸಕ ಮತ್ತು ಇತರ ಕಾರ್ಯಕರ್ತರನ್ನು ಪೊಲೀಸರು ಬಂಧಿಸಿದ್ದಾರೆ.

ಜ.12ರಿಂದ ತಾತ್ಕಾಲಿಕವಾಗಿ ಟೋಲ್ ಸಂಗ್ರಹಿಸಲು ಜಿಲ್ಲಾಡಳಿತ ಅನುಮತಿ ನೀಡಿದ್ದು, ಇದರಂತೆ ಸೋಮವಾರದಿಂದ ಆರಿಕ್ಕಾಡಿಯಲ್ಲಿ ಟೋಲ್ ಸಂಗ್ರಹಿಸಲು ವ್ಯವಸ್ಥೆಯಾಗಿತ್ತು. ಆದರೆ ಬೆಳಗ್ಗೆ 7 ಗಂಟೆಗೆ ಸರ್ವಪಕ್ಷಗಳ ಆಕ್ಷನ್ ಕಮಿಟಿಯ ನೇತೃತ್ವದಲ್ಲಿ ಸಾರ್ವಜನಿಕರು ಪ್ರತಿಭಟನೆ ಆರಂಭಿಸಿದ್ದಾರೆ. ಮೂರು ಗಂಟೆ ಕಾಲ ರಸ್ತೆಯಲ್ಲಿ ಧರಣಿ ನಡೆಸಿದ್ದರಿಂದ ಟ್ರಾಫಿಕ್ ಜಾಮ್ ಆಗಿದ್ದಕ್ಕೆ ಶಾಸಕ ಅಶ್ರಫ್ ಮತ್ತು ಇತರರನ್ನು ಪೊಲೀಸರು ಬಂಧಿಸಿ ಬಳಿಕ ಕುಂಬಳೆ ಠಾಣೆಗೆ ಒಯ್ದಿದ್ದಾರೆ.

ಅಲ್ಲಿಯೂ ಕಾರ್ಯಕರ್ತರು ಪೊಲೀಸ್ ಠಾಣೆ ಮುಂದೆ ಪ್ರತಿಭಟನೆ ನಡೆಸಿದ್ದಾರೆ. ಈ ವೇಳೆ, ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಶಾಸಕ ಅಶ್ರಫ್, ಕೇಂದ್ರ ಸರಕಾರದ ನಿಯಮ ಪ್ರಕಾರ 60 ಕಿಮೀಗೆ ಒಂದರಂತೆ ಟೋಲ್ ಕಲೆಕ್ಷನ್ ಮಾಡಬೇಕು. ಇಲ್ಲಿ ತಲಪಾಡಿಯಿಂದ 20 ಕಿಮೀ ಅಂತರದಲ್ಲಿ ಟೋಲ್ ಪ್ಲಾಜಾ ನಡೆಸುವುದಕ್ಕೆ ನಮ್ಮ ವಿರೋಧ ಇದೆ. ನಿಯಮ ಪ್ರಕಾರ, ಪೆರಿಯಾ ಪಂಚಾಯತಿನ ಚಾಲಿಂಗಾಲ್ ನಲ್ಲಿ ಟೋಲ್ ಪ್ಲಾಜಾ ಆಗಬೇಕಿದ್ದು, ಅಲ್ಲಿಗೆ ಶಿಫ್ಟ್ ಮಾಡಬೇಕು. ತಲಪಾಡಿ ಟೋಲ್ ಗೇಟ್ ಮಂಜೇಶ್ವರ ಕ್ಷೇತ್ರಕ್ಕೆ ತಾಗಿಕೊಂಡಿದ್ದು, ಹೀಗಿರುವಾಗ ಒಂದೇ ಕ್ಷೇತ್ರದಲ್ಲಿ ಎರಡು ಕಡೆ ಟೋಲ್ ಕಲೆಕ್ಷನ್ ಮಾಡುವುದಕ್ಕೆ ನಾವು ಬಿಡುವುದಿಲ್ಲ. ಕನಿಷ್ಠ ಮಂಜೇಶ್ವರ ಕ್ಷೇತ್ರ ಹೊರತುಪಡಿಸಿಯಾದ್ರೂ ಟೋಲ್ ಕಲೆಕ್ಷನ್ ಮಾಡಿ ಎಂದು ಹೇಳಿದ್ದಾರೆ.

ಕುಂಬಳೆ ಪಂಚಾಯತ್ ಸದಸ್ಯ ಖಾಲಿದ್ ಮಾತನಾಡಿ, ತಾತ್ಕಾಲಿಕ ಟೋಲ್ ಗೇಟ್ ವಿರುದ್ಧ ಹೈಕೋರ್ಟಿನಲ್ಲಿ ರಿಟ್ ಹಾಕಿದ್ದೇವೆ, ಅಲ್ಲಿ ವಿಚಾರಣೆ ಮುಗಿಯೋ ವರೆಗೂ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರ ಟೋಲ್ ಕಲೆಕ್ಷನ್ ನಿಲ್ಲಿಸಬೇಕು ಎಂದು ಆಗ್ರಹಿಸಿದ್ದಾರೆ. ಆದರೆ ಪೊಲೀಸರು ಕೋರ್ಟ್ ಸೂಚನೆಯಂತೆ, ತಾತ್ಕಾಲಿಕ ಟೋಲ್ ಕಲೆಕ್ಷನ್ ಮಾಡಲು ಅನುಮತಿ ನೀಡಿದ್ದಾರೆ. ಪ್ರತಿಭಟನೆ ಸಂದರ್ಭದಲ್ಲಿ ಶಾಸಕ ಎಕೆಎಂ ಅಶ್ರಫ್ ಮತ್ತು ಪೊಲೀಸರ ನಡುವೆ ತಳ್ಳಾಟ, ಮಾತಿನ ವಾಗ್ವಾದ ನಡೆಯಿತು. ಆದರೆ ಪೊಲೀಸರು ಯಾವುದೇ ಪ್ರತಿಭಟನೆಗೂ ಬಗ್ಗಲಿಲ್ಲ.

Thousands of activists led by Manjeshwar MLA A.K.M. Ashraf staged a protest on Monday opposing the start of a temporary toll plaza at Arikkady in Kumble on National Highway 66. The protest resulted in a three-hour road blockade, causing heavy traffic congestion. Police later arrested the MLA along with several protestors.