ಅಫ್ಘಾನಿಸ್ತಾನದಲ್ಲಿ ಒಂದೇ ಕುಟುಂಬದ 13 ಜನರನ್ನು ಕೊಂದ ಹಂತಕನಿಗೆ ಸಾರ್ವಜನಿಕ ಮರಣದಂಡನೆ ಶಿಕ್ಷೆ ; 13 ವರ್ಷದ ಬಾಲಕನಿಂದ ಗುಂಡು ಹಾರಿಸಿ ಹತ್ಯೆ, ಮೈದಾನದಲ್ಲಿ 80 ಸಾವಿರ ಜನರ ವೀಕ್ಷಣೆ !  

03-12-25 03:04 pm       HK News Desk   ದೇಶ - ವಿದೇಶ

ಅಫ್ಘಾನಿಸ್ತಾನದಲ್ಲಿ ಒಂದು ಕುಟುಂಬದ 13 ಜನರನ್ನು ಕೊಂದ ಹಂತಕನನ್ನು ಅದೇ ಕುಟುಂಬಕ್ಕೆ ಸೇರಿದ 13 ವರ್ಷದ ಬಾಲಕನಿಂದ ಸಾರ್ವಜನಿಕವಾಗಿ ಗುಂಡಿಟ್ಟು ಹತ್ಯೆ ಮಾಡಿಸುವ ಮೂಲಕ ಪ್ರತೀಕಾರದ ಶಿಕ್ಷೆ ಜಾರಿ ಮಾಡಲಾಗಿದೆ.

ನವದೆಹಲಿ, ಡಿ.3 : ಅಫ್ಘಾನಿಸ್ತಾನದಲ್ಲಿ ಒಂದು ಕುಟುಂಬದ 13 ಜನರನ್ನು ಕೊಂದ ಹಂತಕನನ್ನು ಅದೇ ಕುಟುಂಬಕ್ಕೆ ಸೇರಿದ 13 ವರ್ಷದ ಬಾಲಕನಿಂದ ಸಾರ್ವಜನಿಕವಾಗಿ ಗುಂಡಿಟ್ಟು ಹತ್ಯೆ ಮಾಡಿಸುವ ಮೂಲಕ ಪ್ರತೀಕಾರದ ಶಿಕ್ಷೆ ಜಾರಿ ಮಾಡಲಾಗಿದೆ. ‌

ಅಫ್ಘಾನ್ ಸುಪ್ರೀಂ ಕೋರ್ಟ್ ಆದೇಶ ಮತ್ತು ತಾಲಿಬಾನ್‌ ಸರ್ವೋಚ್ಚ ನಾಯಕ ಹಿಬತುಲ್ಲಾ ಅಖುಂಡ್‌ಜಾದಾ ಅನುಮೋದನೆಯಂತೆ ಬೃಹತ್ ಮೈದಾನದಲ್ಲಿ ಜನರನ್ನು ಸೇರಿಸಿ ಕ್ರೂರವಾಗಿ ಮರಣ ದಂಡನೆಯನ್ನು ನೀಡಲಾಗಿದೆ. ಈ ಶಿಕ್ಷೆಯನ್ನು ಸುಮಾರು 80,000 ಜನರು ವೀಕ್ಷಿಸಿದ್ದಾರೆ ಎನ್ನಲಾಗಿದೆ.‌

ಅಬ್ದುಲ್ ರೆಹಮಾನ್ ಮತ್ತು ಆತನ ಕುಟುಂಬದ ಮಹಿಳೆಯರು ಹಾಗೂ ಮಕ್ಕಳು ಸೇರಿದಂತೆ 13 ಜನರನ್ನು ಕೊಂದಿದ್ದ ಅಪರಾಧಕ್ಕಾಗಿ ಮಂಗಲ್ ಎಂಬ ವ್ಯಕ್ತಿಗೆ ಈ ಶಿಕ್ಷೆ ವಿಧಿಸಲಾಗಿದೆ. ಕೆಳ ಹಂತದ ಕೋರ್ಟಿನಲ್ಲಿ ಷರಿಯಾ ಕಾನೂನಿನಂತೆ ಕಣ್ಣಿಗೆ ಕಣ್ಣು ಎನ್ನುವ ನ್ಯಾಯದಂತೆ ಮರಣ ದಂಡನೆ ಶಿಕ್ಷೆ ವಿಧಿಸಲಾಗಿತ್ತು. ಮೂರು ಹಂತದ ಕೋರ್ಟುಗಳಲ್ಲಿ ಶಿಕ್ಷೆ ಘೋಷಣೆಯಾದ ಬಳಿಕ ಸಂತ್ರಸ್ತ ಕುಟುಂಬಕ್ಕೆ ಕ್ಷಮೆ ಮತ್ತು ಶಿಕ್ಷೆ ಜಾರಿಗೊಳಿಸುವ ಕುರಿತು ಆಯ್ಕೆ ನೀಡಲಾಗಿತ್ತು. ಸಂತ್ರಸ್ತ ಕುಟುಂಬ ಕಿಸಾಸ್‌ಗೆ (ಷರಿಯಾ ಪ್ರಕಾರ ಪ್ರತೀಕಾರ) ಒತ್ತಾಯಿಸಿದ್ದರಿಂದ ಸಾರ್ವಜನಿಕ ಮರಣದಂಡನೆ ಶಿಕ್ಷೆ ಜಾರಿ ಮಾಡಲಾಗಿದೆ. 

ವಿಚಿತ್ರ ಅಂದರೆ, ಸಂತ್ರಸ್ತ ಕುಟುಂಬದ 13 ವರ್ಷದ ಬಾಲಕನಿಂದ ಈ ಶಿಕ್ಷೆ ಕೊಡಿಸಲಾಗಿದೆ. ಆರೋಪಿ ಮಂಗಲ್‌ ಎಂಬ ವ್ಯಕ್ತಿಗೆ ಬಾಲಕ ಗುಂಡಿಕ್ಕಿ ಹತ್ಯೆ ಮಾಡಿದ್ದಾನೆ.‌ ಮೊದಲಿಗೆ ಆರೋಪಿಯನ್ನು ದೊಡ್ಡ ಮೈದಾನಕ್ಕೆ ಕರೆತಂದಿದ್ದು, ನಂತರ ಷರಿಯಾ ಕಾನೂನಿನಂತೆ ಗುಂಡಿಕ್ಕಿ ಹತ್ಯೆ ಮಾಡಲಾಗಿದೆ. ಈ ವೇಳೆ, ತಾಲಿಬಾನ್ ಅಧಿಕಾರಿಗಳು ಮತ್ತು ಸಂತ್ರಸ್ತರ ಕುಟುಂಬ ಸೇರಿದಂತೆ ಸುಮಾರು 80,000 ಜನರು ಮರಣ ದಂಡನೆಯನ್ನು ವೀಕ್ಷಿಸಿದ್ದಾರೆಂದು ಅಫ್ಘಾನ್ ವರದಿಗಳು ತಿಳಿಸಿವೆ. 

ಆರೋಪಿ ಮಂಗಲ್ ಖಾನ್ ರಹೀಂ ಖಾನ್ ಎಂಬಾತನ ಮಗನಾಗಿದ್ದು ಖೋಸ್ಟ್ ಪ್ರಾಂತ್ಯದಲ್ಲಿ ಅಬ್ದುಲ್ ರೆಹಮಾನ್ ಕುಟುಂಬವನ್ನು ಸಾಮೂಹಿಕ ಹತ್ಯೆಗೈದ ಆರೋಪ ಎದುರಿಸುತ್ತಿದ್ದ. 2021ರಲ್ಲಿ ತಾಲಿಬಾನಿಗಳು ಅಧಿಕಾರ ಪಡೆದ ಬಳಿಕ ಜಾರಿಗೊಳಿಸಿದ 11ನೇ ಸಾರ್ವಜನಿಕ ಮರಣ ದಂಡನೆ ಇದಾಗಿದ್ದು ಕಠಿಣ ಷರಿಯಾ ಕಾನೂನನ್ನು ಕಟುವಾಗಿ ಆಚರಣೆಗೆ ತರುತ್ತಿರುವುದನ್ನು ತೋರಿಸಿದೆ.

In Afghanistan, a man convicted of killing 13 members of the same family was executed publicly in accordance with a Supreme Court order approved by Taliban leader Hibatullah Akhundzada. Reports say the execution was carried out before nearly 80,000 people in a large stadium.