ದೊಡ್ಡ ಮಟ್ಟದ ವಿಧ್ವಂಸಕ ಕೃತ್ಯಕ್ಕೆ ಸಂಚು ; ಮೂವರು ಶಂಕಿತ ಐಸಿಸ್ ಉಗ್ರರನ್ನು ಬಂಧಿಸಿದ ಗುಜರಾತ್ ಎಟಿಎಸ್, ಚೀನಾದಲ್ಲಿ ಎಂಬಿಬಿಎಸ್ ಕಲಿತು ಬಂದು ವಿಷಕಾರಿ ರಾಸಾಯನಿಕ ತಯಾರಿಸುತ್ತಿದ್ದ ಡಾಕ್ಟರ್ ಸೆರೆ

09-11-25 07:49 pm       HK News Desk   ದೇಶ - ವಿದೇಶ

ದೇಶಾದ್ಯಂತ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿ, ವಿಷಕಾರಿ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡುತ್ತಿದ್ದ ಆರೋಪದಲ್ಲಿ ಗುಜರಾತ್ ಎಟಿಎಸ್ ಪೊಲೀಸರು ಮೂವರು ಶಂಕಿತ ಐಸಿಸ್ ಉಗ್ರರನ್ನು ಬಂಧಿಸಿದ್ದಾರೆ.

ಅಹ್ಮದಾಬಾದ್, ನ.9 : ದೇಶಾದ್ಯಂತ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸಿ, ವಿಷಕಾರಿ ಶಸ್ತ್ರಾಸ್ತ್ರಗಳನ್ನು ಪೂರೈಕೆ ಮಾಡುತ್ತಿದ್ದ ಆರೋಪದಲ್ಲಿ ಗುಜರಾತ್ ಎಟಿಎಸ್ ಪೊಲೀಸರು ಮೂವರು ಶಂಕಿತ ಐಸಿಸ್ ಉಗ್ರರನ್ನು ಬಂಧಿಸಿದ್ದಾರೆ.

ಚೀನಾದಲ್ಲಿ ಎಂಬಿಬಿಎಸ್ ಕಲಿತು ಬಂದಿದ್ದ ಡಾ.ಅಹ್ಮದ್ ಮೊಹಿಯುದ್ದೀನ್ ಸೈಯದ್, ಮೊಹಮ್ಮದ್ ಸುಹೇಲ್ ಮತ್ತು ಆಜಾದ್ ಸುಲೇಮಾನ್ ಸೈಫಿ ಬಂಧಿತರು. ಇವರನ್ನು ಗುಜರಾತಿನ ಅದಲಾಜ್ ಟೋಲ್ ಪ್ಲಾಜಾದಲ್ಲಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಎಟಿಎಸ್ ಡಿಐಜಿ ಸುನಿಲ್ ಜೋಶಿ ಪ್ರಕಾರ, ಕಳೆದ ಒಂದು ವರ್ಷದಿಂದ ಇವರ ಚಲನವಲನಗಳನ್ನು ಪೊಲೀಸರು ಗಮನಿಸುತ್ತಿದ್ದರು. ಇತ್ತೀಚೆಗೆ ಹೈದ್ರಾಬಾದ್ ಮೂಲದ ಡಾ.ಅಹ್ಮದ್ ಮೊಹಿಯುದ್ದೀನ್(35) ಉಗ್ರವಾದಿ ಕೃತ್ಯದಲ್ಲಿ ತೊಡಗಿಸಿರುವ ಬಗ್ಗೆ ಖಚಿತ ಮಾಹಿತಿ ಲಭಿಸಿತ್ತು. ಇದರಂತೆ ಎಟಿಎಸ್ ಈತನ ಬೆನ್ನುಬಿದ್ದು ಶಸ್ತ್ರಾಸ್ತ್ರಗಳನ್ನು ಅದಲಾಜ್ ಟೋಲ್ ಪ್ಲಾಜಾ ಮೂಲಕ ತರುತ್ತಿದ್ದಾಗ ವಶಕ್ಕೆ ಪಡೆದಿದೆ.

ಶಂಕಿತ ವ್ಯಕ್ತಿಗಳಿಂದ ಎರಡು ಗ್ಲೋಕ್ ಪಿಸ್ತೂಲ್, ಒಂದು ಬೆರೆಟ್ಟಾ ಪಿಸ್ತೂಲ್, 30 ಸಜೀವ ಗುಂಡುಗಳು, ನಾಲ್ಕು ಲೀಟರ್ ಕ್ಯಾಸ್ಟರ್ ಆಯಿಲ್ ವಶಕ್ಕೆ ಪಡೆಯಲಾಗಿದೆ. ವಿಷಕಾರಿ ರಾಸಾಯನಿಕ ರಿಸಿನ್ (Ricin) ಎನ್ನುವ ಉತ್ಪನ್ನ ತಯಾರಿಸಲು ಬಳಸಲಾಗುವ ಕೆಮಿಕಲ್ ಒಂದನ್ನೂ ವಶಕ್ಕೆ ಪಡೆದಿದ್ದಾರೆ. ಚೀನಾದಲ್ಲಿ ಎಂಬಿಬಿಎಸ್ ಪೂರೈಸಿ ಬಂದಿದ್ದ ಮೊಹಿಯುದ್ದೀನ್ ಉಗ್ರರ ಸಂಚಿನಂತೆ ವಿಷಕಾರಿ ರಾಸಾಯನಿಕ ರಿಸಿನ್ ಅನ್ನು ತಯಾರಿ ಮಾಡುತ್ತಿದ್ದ ಎನ್ನುವ ಮಾಹಿತಿ ಲಭಿಸಿದೆ.

ಡಾ.ಮೊಹಿಯುದ್ದೀನ್ ಟೆಲಿಗ್ರಾಮ್ ಏಪ್ ನಲ್ಲಿ ಇಸ್ಲಾಮಿಕ್ ಸ್ಟೇಟ್ ಕೊರಸಾನ್ ಪ್ರೊವಿನ್ಸ್ (ಐಎಸ್ ಕೆಪಿ) ಇದರ ಉಗ್ರ ಅಬು ಖದೀಜಾ ಎಂಬಾತನ ಜೊತೆಗೆ ನಿಕಟ ಸಂಪರ್ಕದಲ್ಲಿದ್ದ. ದೇಶದಲ್ಲಿ ದೊಡ್ಡ ಮಟ್ಟದ ವಿಧ್ವಂಸಕ ಕೃತ್ಯ ಎಸಗಲು ಸಂಚು ರೂಪಿಸುತ್ತಿದ್ದ ಎಂದು ಎಟಿಎಸ್ ಡಿಐಜಿ ಸುನಿಲ್ ಜೋಶಿ ಹೇಳಿದ್ದಾರೆ. ಮತ್ತಿಬ್ಬರು ಬಂಧಿತರಾದ ಅಜಾದ್ ಸುಲೇಮಾನ್ ಶೇಖ್ ಮತ್ತು ಮೊಹಮ್ಮದ್ ಸುಹೇಲ್ ಸಲೀಂ ಖಾನ್ ಅವರು ಉತ್ತರ ಪ್ರದೇಶದ ಲಖೀಂಪುರ್ ಮತ್ತು ಶಾಮ್ಲಿ ಜಿಲ್ಲೆಯವರಾಗಿದ್ದು ಧಾರ್ಮಿಕ ಶಿಕ್ಷಣ ಪಡೆದ ಬಳಿಕ ತೀವ್ರವಾದಿಗಳಾಗಿದ್ದರು. ಲಕ್ನೋ, ದೆಹಲಿ, ಅಹ್ಮದಾಬಾದ್ ಮತ್ತು ಕಾಶ್ಮೀರದಲ್ಲಿ ಇವರ ಶಂಕಾಸ್ಪದ ಚಲನವಲನಗಳನ್ನು ಪೊಲೀಸರು ಪತ್ತೆ ಮಾಡಿದ್ದಾರೆ.

ಆರು ತಿಂಗಳ ಹಿಂದೆ ಭಯೋತ್ಪಾದಕ ಸಂಘಟನೆ ಅಲ್ ಖೈದಾ ಜೊತೆಗೆ ನಂಟು ಹೊಂದಿದ್ದ ಆರೋಪದಲ್ಲಿ ಬೆಂಗಳೂರಿನಲ್ಲಿ ನೆಲೆಸಿದ್ದ ಸಮಾ ಪರ್ವೀನ್ ಎಂಬ 30 ವರ್ಷದ ಮಹಿಳೆಯನ್ನು ಎನ್ಐಎ ಅಧಿಕಾರಿಗಳು ಬಂಧಿಸಿದ್ದರು. ಜುಲೈನಲ್ಲಿ ದೆಹಲಿಯಲ್ಲಿ ನಾಲ್ವರು ಶಂಕಿತ ಉಗ್ರರನ್ನು ಎನ್ಐಎ ಬಂಧಿಸಿತ್ತು. ಆರೋಪಿಗಳ ವಿಚಾರಣೆಯಲ್ಲಿ ಸಿಕ್ಕಿದ ಮಾಹಿತಿ ಆಧರಿಸಿ ಎಟಿಎಸ್ ಪೊಲೀಸರು ಗುಜರಾತ್ ಗಡಿಯಲ್ಲಿ ಮತ್ತೆ ಮೂವರನ್ನು ಈಗ ಬಂಧಿಸಿದ್ದಾರೆ.

The Gujarat Anti-Terrorism Squad (ATS) has arrested three suspected ISIS terrorists for allegedly plotting a large-scale terror attack across India and attempting to supply toxic weapons.