ಶಬರಿಮಲೆಗೆ ಭೇಟಿಯಿತ್ತ ಮೊದಲ ಮಹಿಳಾ ರಾಷ್ಟ್ರಪತಿ ; ಪಂಪೆಯಲ್ಲಿ ಮಿಂದು ಕಪ್ಪು ಸೀರೆಯುಟ್ಟು ಇರುಮುಡಿ ಹೊತ್ತು 18 ಮೆಟ್ಟಿಲು ಏರಿದ ದ್ರೌಪದಿ ಮುರ್ಮು 

22-10-25 10:56 pm       HK News Desk   ದೇಶ - ವಿದೇಶ

ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾರತದ ಅತಿ ಪ್ರಸಿದ್ಧ ಅಯ್ಯಪ್ಪ ದೇಗುಲ ಎನಿಸಿರುವ ಕೇರಳದ ಪತ್ತನಂತಿಟ್ಟ ಜಿಲ್ಲೆಯ ಶಬರಿಮಲೆ ಸನ್ನಿಧಾನಕ್ಕೆ ಇರುಮುಡಿ ಹೊತ್ತುಕೊಂಡು ತೆರಳಿ ಪೂಜೆ ಅರ್ಪಿಸಿದ್ದಾರೆ. ಆಮೂಲಕ ಅಯ್ಯಪ್ಪ ಸನ್ನಿಧಾನಕ್ಕೆ ಆಗಮಿಸಿದ ಭಾರತದ ಮೊದಲ ಮಹಿಳಾ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.

ತಿರುವನಂತಪುರಂ, ಅ.22 : ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಭಾರತದ ಅತಿ ಪ್ರಸಿದ್ಧ ಅಯ್ಯಪ್ಪ ದೇಗುಲ ಎನಿಸಿರುವ ಕೇರಳದ ಪತ್ತನಂತಿಟ್ಟ ಜಿಲ್ಲೆಯ ಶಬರಿಮಲೆ ಸನ್ನಿಧಾನಕ್ಕೆ ಇರುಮುಡಿ ಹೊತ್ತುಕೊಂಡು ತೆರಳಿ ಪೂಜೆ ಅರ್ಪಿಸಿದ್ದಾರೆ. ಆಮೂಲಕ ಅಯ್ಯಪ್ಪ ಸನ್ನಿಧಾನಕ್ಕೆ ಆಗಮಿಸಿದ ಭಾರತದ ಮೊದಲ ಮಹಿಳಾ ರಾಷ್ಟ್ರಪತಿ ಎಂಬ ಹೆಗ್ಗಳಿಕೆಗೆ ಪಾತ್ರವಾಗಿದ್ದಾರೆ.

ಶಬರಿಮಲೆ ಸನ್ನಿಧಾನಕ್ಕೆ ಸಾಂಪ್ರದಾಯಿಕವಾಗಿ ಬಂದಿದ್ದ 10 ವರ್ಷದಿಂದ 50 ವರ್ಷದೊಳಗಿನ ಯುವತಿಯರು ಬರಬಾರದು ಎಂಬ ಕಟ್ಟುಕಟ್ಟಳೆಯ ವಿರುದ್ಧ 2018ರಲ್ಲಿ ಸುಪ್ರೀಂ ಕೋರ್ಟ್ ತೀರ್ಪು ನೀಡಿತ್ತು. ಎಲ್ಲ ವಯೋಮಾನದ ಮಹಿಳೆಯರಿಗೂ ಪ್ರವೇಶ ನೀಡಬೇಕೆಂದು ತೀರ್ಪು ನೀಡಿದ್ದರೂ, ಅದಕ್ಕೆದುರಾಗಿ ಶಬರಿಮಲೆಯಲ್ಲಿ ಭಾರೀ ಪ್ರತಿಭಟನೆಯೂ ನಡೆದಿತ್ತು. ಆಬಳಿಕ ತೀರ್ಪು ಪಾಲನೆ ಆಗದಿದ್ದರೂ ಇದೀಗ ರಾಷ್ಟ್ರಪತಿಯಾಗಿ 67 ವರ್ಷದ ಮುರ್ಮು ಸನ್ನಿಧಾನಕ್ಕೆ ಇರುಮುಡಿ ಹೊತ್ತುಕೊಂಡೇ ತೆರಳಿ ಇತಿಹಾಸ ನಿರ್ಮಿಸಿದ್ದಾರೆ. 1972ರಲ್ಲಿ ವಿವಿ ಗಿರಿ ಶಬರಿಮಲೆಗೆ ಆಗಮಿಸಿದ್ದು ಆ ಸಂದರ್ಭದಲ್ಲಿ ಸನ್ನಿಧಾನ ವರೆಗೆ ರಸ್ತೆ ಇಲ್ಲದ ಕಾರಣ ಡೋಲಿಯಲ್ಲಿ ಹೊತ್ತುಕೊಂಡು ಹೋಗಿ ದೇವರ ದರ್ಶನ ಮಾಡಿಸಲಾಗಿತ್ತು.

ದ್ರೌಪದಿ ಮುರ್ಮು ಅವರು ಬೆಳಗ್ಗೆ 11 ಗಂಟೆಗೆ ಪಂಪಾ ತೀರಕ್ಕೆ ಆಗಮಿಸಿದ್ದು, ಅಲ್ಲಿ ನದಿಯಲ್ಲಿ ಸ್ನಾನ ಮಾಡಿ ಕಪ್ಪು ಸೀರೆಯನ್ನು ಉಟ್ಟಿದ್ದಾರೆ. ಅಲ್ಲಿಯೇ ಇರುವ ಗಣಪತಿ ದೇವಸ್ಥಾನಕ್ಕೆ ತೆರಳಿ ಪೂಜೆಗೈದು ಸಂಪ್ರದಾಯದಂತೆ ಅಲ್ಲಿನ ಮೇಲ್ ಶಾಂತಿ ಮೂಲಕ ಇರುಮುಡಿ ಪಡೆದಿದ್ದಾರೆ. ಅವರ ಜೊತೆಗಿದ್ದ ಅಳಿಯ ಗಣೇಶ್ ಚಂದ್ರ ಹೊಂಬ್ರಮ್ ಮತ್ತು ರಾಷ್ಟ್ರಪತಿಯವರ ಭದ್ರತಾ ಸಿಬಂದಿ, ಅಧಿಕಾರಿಗಳು ಕೂಡ ಇರುಮುಡಿ ಪಡೆದು ತಲೆಯಲ್ಲಿ ಹೊತ್ತುಕೊಂಡಿದ್ದಾರೆ. ಪಂಪೆಯಿಂದ ಸನ್ನಿಧಾನಕ್ಕೆ 4.5 ಕಿಮೀ ಉದ್ದಕ್ಕೆ ರಸ್ತೆ ಮೂಲಕ ತೆರಳಿದ್ದು, ದೇವಸ್ಥಾನ ಸಮೀಪಿಸುತ್ತಿದ್ದಂತೆ ಮುಖ್ಯ ಅರ್ಚಕರು ಪೂರ್ಣ ಕುಂಭದ ಸ್ವಾಗತ ನೀಡಿದ್ದಾರೆ. ರಾಜ್ಯ ಸರಕಾರದ ದೇವಸ್ವಂ ಸಚಿವ ವಿ.ಎನ್ ವಾಸವನ್ ಮತ್ತು ಮುಖ್ಯ ಅರ್ಚಕ ಕೊಂಡರಾರು ಮಹೇಶ್ ಮೋಹನಾರು ಸ್ವಾಗತಿಸಿದ್ದಾರೆ.

ವಿಶೇಷ ಭದ್ರತಾ ಸಿಬಂದಿಯೇ ರಾಷ್ಟ್ರಪತಿಯನ್ನು ಕೈಯಲ್ಲಿ ಹಿಡಿದುಕೊಂಡು ಅಯ್ಯಪ್ಪ ಸನ್ನಿಧಾನದ 18 ಮೆಟ್ಟಿಲುಗಳನ್ನು ಹತ್ತಿಸಿದ್ದಾರೆ. ಇರುಮುಡಿ ಹೊತ್ತವರಿಗೆ ಮಾತ್ರ 18 ಮೆಟ್ಟಿಲು ಹತ್ತುವ ಅವಕಾಶ ಇರುವುದರಿಂದ ಭದ್ರತಾ ಸಿಬಂದಿಯೂ ದ್ರೌಪದಿ ಮುರ್ಮು ಜೊತೆಗೆ ಇರುಮುಡಿ ಹೊತ್ತುಕೊಂಡೇ ದೇವರ ದರ್ಶನ ಪಡೆದಿದ್ದು ವಿಶೇಷ. ಇರುಮುಡಿಯನ್ನು ಪಡೆದುಕೊಂಡ ಅರ್ಚಕರು ಮಧ್ಯಾಹ್ನದ ಪೂಜೆಯನ್ನು ನೆರವೇರಿಸಿದ್ದು, ರಾಷ್ಟ್ರಪತಿ ವೀಕ್ಷಣೆ ಮಾಡಿದ್ದಾರೆ.

ರಾಷ್ಟ್ರಪತಿ ಭೇಟಿ ಸಂದರ್ಭದಲ್ಲಿ ಇತರ ಯಾತ್ರಿಕರಿಗೆ ಪ್ರವೇಶ ನಿಲ್ಲಿಸಲಾಗಿತ್ತು. ಅಯ್ಯಪ್ಪ ಸನ್ನಿಧಾನದ ಬಳಿಕ ಅಲ್ಲಿಯೇ ಇರುವ ಮಲ್ಲಿಕಾಪುರಂ ದೇವಸ್ಥಾನಕ್ಕೂ ತೆರಳಿ ದ್ರೌಪದಿ ಮುರ್ಮು ಪೂಜೆ ಸಲ್ಲಿಸಿದ್ದಾರೆ. ನಾಲ್ಕು ದಿನಗಳ ಕೇರಳ ಭೇಟಿಯಲ್ಲಿ ಶಬರಿಮಲೆ ಅಯ್ಯಪ್ಪ ದರ್ಶನ ಪ್ರಮುಖವಾಗಿತ್ತು.

In a historic moment, President Droupadi Murmu became the first woman President of India to visit the Sabarimala Ayyappa Temple in Kerala’s Pathanamthitta district.