ದೆಹಲಿ ಹೈಕೋರ್ಟ್ ಜಡ್ಜ್ ಮನೆಯಲ್ಲಿ ಅಗಣಿತ ನಗದು ಪತ್ತೆ ; ಅಸಲಿಯತ್ತು ಬಯಲಾಗಿಸ್ತು ಮನೆಗೆ ಬಿದ್ದ ಬೆಂಕಿ ! ಬೆನ್ನಲ್ಲೇ ಜಡ್ಜ್ ವರ್ಗಾವಣೆ, ನ್ಯಾಯಾಂಗದ ಭ್ರಷ್ಟಾಚಾರ ಬಗ್ಗೆ ತೀವ್ರ ಚರ್ಚೆ 

21-03-25 04:46 pm       HK News Desk   ದೇಶ - ವಿದೇಶ

ದೆಹಲಿ ಹೈಕೋರ್ಟ್ ಜಡ್ಜ್ ಒಬ್ಬರ ನಿವಾಸದಲ್ಲಿ ಬೆಂಕಿ ಆಕಸ್ಮಿಕ ಉಂಟಾಗಿ ಮನೆಯೊಳಗೆ ಅಪಾರ ಪ್ರಮಾಣದ ನಗದು ಶೇಖರಣೆ ಮಾಡಿರುವುದು ಬಯಲಿಗೆ ಬಂದಿದೆ. ದೆಹಲಿ ಹೈಕೋರ್ಟ್ ನ್ಯಾಯಾಧೀಶ ಯಶವಂತ್ ಶರ್ಮಾ ಅವರ ದೆಹಲಿಯ ಬಂಗಲೆಗೆ ಬೆಂಕಿ ಬಿದ್ದಿತ್ತು.

ನವದೆಹಲಿ, ಮಾ.21 : ದೆಹಲಿ ಹೈಕೋರ್ಟ್ ಜಡ್ಜ್ ಒಬ್ಬರ ನಿವಾಸದಲ್ಲಿ ಬೆಂಕಿ ಆಕಸ್ಮಿಕ ಉಂಟಾಗಿ ಮನೆಯೊಳಗೆ ಅಪಾರ ಪ್ರಮಾಣದ ನಗದು ಶೇಖರಣೆ ಮಾಡಿರುವುದು ಬಯಲಿಗೆ ಬಂದಿದೆ. ದೆಹಲಿ ಹೈಕೋರ್ಟ್ ನ್ಯಾಯಾಧೀಶ ಯಶವಂತ್ ಶರ್ಮಾ ಅವರ ದೆಹಲಿಯ ಬಂಗಲೆಗೆ ಬೆಂಕಿ ಬಿದ್ದಿತ್ತು. ಈ ವೇಳೆ, ಯಶವಂತ್ ಶರ್ಮಾ ಮನೆಯಲ್ಲಿ ಇರಲಿಲ್ಲ. ಹೀಗಾಗಿ ಕುಟುಂಬ ಸದಸ್ಯರ ಮಾಹಿತಿಯಂತೆ ಪೊಲೀಸರು, ಅಗ್ನಿಶಾಮಕ ದಳ ಬಂದು ಬೆಂಕಿ ನಂದಿಸಿದೆ. ಮನೆಯ ಬೇರೆ ಬೇರೆ ಕೋಣೆಗಳನ್ನು ತಪಾಸಣೆ ನಡೆಸಿದಾಗ, ರಾಶಿಗಟ್ಟಲೆ ನಗದು ಹಣವನ್ನು ಇಟ್ಟಿರುವುದು ಪತ್ತೆಯಾಗಿದೆ.

ಇದರ ಬೆನ್ನಲ್ಲೇ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಾಧೀಶ ಸಂಜೀವ ಖನ್ನಾ ನೇತೃತ್ವದ ಕೊಲಿಜಿಯಂ ಸದಸ್ಯರು ಸಭೆ ನಡೆಸಿ, ತರಾತುರಿಯಲ್ಲಿ ದೆಹಲಿ ಹೈಕೋರ್ಟ್ ಜಡ್ಜ್ ಯಶವಂತ ಶರ್ಮಾ ಅವರನ್ನು ಈ ಹಿಂದೆ ಕಾರ್ಯ ನಿರ್ವಹಿಸುತ್ತಿದ್ದ ಅಲಹಾಬಾದ್ ಹೈಕೋರ್ಟಿಗೆ ವರ್ಗಾವಣೆ ಮಾಡಿದ್ದಾರೆ. ಬಂಗಲೆಯಲ್ಲಿ ಸಿಕ್ಕ ಹಣದ ಕಂತೆಯನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಅದರಲ್ಲಿ ಎಷ್ಟಿತ್ತು ಎನ್ನುವುದನ್ನು ಬಹಿರಂಗಪಡಿಸಿಲ್ಲ. ಈ ಘಟನೆ ಹಿನ್ನೆಲೆಯಲ್ಲಿ ನ್ಯಾಯಾಂಗದ ಭ್ರಷ್ಟಾಚಾರ ಬಗ್ಗೆ ಚರ್ಚೆ ಏಳುವಂತಾಗಿದ್ದು, ರಾಷ್ಟ್ರೀಯ ಮಾಧ್ಯಮಗಳಲ್ಲಿ ಬಿಸಿ ಬಿಸಿ ಚರ್ಚೆಯಾಗಿದೆ.

ಹಣದ ಕಂತೆ ಬಹಿರಂಗವಾಗುತ್ತಲೇ ಸುಪ್ರೀಂ ಕೋರ್ಟ್ ನ್ಯಾಯಾಧೀಶರು ತುರ್ತು ಚರ್ಚೆ ನಡೆಸಿ, ಆರೋಪಿತ ಜಡ್ಜ್ ಯಶವಂತ ಶರ್ಮಾ ಅವರನ್ನು ಅಲಹಾಬಾದ್ ಹೈಕೋರ್ಟಿಗೆ ವರ್ಗಾವಣೆ ಮಾಡಿದ್ದಾರೆ. ಯಶವಂತ ಶರ್ಮಾ ಅವರು ಈ ಹಿಂದೆ 2021ರ ವರೆಗೆ ಅದೇ ಕೋರ್ಟಿನಲ್ಲಿ ಕಾರ್ಯ ನಿರ್ವಹಿಸಿದ್ದರು. ಕೊಲಿಜಿಯಂ ಸದಸ್ಯರು ಆರೋಪಿತ ನ್ಯಾಯಾಧೀಶರ ವಿರುದ್ಧ ತನಿಖೆ ನಡೆಸುವುದು ಮತ್ತು ಛೀಮಾರಿ ಹಾಕುವ ವಿಚಾರದಲ್ಲಿಯೂ ಚರ್ಚೆ ನಡೆಸಿದ್ದಾರೆ. ಜಡ್ಜ್ ಕಡೆಯಿಂದ ಸ್ಪಷ್ಟನೆ ಕೇಳುವುದು ಮತ್ತು ಸೂಕ್ತ ಸ್ಪಂದನೆ ಸಿಗದೇ ಇದ್ದಲ್ಲಿ ಸಂಸತ್ತಿನಲ್ಲಿ ದೋಷಾರೋಪಣೆ ಮಾಡುವುದಕ್ಕೆ ಸುಪ್ರೀಂ ನ್ಯಾಯಾಧೀಶರು ಮುಂದಾಗಿದ್ದಾರೆ. ಆಮೂಲಕ ನ್ಯಾಯಾಂಗದ ಬಗ್ಗೆ ಸಾರ್ವಜನಿಕರಲ್ಲಿ ವಿಶ್ವಾಸ ಉಳಿಸುವ ಪ್ರಯತ್ನ ನಡೆಸಲಿದ್ದಾರೆ.

ನ್ಯಾಯಾಧೀಶರ ಭ್ರಷ್ಟಾಚಾರ ಸಂಬಂಧಿಸಿ 1999ರಲ್ಲಿ ಸುಪ್ರೀಂ ಕೋರ್ಟ್ ಮಾಡಿರುವ ಮಾರ್ಗದರ್ಶಿ ಪ್ರಕಾರ, ಮುಖ್ಯ ನ್ಯಾಯಾಧೀಶರು ಆರೋಪಿತ ನ್ಯಾಯಾಧೀಶರಿಂದ ಸ್ಪಷ್ಟನೆ ಕೇಳಬೇಕಾಗುತ್ತದೆ. ಸರಿಯಾದ ಮಾಹಿತಿ ನೀಡದೇ ಇದ್ದರೆ ಸಮಗ್ರ ತನಿಖೆಗೆ ಆದೇಶ ಮಾಡಬಹುದು. ಇದಕ್ಕಾಗಿ ಸುಪ್ರೀಂ ಕೋರ್ಟ್ ಜಡ್ಜ್ ಮತ್ತು ಇಬ್ಬರು ಹೈಕೋರ್ಟ್ ನ್ಯಾಯಾಧೀಶರನ್ನು ಒಳಗೊಂಡ ಸಮಿತಿ ಮಾಡಬೇಕು. ತನಿಖಾ ವರದಿ ಆಧರಿಸಿ ಆರೋಪಿತ ನ್ಯಾಯಾಧೀಶರನ್ನು ರಾಜಿನಾಮೆ ಕೇಳಬಹುದು ಅಥವಾ ಸಂಸತ್ತಿನಲ್ಲಿ ಛೀಮಾರಿ ಹಾಕಿಸುವುದಕ್ಕೆ ಅವಕಾಶ ಇದೆ.

ಜಸ್ಟಿಸ್ ಯಶವಂತ್ ಶರ್ಮಾ ಅವರು 2014ರಲ್ಲಿ ಅಲಹಾಬಾದ್ ಹೈಕೋರ್ಟಿನಲ್ಲಿ ಹೆಚ್ಚುವರಿ ನ್ಯಾಯಾಧೀಶರಾಗಿ ನೇಮಕಗೊಂಡಿದ್ದರು. ಆನಂತರ, ಎರಡು ವರ್ಷದಲ್ಲಿ ಪೂರ್ಣಾವಧಿಗೆ ನ್ಯಾಯಾಧೀಶ ಹುದ್ದೆಗೆ ಭಡ್ತಿಗೊಂಡಿದ್ದರು. ಅದಕ್ಕೂ ಮೊದಲು ಅವರು ಅಲಹಾಬಾದಿನಲ್ಲೇ ವಕೀಲರಾಗಿ ಕಾರ್ಯ ನಿರ್ವಹಿಸುತ್ತಿದ್ದರು. ಭಾರೀ ಮೊತ್ತದ ಅನಧಿಕೃತ ನಗದು ಹಣ ನ್ಯಾಯಾಧೀಶರ ಮನೆಯಲ್ಲಿ ಪತ್ತೆಯಾಗಿದ್ದರಿಂದ ನ್ಯಾಯಾಂಗದ ಭ್ರಷ್ಟಾಚಾರ ವಿಚಾರ ಗಂಭೀರ ಚರ್ಚೆಗೆ ಒಳಗಾಗಿದೆ.

A Delhi High Court judge was transferred following the recommendation of the Supreme Court Collegium after a large amount of cash was recovered from his bungalow after a fire incident. Justice Yashwant Verma has been sent back to his parent court, the Allahabad High Court