ವಿಶೇಷ ವಿವಾಹ ಕಾಯ್ದೆಯಡಿ ಹಿಂದು- ಮುಸ್ಲಿಂ ಮದುವೆಯಾದರೂ ಕಾನೂನು ರೀತ್ಯ ಸಿಂಧುವಲ್ಲ ; ಮಧ್ಯಪ್ರದೇಶ ಹೈಕೋರ್ಟ್ ತೀರ್ಪು

30-05-24 10:01 pm       HK News Desk   ದೇಶ - ವಿದೇಶ

ಮುಸ್ಲಿಂ ಯುವಕ ಮತ್ತು ಹಿಂದು ಯುವತಿ ನಡುವಿನ ವಿವಾಹವು ಮುಸ್ಲಿಂ ವೈಯಕ್ತಿಕ ಕಾನೂನು ಪ್ರಕಾರ ಕಾನೂನು ಸಮ್ಮತವಲ್ಲ. ಇವರು ಸ್ಪೆಷಲ್ ಮ್ಯಾರೇಜ್ ಏಕ್ಟ್ ನಡಿ ಮದುವೆಯಾದರೂ ಕಾನೂನು ರೀತಿ ಸಿಂಧುವಲ್ಲ ಎಂದು ಮಧ್ಯಪ್ರದೇಶ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಇಂದೋರ್, ಮೇ 30: ಮುಸ್ಲಿಂ ಯುವಕ ಮತ್ತು ಹಿಂದು ಯುವತಿ ನಡುವಿನ ವಿವಾಹವು ಮುಸ್ಲಿಂ ವೈಯಕ್ತಿಕ ಕಾನೂನು ಪ್ರಕಾರ ಕಾನೂನು ಸಮ್ಮತವಲ್ಲ. ಇವರು ಸ್ಪೆಷಲ್ ಮ್ಯಾರೇಜ್ ಏಕ್ಟ್ ನಡಿ ಮದುವೆಯಾದರೂ ಕಾನೂನು ರೀತಿ ಸಿಂಧುವಲ್ಲ ಎಂದು ಮಧ್ಯಪ್ರದೇಶ ಹೈಕೋರ್ಟ್ ಮಹತ್ವದ ತೀರ್ಪು ನೀಡಿದೆ.

ಜಡ್ಜ್ ಗುರ್ಪಾಲ್ ಸಿಂಗ್ ಅಹ್ಲುವಾಲಿಯಾ ಅವರು ಈ ತೀರ್ಪು ನೀಡಿದ್ದಾರೆ. ಸ್ಪೆಷಲ್ ಮ್ಯಾರೇಜ್ ಏಕ್ಟ್ -1954 ಪ್ರಕಾರ ಮದುವೆ ರಿಜಿಸ್ಟರ್ ಆಗಿದ್ದ ಮುಸ್ಲಿಂ ಯುವಕ ಮತ್ತು ಹಿಂದು ಯುವತಿ ಮದುವೆಗೆ ಪೊಲೀಸ್ ರಕ್ಷಣೆ ಕೊಡಬೇಕೆಂದು ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ವಜಾ ಮಾಡಿದೆ.

ಮುಸ್ಲಿಂ ವೈಯಕ್ತಿಕ ಕಾನೂನು ಪ್ರಕಾರ, ಮುಸ್ಲಿಂ ಹುಡುಗನೊಬ್ಬ, ವಿಗ್ರಹಾರಾಧನೆ ಮಾಡುವ ಯುವತಿಯನ್ನು ಮದುವೆಯಾಗುವುದು ಕಾನೂನು ಸಮ್ಮತವಲ್ಲ. ವಿಶೇಷ ವಿವಾಹ ಕಾಯ್ದೆಯಡಿ ನೋಂದಣಿ ಮಾಡಿಕೊಂಡರೂ ಅದು ಹೆಚ್ಚು ಕಾಲ ಊರ್ಜಿತವಾಗಿರುವುದಿಲ್ಲ. ಅದು ಅಸಿಂಧುವೇ ಆಗಿರುತ್ತದೆ ಎಂದು ನ್ಯಾಯಾಧೀಶರು ತೀರ್ಪು ನೀಡಿದ್ದಾರೆ. ಅಂತರ್ ಧರ್ಮೀಯ ಮದುವೆಗಳಿಗೆ ಮಾನ್ಯತೆ ನೀಡಬಾರದು, ಅದರಿಂದ ಸಮಾಜದಲ್ಲಿ ಅಗೌರವ ಎದುರಿಸಬೇಕಾಗುತ್ತದೆ ಎಂದು ಯುವತಿ ಮನೆಯವರು ವಾದಿಸಿದ್ದರು.

ಆದರೆ ಹುಡುಗನ ಕಡೆಯವರು ವಿಶೇಷ ವಿವಾಹ ಕಾಯ್ದೆಯಡಿ ಮದುವೆಗೆ ಅವಕಾಶ ಕೊಡಬೇಕು. ನಮಗೆ ಪೊಲೀಸರ ರಕ್ಷಣೆ ಕೊಡಬೇಕು. ಮದುವೆಯ ಬಳಿಕ ಯುವತಿ ಕೋರಿಕೆಯಂತೆ, ಆಕೆಯನ್ನು ಇಸ್ಲಾಂ ಧರ್ಮಕ್ಕೆ ಮತಾಂತರ ಮಾಡುವುದಿಲ್ಲ ಎಂದು ವಾದಿಸಿದ್ದರು. ಅಲ್ಲದೆ, ಅಂತರ್ ಧರ್ಮೀಯ ವಿವಾಹ ನೋಂದಣಿಗೆ ವಿಶೇಷ ವಿವಾಹ ಕಾಯ್ದೆಯಡಿ ಅವಕಾಶ ಇದೆ ಎಂದು ವಾದ ಮಂಡಿಸಿದ್ದರು.

ವಿಚಾರಣೆ ನಡೆಸಿದ ಕೋರ್ಟ್, ಮುಸ್ಲಿಂ ವೈಯಕ್ತಿಕ ಕಾನೂನಿನಲ್ಲಿ ನಿಷೇಧ ಇರುವುದನ್ನು ವಿಶೇಷ ವಿವಾಹ ಕಾಯ್ದೆಯಡಿ ಅನುಮತಿಸಲು ಸಾಧ್ಯವಾಗುವುದಿಲ್ಲ. ವಿಶೇಷ ವಿವಾಹ ಕಾಯ್ದೆಯ ಸೆಕ್ಷನ್ 4 ಪ್ರಕಾರ, ಎರಡು ಪಾರ್ಟಿಗಳ ಮಧ್ಯೆ ನಿಷೇಧಿತವಲ್ಲದ ಸಂಬಂಧ ಏರ್ಪಡುವುದಿದ್ದರೆ ಮಾತ್ರ ವಿವಾಹಕ್ಕೆ ಅನುಮತಿಸುತ್ತದೆ. ಹೀಗಾಗಿ ಒಂದೋ ನೀವು ನಿಮ್ಮ ಧರ್ಮವನ್ನು ಬದಲಿಸಿಕೊಂಡು ಮದುವೆ ಆಗಬೇಕು, ಇಲ್ಲವೇ ಲೀವ್ ಇನ್ ರಿಲೇಶನ್ ಇರಬೇಕಾಗುತ್ತದೆ ಎಂದು ಹೇಳಿ ಹುಡುಗನ ಕಡೆಯ ಅರ್ಜಿಯನ್ನು ವಜಾ ಮಾಡಿದೆ.

The Madhya Pradesh High Court has ruled that a marriage between a Muslim man and a Hindu woman was not valid under Muslim personal law. The court also dismissed a plea for police protection to register an inter-faith marriage under the Special Marriage Act, 1954.