ಕೋಗಿಲು ಬಡಾವಣೆ ವಿವಾದ ; ಬಿಜೆಪಿಯಿಂದ ಸತ್ಯಶೋಧನಾ ಸಮಿತಿ ರಚನೆ, ಮಳೆಗಾಲದಲ್ಲಿ ಮನೆ ಕಳಕೊಂಡ 13 ಸಾವಿರ ಜನರಿಗೆ ಏನು ಕೊಡುತ್ತೀರಿ ಎಂದು ಅಶೋಕ್ ಪ್ರಶ್ನೆ 

31-12-25 10:57 pm       Bangalore Correspondent   ಕರ್ನಾಟಕ

ಬೆಂಗಳೂರಿನ ಕೋಗಿಲು ಲೇಔಟ್ ನಲ್ಲಿ ಅಕ್ರಮ ವಲಸಿಗರ ಮನೆಗಳ ತೆರವು ವಿಚಾರದಲ್ಲಿ ಬಿಜೆಪಿ ತನ್ನ ಸತ್ಯಶೋಧನಾ ಸಮಿತಿ ರಚಿಸಿದ್ದು, ವಿವರವಾದ ವರದಿ ಸಲ್ಲಿಸಲು ಸಮಿತಿಗೆ ಸೂಚಿಸಲಾಗಿದೆ. 

ಬೆಂಗಳೂರು, ಡಿ.31 : ಬೆಂಗಳೂರಿನ ಕೋಗಿಲು ಲೇಔಟ್ ನಲ್ಲಿ ಅಕ್ರಮ ವಲಸಿಗರ ಮನೆಗಳ ತೆರವು ವಿಚಾರದಲ್ಲಿ ಬಿಜೆಪಿ ತನ್ನ ಸತ್ಯಶೋಧನಾ ಸಮಿತಿ ರಚಿಸಿದ್ದು, ವಿವರವಾದ ವರದಿ ಸಲ್ಲಿಸಲು ಸಮಿತಿಗೆ ಸೂಚಿಸಲಾಗಿದೆ. 

ಸರ್ಕಾರಿ ಭೂಮಿ ಅತಿಕ್ರಮಣ ತೆರವುಗೊಳಿಸುವ ಅಭಿಯಾನದ ಭಾಗವಾಗಿ ಪರಿಶೀಲಿಸಿ ವರದಿ ಸಲ್ಲಿಸಲು ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ ವೈ ವಿಜಯೇಂದ್ರ ಬುಧವಾರ "ಸತ್ಯ ಶೋಧನಾ ಸಮಿತಿ"ಯನ್ನು ರಚಿಸಿದ್ದಾರೆ. ಏಳು ಸದಸ್ಯರ ಈ ಸಮಿತಿಯು ಶಾಸಕರಾದ ಎಸ್.ಆರ್ ವಿಶ್ವನಾಥ್ ಮತ್ತು ಎಸ್ ಮುನಿರಾಜು ಸೇರಿದಂತೆ ಬಿಜೆಪಿ ಶಾಸಕರು ಮತ್ತು ನಾಯಕರನ್ನು ಒಳಗೊಂಡಿದೆ. 

ಬೆಂಗಳೂರು ನಗರ ಉತ್ತರ ಭಾಗದ ಯಲಹಂಕದ ಕೋಗಿಲು ಬಳಿಯ ಫಕೀರ್ ಕಾಲೋನಿ ಮತ್ತು ವಾಸಿಂ ಲೇಔಟ್‌ನಲ್ಲಿ ಮನೆಗಳನ್ನು ಕೆಡವಿದ ಹಿಂದಿನ ಸತ್ಯ ಅರಿಯಲು ಸಮಿತಿಯನ್ನು ರಚಿಸಲಾಗಿದೆ ಎಂದು ವಿಜಯೇಂದ್ರ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಸಮಿತಿಯು ಸ್ಥಳಕ್ಕೆ ಭೇಟಿ ನೀಡಿ, ವಿಚಾರಣೆ ನಡೆಸಿ ಒಂದು ವಾರದೊಳಗೆ ವರದಿಯನ್ನು ಸಲ್ಲಿಸುವಂತೆ ಸೂಚಿಸಲಾಗಿದೆ.

ಡಿಸೆಂಬರ್ 20 ರಂದು ಬೆಂಗಳೂರು ಘನತ್ಯಾಜ್ಯ ನಿರ್ವಹಣಾ ಲಿಮಿಟೆಡ್ ಪ್ರಸ್ತಾವಿತ ಘನತ್ಯಾಜ್ಯ ಸಂಸ್ಕರಣಾ ಘಟಕಕ್ಕಾಗಿ ಅತಿಕ್ರಮಣಗಳನ್ನು ತೆರವುಗೊಳಿಸಲು ಅಧಿಕಾರಿಗಳು ಕಾರ್ಯಾಚರಣೆ ನಡೆಸಿದ್ದರು. ಯಾವುದೇ ಅಧಿಕೃತ ಅನುಮತಿಯಿಲ್ಲದೆ ಮನೆಗಳನ್ನು ನಿರ್ಮಿಸಲಾಗಿದೆ ಎಂಬುದನ್ನು ಮನಗಂಡು ಅಧಿಕಾರಿಗಳು ಕಾರ್ಯಾಚರಣೆ ಕೈಗೊಂಡಿದ್ದರು.‌ 

ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಬುಧವಾರ ಕೋಗಿಲು ಬಡಾವಣೆಗೆ ತೆರಳಿ ಅಧಿಕಾರಿಗಳಿಂದ ಮಾಹಿತಿ ಪಡೆದಿದ್ದಾರೆ. ಇದೇ ವೇಳೆ ಮಾತನಾಡಿದ ಅವರು, 'ಕಾಂಗ್ರೆಸ್ ಸರ್ಕಾರವು ತನ್ನ ಓಲೈಕೆ ರಾಜಕೀಯದಿಂದಾಗಿ ರಾಜ್ಯದಲ್ಲಿ 'ಮಿನಿ ಬಾಂಗ್ಲಾದೇಶ'ವನ್ನು ಸೃಷ್ಟಿಸುತ್ತಿದೆ ಎಂದು ಆರೋಪಿಸಿದರು. ಅಕ್ರಮ ಮನೆಗಳನ್ನು ಕೆಡವಿದರೂ ಇನ್ಯಾರದ್ದೋ ಒತ್ತಡದಿಂದ ಹೊರ ರಾಜ್ಯಗಳ ಜನರಿಗೆ ಮನೆಗಳನ್ನು ಹಂಚಿಕೆ ಮಾಡಲು ಸರ್ಕಾರ ಮುಂದಾಗಿದೆ, ಇದಕ್ಕೆ ನಾವು ಅವಕಾಶ ನೀಡುವುದಿಲ್ಲ. ಕಾಂಗ್ರೆಸ್ ಸರ್ಕಾರ ಕೇವಲ ಮುಸ್ಲಿಂ ಓಲೈಕೆಗಾಗಿ ಈ ರೀತಿ ಮಾಡುತ್ತಿದ್ದಾರೆ. ಹಾಗಾದ್ರೆ ಕಳೆದ ಐದು ವರ್ಷಗಳಲ್ಲಿ ರಾಜ್ಯದಲ್ಲಿ ಮನೆ ಕಳಕೊಂಡ 13 ಸಾವಿರ ಮಂದಿಗೆ ಏನು ಮಾಡುತ್ತದೆ, ಅವರು ಮನುಷ್ಯರಲ್ವಾ ಎಂದು ಪ್ರಶ್ನಿಸಿದರು.

The BJP has formed a seven-member fact-finding committee to investigate the demolition of alleged illegal migrant homes in Bengaluru’s Kogilu Layout. Karnataka BJP president B.Y. Vijayendra directed the committee to inspect the site and submit a detailed report within a week.