ಮಾಜಿ ಸಚಿವ ಎಚ್.ವೈ ಮೇಟಿ ಬೆಂಗಳೂರಿನ ಆಸ್ಪತ್ರೆಯಲ್ಲಿ ನಿಧನ ; ಸಿದ್ದರಾಮಯ್ಯ ಆಪ್ತರಾಗಿದ್ದ ಜನತಾ ಪರಿವಾರದ ನಾಯಕ 

04-11-25 04:38 pm       Bangalore Correspondent   ಕರ್ನಾಟಕ

ತೀವ್ರ ಅನಾರೋಗ್ಯದಿಂದ ಬೆಂಗಳೂರಿನ ಜಯನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮಾಜಿ ಸಚಿವ, ಬಾಗಲಕೋಟೆ ಕ್ಷೇತ್ರದ ಹಾಲಿ ಶಾಸಕ ಹೆಚ್.ವೈ ಮೇಟಿ (79) ನಿಧನ ಹೊಂದಿದ್ದಾರೆ. 

ಬೆಂಗಳೂರು, ನ.4 : ತೀವ್ರ ಅನಾರೋಗ್ಯದಿಂದ ಬೆಂಗಳೂರಿನ ಜಯನಗರದ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾಗಿದ್ದ ಮಾಜಿ ಸಚಿವ, ಬಾಗಲಕೋಟೆ ಕ್ಷೇತ್ರದ ಹಾಲಿ ಶಾಸಕ ಹೆಚ್.ವೈ ಮೇಟಿ (79) ನಿಧನ ಹೊಂದಿದ್ದಾರೆ. 

ಹೆಚ್.ವೈ. ಮೇಟಿ ( ಹುಲ್ಲಪ್ಪ ಯಮನಪ್ಪ ಮೇಟಿ) 2023ರ ವಿಧಾನಸಭೆ ಚುನಾವಣೆಯಲ್ಲಿ ಬಾಗಲಕೋಟೆ ವಿಧಾನಸಭಾ ಕ್ಷೇತ್ರದಲ್ಲಿ ಬಿಜೆಪಿಯ ವೀರಣ್ಣ ಚರಂತಿಮಠ ಅವರನ್ನು ಸೋಲಿಸಿ ವಿಧಾನಸಭೆಗೆ ಆಯ್ಕೆಯಾಗಿದ್ದರು. ಈ ಹಿಂದಿನ ಸಿದ್ದರಾಮಯ್ಯ ಸರ್ಕಾರದಲ್ಲಿ ಸಚಿವರಾಗಿದ್ದ ಮೇಟಿ 2018ರ ಚುನಾವಣೆಯಲ್ಲಿ ಸೋತಿದ್ದರು. 2013 ರಿಂದ 2016 ರವರೆಗಿನ ಸಿದ್ದರಾಮಯ್ಯ ಸರ್ಕಾರದಲ್ಲಿ ಹೆಚ್.ವೈ.ಮೇಟಿ ಅಬಕಾರಿ ಖಾತೆ ಮಂತ್ರಿಯಾಗಿದ್ದರು. ಈ ವೇಳೆ ಲೈಂಗಿಕ ಹಗರಣದಲ್ಲಿ ಸಿಲುಕಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು.  

ಬಾಗಲಕೋಟೆ ಪಟ್ಟಣ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ, ಬಾಗಲಕೋಟೆ ಡಿಸಿಸಿ ಬ್ಯಾಂಕ್ ನಿರ್ದೇಶಕರೂ ಆಗಿದ್ದ ಮೇಟಿ, 1989ರಲ್ಲಿ ಗುಳೇದಗುಡ್ಡ ಕ್ಷೇತ್ರದಿಂದ ಮೊದಲ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದರು. 1994ರಲ್ಲಿ ಗುಳೇದಗುಡ್ಡದಲ್ಲಿ ಜೆಡಿಎಸ್​ನಿಂದ 2ನೇ ಬಾರಿ ಗೆಲುವು ಸಾಧಿಸಿ ದೇವೇಗೌಡರ ಸಂಪುಟದಲ್ಲಿ ಅರಣ್ಯ ಸಚಿವರಾಗಿದ್ದರು. 1996ರಲ್ಲಿ ಬಾಗಲಕೋಟೆ ಕ್ಷೇತ್ರದ ಸಂಸದರಾಗಿದ್ದು, 2004ರಲ್ಲಿ ಮತ್ತೆ ಗುಳೇದಗುಡ್ಡ ಕ್ಷೇತ್ರದಿಂದ ಶಾಸಕರಾಗಿ ಗೆದ್ದಿದ್ದರು. ಇತ್ತೀಚೆಗಷ್ಟೇ ಹೆಚ್​.ವೈ.ಮೇಟಿ ಅವರನ್ನ ಖಾಸಗಿ ಆಸ್ಪತ್ರೆಯಲ್ಲಿ ಸಿಎಂ ಸಿದ್ದರಾಮಯ್ಯ ಭೇಟಿಯಾಗಿ ಆರೋಗ್ಯ ವಿಚಾರಿಸಿದ್ದರು. ಇಂದು ಅವರ ಪಾರ್ಥಿವ ಶರೀರದ ದರ್ಶನ ಮಾಡಿದ್ದಾರೆ.

ಹೆಚ್​.ವೈ. ಮೇಟಿ ಅವರ ಅಂತ್ಯಕ್ರಿಯೆ ಹುಟ್ಟೂರು ಬಾಗಲಕೋಟೆ ಜಿಲ್ಲೆಯ ತಿಮ್ಮಾಪುರದಲ್ಲಿ ಬುಧವಾರ(ನಾಳೆ) ನಡೆಯಲಿದೆ. ಸಿಎಂ ಸಿದ್ದರಾಮಯ್ಯ ಸೇರಿ ಕಾಂಗ್ರೆಸ್​ ಪಕ್ಷದ ಪ್ರಮುಖರು ಈ ವೇಳೆ ಭಾಗಿಯಾಗಲಿದ್ದಾರೆ.

Senior Congress leader and former Karnataka minister H.Y. Meti (79) passed away at a private hospital in Jayanagar, Bengaluru, following a prolonged illness.