ಅಶೋಕನ ಕಾಲದ ಮೌರ್ಯರ ರಾಜಧಾನಿ ರಾಯಚೂರಿನ ಮಸ್ಕಿ ಆಗಿತ್ತೇ? ನಾಲ್ಕು ಸಾವಿರ ವರ್ಷಗಳ ಹಿಂದಿನ ಜನವಸತಿ ಪ್ರದೇಶ ಪತ್ತೆ, ಅಮೆರಿಕ, ಕೆನಡಾ ತಜ್ಞರಿಂದ ಸಂಶೋಧನೆ 

05-08-25 01:45 pm       Bangalore Correspondent   ಕರ್ನಾಟಕ

ಚಕ್ರವರ್ತಿ ಅಶೋಕನ ಶಿಲಾಶಾಸನದಿಂದಾಗಿ ಪ್ರಸಿದ್ಧಿ ಪಡೆದಿರುವ ರಾಯಚೂರು ಜಿಲ್ಲೆಯ ಮಸ್ಕಿ ಮತ್ತೊಂದು ಐತಿಹಾಸಿಕ ವಿಚಾರಕ್ಕೆ ಸಾಕ್ಷಿಯಾಗಿದೆ. ನಾಲ್ಕು ಸಾವಿರ ವರ್ಷಗಳ ಹಿಂದೆ ಇಲ್ಲಿ ಜನವಸತಿ ಇದ್ದ ಬಗ್ಗೆ ಉತ್ಖನನದಲ್ಲಿ ಬೆಳಕಿಗೆ ಬಂದಿದೆ. ಈ ಕುರಿತು ಭಾರತ ಸೇರಿದಂತೆ ಮೂರು ದೇಶಗಳ ಸಂಶೋಧಕರ ತಂಡವು ಶೋಧನೆ ನಡೆಸಿ ಹೊಸ ವಿಚಾರಗಳನ್ನ ಹೊರತಂದಿದೆ. 

ಬೆಂಗಳೂರು, ಆ.5 : ಚಕ್ರವರ್ತಿ ಅಶೋಕನ ಶಿಲಾಶಾಸನದಿಂದಾಗಿ ಪ್ರಸಿದ್ಧಿ ಪಡೆದಿರುವ ರಾಯಚೂರು ಜಿಲ್ಲೆಯ ಮಸ್ಕಿ ಮತ್ತೊಂದು ಐತಿಹಾಸಿಕ ವಿಚಾರಕ್ಕೆ ಸಾಕ್ಷಿಯಾಗಿದೆ. ನಾಲ್ಕು ಸಾವಿರ ವರ್ಷಗಳ ಹಿಂದೆ ಇಲ್ಲಿ ಜನವಸತಿ ಇದ್ದ ಬಗ್ಗೆ ಉತ್ಖನನದಲ್ಲಿ ಬೆಳಕಿಗೆ ಬಂದಿದೆ. ಈ ಕುರಿತು ಭಾರತ ಸೇರಿದಂತೆ ಮೂರು ದೇಶಗಳ ಸಂಶೋಧಕರ ತಂಡವು ಶೋಧನೆ ನಡೆಸಿ ಹೊಸ ವಿಚಾರಗಳನ್ನ ಹೊರತಂದಿದೆ. 

ಅಶೋಕನ ಕಾಲದಿಂದ ಪೂರ್ವದಲ್ಲಿಯೇ ಮಸ್ಕಿ ಭಾಗದಲ್ಲಿ ಜನವಸತಿ ಇದ್ದ ಬಗ್ಗೆ ಸಂಶೋಧಕರು ಬೆಳಕು ಚೆಲ್ಲಿದ್ದಾರೆ. ಅಮೆರಿಕಾ, ಕೆನಡಾ ಹಾಗೂ ಭಾರತದ 20 ಜನ ಸಂಶೋಧಕರು ಮಸ್ಕಿ ಪಟ್ಟಣದ ಮಲ್ಲಿಕಾರ್ಜುನ ಬೆಟ್ಟ, ಬಯಲು ಆಂಜನೇಯ ದೇವಸ್ಥಾನ ಸೇರಿ ತಾಲೂಕಿನ ಹಲವೆಡೆ ಉತ್ಖನನ ನಡೆಸಿದೆ. ಈ ವೇಳೆ ಪ್ರಾಚೀನ ಕಾಲದಲ್ಲಿ ಬಳಕೆಯಲ್ಲಿದ್ದ ಪ್ರಾಚ್ಯ ಪಳಿಯುಳಿಕೆಗಳ ಸಂಗ್ರಹ, ಆಗಿನ ಜನರು ಬಳಸುತ್ತಿದ್ದ ಪರಿಕರಗಳು ಪತ್ತೆಯಾಗಿವೆ. 

ಭಾರತದ ನೊಯಿಡಾ ವಿವಿಯ ಪ್ರಾಧ್ಯಾಪಕ ಹೇಮಂತ್ ಕಡಾಂಬಿ, ಅಮೆರಿಕದ ಸ್ಕ್ಯಾನ್ ಪೋರ್ಡ್ ವಿವಿ ಪ್ರಾಧ್ಯಾಪಕ ಆ್ಯಂಡ್ರಿಮ್ ಎಂ. ಬವೆರ್, ಕೆನಡಾದ ಮ್ಯಾಕ್ ಗಿಲ್ ವಿವಿಯ ಪೀಟರ್ ಜಿ. ಜೋಹಾನ್ಸನ್ ಹಾಗೂ ಸಂಶೋಧನಾ ವಿದ್ಯಾರ್ಥಿಗಳು ಸೇರಿ 20 ಸಂಶೋಧಕರ ತಂಡ ಈ ಭಾಗದಲ್ಲಿ ಹಲವೆಡೆ ಉತ್ಖನನ ಮಾಡಿದೆ. ಅಶೋಕ ಚಕ್ರವರ್ತಿ ಕಾಲಕ್ಕೂ ಮೊದಲೇ ಸಮೃದ್ದವಾಗಿದ್ದ ಮಸ್ಕಿ ಬಗ್ಗೆ ಸಂಶೋಧಕರು ಮೂರು ತಿಂಗಳ ಕಾಲ ಅಧ್ಯಯನ ಮಾಡಿದ್ದಾರೆ. ಈ ವಿಚಾರ ಸ್ಥಳೀಯ ಸಂಶೋಧಕರು, ಇತಿಹಾಸ ತಜ್ಞರಲ್ಲಿ ಕುತೂಹಲ ಹೆಚ್ಚುವಂತೆ ಮಾಡಿದೆ.

ಉತ್ಖನನ ಹಾಗೂ ಸಂಶೋಧನೆಗಾಗಿ 271 ಸ್ಥಳಗಳನ್ನು ಗುರುತಿಸಿದ್ದ ಈ ತಂಡವು 11ರಿಂದ 14ನೇ ಶತಮಾನದಲ್ಲಿ ಜನವಸತಿ ಇರುವ ಬಗ್ಗೆ ಸಂಶೋಧನೆ ಮಾಡಿದೆ. ಬೇರೆ ಬೇರೆ ಆಕಾರದ ಮನೆಗಳ ರಚನೆ, ಅವರು ಬಳಸುತ್ತಿದ್ದ ಮಣ್ಣಿನ ಮಡಿಕೆ, ಚಿನ್ನದ ಲೇಪನದ ವಸ್ತುಗಳು, ಮೂಳೆ ಸೇರಿ ಹಲವು ವಸ್ತುಗಳು ಪತ್ತೆಯಾಗಿವೆ. ಆಗಿನ ಜನರ ಜೀವನ ಮಟ್ಟ, ಆಹಾರ ಪದ್ಧತಿಗಳ ಬಗ್ಗೆ ಸಂಶೋಧನೆ ನಡೆದಿದೆ. ಇದರಿಂದ ಮಸ್ಕಿಯ ಚಾರಿತ್ರಿಕ ಹಿನ್ನೆಲೆ, ಚಾರಿತ್ರಿಕ ಬೆಳವಣಿಗೆಯ ಹೊಸ ಸಾಕ್ಷಿಗಳು ಸಿಕ್ಕಂತಾಗಿದೆ. ಇಲ್ಲಿನ ಶೋಧನೆ 4000 ವರ್ಷಗಳ ಹಿಂದಿನ ಜನಜೀವನ ಹೇಗಿತ್ತು ಅನ್ನೋದು ತಿಳಿದು ಬರುತ್ತದೆ. ಮಧ್ಯಕಾಲೀನ ಸಮಯದ ಬಗ್ಗೆ ಸಂಶೋಧನೆ ಮಾಡುತ್ತಿದ್ದೇವೆ ಎಂದು ಸಂಶೋಧನಾ ತಂಡದ ಮುಖ್ಯಸ್ಥ ನೊಯಿಡಾ ವಿವಿ ಪ್ರಾಧ್ಯಾಪಕ ಹೇಮಂತ್ ಕಡಾಂಬಿ ತಿಳಿಸಿದ್ದಾರೆ. 

ಸ್ವಾತಂತ್ರ್ಯ ಪೂರ್ವದಲ್ಲಿ ವಿದೇಶಿ ಸಂಶೋಧಕ ಬಿ.ಕೆ.ಥಾಫರ್, 1870ರಲ್ಲಿ ಬ್ರಿಟಿಷ್ ಸಂಶೋಧಕ ಬ್ರೂಸ್ ಫೂಟ್, ನಂತರ ಬ್ರಿಟಿಷ್ ಕಾಲದಲ್ಲಿ ಹೈದ್ರಾಬಾದ್‌ನ ಪುರಾತತ್ವ ಇಲಾಖೆಯಿಂದ, ಸ್ವಾತಂತ್ರ‍್ಯ ನಂತರ 1954ರಲ್ಲಿಯೂ ಮಸ್ಕಿಯಲ್ಲಿ ಉತ್ಖನನ ನಡೆದಿತ್ತು. ಇತಿಹಾಸ ಸಂಶೋಧಕರು ಮಸ್ಕಿಯ ಹಲವಾರು ಪ್ರದೇಶಗಳಲ್ಲಿ ಸಂಶೋಧನೆ ನಡೆಸುತ್ತಲೇ ಇದ್ದಾರೆ. ಈಗ ಅಮೇರಿಕಾ, ಕೆನಡಾ ಹಾಗೂ ಭಾರತದ ಸಂಶೋಧಕರು ಜಂಟಿಯಾಗಿ ಉತ್ಖನನ ನಡೆಸಿ ಸಾಕಷ್ಟು ಅಂಶಗಳನ್ನ ಕಲೆ ಹಾಕಿದ್ದಾರೆ. 

ಅಶೋಕನ ಕಾಲದ ದಕ್ಷಿಣ ಪ್ರಾಂತ್ಯದ ಮೌರ್ಯರ ರಾಜಧಾನಿ ಸುವರ್ಣಗಿರಿ ಎಂಬುದು ಈ ಹಿಂದೆಯೇ ತಿಳಿದುಬಂದಿತ್ತು. ಆದ್ರೆ ಸಂಶೋಧಕರಲ್ಲಿ ಇನ್ನೂ ಸ್ಥಳದ ಬಗ್ಗೆ ಖಚಿತ ಮಾಹಿತಿ ಲಭ್ಯವಾಗಿಲ್ಲ. ಮಸ್ಕಿಯಲ್ಲಿ ಬೃಹತ್ ಶಿಲಾಯುಗದ ಪರಿಕರಗಳು, ಬೃಹತ್ ಶಿಲಾ ಗೋರಿಗಳು, ಚಿನ್ನದಿಂದ ಮಾಡಿದ ಅನೇಕ ವಸ್ತುಗಳು ಲಭ್ಯವಾಗಿದ್ದು ಮಸ್ಕಿಯೇ ಸುವರ್ಣಗಿರಿ ಇರಬಹುದು ಅನ್ನುವ ಬಗ್ಗೆ ಸಂಶೋಧನೆ ನಡೆದಿದೆ. ಈ ಉತ್ಕನನದಿಂದ ಊಹೆಗೆ ಈಗ ಪುಷ್ಟಿ ಸಿಗುತ್ತಿದೆ, ಆದ್ರೆ ಖಚಿತ ಮಾಹಿತಿಗಳೊಂದಿಗೆ ದಾಖಲಾಗಬೇಕಿದೆ ಅಂತ ಸ್ಥಳೀಯ ಇತಿಹಾಸ ತಜ್ಞ ಚನ್ನಬಸವ ಹಿರೇಮಠ ಹೇಳಿದ್ದಾರೆ.

ಇತಿಹಾಸದಲ್ಲಿ ಅಡಗಿರುವ ಅನೇಕ ವಿಷಯಗಳನ್ನ ಹೊರತೆಗೆಯಲು ಹಿಂದಿನಿಂದಲೂ ಅನೇಕ ಸಂಶೋಧಕರು ಮಸ್ಕಿಯಲ್ಲಿ ಉತ್ಖನನ, ಸಂಶೋಧನೆ ನಡೆಸಿದ್ದಾರೆ. ಅನೇಕ ಪ್ರಾಚ್ಯ ಅವಶೇಷಗಳು ಲಭ್ಯವಾಗಿರುವುದರಿಂದ ಸಾಕಷ್ಟು ರಹಸ್ಯಗಳನ್ನು ಮಸ್ಕಿ ತನ್ನ ಮಡಿಲಲ್ಲಿ ಉಳಿಸಿಕೊಂಡಿದೆ. ಈಗ 20 ಜನ ಸಂಶೋಧಕರ ತಂಡ ನಡೆಸಿದ ಉತ್ಖನನದಿಂದ ಇನ್ನೂ ಯಾವೆಲ್ಲ ಹೊಸ ವಿಷಯಗಳು ಹೊರಬರುತ್ತವೆ ಅನ್ನುವ ಕುತೂಹಲ ಮನೆಮಾಡಿದೆ.

Maski in Karnataka’s Raichur district, already renowned for its connection to Emperor Ashoka through an edict, has now emerged as the site of yet another major historical revelation. A joint archaeological excavation by researchers from India, the United States, and Canada has brought to light evidence of human settlement in the region dating back nearly 4,000 years.