ಕೇವಲ 2 ಸಾವಿರ ಲಂಚ ಕೇಳಿ ಸಿಕ್ಕಿಬಿದ್ದ ಪಂಚಾಯತ್ ಪಿಡಿಓ ; ಕಡ್ಡಾಯ ನಿವೃತ್ತಿ ಕೊಟ್ಟು ಶಾಕ್ ನೀಡಿದ ರಾಜ್ಯ ಸರ್ಕಾರ  

15-07-25 10:35 am       Bangalore Correspondent   ಕರ್ನಾಟಕ

‘ಇ-ಸ್ವತ್ತು' ಸರ್ಟಿಫಿಕೇಟ್ ನೀಡುವುದಕ್ಕಾಗಿ 2,000 ರೂ. ಲಂಚ ಪಡೆದಿದ್ದ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ)ಗೆ ರಾಜ್ಯ ಸರ್ಕಾರ ಕಡ್ಡಾಯ ನಿವೃತ್ತಿ ನೀಡಿ ಶಾಕ್ ಕೊಟ್ಟಿದೆ. 

ಬೆಂಗಳೂರು, ಜುಲೈ 15: ‘ಇ-ಸ್ವತ್ತು' ಸರ್ಟಿಫಿಕೇಟ್ ನೀಡುವುದಕ್ಕಾಗಿ 2,000 ರೂ. ಲಂಚ ಪಡೆದಿದ್ದ ಪಂಚಾಯತ್ ಅಭಿವೃದ್ಧಿ ಅಧಿಕಾರಿ (ಪಿಡಿಒ)ಗೆ ರಾಜ್ಯ ಸರ್ಕಾರ ಕಡ್ಡಾಯ ನಿವೃತ್ತಿ ನೀಡಿ ಶಾಕ್ ಕೊಟ್ಟಿದೆ. 

ದಾವಣಗೆರೆ ಜಿಲ್ಲೆಯ ಚನ್ನಗಿರಿ ತಾಲ್ಲೂಕಿನ ಚನ್ನೇಪುರ ಗ್ರಾಮ ಪಂಚಾಯತ್‌ ಪಿಡಿಒ ಹನುಮಂತಪ್ಪ ಹಂಚಿನಮನೆ, ಮಂಗಳಾಬಾಯಿ ಎಂಬವರಿಂದ 14x100 ಅಡಿ ಅಳತೆಯ ಮನೆಯೊಂದಿಗೆ ಮನೆ ಖರೀದಿಸಲು ‘ಇ-ಸ್ವತ್ತು’ ಮಂಜೂರಾತಿಗೆ ಲಂಚದ ಬೇಡಿಕೆ ಇಟ್ಟಿದ್ದರು. ಈ ಬಗ್ಗೆ ಮಾವಿನಕಟ್ಟೆ ಗ್ರಾಮದ ನಿವಾಸಿ ರಂಗನಾಥ ಬಿ.ಎಚ್. ಅವರಿಂದ ಪಿಡಿಓ 2,000 ರೂ. ಲಂಚ ಸ್ವೀಕರಿಸುವಾಗಲೇ ಲೋಕಾಯುಕ್ತ ಬಲೆಗೆ ಬಿದ್ದಿದ್ದರು. 

ರಾಜ್ಯ ಸರ್ಕಾರವು ಜುಲೈ 31, 2023 ರಂದು ಕರ್ನಾಟಕ ನಾಗರಿಕ ಸೇವಾ (ವರ್ಗೀಕರಣ, ನಿಯಂತ್ರಣ ಮತ್ತು ಮೇಲ್ಮನವಿ) ನಿಯಮಗಳು, 1957 ರ ನಿಯಮ 14 (ಎ) ಅಡಿಯಲ್ಲಿ ಅವರ ವಿರುದ್ಧದ ತನಿಖೆಯನ್ನು ಉಪ ಲೋಕಾಯುಕ್ತ ನ್ಯಾಯಮೂರ್ತಿ ಬಿ ವೀರಪ್ಪ ಅವರಿಗೆ ವಹಿಸಿತ್ತು. 2024ರ ಫೆಬ್ರವರಿ 18 ರಂದು ಉಪ ಲೋಕಾಯುಕ್ತರು, ಕರ್ನಾಟಕ ನಾಗರಿಕ ಸೇವಾ (ನಡವಳಿಕೆ) ನಿಯಮಗಳು, 1966ರ ನಿಯಮ 3 (1) (i), (ii) ಮತ್ತು (iii) ಅಡಿಯಲ್ಲಿ ಅನುಚಿತ ವರ್ತಿಸಿದ್ದರಿಂದ ಅವರಿಗೆ ಕಡ್ಡಾಯ ನಿವೃತ್ತಿ ನೀಡುವಂತೆ ರಾಜ್ಯ ಸರ್ಕಾರಕ್ಕೆ ಶಿಫಾರಸು ಮಾಡಿದ್ದಾರೆ.

ಶಿಫಾರಸನ್ನು ಅಂಗೀಕರಿಸಿದ ರಾಜ್ಯ ಸರ್ಕಾರವು ಮಾರ್ಚ್ 10 ರಂದು ಹನುಮಂತಪ್ಪ ಹಂಚಿನಮನೆ ಅವರಿಗೆ ಶೋಕಾಸ್ ನೋಟಿಸ್ ನೀಡಿತು. ಇದಕ್ಕೆ ಉತ್ತರಿಸಿ ಅವರು ಆರೋಪಗಳನ್ನು ನಿರಾಕರಿಸಿದ್ದಲ್ಲದೆ, ತನಿಖಾಧಿಕಾರಿ ತನ್ನ ವಿರುದ್ಧದ ಆರೋಪಗಳ ಬಗ್ಗೆ ಸರಿಯಾಗಿ ವಿಚಾರಣೆ ನಡೆಸಿಲ್ಲ ಎಂದಿದ್ದರು. ವಿಚಾರಣಾ ವರದಿಯನ್ನು ಪರಿಶೀಲಿಸಿದ ರಾಜ್ಯ ಸರ್ಕಾರ ಆರೋಪ ಸಾಬೀತಾಗಿದ್ದು ಎಂದು ತೀರ್ಮಾನಿಸಿ ಪಿಡಿಓಗೆ ಕಡ್ಡಾಯ ನಿವೃತ್ತಿ ಘೋಷಿಸಿದೆ.

Hanumanthappa Hanchinamane, PDO of Channepura Grama Panchayat in Channagiri taluk of Davanagere District, was trapped by the Lokayukta police while accepting the bribe of Rs 2,000.