Heart attack, Dharwad, Davanagere: ಉದ್ಯಮಿ ಮಗನ, ಶಿಕ್ಷಕನ ಮಗಳ UPSC ಕನಸು ಕಸಿದ ಹೃದಯಾಘಾತ ; ದಾವಣಗೆರೆ - ಹುಬ್ಬಳ್ಳಿಯಲ್ಲಿ ಮತ್ತೆ 2 ಜೀವ ತೆಗೆದ ಹಾರ್ಟ್​​​ ಅಟ್ಯಾಕ್, ಹೇ ಹೃದಯ ನಿನಗೇನಾಗಿದೆ...? 

09-07-25 11:50 am       HK News Desk   ಕರ್ನಾಟಕ

ರಾಜ್ಯದಲ್ಲಿ ಹೃದಯಾಘಾತದಿಂದ ಆಗುತ್ತಿರುವ ಮರಣ ಮೃದಂಗ ಮುಂದುವರಿದಿದೆ. ಧಾರವಾಡ ಅಂಡ್ ದಾವಣಗೆರೆಯಲ್ಲಿ ಇಬ್ಬರು ಜೀವ ಕಳೆದುಕೊಂಡಿದ್ದಾರೆ.

ಧಾರವಾಡ, ಜು 09 : ರಾಜ್ಯದಲ್ಲಿ ಹೃದಯಾಘಾತದಿಂದ ಆಗುತ್ತಿರುವ ಮರಣ ಮೃದಂಗ ಮುಂದುವರಿದಿದೆ. ಧಾರವಾಡ ಅಂಡ್ ದಾವಣಗೆರೆಯಲ್ಲಿ ಇಬ್ಬರು ಜೀವ ಕಳೆದುಕೊಂಡಿದ್ದಾರೆ.

ದಾವಣಗೆರೆ ನಗರದ ಜಯನಗರದಲ್ಲಿ 22 ವರ್ಷದ‌ ಕಾಲೇಜು ಯುವಕ ಹೃದಯಾಘಾತಕ್ಕೆ ಬಲಿಯಾಗಿದ್ದಾನೆ. ಮನೆಯಲ್ಲಿದ್ದಾಗ ಇದ್ದಕ್ಕಿದ್ದಂತೆ ಕುಸಿದು ಬಿದ್ದು ಜೀವ ಕಳೆದುಕೊಂಡಿದ್ದಾನೆ. ಉದ್ಯಮಿ ರೇಖಾ ಮುರ್ಗೇಶ್ ಪುತ್ರ ಅಕ್ಷಯ್ (22) ಮೃತ ದುರ್ದೈವಿ. ಕುಸಿದು ಬೀಳುತ್ತಿದ್ದಂತೆಯೇ ಅಕ್ಷಯ್​ನನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿತ್ತು. ಆದರೆ ಬದುಕುಳಿಯಲಿಲ್ಲ.

ಇತ್ತ ಯುಪಿಎಸ್‌ಸಿ ಪರೀಕ್ಷೆಗೆ ತಯಾರಿ ನಡೆಸುತ್ತಿದ್ದ ಯುವತಿ ಹೃದಯಾಘಾತದಿಂದ ಮೃತಪಟ್ಟ ಘಟನೆ ಧಾರವಾಡದ ಪುರೋಹಿತ್ ನಗರದಲ್ಲಿ ನಡೆದಿದೆ.

ಜೀವಿತಾ ಕುಸಗೂರ (26) ಎಂಬ ಯುವತಿ ಮೃತಪಟ್ಟವರು. ನಿನ್ನೆ ಬೆಳಗ್ಗೆ ಮನೆಯಲ್ಲಿ ತಲೆ‌ ಸುತ್ತು ಬರುತ್ತಿದೆ ಎಂದು‌ ಯುವತಿ ಸುಸ್ತಾಗಿ ಕುಳಿತಿದ್ದರು. ನಂತರ ಕುಟುಂಬದವರು ಖಾಸಗಿ ಆಸ್ಪತ್ರೆಗೆ ರವಾನಿಸಿದ್ದರು. ಆದರೆ, ಮಾರ್ಗ ಮಧ್ಯದಲ್ಲೇ ಯುವತಿ ಕೊನೆಯುಸಿರೆಳೆದಿದ್ದಾರೆ.

ಆಸ್ಪತ್ರೆಗೆ ಹೋಗಿ ವೈದ್ಯರಿಗೆ ತೋರಿಸಿದಾಗ ಹೃದಯಾಘಾತದಿಂದ ಸಾವಾಗಿದೆ ಎಂದು ವೈದ್ಯರು ಘೋಷಣೆ ಮಾಡಿದ್ದಾರೆ. ಎಂಎಸ್​ಸಿ ಅಗ್ರಿ ಓದಿದ್ದ ಜೀವಿತಾ ಯುಪಿಎಸ್‌ಸಿ ಕನಸು ಹೊಂದಿದ್ದು, ಪರೀಕ್ಷೆಗಾಗಿ ತಯಾರಿ ನಡೆಸುತ್ತಿದ್ದರು. ಇವರ ತಂದೆ‌ ಶಾಲೆ ಶಿಕ್ಷಕರಾಗಿದ್ದಾರೆ. ಉನ್ನತ ಹುದ್ದೆಯ ಗುರಿ ಇರಿಸಿಕೊಂಡಿದ್ದ ಯುವತಿ ಚಿಕ್ಕ ವಯಸ್ಸಿನಲ್ಲೇ ನಿಧನರಾಗಿದ್ದು, ಕುಟುಂಬವು ಶೋಕ ಸಾಗರದಲ್ಲಿ ಮುಳುಗಿದೆ.

ಹೃದಯಾಘಾತಕ್ಕೆ ಕೋವಿಡ್​ ಸೋಂಕು ಕಾರಣವಾಗಿರುಬಹುದೇ ಹೊರತು ಲಸಿಕೆಯಲ್ಲ ;

ಹೃದಯಾಘಾತಕ್ಕೆ ಕೋವಿಡ್​ ಸೋಂಕು ಕೂಡ ಕಾರಣವಾಗಿರುಬಹುದೇ ಹೊರತು ಲಸಿಕೆಯಲ್ಲ ಎಂದು ಇತ್ತೀಚೆಗೆ ಆರೋಗ್ಯ ಸಚಿವ ಸಚಿವ ದಿನೇಶ್​ ಗುಂಡೂರಾವ್ ಸ್ಪಷ್ಟಪಡಿಸಿದ್ದಾರೆ.

ಜಯದೇವ ಹೃದ್ರೋಗ ಆಸ್ಪತ್ರೆಯ ನಿರ್ದೇಶಕ ಡಾ.ರವೀಂದ್ರನಾಥ್ ನೇತೃತ್ವದ ತಜ್ಞರ ಸಮಿತಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ. ಕೋವಿಡ್​​ ನಂತರ ಸ್ವಲ್ಪ ಮಟ್ಟಿಗೆ ಹೃದಯಾಘಾತ ಪ್ರಕರಣಗಳು ಹೆಚ್ಚಾಗಿರುವುದನ್ನು ವರದಿಯು ದೃಢಪಡಿಸಿದೆ. ಆದರೆ, ಇದು ಲಸಿಕೆಯಿಂದಲ್ಲ ಎಂದು ಸ್ಪಷ್ಟವಾಗಿ ಉಲ್ಲೇಖಿಸಿದೆ ಎಂದು ಸಚಿವರು ಹೇಳಿದ್ದಾರೆ.

ಕೋವಿಡ್ ಸೋಂಕಿನ ನಂತರ ಮಧುಮೇಹ ಪ್ರಕರಣಗಳು ಗಣನೀಯವಾಗಿ ಹೆಚ್ಚಾಗಿರುವುದು ಹೃದಯಾಘಾತಕ್ಕೆ ಒಂದು ಕಾರಣ ಎಂದು ಸಮಿತಿ ತಿಳಿಸಿದೆ. ಬಿಪಿ (ರಕ್ತದೊತ್ತಡ) ಹೆಚ್ಚಳವೂ ಹೃದಯಾಘಾತಕ್ಕೆ ಒಂದು ಕಾರಣವಾಗಿ ಪರಿಣಮಿಸಿದೆ. ಕೋವಿಡ್​​ ಸೋಂಕಿನಿಂದ ದೇಹದ ಮೇಲಾಗುವ ಪರಿಣಾಮಗಳು, ಇತರೆ ಔಷಧಗಳ ಸೇವನೆ, ದೈಹಿಕ ಚಟುವಟಿಕೆಯ ಕೊರತೆ, ಟಿವಿ ಮತ್ತು ಕಂಪ್ಯೂಟರ್​​ ಮುಂದೆ ಹೆಚ್ಚು ಸಮಯ ಕಳೆಯುವುದು ಕೂಡ ಹೃದಯಾಘಾತಕ್ಕೆ ಕಾರಣಗಳಾಗಿವೆ ಎಂದು ವರದಿ ಹೇಳಿದೆ ಎಂದು ಸಚಿವರು ಮಾಹಿತಿ ನೀಡಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಹೆಚ್ಚುತ್ತಿರುವ ಹಠಾತ್ ಮರಣಗಳ ಪ್ರಕರಣಗಳನ್ನು ಗಂಭೀರವಾಗಿ ಪರಿಗಣಿಸಿರುವ ಸರ್ಕಾರ, ತಜ್ಞರ ಸಮಿತಿಯ ಶಿಫಾರಸುಗಳ ಆಧಾರದ ಮೇಲೆ ಮಹತ್ವದ ನಿರ್ಧಾರಗಳನ್ನು ಕೈಗೊಂಡಿದೆ. ಈ ಕುರಿತು ಶೀಘ್ರದಲ್ಲೇ ಅಧಿಸೂಚನೆ ಹೊರಡಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

ಹಠಾತ್ ಮರಣಗಳಿಗೆ ಕಾರಣವಾಗುವ ಕೆಲವು ಕಾಯಿಲೆಗಳನ್ನು 'ಅಧಿಸೂಚಿತ ಕಾಯಿಲೆಗಳು' ಎಂದು ಘೋಷಿಸಲಾಗುವುದು. ಇದು ಈ ಕಾಯಿಲೆಗಳ ಕುರಿತು ಮಾಹಿತಿ ಸಂಗ್ರಹಣೆ ಮತ್ತು ನಿಯಂತ್ರಣಕ್ಕೆ ಸಹಾಯಕವಾಗಲಿದೆ. ಆಸ್ಪತ್ರೆಯ ಹೊರಗೆ ಸಂಭವಿಸುವ ಹಠಾತ್ ಮರಣಗಳಿಗೆ ಕಡ್ಡಾಯವಾಗಿ ಮರಣೋತ್ತರ ಪರೀಕ್ಷೆ ನಡೆಸಬೇಕು. ಇದು ಮರಣದ ನಿಖರ ಕಾರಣವನ್ನು ಪತ್ತೆಹಚ್ಚಲು ಮತ್ತು ಮುಂದಿನ ಕ್ರಮಗಳನ್ನು ಕೈಗೊಳ್ಳಲು ನೆರವಾಗಲಿದೆ ಎಂದರು.

ಹೃದಯ ಸಂಬಂಧಿ ತಪಾಸಣೆ ಕಡ್ಡಾಯ: 

15 ವರ್ಷದೊಳಗಿನ ಮಕ್ಕಳಿಗೆ ಶಾಲಾ ಹಂತದಲ್ಲಿಯೇ ಹೃದಯ ಸಂಬಂಧಿ ತಪಾಸಣೆಗಳನ್ನು ಕಡ್ಡಾಯಗೊಳಿಸಲಾಗುವುದು. ಇದು ಬಾಲ್ಯದಲ್ಲಿಯೇ ಹೃದಯ ಸಮಸ್ಯೆಗಳನ್ನು ಗುರುತಿಸಿ ಚಿಕಿತ್ಸೆ ನೀಡಲು ನೆರವಾಗಲಿದೆ. ಹೃದಯಾಘಾತ ಮತ್ತು ಅಸಾಂಕ್ರಾಮಿಕ ರೋಗಗಳ ಬಗ್ಗೆ ಜಾಗೃತಿ ಮೂಡಿಸುವ ವಿಷಯಗಳನ್ನು ಮುಂದಿನ ಶೈಕ್ಷಣಿಕ ವರ್ಷದಿಂದ ಪಠ್ಯಪುಸ್ತಕಗಳಲ್ಲಿ ಅಳವಡಿಸಲಾಗುವುದು. ಈ ವರ್ಷ ನೈತಿಕ ಪಾಠಗಳ ಮೂಲಕ ಜಾಗೃತಿ ಮೂಡಿಸಲಾಗುವುದು ಎಂದು ಶಿಕ್ಷಣ ಸಚಿವರು ಭರವಸೆ ನೀಡಿದ್ದಾರೆ ಎಂದು ಸಚಿವರು ಹೇಳಿದ್ದಾರೆ.

The rising number of sudden cardiac deaths in Karnataka has become a matter of grave concern. In two tragic incidents reported from Davangere and Dharwad, two young lives were lost to heart attacks — one a college student, and the other a UPSC aspirant.