Rain kadaba, Sullia, Mangalore: ಕಡಬ, ಸುಳ್ಯದಲ್ಲಿ ಧಾರಾಕಾರ ಮಳೆ ; ಕುಮಾರಧಾರ ಸ್ನಾನಘಟ್ಟ ಮುಳುಗಡೆ, ಶಾಲಾ - ಕಾಲೇಜುಗಳಿಗೆ ರಜೆ

03-07-25 10:54 am       HK News Desk   ಕರ್ನಾಟಕ

ಕಡಬ, ಸುಳ್ಯ ತಾಲೂಕು ಹಾಗೂ ಕುಕ್ಕೆಸುಬ್ರಹ್ಮಣ್ಯ ಪರಿಸರದಲ್ಲಿ ಧಾರಾಕಾರವಾಗಿ ಮಳೆ ಮುಂದುವರಿದಿದ್ದು, ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ಸ್ನಾನಘಟ್ಟ ಮುಳುಗಡೆಯಾಗಿದೆ.

ಸುಬ್ರಹ್ಮಣ್ಯ, ಜು 03 : ಕಡಬ, ಸುಳ್ಯ ತಾಲೂಕು ಹಾಗೂ ಕುಕ್ಕೆಸುಬ್ರಹ್ಮಣ್ಯ ಪರಿಸರದಲ್ಲಿ ಧಾರಾಕಾರವಾಗಿ ಮಳೆ ಮುಂದುವರಿದಿದ್ದು, ಕುಕ್ಕೆ ಸುಬ್ರಹ್ಮಣ್ಯದ ಕುಮಾರಧಾರ ಸ್ನಾನಘಟ್ಟ ಮುಳುಗಡೆಯಾಗಿದೆ.

ಮಳೆ ಹಿನ್ನೆಲೆಯಲ್ಲಿ ಕಡಬ ಮತ್ತು ಸುಳ್ಯ ತಾಲೂಕಿನ ಎಲ್ಲಾ ಅಂಗನವಾಡಿ ಕೇಂದ್ರಗಳಿಗೆ, ಪ್ರಾಥಮಿಕ ಮತ್ತು ಪ್ರೌಢಶಾಲೆ ಸರ್ಕಾರಿ ಅನುದಾನಿತ ಮತ್ತು ಖಾಸಗಿ ವಿದ್ಯಾ ಸಂಸ್ಥೆಗಳಿಗೆ ಹಾಗೂ ಪದವಿಪೂರ್ವ ಕಾಲೇಜುಗಳಿಗೆ ರಜೆ ನೀಡಿ ತಹಶೀಲ್ದಾರರು ಆದೇಶ ಹೊರಡಿಸಿದ್ದಾರೆ.

ಶಿರಾಡಿ ಘಟ್ಟ ಪ್ರದೇಶ ಹಾಗೂ ಕುಕ್ಕೆ ಸುಬ್ರಹ್ಮಣ್ಯ ಪರಿಸದಲ್ಲಿ ಭಾರಿ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಇಲ್ಲಿನ ಕುಮಾರಧಾರ ನದಿ ತುಂಬಿ ಹರಿಯುತ್ತಿದೆ. ರಾತ್ರಿ ವೇಳೆ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳಗೊಂಡಿದ್ದು, ಸ್ನಾನ ಘಟ್ಟ ಸಂಪೂರ್ಣವಾಗಿ ಮುಳುಗಡೆಯಾಗಿ, ಲಗೇಜ್​ ಕೊಠಡಿ ಬಳಿವರೆಗೂ ನದಿ ನೀರು ಆವರಿಸಿದೆ.

ನದಿ ನೀರಿನ ಬಳಿಗೆ ಭಕ್ತರು ತೆರಳದಂತೆ ಸೂಚಿಸಲಾಗಿದ್ದು, ನದಿ ದಡದಲ್ಲಿ ಭದ್ರತಾ ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ನದಿ ನೀರಿಗೆ ಇಳಿದು ತೀರ್ಥ ಸ್ನಾನ ನೆರವೇರಿಸುವುದಕ್ಕೂ ನಿರ್ಬಂಧಿಸಲಾಗಿದೆ. ಕುಕ್ಕೆ ಸುಬ್ರಹ್ಮಣ್ಯ, ಬಿಳಿನೆಲೆ, ಬಳ್ಪ, ಐನೆಕಿದು, ಪಂಜ, ಕಡಬ, ಕೋಡಿಂಬಾಳ, ಕೊಲ್ಲಮೊಗ್ರ, ಗುತ್ತಿಗಾರು, ಅರಂತೋಡು, ಸುಳ್ಯ ಪ್ರದೇಶದಲ್ಲೂ ಬುಧವಾರ ರಾತ್ರಿಯಿಂದ ಆರಂಭವಾದ ಧಾರಾಕಾರ ಮಳೆ ಆದೇ ತರಹ ನಿರಂತರವಾಗಿ ಸುರಿಯುತ್ತಲೇ ಇದೆ. ಸುಳ್ಯ ಮತ್ತು ಕಡಬ ತಾಲೂಕು ಕೇಂದ್ರಗಳಲ್ಲಿ ಕಂಟ್ರೋಲ್ ರೂಂ ಸೇವೆಗಳನ್ನು ಆರಂಭಿಸಲಾಗಿದೆ.

ಮತ್ತೊಂದು ಕಡೆ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿ, ಹೊಸನಗರ ಹಾಗೂ ಸಾಗರ ತಾಲೂಕಿನಾದ್ಯಾಂತ ಭಾರಿ ಮಳೆಯಾಗುತ್ತಿರುವುದರಿಂದ ಮೂರು ತಾಲೂಕು ಆಡಳಿತಗಳು ಅಂಗನವಾಡಿ ಸೇರಿದಂತೆ ಶಾಲಾ - ಕಾಲೇಜುಗಳಿಗೆ ರಜೆ ಘೋಷಣೆ ಮಾಡಿವೆ. ಈ ಕುರಿತು ಮೂರು ತಾಲೂಕಿನ ತಹಶೀಲ್ದಾರ್​ಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Incessant heavy rainfall continues to lash Kadaba and Sullia taluks, as well as the surrounding areas of Kukke Subrahmanya. As a result, the Kumaradhara river has overflowed, submerging the sacred bathing ghat near the famous temple.