Mangalore Rain, Kodagu: ಭಾರೀ ಮಳೆ ಹಿನ್ನೆಲೆ ; ಕೊಡಗು ಜಿಲ್ಲೆಯಾದ್ಯಂತ ಸರಕು ಸಾಗಾಟದ ಲಾರಿಗಳು, ಟ್ಯಾಂಕರ್ ಸಂಚಾರ ನಿಷೇಧ, ಸಾರಿಗೆ ಬಸ್ ಗಳಿಗೆ ವಿನಾಯ್ತಿ 

26-05-25 07:23 pm       HK News Desk   ಕರ್ನಾಟಕ

ಕೊಡಗು ಜಿಲ್ಲೆಯಲ್ಲಿ ಈ ಬಾರಿ ಆರಂಭದಲ್ಲೇ ಮಳೆ ತೀವ್ರಗೊಂಡಿದ್ದು, ಮಳೆಯಿಂದಾಗಿ ಅನಾಹುತ ಉಂಟಾಗುವ ಸಾಧ್ಯತೆ ಇರುವುದರಿಂದ ಹೆದ್ದಾರಿ ಮತ್ತು ರಸ್ತೆಗಳ ಕುಸಿತ ಆಗುವುದನ್ನು ತಪ್ಪಿಸಲು ಕೊಡಗು ಜಿಲ್ಲೆಯಾದ್ಯಂತ ಎಲ್ಲ ರೀತಿಯ ಸರಕು ಸಾಗಾಟದ ಲಾರಿಗಳು, ಭಾರದ ಟ್ಯಾಂಕರ್ ಇನ್ನಿತರ ಘನ ವಾಹನಗಳ ಸಂಚಾರ ನಿಷೇಧಿಸಲಾಗಿದೆ.

ಮಡಿಕೇರಿ, ಮೇ 26 : ಕೊಡಗು ಜಿಲ್ಲೆಯಲ್ಲಿ ಈ ಬಾರಿ ಆರಂಭದಲ್ಲೇ ಮಳೆ ತೀವ್ರಗೊಂಡಿದ್ದು, ಮಳೆಯಿಂದಾಗಿ ಅನಾಹುತ ಉಂಟಾಗುವ ಸಾಧ್ಯತೆ ಇರುವುದರಿಂದ ಹೆದ್ದಾರಿ ಮತ್ತು ರಸ್ತೆಗಳ ಕುಸಿತ ಆಗುವುದನ್ನು ತಪ್ಪಿಸಲು ಕೊಡಗು ಜಿಲ್ಲೆಯಾದ್ಯಂತ ಎಲ್ಲ ರೀತಿಯ ಸರಕು ಸಾಗಾಟದ ಲಾರಿಗಳು, ಭಾರದ ಟ್ಯಾಂಕರ್ ಇನ್ನಿತರ ಘನ ವಾಹನಗಳ ಸಂಚಾರ ನಿಷೇಧಿಸಲಾಗಿದೆ.

ಕೊಡಗು ಜಿಲ್ಲೆಯಲ್ಲಿ ಕಳೆದ ನಾಲ್ಕೈದು ವರ್ಷಗಳಲ್ಲಿ ಪ್ರತಿ ಬಾರಿಯೂ ಮಳೆಗಾಲದಲ್ಲಿ ಅನಾಹುತ ಸಂಭವಿಸಿದ್ದು, ರಸ್ತೆಗಳು ಕುಸಿತಗೊಂಡು ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ಹೀಗಾಗಿ ಸಾರ್ವಜನಿಕ ಆಸ್ತಿಯ ಸುರಕ್ಷತೆ ದೃಷ್ಟಿಯಿಂದ 18,500 ಕೇಜಿಗಿಂತ ಹೆಚ್ಚು ಭಾರವುಳ್ಳ ಸರಕು ಸಾಗಾಣಿಕೆ ವಾಹನ, ಮಲ್ಟಿ ಆಕ್ಸೆಲ್ ಟ್ರಕ್ ಮತ್ತು ಭಾರೀ ವಾಹನಗಳಾದ ಬುಲೆಟ್ ಟ್ಯಾಂಕರ್ಸ್, ಶಿಪ್ ಕಾರ್ಗೋ ಕಂಟೇನರ್ಸ್, ಲಾಂಗ್ ಚೇಸಿಸ್ ಆರ್ಟಿಕ್ಯುಲೇಟೆಡ್ ವಾಹನಗಳು, ಮರಳು ಸಾಗಾಟ- ಮರದ ದಿಮ್ಮಿ ಸಾಗಾಟದ ಎಲ್ಲ ರೀತಿಯ ವಾಹನಗಳನ್ನು ಕೊಡಗು ಜಿಲ್ಲೆಯಾದ್ಯಂತ ಒಂದು ತಿಂಗಳ ಕಾಲ ನಿಷೇಧಿಸಲಾಗಿದೆ.

ಸದ್ಯಕ್ಕೆ ಜೂನ್ 6ರಿಂದ ಜುಲೈ 5ರ ವರೆಗೆ ಘನ ವಾಹನಗಳ ಸಂಚಾರವನ್ನು ಕೊಡಗು ಜಿಲ್ಲೆಯ ಯಾವುದೇ ರಸ್ತೆಯಲ್ಲಿ ಸಂಚರಿಸುವುದಕ್ಕೆ ನಿಷೇಧ ವಿಧಿಸಲಾಗಿದೆ. ಈ ಬಗ್ಗೆ ಕೊಡಗು ಜಿಲ್ಲಾಧಿಕಾರಿ ವೆಂಕಟ್ ರಾಜಾ ಆದೇಶ ಹೊರಡಿಸಿದ್ದು, ಅಡುಗೆ ಅನಿಲ ಮತ್ತು ಇಂಧನ ಪೂರೈಕೆ ವಾಹನಗಳು, ಹಾಲು ಪೂರೈಕೆ ವಾಹನಗಳು, ಸರ್ಕಾರಿ ಕೆಲಸದ ನಿಮಿತ್ತ ಉಪಯೋಗಿಸಲ್ಪಡುವ ವಾಹನಗಳು, ಶಾಲ ಕಾಲೇಜು ಮತ್ತು ಸಾರ್ವಜನಿಕ ಪ್ರಯಾಣಿಕರ ವಾಹನಗಳು (ಮಲ್ಟಿ ಆಕ್ಸೆಲ್ ಬಸ್ ಗಳು ಸೇರಿದಂತೆ) ಸಂಚಾರಕ್ಕೆ ವಿನಾಯ್ತಿ ನೀಡಲಾಗಿದೆ. ಕೊಡಗು ಜಿಲ್ಲೆಯ ಮೂಲಕ ಹಾದು ಹೋಗುವ ರಾಷ್ಟ್ರೀಯ ಹೆದ್ದಾರಿ 275ರ ಜಿಲ್ಲೆಯ ಗಡಿಭಾಗವಾದ ಕುಶಾಲನಗರ ಮತ್ತು ಸಂಪಾಜೆಯಲ್ಲಿ ದಿನದ 24 ಗಂಟೆಯೂ ಸಿಬಂದಿ ನಿಯೋಜಿಸಿ ಆದೇಶ ಪಾಲನೆಯಾಗುವಂತೆ ನೋಡಿಕೊಳ್ಳಲು ಪೊಲೀಸರಿಗೆ ಮತ್ತು ಪ್ರಾದೇಶಿಕ ಸಾರಿಗೆ ಆಯುಕ್ತರಿಗೂ ಸೂಚಿಸಿದ್ದಾರೆ.

Heavy Rains Prompt Ban on Goods Trucks and Tankers Across Kodagu, Exemption Given to Transport Buses.