ಎಸ್‌.ಟಿ. ಸೋಮಶೇಖರ್, ಶಿವರಾಮ ಹೆಬ್ಬಾರ್ ಸದ್ಯದಲ್ಲೇ ಕಾಂಗ್ರೆಸ್ ಸೇರುತ್ತಾರೆ ; ಬಿಜೆಪಿ ಉಚ್ಚಾಟನೆ ವದಂತಿ ಬೆನ್ನಲ್ಲೇ ಸಲೀಂ ಅಹ್ಮದ್ ಹೇಳಿಕೆ 

17-03-25 11:54 am       Bangalore Correspondent   ಕರ್ನಾಟಕ

ಬಿಜೆಪಿ ಶಾಸಕರಾದ ಎಸ್‌.ಟಿ. ಸೋಮಶೇಖರ್ ಮತ್ತು ಶಿವರಾಮ ಹೆಬ್ಬಾರ್ ಸದ್ಯದಲ್ಲೇ ನಮ್ಮ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಲಿದ್ದಾರೆ. ಈಗಾಗಲೇ ಪಕ್ಷದ ಕಾರ್ಯಕ್ರಮಗಳಲ್ಲಿ ಅವರು ಭಾಗವಹಿಸುತ್ತಿದ್ದಾರೆ ಎಂದು ವಿಧಾನ ಪರಿಷತ್‌ ಸದಸ್ಯ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹೇಳಿದ್ದಾರೆ. ಬಿಜೆಪಿ ಶಾಸಕರಷ್ಟೇ ಅಲ್ಲದೆ ಜೆಡಿಎಸ್‌ ಪಕ್ಷದ ಬಹಳಷ್ಟು ಮುಖಂಡರು ಕೂಡ ಕಾಂಗ್ರೆಸ್‌ ಸೇರ್ಪಡೆ ಆಗಲಿದ್ದಾರೆ ಎಂದವರು ಹೇಳಿದ್ದಾರೆ. ‌

ಬೆಂಗಳೂರು, ಮಾ.17 : ಬಿಜೆಪಿ ಶಾಸಕರಾದ ಎಸ್‌.ಟಿ. ಸೋಮಶೇಖರ್ ಮತ್ತು ಶಿವರಾಮ ಹೆಬ್ಬಾರ್ ಸದ್ಯದಲ್ಲೇ ನಮ್ಮ ಪಕ್ಷಕ್ಕೆ ಅಧಿಕೃತವಾಗಿ ಸೇರ್ಪಡೆಯಾಗಲಿದ್ದಾರೆ. ಈಗಾಗಲೇ ಪಕ್ಷದ ಕಾರ್ಯಕ್ರಮಗಳಲ್ಲಿ ಅವರು ಭಾಗವಹಿಸುತ್ತಿದ್ದಾರೆ ಎಂದು ವಿಧಾನ ಪರಿಷತ್‌ ಸದಸ್ಯ ಮತ್ತು ಕೆಪಿಸಿಸಿ ಕಾರ್ಯಾಧ್ಯಕ್ಷ ಸಲೀಂ ಅಹ್ಮದ್ ಹೇಳಿದ್ದಾರೆ. ಬಿಜೆಪಿ ಶಾಸಕರಷ್ಟೇ ಅಲ್ಲದೆ ಜೆಡಿಎಸ್‌ ಪಕ್ಷದ ಬಹಳಷ್ಟು ಮುಖಂಡರು ಕೂಡ ಕಾಂಗ್ರೆಸ್‌ ಸೇರ್ಪಡೆ ಆಗಲಿದ್ದಾರೆ ಎಂದವರು ಹೇಳಿದ್ದಾರೆ. ‌

ಗೋಲ್ಡ್‌ ಸ್ಮಗ್ಲಿಂಗ್‌ ಪ್ರಕರಣದಲ್ಲಿ ಯಾವುದೇ ಪಕ್ಷದವರು ಭಾಗಿಯಾಗಿರಲಿ, ನಮ್ಮ ಸರಕಾರ ಯಾರನ್ನೂ ರಕ್ಷಿಸುವುದಿಲ್ಲ. ನಮ್ಮ ಪಕ್ಷದ ಯಾವ ಸಚಿವರೂ ಅದಕ್ಕೆ ಬೆಂಬಲ ನೀಡಿಲ್ಲ. ಹಾಗೇನಾದರೂ ದಾಖಲೆಗಳಿದ್ದರೆ, ಬಿಜೆಪಿ ಬಿಡುಗಡೆ ಮಾಡಲಿ. ತಪ್ಪಿತಸ್ಥರು ಯಾರೇ ಆಗಿದ್ದರೂ ಶಿಕ್ಷೆಯಾಗಲೇಬೇಕು ಎಂದು ಆ ಕುರಿತ ಪ್ರಶ್ನೆಗೆ ಉತ್ತರಿಸಿದ್ದಾರೆ. 

ರಾಜ್ಯದ ಸಚಿವ ಸಂಪುಟ ವಿಸ್ತರಣೆ ಮೇ ತಿಂಗಳಲ್ಲಿ ಆಗುವ ಸಾಧ್ಯತೆಯಿದೆ. ಹಿಂದಿನ ಸಚಿವ ಸಂಪುಟದಲ್ಲಿಯೇ ನನಗೆ ಸಚಿವ ಸ್ಥಾನ ಸಿಗಬೇಕಿತ್ತು. ಈ ಬಾರಿ ಸ್ಥಾನ ಸಿಗುವ ಪೂರ್ಣ ವಿಶ್ವಾಸವಿದೆ ಎಂದು ಸಲೀಂ ಅಹ್ಮದ್ ತಿಳಿಸಿದ್ದಾರೆ. 

ಇತ್ತೀಚೆಗೆ ಪಕ್ಷ ವಿರೋಧಿ ಚಟುವಟಿಕೆ ನಡೆಸುತ್ತಿರುವ ಶಾಸಕರಾದ ಎಸ್‌ಟಿ ಸೋಮಶೇಖರ್‌ ಹಾಗೂ ಶಿವರಾಮ ಹೆಬ್ಬಾರ್‌ ಅವರನ್ನು ಈ ತಿಂಗಳಾಂತ್ಯಕ್ಕೆ ಬಿಜೆಪಿ ಪಕ್ಷದಿಂದ ಉಚ್ಚಾಟನೆ ಮಾಡಲಾಗುವುದು. ಈ ಬಗ್ಗೆ ಕೇಂದ್ರ ಶಿಸ್ತು ಸಮಿತಿಗೆ ವರದಿ ನೀಡಿದ್ದೇವೆ ಎಂದು ರಾಜ್ಯ ಬಿಜೆಪಿ ಶಿಸ್ತು ಸಮಿತಿ ಅಧ್ಯಕ್ಷ ಲಿಂಗರಾಜ ಪಾಟೀಲ್ ಹೇಳಿಕೆ ನೀಡಿದ್ದರು. ಇದರ ಬೆನ್ನಲ್ಲೇ ಸಲೀಂ ಅಹ್ಮದ್, ಅವರಿಬ್ಬರು ಕಾಂಗ್ರೆಸ್ ಪಕ್ಷ ಸೇರಲಿದ್ದಾರೆ ಎಂದು ಸುಳಿವು ನೀಡಿದ್ದಾರೆ. ಆದರೆ ಉಚ್ಚಾಟನೆ ಆದರೂ ಶಾಸಕನಾಗಿ ಪಕ್ಷಾಂತರ ಮಾಡುವುದು ಕಾನೂನು ಉಲ್ಲಂಘನೆಯಾಗಿದ್ದು ಅವರು ಶಾಸಕ ಸ್ಥಾನ ತ್ಯಜಿಸಿಯೇ ಕಾಂಗ್ರೆಸ್ ಸೇರಬೇಕಾಗುತ್ತದೆ. ಮತ್ತೆ ಅವರು ಚುನಾವಣೆ ನಿಂತು ಆಯ್ಕೆ ಆಗುವ ಸವಾಲಿದೆ.

S.T. Somashekar and Shivaram Hebbar are set to join Congress says Saleem Ahmad following rumors of BJP expulsion.