ಪತ್ನಿಯ ಮೃತದೇಹ ಕೆರೆಯಲ್ಲಿ ಪತ್ತೆ ಬೆನ್ನಲ್ಲೇ ಪತಿ ನೇಣಿಗೆ ಶರಣು ; ಬೆಳ್ತಂಗಡಿಯಲ್ಲಿ ದಂಪತಿ ದುರಂತ ಅಂತ್ಯ

23-09-26 05:12 pm       HK News Staffer   ಕ್ರೈಂ

ಪತ್ನಿಯ ಮೃತದೇಹ ಅಸಹಜ ಸ್ಥಿತಿಯಲ್ಲಿ ಕೆರೆಯಲ್ಲಿ ಪತ್ತೆಯಾದ ಬೆನ್ನಲ್ಲೇ ಪತಿಯೂ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳ್ತಂಗಡಿ ತಾಲೂಕಿನ ಶಿಶಿಲ ಗ್ರಾಮದಲ್ಲಿ ನಡೆದಿದೆ.

ಬೆಳ್ತಂಗಡಿ, ಸೆ.23: ಪತ್ನಿಯ ಮೃತದೇಹ ಅಸಹಜ ಸ್ಥಿತಿಯಲ್ಲಿ ಕೆರೆಯಲ್ಲಿ ಪತ್ತೆಯಾದ ಬೆನ್ನಲ್ಲೇ ಪತಿಯೂ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳ್ತಂಗಡಿ ತಾಲೂಕಿನ ಶಿಶಿಲ ಗ್ರಾಮದಲ್ಲಿ ನಡೆದಿದೆ.

ಶಿಶಿಲ ಗ್ರಾಮದ ಗುಂಡಿಕ್ಕಾಡು ನಿವಾಸಿ ತನಿಯಪ್ಪ ಗೌಡ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡವರು. ಕಳೆದ ಎರಡು -ಮೂರು ದಿನಗಳಿಂದ ತನಿಯಪ್ಪ ಗೌಡ ಎಲ್ಲಿಯೂ ಕಾಣಿಸಿಕೊಳ್ಳದ ಹಿನ್ನೆಲೆಯಲ್ಲಿ ಶೌರ್ಯ ವಿಪತ್ತು ನಿರ್ವಹಣಾ ತಂಡದ ಸದಸ್ಯರು ಹುಡುಕಾಟ ನಡೆಸಿದ್ದರು. ಈ ವೇಳೆ ಮನೆಯಲ್ಲಿ ಅವರು ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದಾರೆ.

ಇತ್ತೀಚೆಗಷ್ಟೇ ತನಿಯಪ್ಪ ಗೌಡ ಅವರ ಪತ್ನಿ ಚಿನ್ನಮ್ಮ ಅವರ ಮೃತದೇಹ ಪಕ್ಕದ ಜಮೀನಿನ ಕೆರೆಯಲ್ಲಿ ಪತ್ತೆಯಾಗಿತ್ತು. ಅವರ ಸಾವಿಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಚಿನ್ನಮ್ಮ ಅವರ ಸಾವಿನ ಬಗ್ಗೆ ಅನುಮಾನವಿದೆ ಎಂದು ಅವರ ಸಹೋದರ ಗಂಗಾಧರ ಗೌಡ ನೀಡಿದ ದೂರಿನ ಆಧಾರದಲ್ಲಿ ಧರ್ಮಸ್ಥಳ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.

ಇದೀಗ ತನಿಯಪ್ಪ ಗೌಡ ಮೃತದೇಹ ಮನೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾದ ಹಿನ್ನೆಲೆಯಲ್ಲಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪ್ರಕರಣ ದಾಖಲಿಸಿಕೊಂಡ ಪೊಲೀಸರು ದಂಪತಿ ಸಾವಿಗೆ ಸಂಬಂಧಿಸಿ ತನಿಖೆ ಮುಂದುವರಿಸಿದ್ದಾರೆ.

A couple died in separate incidents in Shishila village of Belthangady taluk after the woman's body was found under suspicious circumstances in a pond and her husband was later found hanging at their residence.