30 ಲಕ್ಷ ಸಾಲ, ಲಿವ್-ಇನ್ ಸಂಬಂಧಕ್ಕೆ ಪೋಷಕರ ವಿರೋಧ ; ಕೆಆರ್ ಪುರಂ ತ್ರಿವಳಿ ಕೊಲೆ ಪ್ರಕರಣದಲ್ಲಿ ಬೆಚ್ಚಿಬೀಳಿಸುವ ಸಂಗತಿಗಳು ಬಹಿರಂಗ, 30ಕ್ಕೂ ಹೆಚ್ಚು ಬಾರಿ ಹೆತ್ತವರನ್ನ ಇರಿದು ಕೊಂದ ದುಷ್ಟ ಮಗಳು

24-06-26 08:53 pm       HK News Staffer   ಕ್ರೈಂ

ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಕೆಆರ್ ಪುರಂ ತ್ರಿವಳಿ ಕೊಲೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ತಂದೆ-ತಾಯಿ ಹಾಗೂ ತಂಗಿಯನ್ನು ಹತ್ಯೆಗೈದು ಪ್ರಿಯಕರನೊಂದಿಗೆ ಪರಾರಿಯಾಗಿದ್ದ ಪ್ರಮುಖ ಆರೋಪಿ ಶ್ವೇತಾಳನ್ನು ಪೊಲೀಸರು ಪುದುಚೇರಿಯಲ್ಲಿ ಬಂಧಿಸಿದ್ದಾರೆ.

ಬೆಂಗಳೂರು , ಜೂನ್ 24:  ರಾಜ್ಯವನ್ನೇ ಬೆಚ್ಚಿಬೀಳಿಸಿದ್ದ ಕೆಆರ್ ಪುರಂ ತ್ರಿವಳಿ ಕೊಲೆ ಪ್ರಕರಣದಲ್ಲಿ ಮಹತ್ವದ ಬೆಳವಣಿಗೆ ನಡೆದಿದ್ದು, ತಂದೆ-ತಾಯಿ ಹಾಗೂ ತಂಗಿಯನ್ನು ಹತ್ಯೆಗೈದು ಪ್ರಿಯಕರನೊಂದಿಗೆ ಪರಾರಿಯಾಗಿದ್ದ ಪ್ರಮುಖ ಆರೋಪಿ ಶ್ವೇತಾಳನ್ನು ಪೊಲೀಸರು ಪುದುಚೇರಿಯಲ್ಲಿ ಬಂಧಿಸಿದ್ದಾರೆ. ಪ್ರಕರಣದ ಮತ್ತೋರ್ವ ಆರೋಪಿ ಹಾಗೂ ಶ್ವೇತಾಳ ಪ್ರಿಯಕರ ಕೆನತ್‌ಗಾಗಿ ವಿಶೇಷ ತಂಡಗಳು ತೀವ್ರ ಶೋಧ ಕಾರ್ಯ ಮುಂದುವರಿಸಿವೆ.

ಕೊಲೆ ನಡೆದ ಬಳಿಕ ಕಳೆದ ಎರಡು ದಿನಗಳಿಂದ ಶ್ವೇತಾ ಮತ್ತು ಕೆನತ್ ನಿರಂತರವಾಗಿ ಸ್ಥಳ ಬದಲಾಯಿಸುತ್ತಾ ಪೊಲೀಸರಿಂದ ತಪ್ಪಿಸಿಕೊಳ್ಳಲು ಯತ್ನಿಸುತ್ತಿದ್ದರು. ಇವರ ಪತ್ತೆಗಾಗಿ ವೈಟ್‌ಫೀಲ್ಡ್ ವಿಭಾಗದ ಆರು ವಿಶೇಷ ಪೊಲೀಸ್ ತಂಡಗಳನ್ನು ರಚಿಸಲಾಗಿತ್ತು. ಕೊನೆಗೂ ಪುದುಚೇರಿಯಲ್ಲಿ ಶ್ವೇತಾ ಪೊಲೀಸರ ಬಲೆಗೆ ಬಿದ್ದಿದ್ದಾಳೆ.

ಇದೇ ವೇಳೆ, ಕೊಲೆ ನಡೆದ ಮನೆಯ ಪರಿಶೀಲನೆ ವೇಳೆ ಪೊಲೀಸರಿಗೆ ಶ್ವೇತಾಳ ವೈಯಕ್ತಿಕ ಡೈರಿ ಪತ್ತೆಯಾಗಿದ್ದು, ಅದರಲ್ಲಿ ಆಕೆಯ ಮಾನಸಿಕ ಸ್ಥಿತಿಯನ್ನು ಬಿಂಬಿಸುವ ಹಲವು ಬರಹಗಳು ಕಂಡುಬಂದಿವೆ. "ಐ ಆ್ಯಮ್ ಸ್ಯಾಡ್", "ಐ ಆ್ಯಮ್ ಲೋನ್ಲಿ", "ಫೀಲಿಂಗ್ ಲವ್ಡ್", "ಐ ಆ್ಯಮ್ ಡಿಪ್ರೆಸ್ಡ್", "ಐ ಆ್ಯಮ್ ಸೂಪಿರಿಯರ್" ಸೇರಿದಂತೆ ಹಲವು ವಾಕ್ಯಗಳು ಡೈರಿಯಲ್ಲಿ ದಾಖಲಾಗಿದ್ದು, ಪ್ರಕರಣದ ತನಿಖೆಗೆ ಹೊಸ ಆಯಾಮ ಸಿಕ್ಕಿದೆ. ಡೈರಿಯ ಜೊತೆಗೆ ಮನೆಯಿಂದ ಹಲವು ಮಹತ್ವದ ದಾಖಲೆಗಳು ಹಾಗೂ ಸಾಕ್ಷ್ಯಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ಪ್ರಾಥಮಿಕ ತನಿಖೆಯಲ್ಲಿ ಹೊರಬಂದಿರುವ ಮಾಹಿತಿಯ ಪ್ರಕಾರ, ಶ್ವೇತಾ ಮತ್ತು ಕೆನತ್ ಇಬ್ಬರೂ ನ್ಯೂ ಹಾರಿಜನ್ ಕಾಲೇಜಿನಲ್ಲಿ ಬಿ.ಟೆಕ್ ವ್ಯಾಸಂಗ ಮಾಡುತ್ತಿದ್ದ ಸಂದರ್ಭದಲ್ಲೇ ಪರಸ್ಪರ ಪ್ರೀತಿಸುತ್ತಿದ್ದರು. ಪದವಿ ಪೂರ್ಣಗೊಂಡ ಬಳಿಕ ಇಬ್ಬರೂ ಉದ್ಯೋಗಕ್ಕೆ ಸೇರಿದ್ದರೂ ನಂತರ ಕೆಲಸ ತೊರೆದು ಲಿವ್-ಇನ್ ಸಂಬಂಧದಲ್ಲಿ ಬದುಕುತ್ತಿದ್ದರು.

ಇವರಿಬ್ಬರೂ ಸ್ವಂತ ಉದ್ಯಮ ಆರಂಭಿಸುವ ಉದ್ದೇಶದಿಂದ ಶ್ವೇತಾಳ ಪೋಷಕರ ಹೆಸರಿನಲ್ಲಿ ಎಚ್‌ಡಿಎಫ್‌ಸಿ ಬ್ಯಾಂಕ್‌ನಿಂದ ಸುಮಾರು 30 ಲಕ್ಷ ರೂಪಾಯಿ ಸಾಲ ಪಡೆದಿದ್ದರು ಎನ್ನಲಾಗಿದೆ. ಆದರೆ ಸಾಲದ ಕಂತು ಅಥವಾ ಬಡ್ಡಿಯನ್ನು ಪಾವತಿಸದ ಕಾರಣ ಬ್ಯಾಂಕ್‌ನಿಂದ ನೋಟಿಸ್ ಜಾರಿಯಾಗಿತ್ತು. ಈ ನೋಟಿಸ್ ಮನೆಗೆ ತಲುಪಿದ ಬಳಿಕವೇ ಪುತ್ರಿ ಮತ್ತು ಆಕೆಯ ಪ್ರಿಯಕರ ಸಾಲ ಪಡೆದಿರುವ ವಿಷಯ ಪೋಷಕರ ಗಮನಕ್ಕೆ ಬಂದಿತ್ತು.

ಈ ಬೆಳವಣಿಗೆಯಿಂದ ಆಕ್ರೋಶಗೊಂಡ ಪೋಷಕರು ಶ್ವೇತಾ ವಾಸಿಸುತ್ತಿದ್ದ ಮನೆಗೆ ತೆರಳಿ ಪ್ರಶ್ನಿಸಿದ್ದರು. ಮತ್ತೊಂದೆಡೆ, ಕೆನತ್‌ನ ಪೋಷಕರಿಗೂ ಇವರ ಲಿವ್-ಇನ್ ಸಂಬಂಧದ ಬಗ್ಗೆ ಮಾಹಿತಿ ಇರಲಿಲ್ಲ. ಕೆನತ್ ತಂದೆ ಎಚ್‌ಎಎಲ್ ಉದ್ಯೋಗಿಯಾಗಿದ್ದು, ಮಗನ ನಡೆಗೆ ಕುಟುಂಬದ ಬೆಂಬಲ ದೊರೆಯದಿರುವುದು ಕೂಡ ಆತನ ಅಸಮಾಧಾನಕ್ಕೆ ಕಾರಣವಾಗಿತ್ತು ಎಂದು ತನಿಖೆಯಿಂದ ತಿಳಿದುಬಂದಿದೆ.

ಈ ಎಲ್ಲಾ ವಿಚಾರಗಳ ಹಿನ್ನೆಲೆಯಲ್ಲಿ ಮಂಗಳವಾರ ತೀವ್ರ ವಾಗ್ವಾದ ನಡೆದಿದ್ದು, ಅದು ವಿಕೋಪಕ್ಕೆ ತಿರುಗಿದಾಗ ಶ್ವೇತಾ ಮತ್ತು ಕೆನತ್ ಸೇರಿ ಶ್ವೇತಾಳ ತಂದೆ, ತಾಯಿ ಹಾಗೂ ತಂಗಿಯ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದಾರೆ ಎಂದು ಪೊಲೀಸರು ಶಂಕಿಸಿದ್ದಾರೆ. ಮೂವರು ಮೃತರ ದೇಹಗಳ ಮೇಲೆ ಸುಮಾರು 30ಕ್ಕೂ ಹೆಚ್ಚು ಚಾಕು ಇರಿತದ ಗಾಯಗಳು ಪತ್ತೆಯಾಗಿದ್ದು, ಹತ್ಯೆಯ ಕ್ರೌರ್ಯವನ್ನು ಬಿಂಬಿಸುತ್ತಿವೆ.

ಸದ್ಯ ಬಂಧಿತ ಶ್ವೇತಾಳನ್ನು ಪೊಲೀಸರು ತೀವ್ರ ವಿಚಾರಣೆಗೆ ಒಳಪಡಿಸಿದ್ದು, ಪರಾರಿಯಾಗಿರುವ ಕೆನತ್ ಬಂಧನಕ್ಕಾಗಿ ಕಾರ್ಯಾಚರಣೆ ಮತ್ತಷ್ಟು ಚುರುಕುಗೊಂಡಿದೆ. ಪ್ರಕರಣದ ಹಿಂದೆ ಇನ್ನೂ ಯಾವುದೇ ಆರ್ಥಿಕ ಅಥವಾ ವೈಯಕ್ತಿಕ ಕಾರಣಗಳಿವೆಯೇ ಎಂಬ ಬಗ್ಗೆ ತನಿಖೆ ಮುಂದುವರಿದಿದೆ.