Minister Zameer Ahmed Khan, House robbery: ಸಚಿವ ಜಮೀರ್ ಅಹ್ಮದ್‌ ಖಾನ್ ಮನೆಯಲ್ಲಿ ಕೋಟ್ಯಾಂತರ ರೂ. ಚಿನ್ನ ಕಳ್ಳತನ ; ಟ್ರಾವೆಲ್ಸ್ ಉದ್ಯಮದಲ್ಲಿ ಲಾಸ್ ಆಗಿದ್ದಕ್ಕೆ ಸಚಿವರ ಮನೆಗೆ ಕನ್ನ, ಸ್ವಂತ ಸಂಬಂಧಿಯಿಂದಲೇ ಗುನ್ನ !

05-05-26 05:22 pm       HK News Staffer   ಕ್ರೈಂ

ಸಚಿವ ಜಮೀರ್ ಅಹ್ಮದ್‌ ಖಾನ್ ಮನೆಯಲ್ಲೇ ಕೋಟ್ಯಾಂತರ ರೂ ಬೆಲೆ ಬಾಳುವ ಚಿನ್ನಾಭರಣದ ಕಳ್ಳತನ ನಡೆದಿದೆ. ಅಚ್ಚರಿಯ ವಿಚಾರವೆಂದರೆ, ಹೊರಗಿನವರಾರೂ ಈ ಕೃತ್ಯ ಎಸಗಿಲ್ಲ, ಬದಲಾಗಿ ಸಚಿವರ ತಾಯಿಯ ಸ್ವಂತ ರಕ್ತಸಂಬಂಧಿಯೇ ಈ ಕಳ್ಳತನದ ಮಾಸ್ಟರ್ ಮೈಂಡ್ ಆಗಿದ್ದಾನೆ. 

ಬೆಂಗಳೂರು, ಮೇ 05: ಸಚಿವ ಜಮೀರ್ ಅಹ್ಮದ್‌ ಖಾನ್ ಮನೆಯಲ್ಲೇ ಕೋಟ್ಯಾಂತರ ರೂ ಬೆಲೆ ಬಾಳುವ ಚಿನ್ನಾಭರಣದ ಕಳ್ಳತನ ನಡೆದಿದೆ. ಅಚ್ಚರಿಯ ವಿಚಾರವೆಂದರೆ, ಹೊರಗಿನವರಾರೂ ಈ ಕೃತ್ಯ ಎಸಗಿಲ್ಲ, ಬದಲಾಗಿ ಸಚಿವರ ತಾಯಿಯ ಸ್ವಂತ ರಕ್ತಸಂಬಂಧಿಯೇ ಈ ಕಳ್ಳತನದ ಮಾಸ್ಟರ್ ಮೈಂಡ್ ಆಗಿದ್ದಾನೆ. 

ಪ್ರಕರಣವನ್ನು ಭೇದಿಸಿರುವ ಶಿವಾಜಿನಗರ ಠಾಣೆ ಪೊಲೀಸರು, ಇಬ್ಬರು ಖದೀಮರನ್ನ ಬಂಧಿಸಿದ್ದಾರೆ. ಸೈಯದ್ ಅಮೀರ್ ಹಾಗೂ ಅಮಿರ್ ಅಹ್ಮದ್ ಬಂಧಿತ ಆರೋಪಿಗಳು. ಇವರಲ್ಲಿ ಸೈಯದ್ ಅಮೀರ್, ಸಚಿವ ಜಮೀರ್ ತಾಯಿಗೆ ಅತ್ಯಂತ ಹತ್ತಿರದ ಸಂಬಂಧಿ. ಮತ್ತೊಬ್ಬ ಆರೋಪಿ ಅಮಿರ್ ಅಹ್ಮದ್, ಸೈಯದ್ ಜೊತೆ ಟ್ರಾವೆಲ್ಸ್ ಉದ್ಯಮದಲ್ಲಿ ಪಾಲುದಾರನಾಗಿದ್ದ. ಇಬ್ಬರೂ ಸೇರಿ ಈ ಖತರ್ನಾಕ್ ಪ್ಲಾನ್ ಮಾಡಿದ್ದಾರೆ. ಸದ್ಯ ಬಂಧಿತರಿಂದ ಪೊಲೀಸರು ಬರೋಬ್ಬರಿ 1 ಕೋಟಿ 13 ಲಕ್ಷ ರೂಪಾಯಿ ಮೌಲ್ಯದ 759 ಗ್ರಾಂ ಚಿನ್ನಾಭರಣಗಳನ್ನು ರಿಕವರಿ ಮಾಡಿದ್ದಾರೆ.

ಆರೋಪಿಗಳಿಬ್ಬರೂ ಸೇರಿ ಟ್ರಾವೆಲ್ಸ್ ಬ್ಯುಸಿನೆಸ್ ನಡೆಸುತ್ತಿದ್ದರು. ಆದರೆ, ಕೋವಿಡ್-19 ಲಾಕ್‌ಡೌನ್‌ನಿಂದಾಗಿ ಇವರ ಉದ್ಯಮ ಪಾತಾಳಕ್ಕೆ ಕುಸಿದಿತ್ತು. ಆದ ನಷ್ಟವನ್ನು ಸರಿದೂಗಿಸಲು ಮತ್ತು ಸಾಲಗಾರರಿಂದ ಪಾರಾಗಲು ಹಣದ ತೀವ್ರ ಅವಶ್ಯಕತೆ ಇತ್ತು. ಎಲ್ಲಿಯೂ ಸಾಲ ಸಿಗದಿದ್ದಾಗ, ಸೈಯದ್ ತನ್ನ ಸಂಬಂಧಿಯಾದ ಸಚಿವ ಜಮೀರ್ ಮನೆಯನ್ನೇ ಟಾರ್ಗೆಟ್ ಮಾಡಿದ್ದ. ಅಲ್ಲಿಂದ ಚಿನ್ನ ಕದ್ದು, ಅದನ್ನು ಅಡವಿಟ್ಟು ಬಂದ ಹಣವನ್ನು ರಿಯಲ್ ಎಸ್ಟೇಟ್ ವ್ಯವಹಾರದಲ್ಲಿ ಹೂಡಿಕೆ ಮಾಡಿ ಕೋಟ್ಯಧಿಪತಿಯಾಗುವ ದುರಾಸೆ ಈತನದ್ದಾಗಿತ್ತು

ಸಚಿವರ ತಾಯಿಯ ರಕ್ತಸಂಬಂಧಿ ಆಗಿದ್ದರಿಂದ ಸೈಯದ್ ಅಮೀರ್‌ಗೆ ಜಮೀರ್ ಮನೆಗೆ ಮುಕ್ತ ಪ್ರವೇಶವಿತ್ತು. ಪ್ರತಿದಿನ ಮನೆಗೆ ಬರುತ್ತಿದ್ದ ಈತ, ಎಲ್ಲರೊಂದಿಗೂ ಅಚ್ಚುಮೆಚ್ಚಿನವನಂತೆ ನಟಿಸುತ್ತಿದ್ದ. ಇದೇ ನಂಬಿಕೆಯನ್ನು ಬಂಡವಾಳವಾಗಿಟ್ಟುಕೊಂಡ ಈತ, 2023ನೇ ಇಸವಿಯಿಂದಲೇ ಯಾರಿಗೂ ಅನುಮಾನ ಬಾರದಂತೆ ಸ್ವಲ್ಪ ಸ್ವಲ್ಪವೇ ಚಿನ್ನಾಭರಣಗಳನ್ನು ಕದಿಯಲಾರಂಭಿಸಿದ್ದ. ಈ ರೀತಿ ಬರೋಬ್ಬರಿ 1 ಕೆಜಿ 200 ಗ್ರಾಂ ಚಿನ್ನವನ್ನು ಲಪಟಾಯಿಸಿದ್ದರು.

ಮನೆಯಲ್ಲಿ ಚಿನ್ನಾಭರಣಗಳು ಕಾಣೆಯಾಗುತ್ತಿರುವ ವಿಚಾರ ಕುಟುಂಬಸ್ಥರ ಗಮನಕ್ಕೆ ಬರುತ್ತಿದ್ದಂತೆ, ಸೈಯದ್ ಅಮೀರ್ ಅಲರ್ಟ್ ಆಗಿದ್ದ. ಪ್ರತಿದಿನ ಮನೆಗೆ ಬರುತ್ತಿದ್ದವನು ದಿಢೀರ್ ಎಂದು ಬರುವುದನ್ನು ನಿಲ್ಲಿಸಿದ್ದ. ಕುಟುಂಬದವರು ಕರೆ ಮಾಡಿದರೂ ಸ್ವೀಕರಿಸುತ್ತಿರಲಿಲ್ಲ. ಕೊನೆಗೆ ತನ್ನ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದ. ಈತನ ವರ್ತನೆಯಿಂದ ಅನುಮಾನಗೊಂಡ ಕುಟುಂಬಸ್ಥರು ಪೊಲೀಸರಿಗೆ ದೂರು ನೀಡಿದ್ದರು. ಶಿವಾಜಿನಗರ ಪೊಲೀಸರು ತಾಂತ್ರಿಕ ಜಾಲದ ಮೂಲಕ ಆರೋಪಿಗಳಿಬ್ಬರನ್ನೂ ಹೆಡೆಮುರಿ ಕಟ್ಟಿ ವಿಚಾರಣೆ ನಡೆಸಿದಾಗ ಅಸಲಿ ಬಣ್ಣ ಬಯಲಾಗಿದೆ.

In a shocking case of betrayal, gold jewellery worth crores of rupees has been stolen from the residence of Karnataka Minister Zameer Ahmed Khan. The accused is not an outsider, but a close blood relative of the minister’s mother, police revealed.