ಬೈಕಿನಲ್ಲಿ 19 ಕೇಜಿ ಗೋಮಾಂಸ ಸಾಗಣೆ ; ಬಜ್ಪೆ ಮಳಲಿಯಲ್ಲಿ ಇಬ್ಬರು ಯುವಕರಿಂದ ನೈತಿಕ ಪೊಲೀಸ್ ಗಿರಿ, ಮಗಳು- ಬೈಕನ್ನು ಬಿಟ್ಟು ಓಡಿದ ತಂದೆ, ಪ್ರತ್ಯೇಕ ಪ್ರಕರಣ ದಾಖಲಿಸಿದ ಪೊಲೀಸರು 

27-12-25 07:42 pm       Mangalore Correspondent   ಕ್ರೈಂ

ಬಜ್ಪೆ ಠಾಣೆ ವ್ಯಾಪ್ತಿಯ ಮಳಲಿ ನಾರ್ಲಪದವು ಎಂಬಲ್ಲಿ 19 ಕೇಜಿ ಗೋಮಾಂಸವನ್ನು ಬೈಕಿನಲ್ಲಿ ಒಯ್ಯುತ್ತಿದ್ದಾಗ ಇಬ್ಬರು ಯುವಕರು ಓಮ್ನಿ ಕಾರಿನಲ್ಲಿ ಅಡ್ಡಗಟ್ಟಿ ಹಲ್ಲೆಗೆ ಯತ್ನಿಸಿದ ಘಟನೆ ನಡೆದಿದ್ದು ಪ್ರಕರಣ ಸಂಬಂಧಿಸಿ ನೈತಿಕ ಪೊಲೀಸ್ ಗಿರಿ ನಡೆಸಿದ ಬಗ್ಗೆ ಮತ್ತು ಅಕ್ರಮವಾಗಿ ಗೋಮಾಂಸ ಒಯ್ಯುತ್ತಿದ್ದ ಬಗ್ಗೆ ಪೊಲೀಸರು ಪ್ರತ್ಯೇಕ ಪ್ರಕರಣ ದಾಖಲಿಸಿದ್ದಾರೆ. 

ಮಂಗಳೂರು, ಡಿ.27 : ಬಜ್ಪೆ ಠಾಣೆ ವ್ಯಾಪ್ತಿಯ ಮಳಲಿ ನಾರ್ಲಪದವು ಎಂಬಲ್ಲಿ 19 ಕೇಜಿ ಗೋಮಾಂಸವನ್ನು ಬೈಕಿನಲ್ಲಿ ಒಯ್ಯುತ್ತಿದ್ದಾಗ ಇಬ್ಬರು ಯುವಕರು ಓಮ್ನಿ ಕಾರಿನಲ್ಲಿ ಅಡ್ಡಗಟ್ಟಿ ಹಲ್ಲೆಗೆ ಯತ್ನಿಸಿದ ಘಟನೆ ನಡೆದಿದ್ದು ಪ್ರಕರಣ ಸಂಬಂಧಿಸಿ ನೈತಿಕ ಪೊಲೀಸ್ ಗಿರಿ ನಡೆಸಿದ ಬಗ್ಗೆ ಮತ್ತು ಅಕ್ರಮವಾಗಿ ಗೋಮಾಂಸ ಒಯ್ಯುತ್ತಿದ್ದ ಬಗ್ಗೆ ಪೊಲೀಸರು ಪ್ರತ್ಯೇಕ ಪ್ರಕರಣ ದಾಖಲಿಸಿದ್ದಾರೆ. 

ಮುಲ್ಲರಪಟ್ಣ ನಿವಾಸಿ ಅಬ್ದುಲ್ ಸತ್ತಾರ್ ಎಂಬವರು ತನ್ನ 11 ವರ್ಷದ ಪುತ್ರಿಯೊಂದಿಗೆ 19 ಕೇಜಿ ಗೋಮಾಂಸವನ್ನು ಬೈಕಿನಲ್ಲಿ ಒಯ್ಯುತ್ತಿದ್ದರು. ಈ ವೇಳೆ, ಸುಮಿತ್ ಭಂಡಾರಿ (21) ಮತ್ತು ರಜತ್ ನಾಯ್ಕ್ (30) ಎಂಬವರು ಟಾಟಾ ಸುಮೋದಲ್ಲಿ ಬಂದಿದ್ದು ಬೈಕನ್ನು ಅಡ್ಡಗಟ್ಟಿದ್ದಾರೆ. ಈ ವೇಳೆ, ಅಬ್ದುಲ್ ಸತ್ತಾರ್ ಭಯಗೊಂಡು ಬೈಕನ್ನು ಬಿಟ್ಟು ಓಡಿ ಪರಾರಿಯಾಗಿದ್ದಾರೆ. ಬೈಕ್ ಕೆಳಕ್ಕೆ ಬಿದ್ದಿದ್ದು ಹಿಂಬದಿ ಕುಳಿತಿದ್ದ ಅವರ ಮಗಳ ಕಾಲಿಗೆ ಬೈಕಿನ ಸೈಲೆನ್ಸರ್ ತಾಗಿ ಸುಟ್ಟ ಗಾಯವಾಗಿದೆ. ಸ್ಥಳೀಯರು ಆಕೆಯನ್ನು ಬಳಿಕ ಆಸ್ಪತ್ರೆಗೆ ಸೇರಿಸಿದ್ದಾರೆ. 

ನೈತಿಕ ಪೊಲೀಸ್ ಗಿರಿ ನಡೆಸಿದ್ದಾರೆ ಎನ್ನಲಾದ ಸುಮಿತ್ ಮತ್ತು ರಜತ್ ಅವರನ್ನು ಠಾಣೆಗೆ ಕರೆಸಿ ಪೊಲೀಸರು ವಿಚಾರಣೆ ನಡೆಸಿದ್ದಾರೆ. ರಜತ್ ನಾಯ್ಕ್ ಮೆಡಿಕಲ್ ರೆಫ್ ಆಗಿದ್ದು ತಾನು ಮಹರ್ಷಿ ಕ್ಲಿನಿಕ್ ಗೆ ಔಷಧಿ ಒಯ್ಯುತ್ತಿದ್ದುದಾಗಿ ಮತ್ತು ಟಾಟಾ ಸುಮೋದಲ್ಲಿ ಇರಲಿಲ್ಲ ಎಂದು ಹೇಳಿಕೆ ನೀಡಿದ್ದಾನೆ. ಆದರೆ ವೈದ್ಯರ ಬಳಿ ಪೊಲೀಸರು ಕೇಳಿದಾಗ, ಔಷಧಿ ಕೊಡಲು ರಜತ್ ಬಂದಿಲ್ಲವೆಂದು ತಿಳಿಸಿದ್ದಾರೆ. ಇನ್ನೊಬ್ಬ ತಾನು ದೇವಸ್ಥಾನಕ್ಕೆ ಹೋಗುತ್ತಿದ್ದೆ ಎಂದಿದ್ದಾನೆ. ಇಬ್ಬರ ಹೇಳಿಕೆಯಲ್ಲು ಅನುಮಾನ ವ್ಯಕ್ತವಾಗಿದ್ದರಿಂದ ಇಬ್ಬರನ್ನೂ ವಶಕ್ಕೆ ಪಡೆದು ಠಾಣೆಯಲ್ಲಿ ಇರಿಸಲಾಗಿದೆ. 

ಆಸ್ಪತ್ರೆಯಲ್ಲಿ ಅಬ್ದುಲ್ ಸತ್ತಾರ್ ಪುತ್ರಿಯಿಂದ ಪೊಲೀಸರು ಹೇಳಿಕೆ ಪಡೆದಿದ್ದು ಇಬ್ಬರು ಯುವಕರು ಬೈಕ್ ತಡೆದು ತನ್ನ ತಂದೆಯ ಮೇಲೆ ಹಲ್ಲೆ ನಡೆಸಿದ್ದಾರೆಂದು ತಿಳಿಸಿದ್ದಾಳೆ. ಬಜ್ಪೆ ಠಾಣೆ ಪೊಲೀಸರು ಅಕ್ರಮವಾಗಿ ಗೋಮಾಂಸ ಸಾಗಿಸಿದ ಬಗ್ಗೆ ಮತ್ತು ನೈತಿಕ ಪೊಲೀಸ್ ಗಿರಿ ನಡೆಸಿದ ಬಗ್ಗೆ ರಜತ್ ಮತ್ತು ಸುಮಿತ್ ವಿರುದ್ಧ ಪ್ರತ್ಯೇಕ ಪ್ರಕರಣ ದಾಖಲಿಸಿದ್ದಾರೆ. 

ಈ ಬಗ್ಗೆ ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ಮಾಹಿತಿ ನೀಡಿದ್ದು ಅಬ್ದುಲ್ ಸತ್ತಾರ್ ಆ ಭಾಗದಲ್ಲಿ ಗೋಮಾಂಸ ಬೇಕಾದವರಿಗೆ ತಲುಪಿಸುವ ಕೆಲಸ ಮಾಡುತ್ತಿದ್ದ ಎಂಬ ಮಾಹಿತಿ ಇದೆ. 35 ಪ್ಯಾಕೆಟ್ ಗಳಲ್ಲಿ 19 ಕೇಜಿ ಗೋಮಾಂಸ ಒಯ್ಯುತ್ತಿರುವುದು ಪತ್ತೆಯಾಗಿದೆ. ಗೋಮಾಂಸ ವಿತರಣೆ ಮಾಡುತ್ತಿದ್ದರೆ ಅದನ್ನು ತಡೆಯುವುದು ಪೊಲೀಸರ ಕೆಲಸ. ಇನ್ಯಾರೋ ಬಂದು ತಡೆಯುವುದಕ್ಕೆ ಅವಕಾಶ ಇಲ್ಲ. ಅಬ್ದುಲ್ ಸತ್ತಾರ್ ಸಿಕ್ಕಿದ ಬಳಿಕ ಎಲ್ಲಿಂದ ಮಾಂಸ ತರುತ್ತಿದ್ದ, ಏನಾಯ್ತು ಎನ್ನುವ ಬಗ್ಗೆ ತಿಳಿಯುತ್ತದೆ. ಎರಡು ಕಡೆಯೂ ಈಗ ಕೇಸು ದಾಖಲಿಸಿದ್ದು ತನಿಖೆ ನಡೆಸಲಾಗುತ್ತಿದೆ. ಇದೇ ವೇಳೆ, ಅವಿನಾಶ್ ಸುವರ್ಣ ನೈತಿಕ ಪೊಲೀಸ್ ನಡೆಸಿದ್ದಾಗಿ ಕೆಲವರು ಫೋಟೊ ವೈರಲ್ ಮಾಡಿದ್ದಾರೆ. ಆತ ಯಾರು, ಘಟನೆಯಲ್ಲಿ ಇದ್ದಾನೆಯೇ ಎಂಬುದು ಗೊತ್ತಾಗಿಲ್ಲ. ವಿನಾಕಾರಣ ಫೋಟೊ ವೈರಲ್ ಮಾಡಿದ್ದರೆ ಅಂಥವರ ವಿರುದ್ಧ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಇಬ್ಬರು ಕೃತ್ಯದಲ್ಲಿ ಭಾಗಿ - ಕಮಿಷನರ್ 

ಮಳಲಿ ಆಸುಪಾಸಿನಲ್ಲಿ ಸಿಸಿಟಿವಿ ಪರಿಶೀಲನೆ ನಡೆಸಲಾಗಿದ್ದು ಟಾಟಾ ಸುಮೋದಲ್ಲಿ ಬೆನ್ನತ್ತಿ ಹೋಗಿರುವುದು ಕಂಡುಬಂದಿದೆ. ಘಟನೆಯಲ್ಲಿ ಸುಮಿತ್ ಮತ್ತು ರಜತ್ ಎಂಬ ಇಬ್ಬರು ಯುವಕರು ಕೃತ್ಯದಲ್ಲಿ ಭಾಗಿಯಾಗಿರುವುದು ಸ್ಪಷ್ಟವಾಗಿದ್ದು ಇಬ್ಬರನ್ನೂ ಬಂಧಿಸಲಾಗಿದೆ. ಆದರೆ ಕೆಲವರು ಐದಾರು ಮಂದಿ ಕೃತ್ಯದಲ್ಲಿ ಪಾಲ್ಗೊಂಡಿದ್ದಾರೆಂದು ಸುಳ್ಳು ಸುದ್ದಿ ಹಬ್ಬಿಸುತ್ತಿದ್ದಾರೆ. ಇದರ ಬಗ್ಗೆ ಕ್ರಮ ಜರುಗಿಸಲಾಗುವುದು ಎಂದು ಪೊಲೀಸ್ ಕಮಿಷನರ್ ಸುಧೀರ್ ರೆಡ್ಡಿ ತಿಳಿಸಿದ್ದಾರೆ.

In Mangaluru’s Bajpe–Malali area, police have registered two separate cases after 19 kg of beef was found being transported on a bike and two youths allegedly attempted moral policing. Abdul Sattar, who was carrying beef on his bike along with his 11-year-old daughter, fled in fear when Sumit Bhandari and Rajath Naik allegedly blocked his vehicle with a Tata Sumo and attempted to assault him.