ಮುಖ್ಯಶಿಕ್ಷಕನ ವರ್ಗಾವಣೆಗೆ ಸಂಚು ; ಶಾಲೆಯ ವಾಟರ್‌ ಟ್ಯಾಂಕ್‌ಗೆ ಕೀಟನಾಶಕ ಹಾಕಿದ ಕಂತ್ರಿಗಳು, 12 ವಿದ್ಯಾರ್ಥಿಗಳು ಅಸ್ವಸ್ಥ, ಮೂವರ ಬಂಧನ, ಬೆಳಗಾವಿಯಲ್ಲಿ ತಪ್ಪಿದ ಅನಾಹುತ  

03-08-25 08:16 pm       HK News Desk   ಕ್ರೈಂ

ಇತ್ತೀಚಿಗೆ ಜಿಲ್ಲೆಯ ಸವದತ್ತಿ ತಾಲೂಕಿನ ಹೂಲಿಕಟ್ಟಿ ಗ್ರಾಮದ ಸರ್ಕಾರಿ ಶಾಲೆಯ 12 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದ ಪ್ರಕರಣದಲ್ಲಿ ಸ್ಫೋಟಕ ವಿಚಾರ ಬೆಳಕಿಗೆ ಬಂದಿದೆ.

ಬೆಳಗಾವಿ, ಆಗಸ್ಟ್.03: ಇತ್ತೀಚಿಗೆ ಜಿಲ್ಲೆಯ ಸವದತ್ತಿ ತಾಲೂಕಿನ ಹೂಲಿಕಟ್ಟಿ ಗ್ರಾಮದ ಸರ್ಕಾರಿ ಶಾಲೆಯ 12 ವಿದ್ಯಾರ್ಥಿಗಳು ಅಸ್ವಸ್ಥಗೊಂಡಿದ್ದ ಪ್ರಕರಣದಲ್ಲಿ ಸ್ಫೋಟಕ ವಿಚಾರ ಬೆಳಕಿಗೆ ಬಂದಿದೆ. ಮುಖ್ಯಶಿಕ್ಷಕನನ್ನು ಬೇರೆಡೆ ವರ್ಗಾವಣೆ ಮಾಡಿಸುವ ಉದ್ದೇಶದಿಂದ ಆರೋಪಿಗಳು ಶಾಲೆಯ ನೀರಿನ‌ ಟ್ಯಾಂಕ್​ನಲ್ಲಿ ಕೀಟನಾಶಕ ಬೆರೆಸಿದ್ದರು ಎಂಬ ವಿಚಾರ ಪೊಲೀಸರ ತನಿಖೆಯಿಂದ ತಿಳಿದುಬಂದಿದೆ. ಇದೀಗ ಪೊಲೀಸರು ಮೂವರು ಆರೋಪಿಗಳನ್ನು ಬಂಧಿಸಿದ್ದಾರೆ.

ಜುಲೈ 14ರಂದು ಈ ಘಟನೆ ನಡೆದಿತ್ತು. ಅಸ್ವಸ್ಥಗೊಂಡ ಮಕ್ಕಳನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗಿತ್ತು. ಸವದತ್ತಿ ಠಾಣೆ ಪೊಲೀಸರು ಶಾಲೆಗೆ ಭೇಟಿ ನೀಡಿ ಪರಿಶೀಲನೆ ನಡೆಸಿದಾಗ, ನೀರಿನ ಟ್ಯಾಂಕ್ ಬಳಿ ಒಂದು ಬಾಟಲ್ ಬಿದ್ದಿತ್ತು. ಆ ಬಾಟಲಿಯನ್ನು ಸೂಕ್ಷ್ಮವಾಗಿ ಗಮನಿಸಿದಾಗ, ಅದರಲ್ಲಿ ವಿಷದ ಅಂಶ ಪತ್ತೆಯಾಗಿತ್ತು. ಕೂಡಲೇ ಪೊಲೀಸರು ಟ್ಯಾಂಕ್​ನಲ್ಲಿದ್ದ ನೀರನ್ನು ಎಫ್ಎಸ್ಎಲ್​ಗೆ ಕಳುಹಿಸಿದ್ದರು. ಈ ಕುರಿತು ಮುಖ್ಯಶಿಕ್ಷಕ ಸುಲೇಮಾನ್ ಗೋರಿನಾಯಕ್ ಅವರು ನೀಡಿದ ದೂರಿನ‌ ಆಧಾರದಲ್ಲಿ ಕೊಲೆ ಯತ್ನ ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭಿಸಿದ್ದರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಭೀಮಾಶಂಕರ್​ ಗುಳೇದ ಪ್ರತಿಕ್ರಿಯಿಸಿ, "ಈ ಶಾಲೆಯಲ್ಲಿ 1ರಿಂದ 5ನೇ ತರಗತಿವರೆಗೆ 41 ಮಕ್ಕಳು ಓದುತ್ತಿದ್ದು, ಹೊರಗಿನವರು ಬಂದು ಶಾಲೆಯ ನೀರಿನ ಟ್ಯಾಂಕ್​ನಲ್ಲಿ ವಿಷ ಹಾಕಿಲ್ಲ ಎಂಬುವುದು ಪ್ರಾಥಮಿಕ ತನಿಖೆಯಲ್ಲಿ ಗೊತ್ತಾಗಿತ್ತು. ನಂತರ, ಪೊಲೀಸರು ಶಿಕ್ಷಕರಿಗೆ ಮಕ್ಕಳನ್ನು ವಿಚಾರಿಸುವಂತೆ ಸೂಚಿಸಿದ್ದರು. ಶಿಕ್ಷಕರು ಮಕ್ಕಳನ್ನು ವಿಚಾರಣೆ ಮಾಡಿದಾಗ ಓರ್ವ ಬಾಲಕ ಅಂದು ಟ್ಯಾಂಕ್​ ಒಳಗೆ ಜ್ಯೂಸ್ ಹಾಕಿದ್ದೆ ಅಂತ ಹೇಳಿದ್ದಾನೆ" ಎಂದು ಹೇಳಿದರು.

"ಯಾರು ಜ್ಯೂಸ್​ ಬಾಟಲ್ ಕೊಟ್ಟರೆಂದು ಪ್ರಶ್ನಿಸಿದಾಗ, ಅದೇ ಗ್ರಾಮದ ಕೃಷ್ಣ ಮಾದರ ಎಂಬಾತ ಕೊಟ್ಟಿದ್ದಾಗಿ ಬಾಲಕ ತಿಳಿಸಿದ್ದಾನೆ.‌ ವೃತ್ತಿಯಲ್ಲಿ ಚಾಲಕನಾಗಿರುವ ಕೃಷ್ಣನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಿಸಿದಾಗ ಮಕ್ಕಳನ್ನು ಕೊಲ್ಲಲು ನಡೆಸಿದ್ದ ಸಂಚೆಂದು ಗೊತ್ತಾಗಿದೆ.‌ 'ಮೂರು ರೀತಿಯ ಕೀಟನಾಶಕಗಳನ್ನು ಸೇರಿಸಿ ಜ್ಯೂಸ್​ ಬಾಟಲ್​ನಲ್ಲಿ ಹಾಕಿ ಬಾಲಕನಿಗೆ ನೀಡಿ, ನೀರಿನ ಟ್ಯಾಂಕ್​ ಒಳಗೆ ಹಾಕುವಂತೆ ಹೇಳಿದ್ದೆ' ಎಂದು ವಿಚಾರಣೆ ವೇಳೆ ಆರೋಪಿ ಕೃಷ್ಣ ಬಾಯಿಬಿಟ್ಟಿದ್ದಾನೆ" ಎಂದು ತಿಳಿಸಿದ್ದಾರೆ.

"ನೀರಿನ ಟ್ಯಾಂಕ್‌ನೊಳಗೆ ವಿಷ ಹಾಕುವಂತೆ ಅದೇ ಗ್ರಾಮದ ನಾಗನಗೌಡ ಪಾಟೀಲ್ ಮತ್ತು ಹಿಂದು ಸಂಘಟನೆಯಲ್ಲಿ ಗುರುತಿಸಿಕೊಂಡಿದ್ದ ಸಾಗರ್ ಪಾಟೀಲ್ ನನಗೆ ಹೇಳಿದ್ದರು. ಯಾವುದೋ ಒಂದು ರಹಸ್ಯವನ್ನು ಇಟ್ಟುಕೊಂಡು ಬ್ಲ್ಯಾಕ್​ಮೇಲ್ ಮಾಡಿದ್ದರು. ಇದರಿಂದ ಭಯಗೊಂಡು ಬಾಲಕನಿಗೆ ಚಾಕಲೇಟ್ ಮತ್ತು ಐನೂರು ರೂಪಾಯಿ ನೀಡಿ ಪುಸಲಾಯಿಸಿ ವಿಷ ಹಾಕಿಸಿದ್ದೆ ಅಂತ ಕೃಷ್ಣ ತಪ್ಪೊಪ್ಪಿಕೊಂಡಿದ್ದಾನೆ" ಎಂದು ವಿವರಿಸಿದರು.

"ಬಳಿಕ, ಪೊಲೀಸರು ಕೃಷ್ಣ ಹೇಳಿದ ಆ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆಗೆ ಒಳಪಡಿಸಿದಾಗ ನಮಗೂ ಇದಕ್ಕೂ ಸಂಬಂಧವಿಲ್ಲ ಎಂದು ಆರೋಪಿಗಳು ಮೊದಲು ವಾದಿಸಿದ್ದರು. ಆದರೆ, ಪೊಲೀಸರು ತಮ್ಮದೇ ಭಾಷೆಯಲ್ಲಿ ವಿಚಾರಣೆ ಮಾಡಿದಾಗ ಆರೋಪಿಗಳು ಸತ್ಯ ಬಾಯಿಬಿಟ್ಟಿದ್ದರು. ಸಾಗರ್ ಪಾಟೀಲ್ ಎಂಬಾತನೇ ಮೂರು ರೀತಿಯ ವಿಷ ತಂದಿದ್ದು, ಅದನ್ನು ಜ್ಯೂಸ್​ ಬಾಟಲ್​ನಲ್ಲಿ ಹಾಕಿ ಕೃಷ್ಣ ಕೈಯಲ್ಲಿ ಕೊಟ್ಟಿದ್ದ ಎಂಬುದು ತನಿಖೆಯಲ್ಲಿ ಕಂಡುಬಂದಿದೆ" ಎಂದು ಹೇಳಿದರು.

"ಸುಲೇಮಾನ್​ ಗೋರಿನಾಯಕ್ ಕಳೆದ 13 ವರ್ಷಗಳಿಂದ ಇದೇ ಶಾಲೆಯಲ್ಲಿ ಶಿಕ್ಷಕರಾಗಿ ಕೆಲಸ ಮಾಡುತ್ತಿದ್ದರು. ಇದು ಸಾಗರ್​ಗೆ ಇಷ್ಟವಿರಲಿಲ್ಲ. ವಿಷ ಹಾಕಿದ ನೀರನ್ನು ಸೇವಿಸಿ ಮಕ್ಕಳು ಅಸ್ವಸ್ಥರಾಗುತ್ತಾರೆ. ಘಟನೆಗೆ ಮುಖ್ಯಶಿಕ್ಷಕ ಸುಲೇಮಾನ್ ಗೋರಿನಾಯಕ್ ಕಾರಣರಾಗುತ್ತಾರೆ. ಆಗ ಆತನನ್ನು ಕೆಲಸದಿಂದ ವಜಾಗೊಳಿಸುತ್ತಾರೆ ಎಂದು ಸಂಚು ರೂಪಿಸಿದ್ದರು" ಎಂದು ತಿಳಿಸಿದರು.

"ಅಂದು ಬಾಲಕ ನೀರಿನ ಟ್ಯಾಂಕ್​ನಲ್ಲಿ ವಿಷ ಹಾಕುವಾಗ ಅರ್ಧದಷ್ಟು ವಿಷ ಹೊರಗೆ ಬಿದ್ದಿತ್ತು. ಅಲ್ಲದೇ ಮಕ್ಕಳು ನೀರು ಕುಡಿಯದೇ ಬಾಯಲ್ಲಿ ಹಾಕುತ್ತಿದ್ದಂತೆ ಸಂಶಯ ಬಂದು ಉಗುಳಿದ್ದಾರೆ. ಹಾಗಾಗಿ, ಯಾವುದೇ ಜೀವಹಾನಿ ಸಂಭವಿಸದೇ ದೊಡ್ಡ ದುರಂತ ತಪ್ಪಿದೆ" ಎಂದು ಅವರು ವಿವರ ನೀಡಿದರು.

ಆರೋಪಿಗಳಾದ ಕೃಷ್ಣ ಮಾದರ್, ಸಾಗರ್ ಪಾಟೀಲ್, ನಾಗನಗೌಡ ಪಾಟೀಲ್ ಅವರನ್ನು ಬಂಧಿಸಿ ಹಿಂಡಲಗಾ ಜೈಲಿಗೆ ಕಳುಹಿಸಲಾಗಿದೆ.

A shocking plot to poison students in an attempt to frame and transfer a school headmaster has come to light in Belagavi district. Police have arrested three individuals after it was discovered that pesticide was deliberately mixed into the water tank of a government school in Hulikatti village, Savadatti taluk. The contaminated water caused 12 students to fall ill on July 14, though a major tragedy was narrowly avoided.