13 ವರ್ಷದ ಬಾಲಕನ ಕಿಡ್ನಾಪ್ ; 5 ಲಕ್ಷ ರೂ. ಹಣ ತರುವಷ್ಟರಲ್ಲಿ ಹೆಣ ಉರುಳಿಸಿದ ಕ್ರೂರಿಗಳು, ಇಬ್ಬರು ರಾಕ್ಷಸರ ಕಾಲಿಗೆ ಪೊಲೀಸರ ಗುಂಡು, ಬೆಚ್ಚಿ ಬಿದ್ದ ಬೆಂಗಳೂರು ! 

01-08-25 04:27 pm       HK News Desk   ಕ್ರೈಂ

13 ವರ್ಷದ ಬಾಲಕನನ್ನು ಟ್ಯೂಷನ್ ಗೆ ಹೋಗಿ ಬರುವ ವೇಳೆ ಕಿಡ್ನಾಪ್ ಮಾಡಿ ಬರ್ಬರವಾಗಿ ಕೊಲೆ ಮಾಡಲಾಗಿದೆ.

ಬೆಂಗಳೂರು, ಆ 2: ಟ್ಯೂಷನ್‌ಗೆ ಹೋಗ್ತಿದ್ದ ಬಾಲಕನನ್ನು ದುಷ್ಕರ್ಮಿಗಳು ಕಿಡ್ನ್ಯಾಪ್ ಮಾಡಿ ಬರ್ಬರವಾಗಿ ಕೊಲೆ ಮಾಡಿರುವ ಘಟನೆ ಆನೇಕಲ್ ಬಳಿ ನಡೆದಿದೆ. 13 ವರ್ಷದ ನಿಶ್ಚಿತ್ ಹತ್ಯೆಯಾದ ಬಾಲಕ ಎಂದು ಗುರುತಿಸಲಾಗಿದೆ. ಬುಧವಾರ ರಾತ್ರಿ ಅರಕೆರೆ ಶಾಂತಿನಿಕೇತನ ಬಡಾವಣೆ ಬಳಿ ಟ್ಯೂಷನ್‌ನಿಂದ ಬರುತ್ತಿದ್ದ ಬಾಲಕನನ್ನು ದುಷ್ಕರ್ಮಿಗಳು ಅಪಹರಿಸಿದ್ದರು.

ಬಾಲಕನ ತಂದೆ ಪ್ರತಿಷ್ಠಿತ ಖಾಸಗಿ ಕಾಲೇಜಿನಲ್ಲಿ ಅಸಿಸ್ಟೆಂಟ್ ಪ್ರೊಫೆಸರ್ ಆಗಿದ್ದರಿಂದ ಕಿಡ್ನ್ಯಾಪರ್ಸ್ ಕರೆ ಮಾಡಿ 5 ಲಕ್ಷ ರೂ. ಹಣಕ್ಕೆ ಡಿಮ್ಯಾಂಡ್ ಮಾಡಿದ್ದರು. ಕಿಡ್ನ್ಯಾಪರ್ಸ್ ಕಡೆಯಿಂದ ಫೋನ್ ಬರ್ತಿದ್ದಂತೆ ಬಾಲಕ ಪೋಷಕರು ಹುಳಿಮಾವು ಠಾಣೆಗೆ ದೂರು ನೀಡಿದ್ದರು.

ಬೆಂಗಳೂರಲ್ಲಿ ಖಾಸಗಿ ಕಾಲೇಜ್ ಉಪನ್ಯಾಸಕನ ಪುತ್ರ ನಿಶ್ಚಿತ್ ಪೋಷಕರು 5 ಲಕ್ಷ ರೂ ತಯಾರು ಮಾಡಿ ಇಟ್ಟಿದ್ರೂ ಕೂಡಾ ಬಾಲಕನನ್ನು ರಕ್ಷಿಸಲು ಸಾಧ್ಯವಾಗಿಲ್ಲ ಎಂದ ಹೆತ್ತವರ ಆಕ್ರಂದನ ಮುಗಿಲು ಮುಟ್ಟಿದೆ.

ಅಚ್ಯುತ್ ಮನೆಯಲ್ಲಿ ಹೆಚ್ಚುವರಿ ಡ್ರೈವರ್ ಆಗಿದ್ದ ಗುರುಮೂರ್ತಿಯೇ ಬಾಲಕನ ಕಿಡ್ನಾಪ್ ಗೆ ಪ್ಲ್ಯಾನ್ ಮಾಡಿದ್ದ ಎನ್ನಲಾಗಿದೆ. ಕೊಲೆಗೆ ನಿಖರ ಕಾರಣ ಇನ್ನೂ ತಿಳಿದುಬಂದಿಲ್ಲ. ಗುರುಮೂರ್ತಿ ಪರಿಚಯದ ವ್ಯಕ್ತಿಯಿಂದಲೇ ಕಿಡ್ನಾಪ್ ನಡೆದಿದೆ. ಹೊರವಲಯದ ಅರಣ್ಯ ಪ್ರದೇಶದ ಬಳಿಗೆ ಕರೆದೊಯ್ದು ಕೊಲೆ ಮಾಡಿ, ನಂತರ ಹಣಕ್ಕೆ ಡಿಮ್ಯಾಂಡ್ ಮಾಡಿದ್ದಾರೆ. ನಂತರ ಪೆಟ್ರೋಲ್ ಸುರಿದು ಸುಟ್ಟುಹಾಕುವ ಕೆಲಸ ಮಾಡಿದ್ದಾರೆ. 

ಇಬ್ಬರು ಆರೋಪಿಗಳು ಕಗ್ಗಲಿಪುರ ಅರಣ್ಯದಲ್ಲಿ ಅಡಗಿ ಕುಳಿತ್ತಿದ್ದರು.‌ ಖಚಿತ ಮಾಹಿತಿ ಆಧರಿಸಿ ಇಬ್ಬರನ್ನು ಬಂಧಿಸಲಾಗಿದೆ ಎಂದು ಪೊಲೀಸರು ಹೇಳಿದರು.

ಕಾರ್ಯಾಚರಣೆ ವೇಳೆ ಪೊಲೀಸರ ಮೇಲೆ ಆರೋಪಿಗಳು ಹಲ್ಲೆಗೆ ಯತ್ನಿಸಿ ಪರಾರಿಯಾಗಲು ಪ್ರಯತ್ನಿಸಿದ್ದು, ಆತ್ಮರಕ್ಷಣೆಗಾಗಿ ಆರೋಪಿಗಳ ಕಾಲಿಗೆ ಗುಂಡು ಹಾರಿಸಿ ವಶಕ್ಕೆ ಪಡೆದುಕೊಳ್ಳಲು ಯಶಸ್ವಿಯಾದರು.

ಮೃತ ಬಾಲಕ ನಿಶ್ಚಿತ್ ತಂದೆಗೆ ಪರಿಚಯವಿದ್ದ ಆರೋಪಿಗಳೇ ಕೃತ್ಯ ಎಸಗಿದ್ದಾರೆ ಎಂಬುದು ಪ್ರಾಥಮಿಕ ತನಿಖೆಯಿಂದ ಗೊತ್ತಾಗಿದೆ. ತನಿಖೆ ಮುಂದುವರಿದಿದೆ ಎಂದು ಪೊಲೀಸರು ಹೇಳಿದರು.

ಸೈಕೋ ಮನಸ್ಥಿತಿ ಹೊಂದಿದ್ದ ಆರೋಪಿಗಳು;

ಆರೋಪಿಗಳು ಸೈಕೋ ಮನಸ್ಥಿತಿ ಹೊಂದಿದವರು ಎನ್ನಲಾಗಿದೆ. ಪ್ರಮುಖ ಆರೋಪಿ ಗುರುಮೂರ್ತಿಗೆ ಪೋಕ್ಸೊ ಅಪರಾಧ ಪ್ರಕರಣದ ಹಿನ್ನೆಲೆ ಇದೆ. ಆದಾಗ್ಯೂ, ಬಾಲಕ ನಿಶ್ಚಿತ್ ಅಪಹರಣ ಹಾಗೂ ಕೊಲೆಗೆ ನಿಖರ ಕಾರಣ ಏನೆಂಬುದು ಇನ್ನೂ ನನಿಗೂಢವಾಗಿಯೇ ಇದೆ. ಕೇವಲ ಹಣಕ್ಕಾಗಿ ಮಾತ್ರ ಆರೋಪಿ ಬಾಲಕನನ್ನು ಅಪಹರಿಸಿದ್ದನೇ ಅಥವಾ ಬೇರೆ ಕಾರಣ ಇದೆಯೇ ಎಂಬ ಬಗ್ಗೆಯೂ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಆರೋಪಿ ಹಿನ್ನಲೆ ಗಮನಿಸಿ ಎರಡು ಆಯಾಮಗಳಲ್ಲಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. 5 ಲಕ್ಷ ರೂ. ಹಣಕ್ಕೆ ಬೇಡಿಕೆ ಇಟ್ಟಿದ್ದ ಆರೋಪಿ ಎರಡ್ಮೂರು ಸ್ಥಳ ಹೇಳಿ ಹಣ ಪಡೆಯದೆ ಸತಾಯಿಸಿದ್ದ ಎನ್ನಲಾಗಿದೆ. ಒಂದೆಡೆ ನಿಶ್ಚಿತ್ ಪೋಷಕರು ಹಣ ಸಂಗ್ರಹಿಸಿಟ್ಟು, ಪೊಲೀಸರ ತನಿಖೆ ಸಹಕರಿಸಿದ್ದರು. ಆದರೆ, ಅಷ್ಟರಲ್ಲಾಗಲೇ ಬಾಲಕನ ಹತ್ಯೆ ಮಾಡಲಾಗಿದೆ.

A 13-year-old schoolboy was allegedly brutally murdered hours after being kidnapped while he was returning home from tuition classes in Hulimavu, on Thursday.