Kerala Chit Fund, Fraud, Mangalore: 20 ವರ್ಷಗಳಿಂದ ಬೆಂಗಳೂರಿನಲ್ಲಿ ಚಿಟ್ ಫಂಡ್, ಕೇರಳ ಮೂಲದ ದಂಪತಿ ದಿಢೀರ್ ನಾಪತ್ತೆ ; 350ಕ್ಕೂ ಹೆಚ್ಚು ಜನರಿಗೆ ನೂರು ಕೋಟಿಗೂ ಹೆಚ್ಚು ವಂಚನೆ, ಬೆಂಗಳೂರು, ಮಂಗಳೂರು, ಕೇರಳದ ಜನರಿಗೆ ಭಾರೀ ಮೋಸ !

08-07-25 10:01 pm       Bengaluru Staffer   ಕ್ರೈಂ

20 ವರ್ಷಗಳಿಂದ ಚಿಟ್ ಫಂಡ್ ನಡೆಸುತ್ತಿದ್ದ ಕೇರಳ ಮೂಲದ ದಂಪತಿ ಗ್ರಾಹಕರಿಗೆ 100 ಕೋಟಿಗೂ ಹೆಚ್ಚು ವಂಚಿಸಿ ತಮ್ಮ ಮನೆ, ಕಾರು ಎಲ್ಲವನ್ನೂ ಮಾರಾಟ ಮಾಡಿ ನಾಪತ್ತೆಯಾದ ಪ್ರಸಂಗ ನಡೆದಿದ್ದು, ಮಂಗಳೂರು, ಬೆಂಗಳೂರು ಮತ್ತು ಕೇರಳ ಮೂಲದ ನೂರಾರು ಜನರಿಗೆ ದೋಖಾ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಬೆಂಗಳೂರು, ಜುಲೈ.8: 20 ವರ್ಷಗಳಿಂದ ಚಿಟ್ ಫಂಡ್ ನಡೆಸುತ್ತಿದ್ದ ಕೇರಳ ಮೂಲದ ದಂಪತಿ ಗ್ರಾಹಕರಿಗೆ 100 ಕೋಟಿಗೂ ಹೆಚ್ಚು ವಂಚಿಸಿ ತಮ್ಮ ಮನೆ, ಕಾರು ಎಲ್ಲವನ್ನೂ ಮಾರಾಟ ಮಾಡಿ ನಾಪತ್ತೆಯಾದ ಪ್ರಸಂಗ ನಡೆದಿದ್ದು, ಮಂಗಳೂರು, ಬೆಂಗಳೂರು ಮತ್ತು ಕೇರಳ ಮೂಲದ ನೂರಾರು ಜನರಿಗೆ ದೋಖಾ ಮಾಡಿರುವ ಘಟನೆ ಬೆಳಕಿಗೆ ಬಂದಿದೆ.

ಕೆಆರ್ ಪುರಂ ಬಳಿಯ ಬಟ್ಟರಹಳ್ಳಿ ಎಂಬಲ್ಲಿ ವಾಸವಿದ್ದ ಟೋಮಿ ವರ್ಗೀಸ್ ಮತ್ತು ಶೈನಿ ಟೋಮಿ ಗ್ರಾಹಕರಿಗೆ ವಂಚಿಸಿ ನಾಪತ್ತೆಯಾದವರು. ಜುಲೈ ತಿಂಗಳ ಆರಂಭದಲ್ಲಿಯೇ ಸದ್ದಿಲ್ಲದೆ ನಾಪತ್ತೆಯಾಗಿದ್ದು, ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ಗ್ರಾಹಕರ ಕಡೆಯಿಂದ ದೂರು ದಾಖಲಾಗುತ್ತಲೇ ಪೊಲೀಸರು ಹುಡುಕಾಟ ಆರಂಭಿಸಿದ್ದಾರೆ. ಮನೋರಮಾ ನ್ಯೂಸ್ ಪ್ರಕಾರ, ಭಟ್ಟರಹಳ್ಳಿಯಲ್ಲಿ 1600 ಚದರ ಮೀಟರಿನ ದೊಡ್ಡ ಮನೆಯನ್ನು ಈ ದಂಪತಿ 1.15 ಕೋಟಿಗೆ ಖರೀದಿಸಿದ್ದರು. ಆದರೆ ಅದರಲ್ಲಿರುವ ಬೆಲೆಬಾಳುವ ಫರ್ನಿಚರ್ ಸಹಿತ ಒಂದು ಕೋಟಿಗೂ ಕಡಿಮೆ ಮೊತ್ತಕ್ಕೆ ದಿಢೀರ್ ಮಾರಾಟ ಮಾಡಿ ಕಾಣೆಯಾಗಿದ್ದಾರೆ.

ಸಿಸಿಟಿವಿಯಲ್ಲಿ ತಮ್ಮ ಫ್ಲಾಟ್ ನಿಂದ ಜುಲೈ 3ರಂದು ಈ ದಂಪತಿ ಸೂಟ್ ಕೇಸ್ ಸಹಿತ ತೆರಳಿರುವುದು ದಾಖಲಾಗಿದೆ. ತನಿಖೆಯ ವೇಳೆ ಬ್ಯಾಂಕ್ ಖಾತೆಗಳಿಂದಲೂ ಹಣವನ್ನು ಡ್ರಾ ಮಾಡಿರುವುದು ಕಂಡುಬಂದಿದೆ. ಬಡ್ಡಿದರ ಹೆಚ್ಚಿಸಿದ್ದರಿಂದ ಭಾರೀ ಸಂಖ್ಯೆಯಲ್ಲಿ ಜನರು ಇವರ ಚಿಟ್ ಫಂಡ್ ಮೇಲೆ ಹೂಡಿಕೆ ಮಾಡಿದ್ದರು. ಎ ಅಂಡ್ ಎ ಚಿಟ್ಸ್ ಮತ್ತು ಫೈನಾನ್ಸ್ ಹೆಸರಲ್ಲಿ ಇವರು ಚಿಟ್ ಫಂಡ್ ನಡೆಸುತ್ತಿದ್ದರು. 16ರಿಂದ 20 ಪರ್ಸೆಂಟ್ ಬಡ್ಡಿ ನೀಡುತ್ತಿದ್ದುದರಿಂದ ಜನರು ಆಕರ್ಷಿತರಾಗಿದ್ದರು. ಈಗ ವಿದೇಶಕ್ಕೆ ಹೋಗಿದ್ದಾರೆಯೇ ಎಂದು ತಿಳಿಯಲು ಪೊಲೀಸರು ಅವರ ಪಾಸ್ ಪೋರ್ಟ್ ತಪಾಸಣೆ ಮಾಡುತ್ತಿದ್ದಾರೆ.

ಈ ದಂಪತಿಯ ಒಬ್ಬ ಮಗಳು ಬೆಂಗಳೂರಿನಲ್ಲಿ ವಾಸ ಇದ್ದಾರೆ ಎನ್ನಲಾಗುತ್ತಿದ್ದು, ಒಬ್ಬ ಮಗ ಗೋವಾದಲ್ಲಿ ಹಾಗೂ ಇನ್ನೊಬ್ಬ ಕೆನಡಾದಲ್ಲಿ ನೆಲೆಸಿದ್ದಾರೆ. ಗ್ರಾಹಕರು ಮಕ್ಕಳನ್ನು ಸಂಪರ್ಕಿಸಲು ಯತ್ನಿಸಿದಾಗ ಅವರು ಕೂಡ ಸಂಪರ್ಕಕ್ಕೆ ಸಿಗುತ್ತಿಲ್ಲ. ಇವರಿಗೆ ಕಾನೂನು ಪ್ರಕಾರ, 5 ಲಕ್ಷದ ವರೆಗೆ ಚಿಟ್ ಫಂಡ್ ನಡೆಸುವುದಕ್ಕೆ ಅವಕಾಶ ಇತ್ತು. ಆದರೆ ಇವರು ಲಿಮಿಟ್ ಕ್ರಾಸ್ ಮಾಡಿದ್ದು, 1 ಲಕ್ಷದಿಂದ ಒಂದೂವರೆ ಕೋಟಿಯಷ್ಟು ತಿಂಗಳಿಗೆ ಕಲೆಕ್ಷನ್ ಮಾಡುತ್ತಿದ್ದರು ಎನ್ನಲಾಗಿದೆ. ಒಟ್ಟು ನೂರು ಕೋಟಿಗೂ ಹೆಚ್ಚು ಮೊತ್ತವನ್ನು ಸಂಗ್ರಹಿಸಿ ಈಗ ಪರಾರಿಯಾಗಿದ್ದಾರೆಂಬ ದೂರು ಕೇಳಿಬಂದಿದೆ. ನಿಯಮಿತವಾಗಿ ಹೆಚ್ಚು ಬಡ್ಡಿಗೆ ಹಣ ಇಡುತ್ತಿದ್ದವರಿಗೆ ರಿಟರ್ನ್ಸ್ ನೀಡುವ ಭರವಸೆಯನ್ನೂ ನೀಡಿದ್ದರು. ಆದರೆ ರಿಟರ್ನ್ಸ್ ಬರುವುದು ಹಠಾತ್ ನಿಂತಿದ್ದರಿಂದ ಗ್ರಾಹಕರು ಚೆಕ್ ಮಾಡಿದಾಗ, ದಂಪತಿ ಕಾಣೆಯಾಗಿರುವುದು ಪತ್ತೆಯಾಗಿದೆ.

ಕೇರಳದ ಕೊಟ್ಟಾಯಂ ಮೂಲದ ಪಿಂಚಣಿ ಪಡೆಯುವ ನಿವೃತ್ತ ಉದ್ಯೋಗಿಯೊಬ್ಬರು ಮೊದಲು ಪೊಲೀಸ್ ದೂರು ನೀಡಿದ್ದು, ಇದರ ಬೆನ್ನಲ್ಲೇ ಜನರು ಪೊಲೀಸ್ ಠಾಣೆಗೆ ದಾಂಗುಡಿ ಇಟ್ಟಿದ್ದಾರೆ. ಒಟ್ಟು 350ಕ್ಕೂ ಹೆಚ್ಚು ಮಂದಿ ರಾಮಮೂರ್ತಿ ನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆಂಬ ಮಾಹಿತಿ ಇದೆ. ಧಾರ್ಮಿಕ ಕಾರ್ಯಕ್ರಮಗಳನ್ನು ಏರ್ಪಡಿಸುತ್ತ ಸಹವರ್ತಿಗಳ ಜೊತೆ ಉತ್ತಮವಾಗಿ ಒಡನಾಟ ಹೊಂದಿದ್ದರಿಂದ ಜನರಿಗೆ ದಂಪತಿ ಬಗ್ಗೆ ನಂಬಿಕೆ ಬಂದಿತ್ತು. ಇದೇ ಕಾರಣಕ್ಕೆ ಹೆಚ್ಚೆಚ್ಚು ಮೊತ್ತವನ್ನು ಹೂಡಿಕೆ ಮಾಡಿದ್ದರು. ಸರಕಾರದ ಬ್ಯಾಂಕುಗಳಲ್ಲಿ ಹೂಡಿಕೆ ಮಾಡುವ ಬದಲು ನಮ್ಮ ಚಿಟ್ ಫಂಡ್ ಮೇಲೆ ಹೂಡಿಕೆ ಮಾಡುವಂತೆ ದಂಪತಿ ಹೇಳುತ್ತಿದ್ದರು. ಉತ್ತಮ ರಿಟರ್ನ್ಸ್ ನೀಡುವುದಾಗಿಯೂ ಹೇಳುತ್ತಿದ್ದರು. ಕೆಲವರು ತಮ್ಮ ಮಕ್ಕಳ ಶಿಕ್ಷಣ, ಮದುವೆ ಉದ್ದೇಶಕ್ಕೆ ಇವರಲ್ಲಿ ಹೂಡಿಕೆ ಮಾಡಿಟ್ಟಿದ್ದರು. ಕೆಲವರು ತಮ್ಮ ಜಾಗ ಮಾರಿದ ಹಣವನ್ನೂ ಈ ಚಿಟ್ ಫಂಡ್ ನಲ್ಲಿ ಹೂಡಿಕೆ ಮಾಡಿದ್ದರು.

In a major financial fraud case, a Kerala-origin couple who had been running a chit fund business in Bengaluru for over two decades have allegedly cheated more than ₹100 crore from over 350 investors and have gone missing without a trace. The couple, identified as Tomy Varghese and Shiny Tomy, were residents of Battarahalli near KR Puram. According to police sources, they vanished without any notice in early July after liquidating their assets, including a luxurious house and a car.