Gold smuggling case, Mangalore Court Verdict, Crime: ಗೋಲ್ಡ್ ಸ್ಮಗ್ಲಿಂಗ್ ಪ್ರಕರಣ ; ಕೇರಳದ ಇಬ್ಬರು ಸ್ನೇಹಿತರನ್ನು ಅಮಾನುಷ ಕೊಲೆಗೈದವರಿಗೆ ಜೀವಾವಧಿ ಶಿಕ್ಷೆ, ಮಂಗಳೂರಿನ ಕೋರ್ಟ್ ಘೋಷಣೆ

19-04-25 10:46 pm       Mangalore Correspondent   ಕ್ರೈಂ

ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ಭಾಗಿಯಾದ ಇಬ್ಬರು ಕೇರಳ ಮೂಲದ ಯುವಕರನ್ನು ಸ್ನೇಹಿತರೇ ಕೊಂದು ಹಾಕಿದ್ದ ಘಟನೆ 2014ರಲ್ಲಿ ಮಂಗಳೂರಿನಲ್ಲಿ ನಡೆದಿತ್ತು. ಪ್ರಕರಣದಲ್ಲಿ ಮೂವರು ಆರೋಪಿಗಳ ಅಪರಾಧ ಸಾಬೀತಾಗಿದ್ದು ಅವರಿಗೆ ಮಂಗಳೂರಿನ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ಮಂಗಳೂರು, ಎ.19 : ಗೋಲ್ಡ್ ಸ್ಮಗ್ಲಿಂಗ್ ಪ್ರಕರಣದಲ್ಲಿ ಭಾಗಿಯಾದ ಇಬ್ಬರು ಕೇರಳ ಮೂಲದ ಯುವಕರನ್ನು ಸ್ನೇಹಿತರೇ ಕೊಂದು ಹಾಕಿದ್ದ ಘಟನೆ 2014ರಲ್ಲಿ ಮಂಗಳೂರಿನಲ್ಲಿ ನಡೆದಿತ್ತು. ಪ್ರಕರಣದಲ್ಲಿ ಮೂವರು ಆರೋಪಿಗಳ ಅಪರಾಧ ಸಾಬೀತಾಗಿದ್ದು ಅವರಿಗೆ ಮಂಗಳೂರಿನ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ.

ಕಾಸರಗೋಡು ಜಿಲ್ಲೆಯ ಚೆರ್ಕಳ ನಿವಾಸಿ ಮೊಹಮ್ಮದ್ ಮುಹಜೀರ್ ಸನಾಫ್ (25), ಕಾಸರಗೋಡು ವಿದ್ಯಾನಗರ ನಿವಾಸಿ ಮೊಹಮ್ಮದ್ ಇರ್ಶಾದ್ (24), ಕಾಸರಗೋಡು ವಿದ್ಯಾನಗರ ಬಳಿಯ ಅಣಂಗೂರು ನಿವಾಸಿ ಮೊಹಮ್ಮದ್ ಸಫ್ವಾನ್ (24) ಜೀವಾವಧಿ ಶಿಕ್ಷೆಗೆ ಒಳಗಾದವರು. ಇವರು 2014ರ ಜುಲೈ ತಿಂಗಳಲ್ಲಿ ಗೆಳೆಯರ ಸೋಗಿನಲ್ಲಿ ವರ್ತಿಸಿ ಫಾಹೀಮ್ ಮತ್ತು ನಾಫೀರ್ ಎಂಬ ಇಬ್ಬರು ಗೆಳೆಯರನ್ನು ಅಮಾನುಷವಾಗಿ ಕೊಲೆಗೈದಿದ್ದರು.

ನಾಫೀರ್ ವಿದೇಶದಿಂದ ಚಿನ್ನದ ಗಟ್ಟಿಗಳನ್ನು ತಂದಿದ್ದು, ಅದನ್ನು ವಾರೀಸುದಾರರಿಗೆ ಕೊಡದೆ ವಂಚಿಸುವ ಉದ್ದೇಶದಿಂದ ಸ್ನೇಹಿತ  ಫಾಹೀಮ್ ಜೊತೆಗೂಡಿ ಮಾರಾಟ ಮಾಡುವುದಕ್ಕೆ ಸಂಚು ಹೂಡಿದ್ದ. ಇದೇ ವೇಳೆ, ಕಾಸರಗೋಡಿನ ಸನಾಫ್ ಪರಿಚಯವಾಗಿದ್ದು, ಆನಂತರ ವಿದ್ಯಾನಗರದ ಸಫ್ವಾನ್ ಮತ್ತು ಇರ್ಷಾದ್ ಕೂಡ ಜೊತೆಗೆ ಸೇರಿಕೊಂಡಿದ್ದರು. ಕಾಸರಗೋಡಿನ ಇನ್ನೊಬ್ಬ ಬ್ರೋಕರ್ ಯೂಸುಫ್ ಎಂಬಾತನ ಜೊತೆ ಸೇರಿ ಇವರು ಚಿನ್ನವನ್ನು ವಿವಿಧ ಜುವೆಲ್ಲರಿಗಳಿಗೆ ಮಾರಾಟ ಮಾಡಿದ್ದರು. ಈ ವಿಚಾರ ಚಿನ್ನದ ವಾರೀಸುದಾರರಿಗೆ ತಿಳಿದಿದ್ದರಿಂದ ಇವರನ್ನು ಹುಡುಕಾಡಲು ಶುರು ಮಾಡಿದ್ದರು.

ಚಿನ್ನ ಮಾರಿದ ಹಣದಲ್ಲಿ ಐವರು ಸ್ನೇಹಿತರು ಅಜ್ಮೀರ್ ಸೇರಿದಂತೆ ವಿವಿಧ ಕಡೆಗಳಿಗೆ ಸುತ್ತಾಡಿದ್ದರು. ಐಷಾರಾಮಿ ಜೀವನ ನಡೆಸಿಕೊಂಡು ಇದ್ದರು. ಗೋಲ್ಡ್ ಸ್ಮಗ್ಲಿಂಗ್ ಮಾಡಿದವರು ನಾಫಿರ್ ಮತ್ತು ಫಾಹೀಮ್ ನನ್ನು ಹುಡುಕಾಡುತ್ತಿದ್ದುದರಿಂದ ಮೊದಲಿಗೆ ಚಿನ್ನ ಮಾರಿದ ಹಣವನ್ನು ಆರೋಪಿಗಳಾದ ಸನಾಫ್ ಮತ್ತು ಆತನ ಸ್ನೇಹಿತರಾದ ಸಫ್ವಾನ್, ಇರ್ಶಾದ್ ತಮ್ಮಲ್ಲೇ ಇರಿಸಿಕೊಂಡಿದ್ದರು. ಆನಂತರ, ಚಿನ್ನ ಮಾರಿದ ಹಣವನ್ನು ನಾಫೀರ್ ಮತ್ತು ಫಾಹೀಮ್ ಕೇಳಿದ್ದು ಈ ವಿಚಾರದಲ್ಲಿ ತಕರಾರು ಉಂಟಾಗಿತ್ತು. ಇದೇ ವೇಳೆ, ಮಂಗಳೂರಿನ ಅತ್ತಾವರದಲ್ಲಿ ಬಾಡಿಗೆ ಮನೆ ಪಡೆದುಕೊಂಡಿದ್ದ ಆರೋಪಿಗಳು ಉಪಾಯದಲ್ಲಿ ಸ್ನೇಹಿತರನ್ನು ಅಲ್ಲಿಗೆ ಬರಹೇಳಿದ್ದರು. ಜುಲೈ 1ರಂದು ಹಾಡಹಗಲೇ ತಮ್ಮ ಕೋಣೆಯಲ್ಲಿ ಮಲಗಿದ್ದ ಇಬ್ಬರನ್ನೂ ಚೂರಿಯಿಂದ ತಿವಿದು ಕೊಂದಿದ್ದರು. ಇದಕ್ಕೂ ಮೊದಲೇ ಕಾಸರಗೋಡಿನ ಬೇಡಡ್ಕದಲ್ಲಿ ಇವರು ಹತ್ತು ಸೆಂಟ್ ಜಾಗ ಖರೀದಿಸಿಟ್ಟು ಇಬ್ಬರ ಹೆಣಗಳನ್ನೂ ಪ್ಲಾಸ್ಟಿಕ್ ಕವರಿನಲ್ಲಿ ಮುಚ್ಚಿ ಕೊಂಡೊಯ್ದು ಅಲ್ಲಿ ದಫನ ಮಾಡಿದ್ದರು.

ಯಾರಿಗೂ ತಿಳಿಯದೆ ಮುಚ್ಚಿ ಹೋಗುತ್ತಿದ್ದ ಪ್ರಕರಣ ಅತ್ತಾವರದ ಪರಿಸರದ ನಿವಾಸಿಗಳ ಶಂಕೆಯಿಂದಾಗಿ ಸಿಸಿಬಿ ಪೊಲೀಸರಿಗೆ ತಿಳಿದು ಗುಟ್ಟು ರಟ್ಟಾಗಿತ್ತು. ಆರೋಪಿಗಳನ್ನು ವಶಕ್ಕೆ ಪಡೆದು ಮನೆಯನ್ನು ಪರಿಶೀಲಿಸಿದಾಗ ರಕ್ತದ ಕಲೆಗಳಿದ್ದ ಬೆಡ್ ಶೀಟ್ ಪತ್ತೆಯಾಗಿತ್ತು. ಸಾಕ್ಷ್ಯ ನಾಶ ಮಾಡುವುದಕ್ಕಾಗಿ ಕಾರಿನಲ್ಲಿ ಒಯ್ಯುತ್ತಿದ್ದ ಇತರ ಪರಿಕರಗಳು ಕೂಡ ಪತ್ತೆಯಾಗಿದ್ದವು. ಪೊಲೀಸರು ಆರೋಪಿಗಳನ್ನು ಬಂಧಿಸಿ ಮಂಗಳೂರಿನ ನ್ಯಾಯಾಲಯದಲ್ಲಿ ಚಾರ್ಜ್ ಶೀಟ್ ಹಾಕಿದ್ದರು. ರಕ್ತ ಬಸಿದು ಹೋಗಿದ್ದ ಹೆಣವನ್ನು ಹೂತು ಹಾಕಿದ್ದ ಜಾಗದಿಂದಲೇ ಅಗೆದು ಪೋಸ್ಟ್ ಮಾರ್ಟಂ ನಡೆಸಿದ್ದರು. ಭಾರೀ ಕುತೂಹಲ ಮೂಡಿಸಿದ್ದ ಪ್ರಕರಣದಲ್ಲಿ ಮಂಗಳೂರಿನ 1ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ನ್ಯಾಯಾಧೀಶ ಮಲ್ಲಿಕಾರ್ಜುನ ಸ್ವಾಮಿ ಎಚ್.ಎಸ್ ಅವರು ಸಾಕ್ಷ್ಯಾಧಾರಗಳನ್ನು ಪರಿಗಣಿಸಿ ಎಪ್ರಿಲ್ 7ರಂದು ಆರೋಪ ಸಾಬೀತಾಗಿ ತೀರ್ಪು ನೀಡಿದ್ದು, 19ರಂದು ಮೂವರಿಗೂ ಜೀವಾವಧಿ ಶಿಕ್ಷೆ ವಿಧಿಸಿದ್ದಾರೆ. ಅಲ್ಲದೆ, 1.20 ಲಕ್ಷ ದಂಡವನ್ನು ಹಾಕಿ ತೀರ್ಪು ನೀಡಿದ್ದಾರೆ.

First Additional District and Sessions Judge Mallikarjuna Swamy H S on Saturday sentenced three youth to life imprisonment after they were found guilty of murdering their two friends for gain. The court also slapped a fine of Rs 25,000 each. Mohammed Muhajir Sanaf (35), A Mohammed Irshad (34) and A Mohammed Safwan (34) are the convicted. The case pertains to murders related to gold smuggling.