ಕಾಂಗ್ರೆಸ್ ಪಕ್ಷದಲ್ಲಿ ಕೆಟ್ಟ ಅನುಭವ, ಮುಂದುವರಿಯಲು ಕಷ್ಟ ಇದೆ ; ರಾಜಿನಾಮೆ ಪತ್ರದಲ್ಲಿ ಪ್ರಮೋದ್ ಮಧ್ವರಾಜ್, ಉಡುಪಿಯಲ್ಲೂ ಕಮಲ ಆಪರೇಶನ್ ! 

07-05-22 06:35 pm       Udupi Correspondent   ಕರಾವಳಿ

ಮಾಜಿ ಸಚಿವ ಹಾಗೂ ಉಡುಪಿ ಜಿಲ್ಲೆಯ ಪ್ರಭಾವಿ ಕಾಂಗ್ರೆಸ್ ನಾಯಕ ಪ್ರಮೋದ್ ಮಧ್ವರಾಜ್ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದು ಬಿಜೆಪಿ ಪಾಳಯಕ್ಕೆ ಹಾರಲು ಮುಂದಾಗಿದ್ದಾರೆ. 

ಉಡುಪಿ, ಮೇ 7: ಮಾಜಿ ಸಚಿವ ಹಾಗೂ ಉಡುಪಿ ಜಿಲ್ಲೆಯ ಪ್ರಭಾವಿ ಕಾಂಗ್ರೆಸ್ ನಾಯಕ ಪ್ರಮೋದ್ ಮಧ್ವರಾಜ್ ಕಾಂಗ್ರೆಸ್ ಪಕ್ಷಕ್ಕೆ ರಾಜೀನಾಮೆ ಸಲ್ಲಿಸಿದ್ದು ಬಿಜೆಪಿ ಪಾಳಯಕ್ಕೆ ಹಾರಲು ಮುಂದಾಗಿದ್ದಾರೆ. 

ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಅವರಿಗೆ ರಾಜೀನಾಮೆ ಪತ್ರ ರವಾನಿಸಿರುವ ಪ್ರಮೋದ್ ಮಧ್ವರಾಜ್, ಪಕ್ಷದ ಪ್ರಾಥಮಿಕ ಸದಸ್ಯತ್ವ ಮತ್ತು ಇತ್ತೀಚೆಗೆ ತನಗೆ ನೀಡಿದ್ದ ಉಪಾಧ್ಯಕ್ಷ ಹುದ್ದೆಗೆ ರಾಜೀನಾಮೆ ನೀಡಿದ್ದಾರೆ. ಉಡುಪಿ ಭಾಗದಲ್ಲಿ ಕಳೆದ ಮೂರು ವರ್ಷಗಳಿಂದ ಪಕ್ಷದ ಚಟುವಟಿಕೆಯಲ್ಲಿ ಆಗುತ್ತಿರುವ ಬೆಳವಣಿಗೆ ಬಗ್ಗೆ ಈ ಹಿಂದೆಯೇ ತಮಗೆ ಮಾಹಿತಿ ನೀಡಿದ್ದೆ. ಪಕ್ಷದಲ್ಲಿನ ಇತ್ತೀಚಿನ ಬೆಳವಣಿಗೆ, ಗುಂಪುಗಾರಿಕೆಗಳು ಕೆಟ್ಟ ಅನುಭವಗಳನ್ನು ನೀಡಿದೆ. ನಿಮ್ಮ ಗಮನಕ್ಕೆ ತಂದರೂ ಸಮಸ್ಯೆ ನಿವಾರಿಸಲು ನೀವು ಗಮನ ಹರಿಸಿಲ್ಲ. ಇದರಿಂದ ನಿರಾಶೆಗೊಂಡಿದ್ದೇನೆ. ನೀವು ನನಗೆ ನೀಡಿರುವ ಉಪಾಧ್ಯಕ್ಷ ಹುದ್ದೆಯನ್ನು ಸ್ವೀಕರಿಸಿಲ್ಲ. ಇಂತಹ ಪರಿಸ್ಥಿತಿಯಲ್ಲಿ ಉಪಾಧ್ಯಕ್ಷ ಹುದ್ದೆ ನಿಭಾಯಿಸಲು ಸಾಧ್ಯವಿಲ್ಲ. ಹೀಗಾಗಿ ಪಕ್ಷವನ್ನು ತೊರೆಯಲು ನಿರ್ಧರಿಸಿದ್ದೇನೆ.  ಗೌರವಪೂರ್ವಕವಾಗಿ ಉಪಾಧ್ಯಕ್ಷ ಹುದ್ದೆಯನ್ನು ನಿರಾಕರಿಸುತ್ತಿದ್ದೇನೆ. ಇದರ ಜೊತೆಗೆ ಪಕ್ಷದ ಪ್ರಾಥಮಿಕ ಸದಸ್ಯತ್ವಕ್ಕೂ ರಾಜಿನಾಮೆ ನೀಡುತ್ತಿದ್ದೇನೆ ಎಂದು ರಾಜಿನಾಮೆ ಪತ್ರದಲ್ಲಿ ಪ್ರಮೋದ್ ಮಧ್ವರಾಜ್ ಹೇಳಿದ್ದಾರೆ. 

ಪ್ರಮೋದ್ ರಾಜಿನಾಮೆ ಜೊತೆಗೆ ಅವರು ಶೀಘ್ರದಲ್ಲೇ ಬಿಜೆಪಿ ಸೇರುವುದು ಖಚಿತವಾಗಿದ್ದು, ಸದ್ಯದಲ್ಲೇ ವರಿಷ್ಠರ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಯಾಗಲಿದ್ದಾರೆ ಎನ್ನಲಾಗುತ್ತಿದೆ. ಒಂದು ದಿನದ ಹಿಂದಷ್ಟೇ ಉಡುಪಿ ಬಿಜೆಪಿ ಘಟಕದ ನಾಯಕರು ಪ್ರಮೋದ್ ಮಧ್ವರಾಜ್ ಪಕ್ಷಕ್ಕೆ ಬರುವುದಕ್ಕೆ ನಮ್ಮ ಆಕ್ಷೇಪವಿಲ್ಲ ಎಂದಿದ್ದರು. ಇದೇ ವೇಳೆಗೆ, ಪ್ರಮೋದ್ ಮಧ್ವರಾಜ್ ಮುಂದಿನ ಚುನಾವಣೆಯಲ್ಲಿ ಕಾಪು ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯಾಗಲಿದ್ದಾರೆ ಎನ್ನುವ ಸುದ್ದಿ ಹಬ್ಬಿತ್ತು. ವರ್ಷದ ಹಿಂದೆಯೇ ಪ್ರಮೋದ್ ಕಾಂಗ್ರೆಸ್ ತೊರೆಯುತ್ತಾರೆಂಬ ಸುದ್ದಿಗಳಿದ್ದವು.‌ ಆನಂತರ ಡಿಕೆಶಿ ಅವರೇ ಕರೆ ಮಾಡಿ ಮನವೊಲಿಸಿ, ಪಕ್ಷದಲ್ಲಿ ಉಳಿಯುವಂತೆ ಮಾಡಿದ್ದರು. ಉಪಾಧ್ಯಕ್ಷ ಸ್ಥಾನವನ್ನೂ ನೀಡಿದ್ದರು.

Former minister Pramod Madhwaraj on Saturday May 7, joined the Bharatiya Janata Party (BJP) within hours of filing his resignation letter to the Congress party.