ಪೊಳಲಿ ಉತ್ಸವಕ್ಕೆ ಮುಖ್ಯಮಂತ್ರಿ ; ಜಿಟಿ ಜಿಟಿ ಮಳೆಯ ನಡುವೆ ಟ್ರಾಫಿಕ್ ಕಿರಿಕ್, ರಸ್ತೆಯಲ್ಲಿ ಸಿಕ್ಕಿಬಿದ್ದ ಸಾರ್ವಜನಿಕರ ಹಿಡಿಶಾಪ !

13-04-22 08:56 pm       Mangalore Correspondent   ಕರಾವಳಿ

ಸಿಎಂ ಬಸವರಾಜ ಬೊಮ್ಮಾಯಿ ಮಂಗಳವಾರ ಮಂಗಳೂರಿಗೆ ಬಂದಿದ್ದರು. ಚುನಾವಣೆ ಸಿದ್ಧತೆ ಹಿನ್ನೆಲೆಯಲ್ಲಿ ಬಿಜೆಪಿ ಪ್ರಮುಖರ ಸಭೆ ನಡೆಸಲು ಮುಖ್ಯಮಂತ್ರಿ ಬಂದಿದ್ದರು. ಇದೇ ವೇಳೆ, ಸಂಜೆ ಸಭೆ ಮುಗಿಸಿದ ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ಸ್ಥಳೀಯ ಬಿಜೆಪಿ ಪ್ರಮುಖರು ಕರಾವಳಿಯ ಪ್ರಸಿದ್ಧ ಪೊಳಲಿ ರಾಜರಾಜೇಶ್ವರಿ ದೇವಸ್ಥಾನಕ್ಕೆ ಕರೆದೊಯ್ದಿದ್ದಾರೆ.

ಮಂಗಳೂರು, ಎ.13: ಸಿಎಂ ಬಸವರಾಜ ಬೊಮ್ಮಾಯಿ ಮಂಗಳವಾರ ಮಂಗಳೂರಿಗೆ ಬಂದಿದ್ದರು. ಚುನಾವಣೆ ಸಿದ್ಧತೆ ಹಿನ್ನೆಲೆಯಲ್ಲಿ ಬಿಜೆಪಿ ಪ್ರಮುಖರ ಸಭೆ ನಡೆಸಲು ಮುಖ್ಯಮಂತ್ರಿ ಬಂದಿದ್ದರು. ಇದೇ ವೇಳೆ, ಸಂಜೆ ಸಭೆ ಮುಗಿಸಿದ ಮುಖ್ಯಮಂತ್ರಿ ಬೊಮ್ಮಾಯಿ ಅವರನ್ನು ಸ್ಥಳೀಯ ಬಿಜೆಪಿ ಪ್ರಮುಖರು ಕರಾವಳಿಯ ಪ್ರಸಿದ್ಧ ಪೊಳಲಿ ರಾಜರಾಜೇಶ್ವರಿ ದೇವಸ್ಥಾನಕ್ಕೆ ಕರೆದೊಯ್ದಿದ್ದಾರೆ.

ಪೊಳಲಿ ಉತ್ಸವದ ಕೊನೆಯ ದಿನದ ರಥೋತ್ಸವ ಮತ್ತು ಕೊನೆಯ ಚೆಂಡು ಉತ್ಸವ ಇದ್ದುದರಿಂದ ಭಾರೀ ಜನಸಂದಣಿ ಇತ್ತು. ಸಿಎಂ ಆಗಮನದ ಹಿನ್ನೆಲೆಯಲ್ಲಿ ಮೊದಲೇ ಕಿರಿದಾದ ರಸ್ತೆಯನ್ನು ಪೂರ್ತಿ ಬಂದ್ ಮಾಡಲಾಗಿತ್ತು. ಇದರಿಂದ ಜಿಟಿ ಜಿಟಿ ಮಳೆಯ ನಡುವೆ ಜನರು ತೀವ್ರ ಕಿರಿಕಿರಿ ಅನುಭವಿಸಿದ್ದಾರೆ. ಕೈಕಂಬದ ಪೊಳಲಿ ದ್ವಾರದಿಂದ ಅಡ್ಡೂರು- ಪೊಳಲಿ ಉದ್ದಕ್ಕೂ, ಇನ್ನೊಂದು ಕಡೆಯಿಂದ ಪೊಳಲಿ- ಬಿಸಿ ರೋಡ್ ರಸ್ತೆಯುದ್ದಕ್ಕೂ ವಾಹನಗಳು ಸಾಲುಗಟ್ಟಿದ್ದವು.

ಪೊಳಲಿ ಜಾತ್ರೆಯ ಕೊನೆಯ ದಿನದ ಉತ್ಸವಕ್ಕೆ ಸಾವಿರಾರು ಜನರು ಆಗಮಿಸುತ್ತಾರೆ. ಒಂದು ತಿಂಗಳ ಉತ್ಸವ ಆಗಿದ್ದರೂ, ಕಡೆ ಚೆಂಡು ಎನ್ನುವ ವಿಶೇಷತೆ ಇರುವುದರಿಂದ ಜನ ಸಂದಣಿಯೂ ಹೆಚ್ಚಿರುತ್ತದೆ. ಆದರೆ ಮುಖ್ಯಮಂತ್ರಿಯನ್ನೂ ಇದರ ಮಧ್ಯೆ ಕರೆತಂದಿದ್ದರಿಂದ ಸಾರ್ವಜನಿಕರು ತೀವ್ರ ಪರದಾಟ ಅನುಭವಿಸಿದ್ದಾರೆ. ಈ ಬಗ್ಗೆ ಸಾಮಾಜಿಕ ಕಾರ್ಯಕರ್ತ ಸೌರಜ್ ಮಂಗಳೂರು ವಿಡಿಯೋ ಮಾಡಿ ಫೇಸ್ಬುಕ್ ನಲ್ಲಿ ಹಂಚಿಕೊಂಡಿದ್ದಾರೆ. ಉತ್ಸವದ ಸಮಯದಲ್ಲಿ ಮುಖ್ಯಮಂತ್ರಿಯನ್ನು ಕರೆತಂದು ಸಾರ್ವಜನಿಕರಿಗೆ ತೊಂದರೆ ಉಂಟು ಮಾಡಿದ್ದಾರೆ. ಸ್ಥಳೀಯ ಮುಖಂಡರು ಜನರ ಬಗ್ಗೆ ಕಾಳಜಿ ವಹಿಸಬೇಕಿತ್ತಲ್ಲಾ.. ಹೀಗೆ ರಾತ್ರಿ ಸಮಯದಲ್ಲಿ ಮುಖ್ಯಮಂತ್ರಿಯನ್ನು ಕರೆತಂದು ಜನರಿಗೆ ತೊಂದರೆ ಮಾಡಬೇಕಿತ್ತಾ.. ಇವರ ದಿಸೆಯಿಂದಾಗಿ ಎರಡು ಗಂಟೆ ಕಾಲ ರಸ್ತೆ ಮಧ್ಯೆ ಕಾಯುವಂತಾಗಿದೆ ಎಂದು ಪ್ರಶ್ನೆ ಮಾಡಿದ್ದಾರೆ.

ಸೌರಜ್ ಪ್ರಸ್ತಾಪಿಸಿದ ಪ್ರಶ್ನೆಗಳಿಗೆ ಬಹಳಷ್ಟು ಪ್ರಶಂಸೆ ಸಿಕ್ಕಿದ್ದು, ಜನರು ಹಿಡಿಶಾಪ ಹಾಕಿದ್ದಾರೆ. ಕೆಲವರು ಸೌರಜ್ ಬಳಸಿದ ಭಾಷೆಯ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಬೊಮ್ಮಾಯಿಯನ್ನು ಏಕವಚನದಲ್ಲಿ ನಿಂದಿಸಿದ ಬಗ್ಗೆ ಪ್ರಶ್ನೆ ಮಾಡಿದ್ದಾರೆ. ಇನ್ನು ಕೆಲವರು ನಾಡಿನ ದೊರೆಯಾದ್ರೂ, ಸಾಮಾನ್ಯ ಜನರಾದ್ರೂ ಒಂದೇ.. ರಾತ್ರಿ ವೇಳೆ ಇಂತಹ ಸಂಕೀರ್ಣ ಜಾಗಕ್ಕೆ ಬಂದು ಟ್ರಾಫಿಕ್ ಅವ್ಯವಸ್ಥೆ ಮಾಡಬೇಕಿತ್ತಾ ಎಂದು ಕಾಲೆಳೆದಿದ್ದಾರೆ.

Mangalore Cm Bommai visit to Polali temple creates havoc among public as traffic blocked widely.