ನಮ್ಮ ದೇಶದ ಹೀರೋಗಳನ್ನು ಶಿಕ್ಷಣದಲ್ಲಿ ಜೀರೋ ಮಾಡಿದ್ದಾರೆ, ಅಕ್ಬರ್, ಔರಂಗಜೇಬ, ಟಿಪ್ಪು ಮಾತ್ರ ಗ್ರೇಟ್ ಆಗಿದ್ದಾರೆ, ಅದನ್ನು ಸರಿಪಡಿಸಿದರೆ ತಪ್ಪೇನು ? 

30-03-22 03:05 pm       Mangalore Correspondent   ಕರಾವಳಿ

ದೇಶಕ್ಕೆ ಅನ್ಯಾಯ ಮಾಡಿದ್ದವರನ್ನೇ ಪಠ್ಯ ಪುಸ್ತಕದಲ್ಲಿ ಮಕ್ಕಳಿಗೆ ಬೋಧಿಸಲಾಗಿದೆ.‌ ಅಕ್ಬರ್ ದಿ ಗ್ರೇಟ್, ಔರಂಗಜೇಬನನ್ನು ಟೈಗರ್ ಅಂತ ಹಿಂದಿನಿಂದಲೂ ಹೇಳಿಕೊಟ್ಟಿದ್ದಾರೆ.

ಮಂಗಳೂರು, ಮಾ.30: ದೇಶಕ್ಕೆ ಅನ್ಯಾಯ ಮಾಡಿದ್ದವರನ್ನೇ ಪಠ್ಯ ಪುಸ್ತಕದಲ್ಲಿ ಮಕ್ಕಳಿಗೆ ಬೋಧಿಸಲಾಗಿದೆ.‌ ಅಕ್ಬರ್ ದಿ ಗ್ರೇಟ್, ಔರಂಗಜೇಬನನ್ನು ಟೈಗರ್ ಅಂತ ಹಿಂದಿನಿಂದಲೂ ಹೇಳಿಕೊಟ್ಟಿದ್ದಾರೆ. ನಮ್ಮ ದೇಶದ ಹೀರೋಗಳನ್ನು ಶಿಕ್ಷಣ ವ್ಯವಸ್ಥೆ ಜೀರೋ ಮಾಡಿಟ್ಟಿದೆ. ಅವರನ್ನು ಹೀರೋ ಮಾಡುವ ಕೆಲಸವನ್ನು ಈಗ ಮಾಡಲಾಗುತ್ತಿದೆ ಎಂದು ಆರೆಸ್ಸೆಸ್ ಮುಖಂಡ ಕಲ್ಲಡ್ಕ ಪ್ರಭಾಕರ ಭಟ್ ಹೇಳಿದ್ದಾರೆ. 

ಪಠ್ಯದಲ್ಲಿ ಟಿಪ್ಪು ವೈಭವೀಕರಣ ಕೈಬಿಡುವ ಬಗ್ಗೆ ಕೇಳಿದ ಪ್ರಶ್ನೆಗೆ, ನಮ್ಮ ಶಾಲೆಯ ಪಠ್ಯ ಪುಸ್ತಕಗಳಲ್ಲಿ ದೇಶ ವಿರೋಧಿಗಳನ್ನೇ ವ್ಯವಸ್ಥಿತವಾಗಿ ವೈಭವೀಕರಿಸಿಕೊಂಡು ಬರಲಾಗಿದೆ.‌ ಇದನ್ನು ಸರಿಪಡಿಸುವ ಬಗ್ಗೆ ಸರ್ಕಾರ ಯೋಚನೆ ಮಾಡುತ್ತಿರುವುದು ಅಭಿನಂದನೀಯ.‌ ಟಿಪ್ಪು ಸುಲ್ತಾನ್ ಬಗ್ಗೆ ಪಾಠ ನಾವ್ಯಾಕೆ ಕೇಳಬೇಕು.‌ ಹಿಂದು ಸಮಾಜಕ್ಕೆ ಅನ್ಯಾಯ ಮಾಡಿದವನ, ಸಾವಿರ ಸಾವಿರ ಹಿಂದೂಗಳನ್ನು ಕ್ರಿಶ್ಚಿಯನ್ನರನ್ನ ಕೊಲೆ ಮಾಡಿದವನ ಬಗ್ಗೆ ಯಾಕೆ ಓದಬೇಕು ? ಭಾರತದ ಬಗ್ಗೆ ಚಿಂತನೆ ಮಾಡುವವನು ಮಾತ್ರ ಚಿಂತಕ‌.‌ ಚೀನಾದ ಬಗ್ಗೆ ಚಿಂತನೆ ಮಾಡುವವನು, ಅಮೆರಿಕದ ಬಗ್ಗೆ ಚಿಂತನೆ ಮಾಡುವನು ಚಿಂತಕ ಹೇಗೆ ಆಗುತ್ತಾನೆ ಎಂದು ಕಲ್ಲಡ್ಕ ಭಟ್ ಪ್ರಶ್ನೆ ಎತ್ತಿದ್ದಾರೆ. 

ಕ್ಯಾಂಪಸ್ ಫ್ರಂಟ್ ಸಂಘಟನೆ ಕಾರ್ಯಕರ್ತರು ತಮ್ಮ ವಿರುದ್ಧ ಪ್ರತಿಭಟನೆ ಮಾಡಿದ್ದಕ್ಕೆ ಧನ್ಯವಾದ ಹೇಳಿದ ಪ್ರಭಾಕರ ಭಟ್, ರಾಷ್ಟ್ರದ ಹಿತಕ್ಕೋಸ್ಕರ ಕೆಲಸ ಮಾಡೋರು ಕೆಲಸ ಮಾಡುತ್ತ ಹೋಗ್ತಿದ್ದಾರೆ.‌ ಕೆಲವರು ವಿರೋಧ ಮಾಡ್ತಾರೆ, ಮಾಡ್ತಾನೆ ಇರ್ತಾರೆ. ಈ ದೇಶದಲ್ಲಿ ಚೆನ್ನಾಗಿ ಬದುಕ ಬೇಕು ಅಂತಿದ್ರೆ, ಸಾಮರಸ್ಯದ ಜೀವನ ನಡೆಸಬೇಕು ಅಂತಿದ್ದರೆ ದೇಶಕ್ಕೋಸ್ಕರ ಬದುಕ ಬೇಕು.  ಇಲ್ಲ ಅಂತಾದ್ರೆ ಎಲ್ಲಿ ಬದುಕ ಬೇಕೋ ಅಲ್ಲಿಗೇ ಹೋಗಿ ಬದುಕಿಕೊಳ್ಳಿ. ಇಲ್ಲಿ ಹಿಂದುಗಳ ಜೊತೆಯಲ್ಲಿ ಎಲ್ಲರೂ ಕೂಡಿಕೊಂಡು ಬದುಕುವ ಪ್ರಯತ್ನ ಮಾಡಬೇಕು. ಹೊರಗಿಂದ ಬಂದವರು, ಇಲ್ಲಿಯೇ ಇದ್ದವರು ಎಲ್ಲರೂ ಒಟ್ಟಿಗೆ ಬದುಕುವ ಪ್ರಯತ್ನ ಮಾಡಬೇಕು.‌ ಇಡೀ ಜಗತ್ತಿನಲ್ಲಿ ಮೋಸ್ಟ್ ಸೆಕ್ಯುಲರ್ ಗಳೆಂದರೆ ಅದು ಹಿಂದೂಗಳು ಮಾತ್ರ. ಅತಿ ಹೆಚ್ಚು ಉದಾರವಾದಿಗಳು ಅಂದರೆ ಹಿಂದುಗಳು. ಅವರ ಜೊತೆಗೇ ಬದುಕಲು ಆಗಲ್ಲ ಅಂದ್ರೆ ಏನು ಹೇಳಬೇಕು ಎಂದರು. 

ಹಿಂದು ದೇಗುಲಗಳ ಆವರಣದಲ್ಲಿ ಹಿಂದುಯೇತರರಿಗೆ ವ್ಯಾಪಾರ ನಿಷೇಧ ಬಗ್ಗೆ ಕೇಳಿದ ಪ್ರಶ್ನೆಗೆ, ಇಂತಹ ನೀತಿಯನ್ನು ಜಾರಿಗೆ ತಂದಿದ್ದೇ ಕಾಂಗ್ರೆಸ್ ನವರು. ಅವರಿಗೆ ಈಗ ಗೊತ್ತಿಲ್ಲ ಪಾಪ.‌ ಈವರೆಗೆ ಹಿಂದುಗಳು ಉದಾರಿಗಳಾಗೇ ಇದ್ದರು. ಯಾವಾಗ ಹಿಜಾಬ್ ತೀರ್ಪಿನ ವಿರುದ್ಧ ರಾಜ್ಯ ಬಂದ್ ಕರೆ ಕೊಟ್ಟಿದ್ದರೋ ಅದು ತಪ್ಪು.‌ ಅದು ಶುದ್ಧ ಸಂವಿಧಾನ ವಿರೋಧಿ ನಿಲುವು.‌ ಈ ಹಿನ್ನೆಲೆಯಲ್ಲಿ ಹಿಂದು ಎಚ್ಚತ್ತುಕೊಂಡಿದ್ದಾನೆ, ಅದಕ್ಕಾಗಿ ಬಹಿಷ್ಕಾರದ ಅಸ್ತ್ರ ಹಿಡಿದಿದ್ದಾನೆ.‌ ದೇವಾಲಯ, ಜಾತ್ರೆ ಸಂದರ್ಭದಲ್ಲಿ 100 ಮೀ ವ್ಯಾಪ್ತಿಯಲ್ಲಿ ಮುಸ್ಲಿಂ ವ್ಯಾಪಾರಿಗಳಿಗೆ ವ್ಯಾಪಾರ ಮಾಡಲು ಬಿಡುವುದಿಲ್ಲ ಎಂದು ಪ್ರಭಾಕರ ಭಟ್ ಹೇಳಿದರು.‌

Mangalore Our Muslim national heroes are zero in education taunts Kalladka Prabhakar Bhat.