ವಿನಾಯಕ ಬಾಳಿಗಾ ಕೊಲೆ ಪ್ರಕರಣ ತನಿಖೆಗೆ ಎಸ್ಐಟಿ ರಚಿಸಿ ; ಆರು ವರ್ಷ ಸಂದರೂ ನ್ಯಾಯ ಸಿಕ್ಕಿಲ್ಲ ಯಾಕೆ ? ಬೃಂದಾ ಕಾರಟ್ ಪ್ರಶ್ನೆ

21-03-22 12:19 pm       Mangalore Correspondent   ಕರಾವಳಿ

ಆರ್ಟಿಐ ಕಾರ್ಯಕರ್ತ ವಿನಾಯಕ ಬಾಳಿಗಾ ಕೊಲೆ ಪ್ರಕರಣಕ್ಕೆ ಮಾ.21ಕ್ಕೆ ಆರು ವರ್ಷ ಸಂದಿದ್ದು, ಇದರ ಪ್ರಯುಕ್ತ ಸಿಪಿಎಂ ಪಕ್ಷದ ಹಿರಿಯ ನಾಯಕಿ, ಪೋಲಿಟ್ ಬ್ಯೂರೋ ಸದಸ್ಯೆ ಬೃಂದಾ ಕಾರಟ್ ಮಂಗಳೂರಿನ ಕೊಡಿಯಾಲ್ ಬೈಲಿನಲ್ಲಿರುವ ವಿನಾಯಕ ಬಾಳಿಗಾ ಮನೆಗೆ ಭೇಟಿ ನೀಡಿದ್ದಾರೆ.

ಮಂಗಳೂರು, ಮಾ.21: ಆರ್ಟಿಐ ಕಾರ್ಯಕರ್ತ ವಿನಾಯಕ ಬಾಳಿಗಾ ಕೊಲೆ ಪ್ರಕರಣಕ್ಕೆ ಮಾ.21ಕ್ಕೆ ಆರು ವರ್ಷ ಸಂದಿದ್ದು, ಇದರ ಪ್ರಯುಕ್ತ ಸಿಪಿಎಂ ಪಕ್ಷದ ಹಿರಿಯ ನಾಯಕಿ, ಪೋಲಿಟ್ ಬ್ಯೂರೋ ಸದಸ್ಯೆ ಬೃಂದಾ ಕಾರಟ್ ಮಂಗಳೂರಿನ ಕೊಡಿಯಾಲ್ ಬೈಲಿನಲ್ಲಿರುವ ವಿನಾಯಕ ಬಾಳಿಗಾ ಮನೆಗೆ ಭೇಟಿ ನೀಡಿದ್ದಾರೆ. ಮನೆಯಲ್ಲಿ ಉಳಿದಿರುವ ವಿನಾಯಕ ಬಾಳಿಗಾ ಸೋದರಿಯರಿಗೆ ಸಾಂತ್ವನ ಹೇಳಿದ್ದಾರೆ.

ರಥಬೀದಿಯ ವೆಂಕಟರಮಣ ದೇವಸ್ಥಾನದ ಭ್ರಷ್ಟಾಚಾರದ ವಿಚಾರದಲ್ಲಿ ಬಾಳಿಗಾರನ್ನು ಕೊಲೆ ಮಾಡಲಾಗಿತ್ತು. ಬಿಜೆಪಿ ಬೂತ್ ಕಮಿಟಿ ಸದಸ್ಯನಾಗಿದ್ದ ವಿನಾಯಕ ಬಾಳಿಗಾರನ್ನು ಬಿಜೆಪಿಯಲ್ಲಿದ್ದವರೇ ಕೊಲೆ ಮಾಡಿದ್ದರು. ಆನಂತರ, ಪಕ್ಷದ ನಾಯಕರ ಕೃಪೆಯಿಂದಲೇ ಆರೋಪಿಗಳು ಜೈಲಿನಿಂದ ಹೊರಬಂದು ರಾಜಾರೋಷ ತಿರುಗಾಡುತ್ತಿದ್ದಾರೆ. ಕೊಲೆಯಾಗಿ ಆರು ವರ್ಷ ಆದರೂ ಕುಟುಂಬಕ್ಕೆ ನ್ಯಾಯ ಸಿಕ್ಕಿಲ್ಲ ಎಂದು ಬೃಂದಾ ಕಾರಟ್ ಅವರಿಗೆ, ಬಾಳಿಗಾ ಮನೆಯಲ್ಲಿ ಉಪಸ್ಥಿತರಿದ್ದ ವಿಚಾರವಾದಿ ನರೇಂದ್ರ ಕಾಮತ್ ಮನವರಿಕೆ ಮಾಡಿದರು. ಬಾಳಿಗಾ ಕೊಲೆ ಸಂದರ್ಭದಲ್ಲಿ ವೃದ್ಧಾಪ್ಯದಲ್ಲಿದ್ದ ತಂದೆ ಮತ್ತು ತಾಯಿ ತೀರಿಕೊಂಡಿದ್ದಾರೆ. ಈಗ ಇಬ್ಬರು ಸೋದರಿಯರು ಮಾತ್ರ ಇದ್ದು, ಅಳುತ್ತಾ ತಮಗೆದುರಾದ ದುರಂತ ಸ್ಥಿತಿಯ ಬಗ್ಗೆ ಬೃಂದಾ ಕಾರಟ್ ಬಳಿ ಅಲವತ್ತುಕೊಂಡಿದ್ದಾರೆ.

ಇದೇ ವೇಳೆ, ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ ಬೃಂದಾ ಕಾರಟ್, ದೇವಸ್ಥಾನದ ಭ್ರಷ್ಟಾಚಾರದ ಬಗ್ಗೆ ಹೋರಾಟ ಮಾಡಿದ್ದಕ್ಕಾಗಿ ಭೀಕರವಾಗಿ ಕೊಲೆಯಾಗಿದ್ದ ವಿನಾಯಕ ಬಾಳಿಗಾ ಕುಟುಂಬದ ಪರವಾಗಿ ನಾವು ನಿಲ್ಲುತ್ತೇವೆ. ಪ್ರಕರಣದಲ್ಲಿ ಪೊಲೀಸರು ತನಿಖೆ ನಡೆಸಿ, ಆರೋಪಿಗಳು ಯಾರೆಂದು ಗುರುತಿಸಿದರೂ ಯಾಕೆ ನ್ಯಾಯ ಸಿಕ್ಕಿಲ್ಲ ಅನ್ನುವುದು ಪ್ರಶ್ನೆ. ಆರೋಪಿಗಳನ್ನು ಕರ್ನಾಟಕದ ಆಡಳಿತದ ಪಕ್ಷದ ನಾಯಕರೇ ಬೆಂಬಲಿಸುತ್ತಿದ್ದಾರೆ ಎನ್ನುವುದು ತಿಳಿದಿದೆ. ಈ ಬಗ್ಗೆ ಸಮಗ್ರ ತನಿಖೆ ನಡೆಸುವುದಕ್ಕಾಗಿ ಎಸ್ಐಟಿ ನೇಮಕ ಆಗಬೇಕು. ಅದಕ್ಕಾಗಿ ಬೆಂಗಳೂರಿನಲ್ಲಿ ರಾಜ್ಯ ಸರಕಾರಕ್ಕೆ ಬಿಸಿ ಮುಟ್ಟುವ ರೀತಿ ಧ್ವನಿ ಎತ್ತಲಿದ್ದೇವೆ. ಪ್ರಧಾನಿ ಮೋದಿ ಜೊತೆಗೆ ಫೋಟೋ ತೆಗೆಸಿಕೊಂಡವರು ಇದರಲ್ಲಿ ಆರೋಪಿಗಳಾಗಿದ್ದು ಅದಕ್ಕಾಗಿಯೇ ಬಿಜೆಪಿ ನಾಯಕರು ಆತನಿಗೆ ಬೆಂಬಲ ನೀಡುತ್ತಿದ್ದಾರೆಯೇ ಎನ್ನುವುದು ಪ್ರಶ್ನೆಯಾಗಿದೆ ಎಂದು ಹೇಳಿದ್ದಾರೆ.

ಈ ಸಂದರ್ಭದಲ್ಲಿ ಡಿವೈಎಫ್ಐ ರಾಜ್ಯಾಧ್ಯಕ್ಷ ಮುನೀರ್ ಕಾಟಿಪಳ್ಳ, ಹಿರಿಯ ನಾಯಕ ಯಾದವ ಶೆಟ್ಟಿ, ವಿಚಾರವಾದಿ ನರೇಂದ್ರ ಕಾಮತ್, ವಕೀಲೆ ಆಶಾ ನಾಯಕ್, ಸುನಿಲ್ ಕುಮಾರ್ ಬಜಾಲ್ ಮತ್ತಿತರರು ಇದ್ದರು. ವಿನಾಯಕ ಬಾಳಿಗಾ ಫೋಟೋಗೆ ಬೃಂದಾ ಕಾರಟ್ ಹೂಹಾಕಿ ನಮನ ಸಲ್ಲಿಸಿದರು.

Rajya Sabha member of  Communist Party Brinda Karat visits house of RTI activist Vinayaka Baliga in Mangalore who was murdered. Vinayak Baliga was killed near Kodialbail here in the year 2016. The personnel of Barke police station in the city had arrested three persons including Naresh M Shenoy, who is an entrepreneur and identified as the prime accused.