ಮಗು ಅದಲು –ಬದಲು ಆರೋಪ ; ಲೇಡಿಗೋಶನ್ ಆಸ್ಪತ್ರೆ ವಿರುದ್ಧ ನೀಡಿದ್ದ ದೂರು ಉಲ್ಟಾ! ದೂರುದಾರನೇ ತಂದೆಯೆಂದು ಡಿಎನ್ಎ ವರದಿ! ಪೊಲೀಸರಿಂದ ಬಿ ರಿಪೋರ್ಟ್  

19-03-22 11:38 am       Mangalore Correspondent   ಕರಾವಳಿ

ನಗರದ ಲೇಡಿಗೋಷನ್ ಆಸ್ಪತ್ರೆಯಲ್ಲಿ ಮಗು ಅದಲು ಬದಲಾಗಿದೆ ಎಂದು ಹೇಳಿ ಆಸ್ಪತ್ರೆಯ ಸಿಬಂದಿ ವಿರುದ್ಧ ಬಂದರು ಠಾಣೆಗೆ ದೂರು ನೀಡಿದ್ದು ಉಲ್ಟಾ ಹೊಡೆದಿದೆ.

ಮಂಗಳೂರು, ಮಾ.19: ನಗರದ ಲೇಡಿಗೋಷನ್ ಆಸ್ಪತ್ರೆಯಲ್ಲಿ ಮಗು ಅದಲು ಬದಲಾಗಿದೆ ಎಂದು ಹೇಳಿ ಆಸ್ಪತ್ರೆಯ ಸಿಬಂದಿ ವಿರುದ್ಧ ಬಂದರು ಠಾಣೆಗೆ ದೂರು ನೀಡಿದ್ದು ಉಲ್ಟಾ ಹೊಡೆದಿದೆ. ಘಟನೆ ಬಗ್ಗೆ ತನಿಖೆ ನಡೆಸಿದ ಪೊಲೀಸರು, ಪ್ರಕರಣದಲ್ಲಿ ದೂರುದಾರ ವ್ಯಕ್ತಿಯೇ ಮಗುವಿನ ತಂದೆಯಾಗಿದ್ದು, ದೂರಿನಲ್ಲಿ ಹುರುಳಿಲ್ಲ ಎಂದು ಬಿ ರಿಪೋರ್ಟ್ ನೀಡಿದ್ದಾರೆ.

2021ರ ಸೆಪ್ಟಂಬರ್ 27ರಂದು ಕುಂದಾಪುರದ ಮಹಿಳೆ ಲೇಡಿಗೋಷನ್ ಆಸ್ಪತ್ರೆಯಲ್ಲಿ ಮಗುವಿನ ಜನ್ಮ ನೀಡಿದ್ದರು. ಮಗುವಿಗೆ ಸಮಸ್ಯೆ ಇದ್ದುದರಿಂದ ಅದನ್ನು ತೀವ್ರ ನಿಗಾ ಘಟಕದಲ್ಲಿ ಇರಿಸಲಾಗಿತ್ತು. ಎರಡು ವಾರ ಕಳೆದರೂ, ಮಗುವಿನ ಸ್ಥಿತಿ ಸುಧಾರಣೆ ಆಗದೇ ಇದ್ದುದರಿಂದ ಮಗುವಿನ ಹೆತ್ತವರು ಡಿಸ್ಚಾರ್ಜ್ ಮಾಡಿಸಿ ಬ್ರಹ್ಮಾವರದ ಖಾಸಗಿ ಆಸ್ಪತ್ರೆಗೆ ಕರೆದೊಯ್ದಿದ್ದರು. ಅಲ್ಲಿ ನೋಡಿದಾಗ, ಮಗು ಗಂಡಾಗಿರುವುದು ಮತ್ತು ಮಲ ದ್ವಾರದಲ್ಲಿ ಸಮಸ್ಯೆ ಇರುವುದು ಕಂಡುಬಂದಿತ್ತು.

ಈ ವಿಚಾರ ತಿಳಿದ ಮಗುವಿನ ತಂದೆ ಮುಸ್ತಫಾ ಅವರು, ಲೇಡಿಗೋಷನ್ ಆಸ್ಪತ್ರೆಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದರು. ಹೆಣ್ಣು ಮಗುವೆಂದು ಜನನ ಪತ್ರದಲ್ಲಿ ದಾಖಲಿಸಿದ್ದು, ಈಗ ಅಸೌಖ್ಯ ಇರುವ ಗಂಡು ಮಗುವನ್ನು ನೀಡಿದ್ದಾರೆ. ಇದರ ಹಿಂದೆ ಸಿಬಂದಿ ಕೈವಾಡ ಇದ್ದು, ಉದ್ದೇಶಪೂರ್ವಕ ಮಗುವನ್ನು ಅದಲು ಬದಲು ಮಾಡಿದ್ದಾರೆ ಎಂದು ಬಂದರು ಠಾಣೆಯಲ್ಲಿ ದೂರು ನೀಡಿದ್ದರು. ಬಳಿಕ ಮಗುವನ್ನು ಲೇಡಿಗೋಷನ್ ಆಸ್ಪತ್ರೆಗೇ ಕರೆತಂದು ಬಿಟ್ಟಿದ್ದರು. ಈ ವೇಳೆ, ಆಸ್ಪತ್ರೆ ಸಿಬಂದಿ ಸಹಕರಿಸಿಲ್ಲ ಎಂಬ ನೆಪದಲ್ಲಿ ವಿಚಾರ ವಿವಾದಕ್ಕೆ ಕಾರಣವಾಗಿತ್ತು.

ಅದು ತನ್ನ ಮಗುವಲ್ಲ ಎಂದು ತಾಯಿ ಮತ್ತು ತಂದೆ ವಾದಿಸಿದ್ದರಿಂದ ಪೊಲೀಸರು ಡಿಎನ್ಐ ಟೆಸ್ಟ್ ನಡೆಸಲು ಕೋರ್ಟ್ ಅನುಮತಿ ಕೇಳಿದ್ದರು. ಆನಂತರ ಮಗು, ತಂದೆ ಮತ್ತು ತಾಯಿಯ ಡಿಎನ್ಎ ಟೆಸ್ಟ್ ನಡೆಸಲು ಹೈದರಾಬಾದಿನ ಪ್ರಯೋಗಾಲಯಕ್ಕೆ ಕಳುಹಿಸಿಕೊಡಲಾಗಿತ್ತು. ವರದಿಯಲ್ಲಿ ಮಗುವಿನ ತಂದೆ ಮುಸ್ತಫಾ ಅವರೇ ಆಗಿದ್ದು, ಅದೇ ಕುಟುಂಬದ ಮಗು ಎನ್ನುವುದು ಸಾಬೀತಾಗಿದೆ. ಇದರಿಂದಾಗಿ ಮುಸ್ತಫಾ ನೀಡಿರುವ ದೂರಿನಲ್ಲಿ ಸತ್ಯಾಂಶ ಇಲ್ಲವೆಂದು ಹೇಳಿ ಬಂದರು ಪೊಲೀಸರು ನ್ಯಾಯಾಲಯಕ್ಕೆ ಬಿ ರಿಪೋರ್ಟ್ ಸಲ್ಲಿಸಿದ್ದಾರೆ.

ಸಿಬಂದಿ ಎಡವಟ್ಟಿನಿಂದಾಗಿ ಜನನ ದಾಖಲೆಯಲ್ಲಿ ಹೆಣ್ಣು ಮಗುವೆಂದು ನಮೂದಾಗಿದ್ದು ಇಷ್ಟೆಲ್ಲ ರಾದ್ಧಾಂತಕ್ಕೆ ಕಾರಣವಾಗಿತ್ತು. ಮಗುವಿನ ತೂಕ 1.4 ಕೇಜಿ ಮಾತ್ರ ಇದ್ದು, ಉಸಿರಾಟದ ತೊಂದರೆಯೂ ಇತ್ತು. ಹೀಗಾಗಿ ವಿಶೇಷ ನಿಗಾ ಘಟಕದಲ್ಲಿ ಇರಿಸಲಾಗಿತ್ತು. ಬಳಿಕ ಅಕ್ಟೋಬರ್ 14ರಂದು ಮಗುವಿನ ಡಿಸ್ಚಾರ್ಜ್ ಮಾಡಿಸಿ, ಬ್ರಹ್ಮಾವರಕ್ಕೆ ಕರೆದೊಯ್ದಿದ್ದರೂ, ಅಲ್ಲಿಂದ ಎರಡು ದಿನಗಳಲ್ಲಿ ಮತ್ತೆ ಲೇಡಿಗೋಷನ್ ಆಸ್ಪತ್ರೆಗೆ ತಂದು ಸೇರಿಸಲಾಗಿತ್ತು. ನಿರಂತರ ಚಿಕಿತ್ಸೆ, ಆರೈಕೆಯ ನಡುವೆಯೂ 48 ದಿನಗಳ ಬಳಿಕ ಮಗು ಕೊನೆಯುಸಿರೆಳೆದಿತ್ತು.

In connection with a case registered in the city north police station last year, accusing the personnel of the Lady Goschen Hospital here of replacing the healthy female child with a sick male one, the personnel of the Bunder (north) police station filed 'B' report in the court on Wednesday March 16.The investigating officer has received the DNA testing report conducted in a laboratory in Hyderabad, which has found that complainant, Mustafa, himself had fathered the male child, which is now no more.