ರಸ್ತೆ ಅಪಘಾತದಲ್ಲಿ ಗಾಯಗೊಂಡಿದ್ದ  ಕದ್ರಿ ಎಎಸ್ಐ ಚಿಕಿತ್ಸೆ ಫಲಿಸದೆ ಸಾವು 

18-03-22 02:17 pm       Mangalore Correspondent   ಕರಾವಳಿ

ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಕದ್ರಿ ಸಂಚಾರಿ ಠಾಣೆಯ ಎಎಸ್ಐ ಸದಾಶಿವ(58) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಮಂಗಳೂರು, ಮಾ.18 : ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದ ಕದ್ರಿ ಸಂಚಾರಿ ಠಾಣೆಯ ಎಎಸ್ಐ ಸದಾಶಿವ(58) ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಸೋಮವಾರ ರಾತ್ರಿ ಹತ್ತು ಗಂಟೆಗೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಕದ್ರಿ ಕಡೆಯಿಂದ ಕೊಟ್ಟಾರ ಕಡೆಗೆ ಬೈಕಿನಲ್ಲಿ ತೆರಳುತ್ತಿದ್ದಾಗ, ಕುಂಟಿಕಾನದಲ್ಲಿ ಎದುರಿನಿಂದ ಸಾಗುತ್ತಿದ್ದ ರೋಡ್ ರೋಲರ್ ಗೆ ಡಿಕ್ಕಿಯಾಗಿದ್ದಾರೆ. ಇದರಿಂದ ತಲೆಯ ಭಾಗಕ್ಕೆ ತೀವ್ರ ಏಟು ತಗಲಿ ರಕ್ತಸ್ರಾವ ಆಗಿದ್ದ ಸದಾಶಿವ ಅವರನ್ನು ಕೂಡಲೇ ಎಜೆ ಎಸ್ಪತ್ರೆಗೆ ದಾಖಲಿಸಲಾಗಿತ್ತು.

ಅವರು ಚಿಕಿತ್ಸೆ ಫಲಕಾರಿಯಾಗದೆ ಶುಕ್ರವಾರ ಬೆಳಗ್ಗೆ ಮೃತಪಟ್ಟಿದ್ದಾರೆ. ಸದಾಶಿವ ಅವರು ಕಾವೂರಿನ ಪಂಜಿಮೊಗರಿನ ನಿವಾಸಿಯಾಗಿದ್ದು, ಪತ್ನಿ ಮತ್ತು ಪುತ್ರನನ್ನು ಅಗಲಿದ್ದಾರೆ. ಪುತ್ರ ಎನ್ಐಟಿಕೆ ಕಾಲೇಜಿನಲ್ಲಿ ಇಂಜಿನಿಯರಿಂಗ್ ಓದುತ್ತಿದ್ದಾನೆ. ಸದಾಶಿವ ಅವರು ಪೊಲೀಸ್ ಇಲಾಖೆಗೆ ಸೇರಿ 30 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ.

ರೋಡ್ ರೋಲರನ್ನು ರಾತ್ರಿ ವೇಳೆ ರಸ್ತೆಯಲ್ಲಿ ಸಂಚರಿಸಲು ಅವಕಾಶ ಇಲ್ಲ. ಅದರಲ್ಲಿ ಮೇಲ್ಭಾಗದಲ್ಲಿ ಮಾತ್ರ ಸಣ್ಣ ಲೈಟ್ ಇರುವುದರಿಂದ ವೇಗವಾಗಿ ಸಾಗುವ ವಾಹನಗಳಿಗೆ ಎದುರಿನ ವಾಹನ ಕಾಣುವುದಿಲ್ಲ. ಇದೇ ಕಾರಣದಿಂದ ಅಪಘಾತ ಆಗಿತ್ತು. ಈ ಬಗ್ಗೆ ಪ್ರಕರಣ ದಾಖಲಿಸಲಾಗುವುದು ಎಂದು ಸಂಚಾರ ವಿಭಾಗದ ಎಸಿಪಿ ನಟರಾಜ್ ತಿಳಿಸಿದ್ದಾರೆ.

Mangalore Kadri traffic ASI dies after accident. The deceased has been identified as Sadashiva.