ಕುಂದಾಪುರ ; ಹಿಜಾಬ್ ತೆಗೆದಿಟ್ಟು ತರಗತಿಗೆ ಬಂದ ವಿದ್ಯಾರ್ಥಿನಿಯರು, ಹಿಜಾಬ್ ನೆಪದಲ್ಲಿ 11 ಮಂದಿ ಗೈರು!

16-03-22 12:56 pm       Udupi Correspondent   ಕರಾವಳಿ

ಹಿಜಾಬ್ ವಿಚಾರದಲ್ಲಿ ತೀವ್ರ ಗದ್ದಲ ಎಬ್ಬಿಸಿದ್ದ ಕುಂದಾಪುರದ ಸರಕಾರಿ ಕಾಲೇಜಿನಲ್ಲಿ ಹೈಕೋರ್ಟ್ ಆದೇಶದ ಬಳಿಕ ಕಾಲೇಜು ಆರಂಭಗೊಂಡಿದ್ದು, 11 ಮಂದಿ ಕಾಲೇಜಿಗೆ ಗೈರಾಗಿದ್ದಾರೆ.

ಕುಂದಾಪುರ, ಮಾ.16 : ಹಿಜಾಬ್ ವಿಚಾರದಲ್ಲಿ ತೀವ್ರ ಗದ್ದಲ ಎಬ್ಬಿಸಿದ್ದ ಕುಂದಾಪುರದ ಸರಕಾರಿ ಕಾಲೇಜಿನಲ್ಲಿ ಹೈಕೋರ್ಟ್ ಆದೇಶದ ಬಳಿಕ ಕಾಲೇಜು ಆರಂಭಗೊಂಡಿದ್ದು, 11 ಮಂದಿ ಕಾಲೇಜಿಗೆ ಗೈರಾಗಿದ್ದಾರೆ.

ಹೈಕೋರ್ಟ್ ತೀರ್ಪಿನ ಹಿನ್ನೆಲೆಯಲ್ಲಿ ಮಾ.15ರ ಮಂಗಳವಾರ ಶಾಲೆ, ಕಾಲೇಜುಗಳಿಗೆ ರಜೆ ನೀಡಲಾಗಿತ್ತು. ಇದರ ಬೆನ್ನಲ್ಲೇ ಶಾಲೆ, ಕಾಲೇಜು ಆವರಣದಲ್ಲಿ ಹೆಚ್ಚುವರಿ ಪೊಲೀಸರನ್ನು ನಿಯೋಜನೆ ಮಾಡಲಾಗಿದೆ. ಜೊತೆಗೆ, 144 ಸೆಕ್ಷನ್ ಜಾರಿ ಮಾಡಲಾಗಿದೆ.

ಇಂದು ಬೆಳಗ್ಗೆ ಕಾಲೇಜಿಗೆ ವಿದ್ಯಾರ್ಥಿಗಳು ಆಗಮಿಸಿದ್ದು ಹಿಜಾಬ್ ಹಾಕಿದವರನ್ನು ತೆಗೆದು ಒಳಬರುವಂತೆ ಸೂಚಿಸಲು ಸಿಬಂದಿ ಮತ್ತು ಕಾಲೇಜಿನ ಉಪನ್ಯಾಸಕರು ತೊಡಗಿದ್ದರು. ಈ ವೇಳೆ, ಇಬ್ಬರು ಮುಸ್ಲಿಮ್ ವಿದ್ಯಾರ್ಥಿನಿಯರು ಹಿಜಾಬ್, ಬುರ್ಖಾ ಧರಿಸಿ ಕಾಲೇಜಿಗೆ ಬಂದಿದ್ದು, ಬಳಿಕ ಪ್ರತ್ಯೇಕ ಕೊಠಡಿಯಲ್ಲಿ ತೆರಳಿ ಹಿಜಾಬ್, ಬುರ್ಖಾ ತೆಗೆದಿಟ್ಟು ತರಗತಿಗೆ ತೆರಳಿದ್ದಾರೆ. ಕುಂದಾಪುರದಲ್ಲಿ ಹಿಜಾಬ್ ಸಂಘರ್ಷದ ಸಂದರ್ಭದಲ್ಲಿ 22 ವಿದ್ಯಾರ್ಥಿನಿಯರು ಕಾಲೇಜಿಗೆ ಬರದೆ ದೂರ ನಿಂತಿದ್ದರು. ಈಗ ಅವರ ಸಂಖ್ಯೆ ಕಡಿಮೆಯಾಗಿದ್ದು, ಹೈಕೋರ್ಟ್ ತೀರ್ಪನ್ನು ಪಾಲಿಸುವ ಸೂಚನೆ ನೀಡಿದ್ದಾರೆ.

ಉಡುಪಿಯ ಸರಕಾರಿ ಕಾಲೇಜಿನಲ್ಲಿ ಹಿಜಾಬ್ ಗಾಗಿ ಪಟ್ಟು ಹಿಡಿದು ಕಾಲೇಜಿನಿಂದ ಹೊರಗೆ ನಿಂತಿದ್ದ ಆರು ಮಂದಿ ವಿದ್ ವಿದ್ಯಾರ್ಥಿನಿಯರು ಕಾಲೇಜಿಗೆ ಬರದೆ ಶಿಕ್ಷಣದಿಂದ ದೂರ ನಿಂತಿದ್ದಾರೆ. ಈ ಪೈಕಿ ಒಬ್ಬಾಕೆಯ ಹೆಸರಲ್ಲಿ ಸುಪ್ರೀಂ ಕೋರ್ಟಿನಲ್ಲಿ ಅರ್ಜಿ ಸಲ್ಲಿಕೆಯಾಗಿದ್ದು, ತುರ್ತಾಗಿ ಅರ್ಜಿ ಪರಿಗಣಿಸಿ ಪರೀಕ್ಷೆ ಬರೆಯಲು ಅವಕಾಶ ನೀಡಬೇಕೆಂದು ಕೇಳಿಕೊಂಡಿದ್ದಾರೆ.

Students remove hijab and attend class in Kundapur, 11 others absent.