ಮಂಗಳೂರಿನ ಖಾದರ್ ಕ್ಷೇತ್ರದಲ್ಲೂ ಕಾಂಗ್ರೆಸಿನಲ್ಲಿ ಬಂಡಾಯ ; ಖಾದರ್ ಭ್ರಷ್ಟ, ಸ್ವಾರ್ಥಿ, ಆತನ ಜೊತೆ ರಾಜಕಾರಣಕ್ಕಿಂತ ಆತ್ಮಹತ್ಯೆ ಲೇಸು ಎಂದು ಜರೆದ ಮಾಜಿ ಬ್ಲಾಕ್ ಅಧ್ಯಕ್ಷ ಸಂತೋಷ್ ಶೆಟ್ಟಿ ! 

12-03-22 05:18 pm       Mangalore Correspondent   ಕರಾವಳಿ

ಮಾಜಿ ಸಚಿವ, ಯು.ಟಿ ಖಾದರ್‌ ಜೊತೆಗೆ ಬಹುಕಾಲದಿಂದ ಆಪ್ತನಾಗಿ ಗುರುತಿಸಿಕೊಂಡಿದ್ದ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ನಿಕಟಪೂರ್ವ ಅಧ್ಯಕ್ಷ ಸಂತೋಷ್ ಶೆಟ್ಟಿ ಅಸೈಗೋಳಿ, ಶಾಸಕ ಖಾದರ್ ವಿರುದ್ಧವೇ ಕಿಡಿಕಾರಿದ್ದಾರೆ.

Photo credits : Headline Karnataka

ಮಂಗಳೂರು, ಮಾ.12 : ಮಾಜಿ ಸಚಿವ, ಯು.ಟಿ ಖಾದರ್‌ ಜೊತೆಗೆ ಬಹುಕಾಲದಿಂದ ಆಪ್ತನಾಗಿ ಗುರುತಿಸಿಕೊಂಡಿದ್ದ ಉಳ್ಳಾಲ ಬ್ಲಾಕ್ ಕಾಂಗ್ರೆಸ್ ನಿಕಟಪೂರ್ವ ಅಧ್ಯಕ್ಷ ಸಂತೋಷ್ ಶೆಟ್ಟಿ ಅಸೈಗೋಳಿ, ಶಾಸಕ ಖಾದರ್ ವಿರುದ್ಧವೇ ಕಿಡಿಕಾರಿದ್ದಾರೆ. ಖಾದರ್ ಒಬ್ಬ ಭ್ರಷ್ಟ, ಕರುಣೆ ಇಲ್ಲದ ಸ್ವಾರ್ಥಿ ಮನುಷ್ಯ. ಆತನ ಜೊತೆ ರಾಜಕಾರಣ ಮಾಡುವುದಕ್ಕಿಂತ ಆತ್ಮಹತ್ಯೆ ಮಾಡಿಕೊಳ್ಳುವುದೇ ಲೇಸು ಎಂದು ವಾಗ್ದಾಳಿ ನಡೆಸಿದ್ದಾರೆ. ‌

ನಗರದ ಪ್ರೆಸ್‌ಕ್ಲಬ್‌ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಸಂತೋಷ್ ಶೆಟ್ಟಿ, ಶಾಸಕ ಯು.ಟಿ ಖಾದರ್‌ ಕಾರ್ಯ ವೈಖರಿಯಿಂದ ಬೇಸತ್ತು 100ಕ್ಕೂ ಅಧಿಕ ಬೆಂಬಲಿಗರೊಂದಿಗೆ ಮಂಗಳೂರಿನಲ್ಲಿ ಬಿಜೆಪಿ ಸೇರ್ಪಡೆಯಾಗಲಿದ್ದೇನೆ ಎಂದು ಹೇಳಿದರು. ಖಾದರ್‌ ಸತತ ನಾಲ್ಕು ಬಾರಿ ಶಾಸಕ, ಮಂತ್ರಿಯಾಗಿದ್ದಾರೆ. ಜನರ ಕೆಲಸ ಮಾಡಬೇಕು ಎಂಬ ಇಚ್ಛೆ ಇರುತ್ತಿದ್ದರೆ ಸಚಿವ ಸ್ಥಾನ ಇದ್ದಾಗ ಎಷ್ಟೋ ಅವಕಾಶಗಳಿದ್ದವು. ಉಳ್ಳಾಲದಲ್ಲಿ ಸರ್ಕಾರಿ ಹೈಟೆಕ್‌ ಆಸ್ಪತ್ರೆ ಮಾಡಬಹುದಿತ್ತು. ವಸತಿ ಸಚಿವರಾಗಿ ಬಡವರಿಗೆ ಮನೆ ಒದಗಿಸುವ ಕೆಲಸ ಮಾಡಬಹುದಿತ್ತು. ಆದರೆ ತನ್ನ ತಂದೆಯ ಕಾಲದಲ್ಲಿ ಉಳಿದಿದ್ದ ಒಂಭತ್ತು ಕೆರೆ ವಸತಿ ಯೋಜನೆಯನ್ನೂ ಪೂರ್ತಿಗೊಳಿಸಲು ಸಾಧ್ಯವಾಗಿಲ್ಲ. ಅಲ್ಲಿ ಕಟ್ಟಿರುವ ಮನೆಗಳು ಹಂದಿಗೂಡಿನಂತಾಗಿದ್ದು ಪಾಳು ಬಿದ್ದು ಹೋಗಿವೆ. ಹಾಗಂತ, ಇವರೇನು ಖಾಲಿ ಕುಳಿತಿಲ್ಲ. ಇವರಿಗೆ ದೇಶಾದ್ಯಂತ ಮನೆಗಳನ್ನು ಮಾಡಿಕೊಂಡಿದ್ದಾರೆ. 

ತೊಕ್ಕೊಟ್ಟು-ಕೊಣಾಜೆ ರಸ್ತೆ ಹಾಳಾಗಿ ಹೋಗಿದ್ದು ಈವರೆಗೂ ಸರಿಪಡಿಸಲಾಗಿಲ್ಲ. ಎಲ್ಲೋ ಒಳ ರಸ್ತೆಗಳಲ್ಲಿ ಸಣ್ಣ ಸಣ್ಣ ರೋಡ್‌ ಕೆಲಸ ಮಾಡಿಸಿ ಫೋಟೋಗೆ ಪೋಸು ಕೊಟ್ಟಿದ್ದಾರೆ. ರಾಜ್ಯದ 224 ಶಾಸಕರಲ್ಲಿ ಮನುಷ್ಯತ್ವ ಮತ್ತು ಕರುಣೆ ಎರಡೂ ಇಲ್ಲದ ಶಾಸಕನೆಂದರೆ ಅದು ಯು.ಟಿ ಖಾದರ್‌. ಮದುವೆ, ಮುಂಜಿ, ತೊಟ್ಟಿಲು ಹಾಕುವ ಕಾರ್ಯಕ್ರಮಕ್ಕೆ ಹೋಗಿ ತಾನೊಬ್ಬ ಸರಳ ರಾಜಕಾರಣಿ ಅಂತ ಪೋಸು ಕೊಡುತ್ತಾರೆ. ಇವರ ವರ್ತನೆಯಿಂದ ಬೇಸತ್ತು 100ಕ್ಕೂ ಅಧಿಕ ಬೆಂಬಲಿಗರೊಂದಿಗೆ ಬಿಜೆಪಿ ಸೇರ್ಪಡೆಯಾಗುತ್ತಿದ್ದೇನೆ. ಇವರಿಂದಾಗಿ ತೊಂದರೆಗೆ ಒಳಗಾದವರು ಕಾಂಗ್ರೆಸ್ ಪಕ್ಷದಲ್ಲಿ ಹಲವರಿದ್ದಾರೆ. ಎಲ್ಲರನ್ನು ಜೊತೆಗೆ ಒಯ್ಯುತ್ತೇನೆ ಎಂದರು ಸಂತೋಷ್ ಶೆಟ್ಟಿ.  ಕಾಂಗ್ರೆಸ್ ಸದಸ್ಯರಾದ ಶ್ರೀನಿವಾಸ ಶೆಟ್ಟಿ, ಪುರುಷೋತ್ತಮ ಅಂಚನ್‌, ಪದ್ಮನಾಭ ಗಟ್ಟಿ, ವಿನ್ಸಿ ಡಿಸೋಜ, ಲವೀಶ್ ಶೆಟ್ಟಿ ಉಪಸ್ಥಿತರಿದ್ದರು.

Mangalore MLA UT Khader is the most corrupted man, better to commit suicide than to have relationship with him slams Congress member Santosh Shetty during a press meet held at press club in Mangalore. He also said that more than hundreds of congress members are going to join BJP party. Santosh shetty was closely associated with Khader.