ಫೆ.28ಕ್ಕೆ ಸಚಿವ ಗಡ್ಕರಿ ಮಂಗಳೂರಿಗೆ ; ಸುರತ್ಕಲ್ ಟೋಲ್ ಗೇಟ್ ಬಗ್ಗೆ ಸಭೆ ನಡೆಸಿ, ಇಲ್ಲದಿದ್ದರೆ ಟೋಲ್ ಮಾಫಿಯಾದಲ್ಲಿ ಸಂಸದರು ಶಾಮೀಲು ಒಪ್ಪಿಕೊಂಡಂತೆ ! 

25-02-22 01:23 pm       Mangalore Correspondent   ಕರಾವಳಿ

ಸುರತ್ಕಲ್ ನಲ್ಲಿ ತೆರೆಯಲಾಗಿದ್ದ ತಾತ್ಕಾಲಿಕ ಟೋಲ್ ಗೇಟನ್ನು ಹೈವೇ ಅಧಿಕಾರಿಗಳು ಈಗ ಅಧಿಕೃತ ಎಂದು ಬೋರ್ಡ್ ಹಾಕಿದ್ದಾರೆ.

ಮಂಗಳೂರು, ಫೆ.25 : ಸುರತ್ಕಲ್ ನಲ್ಲಿ ತೆರೆಯಲಾಗಿದ್ದ ತಾತ್ಕಾಲಿಕ ಟೋಲ್ ಗೇಟನ್ನು ಹೈವೇ ಅಧಿಕಾರಿಗಳು ಈಗ ಅಧಿಕೃತ ಎಂದು ಬೋರ್ಡ್ ಹಾಕಿದ್ದಾರೆ. ಈ ಹಿಂದೆ ಸಂಸದ ನಳಿನ್ ಕುಮಾರ್ ಪತ್ರಿಕೆಗೆ ಹೇಳಿಕೆ ನೀಡಿ, ಸುರತ್ಕಲ್ ಟೋಲ್ ಗೇಟ್ ತಾತ್ಕಾಲಿಕ, ಅದನ್ನು ಹೆಜಮಾಡಿ ಟೋಲ್ ನಲ್ಲಿ ವಿಲೀನ ಮಾಡಲಾಗುವುದು ಎಂದು ಹಲವು ಬಾರಿ ಭರವಸೆ ನೀಡಿದ್ದರು. ಆದರೆ ಸಂಸದರ ಭರವಸೆ ಈಡೇರಿಲ್ಲ. ಈಗ ಫೆ.28 ರಂದು ಕೇಂದ್ರ ಭೂಸಾರಿಗೆ ಸಚಿವ ನಿತಿನ್ ಗಡ್ಕರಿ ಮಂಗಳೂರಿಗೆ ಬರಲಿದ್ದು ಈ ಸಂದರ್ಭದಲ್ಲಿ ಸಭೆ ನಡೆಸಿ ಸುರತ್ಕಲ್ ಟೋಲ್ ಗೇಟ್ ತೆರವುಗೊಳಿಸಬೇಕು ಎಂದು ಟೋಲ್ ಗೇಟ್ ವಿರೋಧಿ ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ಆಗ್ರಹಿಸಿದ್ದಾರೆ.‌ 

2019 ರ ಡಿಸೆಂಬರ್ ತಿಂಗಳಲ್ಲಿ‌ ಫಾಸ್ಟ್ ಟ್ಯಾಗ್ ಕಡ್ಡಾಯ ಸಂದರ್ಭ ಸುರತ್ಕಲ್ ತಾತ್ಕಾಲಿಕ ಟೋಲ್ ಗೇಟ್ ನಲ್ಲಿಯೂ ಫಾಸ್ಟ್ ಟ್ಯಾಗ್ ಕಡ್ಡಾಯಗೊಳಿಸಿ ಸ್ಥಳೀಯ ವಾಹನಗಳ ಉಚಿತ ಪ್ರಯಾಣ ರದ್ದುಗೊಳಿಸಲು ಹೆದ್ದಾರಿ ಪ್ರಾಧಿಕಾರ  ಮುಂದಾಗಿತ್ತು. ಆಗ ಟೋಟ್ ಗೇಟ್ ವಿರೋಧಿ ಹೋರಾಟ ಸಮಿತಿ ತೀವ್ರ ವಿರೋಧ ವ್ಯಕ್ತ ಪಡಿಸಿತ್ತು. ಇದು ಜಿಲ್ಲಾಡಳಿತ ಹಾಗೂ ಸಾರ್ವಜನಿಕರ ನಡುವೆ ತಿಕ್ಕಾಟಕ್ಕೂ ಕಾರಣವಾಗಿತ್ತು. ಆ ಸಂದರ್ಭ ಸಂಸತ್ ಅಧಿವೇಶನದ ಪ್ರಯುಕ್ತ ದೆಹಲಿಯಲ್ಲಿದ್ದ ಸಂಸದ ನಳಿನ್ ಕುಮಾರ್ ಕಟೀಲ್ ರಾಜ್ಯದ ಕೆಲವು ಸಂಸದರ ನಿಯೋಗದೊಂದಿಗೆ ಹೆದ್ದಾರಿ ಸಚಿವ ನಿತಿನ್ ಗಡ್ಕರಿಯವರನ್ನು ಭೇಟಿಯಾಗಿದ್ದರು.

See the source image

ಸಚಿವ ನಿತಿನ್ ಗಡ್ಕರಿ ಸುರತ್ಕಲ್ ಟೋಲ್ ಗೇಟ್ ತೆರವು ಸಂಬಂಧ ವಿಶೇಷ ಸಭೆ ನಡೆಸಲು ಹೆದ್ದಾರಿ ಇಲಾಖೆಯ ಅಧಿಕಾರಿಗಳಿಗೆ ಸೂಚಿಸಿದ್ದಾರೆ. ಕೆಲವೇ ದಿನಗಳಲ್ಲಿ ಸುರತ್ಕಲ್ ಟೋಲ್ ಗೇಟ್ ತೆರವುಗೊಳ್ಳಲಿದೆ ಎಂದು ಮಾಧ್ಯಮಗಳಿಗೆ ಮಾಹಿತಿಯನ್ನೂ ನೀಡಿದ್ದರು. ಇದು ಜಿಲ್ಲೆಯ ಪತ್ರಿಕೆಗಳಲ್ಲಿ  ವರದಿಯೂ ಆಗಿತ್ತು. ಈ ಪ್ರಯತ್ನಕ್ಕಾಗಿ ಕೆನರಾ ಬಸ್ಸು ಮಾಲಕರ ಸಂಘದವರು ಪತ್ರಿಕೆಗಳಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಅವರಿಗೆ ಅಭಿನಂದನೆ ಸಲ್ಲಿಸಿ‌ ಜಾಹೀರಾತನ್ನೂ ನೀಡಿದ್ದರು. ಆದರೆ ನಿತಿನ್ ಗಡ್ಕರಿಯವರು ಸಭೆ ನಡೆಸಿ ಟೋಲ್ ಗೇಟ್ ಸಮಸ್ಯೆ ಇತ್ಯರ್ಥ ಪಡಿಸಲಿದ್ದಾರೆ ಎಂದು ನಳಿನ್ ಕುಮಾರ್ ಕಟೀಲ್ ಹೇಳಿಕೆ ನೀಡಿ ಈಗ ಎರಡು ವರ್ಷ ಸಂದಿದೆ. ಈ ನಡುವೆ ಮೂರು ಬಾರಿ ಟೋಲ್ ಸಂಗ್ರಹ ಗುತ್ತಿಗೆ ನವೀಕರಣಗೊಂಡಿದೆ. ಆದರೆ ಸುರತ್ಕಲ್ ಟೋಲ್ ಸಂಗ್ರಹ ಕೇಂದ್ರಕ್ಕೆ ಸಂಬಂಧಿಸಿ ಈವರಗೆ ವಿಶೇಷ ಸಭೆಯಾಗಲಿ, ಸಾಮಾನ್ಯ ಸಭೆಯಾಗಲಿ ನಡೆದಿಲ್ಲ. ಬದಲಿಗೆ ಟೋಲ್ ದರವನ್ನು ಏರಿಸಿ ಪ್ರಯಾಣಿಕರ ಸುಲಿಗೆಯನ್ನು ಹೆಚ್ಚಿಸಲಾಗಿದೆ 

ಈಗ ಸುರತ್ಕಲ್ ಟೋಲ್ ಗೇಟ್ ಅಧಿಕೃತ ಎಂದು ಹೈವೇ ಅಧಿಕಾರಿಗಳು ಫಲಕವನ್ನೂ ಅಳವಡಿಸಿದ್ದಾರೆ. ಇದು ಸಂಸದ ನಳಿನ್ ಕುಮಾರ್ ಕಟೀಲ್ ಹಾಗೂ‌ ಸಚಿವ ನಿತಿನ್ ಗಡ್ಕರಿ ವಿಶ್ವಾಸಾರ್ಹತೆಯನ್ನು ಪ್ರಶ್ನೆ ಮಾಡುವಂತಾಗಿದೆ‌. ಈಗ ಸ್ವತಃ ಸಚಿವ ನಿತಿನ್ ಗಡ್ಕರಿ ಜಿಲ್ಲೆಯ ರಾಷ್ಟೀಯ ಹೆದ್ದಾರಿಗಳ ಕಾಮಗಾರಿಗಳಿಗೆ ಸಂಬಂಧಿಸಿ ಫೆಬ್ರವರಿ 28  ರಂದು ಮಂಗಳೂರಿಗೆ ಆಗಮಿಸುತ್ತಿದ್ದಾರೆ. ಇದೇ ಸಂದರ್ಭ ಅಂದು‌ ಮಾತು ಕೊಟ್ಟಂತೆ ಸುರತ್ಕಲ್ ಟೋಲ್ ಕೇಂದ್ರ ತೆರವಿಗೆ ಸಂಬಂಧಿಸಿ ಸಚಿವ ಗಡ್ಕರಿಯವರ ನೇತೃತ್ವದಲ್ಲಿ‌ ಸಭೆ ನಡೆಸಿ, ಈ ಕುರಿತು ಅಂತಿಮ ನಿರ್ಧಾರ ಅಗುವಂತೆ ಸಂಸದ ನಳಿನ್ ಕುಮಾರ್ ಕಟೀಲ್ ನೋಡಿಕೊಳ್ಳಬೇಕು. ಆ ಮೂಲಕ ಹಲವು ವರ್ಷಗಳಿಂದ ಜನರ ಅಕ್ರಮ ಸುಲಿಗೆಯಲ್ಲಿ‌ ತೊಡಗಿರುವ ಸುರತ್ಕಲ್ ಟೋಲ್ ಕೇಂದ್ರದ ಸಮಸ್ಯೆಯನ್ನು ಶಾಶ್ವತವಾಗಿ ಬಗೆಹರಿಸಬೇಕು.

MCC is responsible for pathetic condition of Mangaluru: Muneer Katipalla

ಒಂದು ವೇಳೆ ಸಚಿವರು ಸಭೆ ನಡೆಸಲು‌ ಮುಂದಾಗದಿದ್ದಲ್ಲಿ‌ ಸಂಸದರು, ಸಚಿವರು ಜನತೆಗೆ ಸುಳ್ಳು ಹೇಳಿ ದಾರಿ ತಪ್ಪಿಸಿರುವುದು, ಟೋಲ್ ಮಾಫಿಯಾದೊಂದಿಗೆ ಶಾಮೀಲಾಗಿರುವುದು ಸಾಬೀತಾಗುತ್ತದೆ. ಇದು ಮುಂದಿನ ದಿನಗಳಲ್ಲಿ ಹೋರಾಟ ಗಂಭೀರ ಸ್ವರೂಪ ತಾಳಲು ಕಾರಣವಾದರೆ ಅದಕ್ಕೆ ಸಂಸದ ನಳಿನ್ ಕುಮಾರ್ ಕಟೀಲ್ ನೇರ ಹೊಣೆಯಾಗಲಿದ್ದಾರೆ ಎಂದು ಟೋಲ್ ಗೇಟ್ ವಿರೋಧಿ  ಹೋರಾಟ ಸಮಿತಿಯ ಸಂಚಾಲಕ ಮುನೀರ್ ಕಾಟಿಪಳ್ಳ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Nitin Gadkari Minister of Road Transport and Highways of India to visit Mangalore on 28th Feb.