ಉಳ್ಳಾಲಕ್ಕೂ ಹಬ್ಬಿದ ಹಿಜಾಬ್ ಕಿಚ್ಚು ; ಟಿಸಿ ಕೊಡಿ ಇಲ್ಲವೇ ರಜೆ ಕೊಡಿ ಎಂದು ವಿದ್ಯಾರ್ಥಿನಿಯರ ಪಟ್ಟು! ಭಾರತ್ ಪಿಯು ಕಾಲೇಜಿನಲ್ಲಿ ಪೀಕಲಾಟ 

24-02-22 02:05 pm       Mangalore Correspondent   ಕರಾವಳಿ

ಸೂಕ್ಷ್ಮ ಪ್ರದೇಶ ಉಳ್ಳಾಲಕ್ಕೂ ಹಿಜಾಬ್ ಕಿಚ್ಚು ಹಬ್ಬಿದ್ದು ಭಾರತ್ ಪಿಯು ಕಾಲೇಜಿನಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಗೆ ಅವಕಾಶ ನೀಡದಿದ್ದರೆ ತಮಗೆ ಟಿ.ಸಿ ನೀಡಿ ಅಥವಾ ಕೋರ್ಟ್ ಆದೇಶ ಬರುವವರೆಗೆ ರಜೆ ನೀಡುವಂತೆ ಪಟ್ಟು ಹಿಡಿದಿದ್ದಾರೆ.

ಉಳ್ಳಾಲ, ಫೆ.24 : ಸೂಕ್ಷ್ಮ ಪ್ರದೇಶ ಉಳ್ಳಾಲಕ್ಕೂ ಹಿಜಾಬ್ ಕಿಚ್ಚು ಹಬ್ಬಿದ್ದು ಭಾರತ್ ಪಿಯು ಕಾಲೇಜಿನಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ಹಿಜಾಬ್ ಗೆ ಅವಕಾಶ ನೀಡದಿದ್ದರೆ ತಮಗೆ ಟಿ.ಸಿ ನೀಡಿ ಅಥವಾ ಕೋರ್ಟ್ ಆದೇಶ ಬರುವವರೆಗೆ ರಜೆ ನೀಡುವಂತೆ ಪಟ್ಟು ಹಿಡಿದಿದ್ದಾರೆ.

ಜಿಲ್ಲಾ ಶಿಕ್ಷಣ ಇಲಾಖೆಯಿಂದ ಬುಧವಾರ ಅಧಿಕೃತವಾಗಿ ತರಗತಿ ಒಳಗಡೆ ಹಿಜಾಬ್ ಧರಿಸಬಾರದು ಎಂಬ ಆದೇಶ ಬಂದ ಹಿನ್ನೆಲೆಯಲ್ಲಿ ಉಳ್ಳಾಲದ ಭಾರತ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಗೆ ನಿನ್ನೆಯೇ ಪ್ರಾಂಶುಪಾಲರು ಮತ್ತು ಉಪನ್ಯಾಸಕರು ತರಗತಿ ಒಳಗಡೆ ಹಿಜಾಬ್ ಧರಿಸುವಂತಿಲ್ಲ ಎಂದು ತಿಳಿ ಹೇಳಿದ್ದರು. ಆದರೆ ಇಂದು ಮುಸ್ಲಿಂ ವಿದ್ಯಾರ್ಥಿನಿಯರೆಲ್ಲ ಕಾಲೇಜಿಗೆ ಅಧಿಕ ಸಂಖ್ಯೆಯಲ್ಲಿ ಪೋಷಕರ ಜೊತೆಗೆ ಬಂದಿದ್ದರು. ಕೆಲವು ಮುಸ್ಲಿಂ ವಿದ್ಯಾರ್ಥಿನಿಯರು ತರಗತಿ ಒಳಗೆ ಹೋಗದೆ ಕಾಲೇಜಿನ ಕಂಪೌಂಡ್ ಹೊರಗೆ ಉಳಿದಿದ್ದರು. ಈ ಮಧ್ಯೆ ತರಗತಿಯಲ್ಲಿದ್ದ ಇತರ ವಿದ್ಯಾರ್ಥಿಗಳಿಗೆ ಉಪನ್ಯಾಸಕರು ಪಾಠ ಹೇಳಲು ಮುಂದಾದಾಗ ಮುಸ್ಲಿಂ ವಿದ್ಯಾರ್ಥಿಗಳು, ವಿದ್ಯಾರ್ಥಿನಿಯರ ಅನುಪಸ್ಥಿತಿಯಲ್ಲಿ ನಾವು ಪಾಠ ಕೇಳುವುದಿಲ್ಲವೆಂದು ಪಟ್ಟು ಹಿಡಿದಿದ್ದಾರೆ. 

ಮಧ್ಯಾಹ್ನ ಕಾಲೇಜಿನಲ್ಲಿ ನಡೆದ ಶಾಲಾಡಳಿತ ಮತ್ತು ಪೋಷಕರ ಸಭೆಯಲ್ಲಿ ಮುಸ್ಲಿಂ ವಿದ್ಯಾರ್ಥಿನಿಯರು ತರಗತಿ ಒಳಗಡೆ ಹಿಜಾಬ್ ಗೆ ಅವಕಾಶ ನೀಡಲು ಒತ್ತಾಯಿಸಿದರು. ಅಥವಾ ತಮಗೆ ಟಿ.ಸಿ ನೀಡುವಂತೆ ಕೇಳಿಕೊಂಡರು. ಸರಕಾರದ ಆದೇಶವನ್ನು ನಾವು ಪಾಲಿಸುತ್ತಿದ್ದೇವೆ. ಮುಂದೆ ಪಿಯು ಪರೀಕ್ಷೆಗಳಿರುವುದರಿಂದ‌ ಟಿ.ಸಿ ಈಗ ಕೊಡಲು ಸಾಧ್ಯವಿಲ್ಲ ಎಂದು ಶಾಲಾಡಳಿತ ಉಸ್ತುವಾರಿಯ ಉಳ್ಳಾಲ ಮೊಗವೀರ ಸಂಘದ ಅಧ್ಯಕ್ಷ ಮನೋಜ್ ಸಾಲಿಯಾನ್, ಯಶವಂತ್ ಅಮೀನ್, ರಾಜೇಶ್ ಪುತ್ರನ್ ಮೊದಲಾದವರು ವಿದ್ಯಾರ್ಥಿನಿಯರಿಗೆ ಮನದಟ್ಟು ಮಾಡಿದ್ದಾರೆ. ಪಟ್ಟು ಬಿಡದ ಮುಸ್ಲಿಂ ವಿದ್ಯಾರ್ಥಿನಿಯರು ನ್ಯಾಯಾಲಯದ ಆದೇಶ ಬರುವ ತನಕ ತಮಗೆ ರಜೆ ನೀಡುವಂತೆ ಒತ್ತಾಯಿಸಿದ್ದಾರೆ. 

ಸೂಕ್ಷ್ಮ ಪ್ರದೇಶ ಉಳ್ಳಾಲದಲ್ಲಿ ಈಗಾಗಲೇ ಇತಿಹಾಸ ಪ್ರಸಿದ್ಧ ದರ್ಗಾದ ಉರೂಸ್ ಕಾರ್ಯಕ್ರಮ‌ ನಡೆಯುತ್ತಿದ್ದು ಹಿಜಾಬ್ ವಿವಾದವು ಸಾಮರಸ್ಯದಿಂದ ಬಗೆಹರಿಯೋ ದೃಷ್ಟಿಯಿಂದ ಶಾಲಾಡಳಿತ ಸಮಿತಿಯು ಇಂದು ಮುಸ್ಲಿಂ ವಿದ್ಯಾರ್ಥಿನಿಯರಿಗೆ ತರಗತಿ ಒಳಗಡೆ ಹಿಜಾಬ್ ಧರಿಸಲು ಅನುಮತಿ ನೀಡಿದೆ. ಇಂದು ಸಂಜೆ ನಡೆಯುವ ಶಾಲಾಡಳಿತ ಸಮಿತಿಯ ಸಭೆಯಲ್ಲಿ ಹಿಜಾಬ್ ಬಗ್ಗೆ ಅಂತಿಮ‌ ತೀರ್ಮಾನ‌ ಕೈಗೊಳ್ಳಲಾಗುವುದೆಂದು ಉಳ್ಳಾಲ ಮೊಗವೀರ ಸಂಘದ ಅಧ್ಯಕ್ಷ ಮನೋಜ್‌ ಸಾಲಿಯಾನ್‌ ತಿಳಿಸಿದ್ದಾರೆ. 

ವಿದ್ಯಾರ್ಥಿಗಳಿಗೆ ಕ್ಲಾಸ್ ಕೊಟ್ಟ ಪಿಎಸ್ ಐ 

ಮುಸ್ಲಿಂ ವಿದ್ಯಾರ್ಥಿನಿಯರು ಇಲ್ಲದೆ ತಾವೂ ಪಾಠ ಕೇಳಲ್ಲ ಎಂದು ತರಗತಿಯೊಳಗಡೆ ಉಪನ್ಯಾಸಕರಲ್ಲಿ ವಾದ ಮಾಡುತ್ತಿದ್ದ ಮುಸ್ಲಿಂ ವಿದ್ಯಾರ್ಥಿಗಳಿಗೆ ಸ್ಥಳದಲ್ಲಿ ಬಂದೋಬಸ್ತಿನಲ್ಲಿದ್ದ ಉಳ್ಳಾಲ ಪಿಎಸ್ ಐ ಶಿವಕುಮಾರ್ ಕ್ಲಾಸ್ ನೀಡಿದ್ದಾರೆ. ತರಗತಿ ಒಳಗಡೆ ತೆರಳಿದ ಶಿವಕುಮಾರ್ ವಿದ್ಯಾರ್ಥಿಗಳನ್ನುದ್ದೇಶಿಸಿ ಕಾನೂನನ್ನು ಹೇಗೆ ಗೌರವಿಸಬೇಕು, ಕಾನೂನನ್ನು ಯಾವ ರೀತಿ ಪಾಲಿಸಬೇಕು, ಸರಕಾರದ ನೀತಿಗಳನ್ನು ನಾವು ಯಾಕೆ ಜಾರಿಗೆ ತರಬೇಕು ಎಂಬುದರ ಬಗ್ಗೆ ಉಪನ್ಯಾಸ ನೀಡಿದ್ದಾರೆ.

Hijab row now in Ullal, students of Bharath PU college in Mangalore demanded or TC or holiday if they aren't allowed with to wear Hijab.