ಕಾಸರಗೋಡು ಜಿಲ್ಲೆಯ ಕುಗ್ರಾಮದ ಹುಡುಗಿಯ ಮಹತ್ತರ ಸಾಧನೆ ; ಕನ್ನಡದ ಹೆಣ್ಮಗಳು ಡಾ.ಸೆಕೀಬಾಗೆ ಎಂಡಿಎಸ್ ನಲ್ಲಿ ಗೋಲ್ಡ್ ಮೆಡಲ್ ! 

16-02-22 09:05 pm       Mangalore Correspondent   ಕರಾವಳಿ

ಗಡಿನಾಡು ಕಾಸರಗೋಡು ಜಿಲ್ಲೆಯ ಕುಗ್ರಾಮದಲ್ಲಿ ಬೆಳೆದ ಮುಸ್ಲಿಂ ಸಮುದಾಯದ ಹುಡುಗಿಯೊಬ್ಬಳು ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವ ವಿದ್ಯಾನಿಲಯದಲ್ಲಿ ಎಂಡಿಎಸ್ ವಿಭಾಗದಲ್ಲಿ ಮೊದಲ ರ್ಯಾಂಕಿನೊಂದಿಗೆ ಚಿನ್ನದ ಪದಕದ ಗಳಿಸಿದ್ದು ಮಹತ್ತರ ಸಾಧನೆ ಮಾಡಿದ್ದಾಳೆ. 

ಮಂಗಳೂರು, ಫೆ.16 : ಗಡಿನಾಡು ಕಾಸರಗೋಡು ಜಿಲ್ಲೆಯ ಕುಗ್ರಾಮದಲ್ಲಿ ಬೆಳೆದ ಮುಸ್ಲಿಂ ಸಮುದಾಯದ ಹುಡುಗಿಯೊಬ್ಬಳು ರಾಜೀವ ಗಾಂಧಿ ಆರೋಗ್ಯ ವಿಜ್ಞಾನ ವಿಶ್ವ ವಿದ್ಯಾನಿಲಯದಲ್ಲಿ ಎಂಡಿಎಸ್ ವಿಭಾಗದಲ್ಲಿ ಮೊದಲ ರ್ಯಾಂಕಿನೊಂದಿಗೆ ಚಿನ್ನದ ಪದಕದ ಗಳಿಸಿದ್ದು ಮಹತ್ತರ ಸಾಧನೆ ಮಾಡಿದ್ದಾಳೆ. 

ಕಾಸರಗೋಡು ಜಿಲ್ಲೆಯ ಪೈವಳಿಕೆ ಬಳಿಯ ಕಾಡೂರು ಎಂಬ ಕುಗ್ರಾಮದ ನಿವಾಸಿಯಾಗಿರುವ ಡಾ. ಸೆಕೀಬಾ ಅಲಿ ಕಾಡೂರು ರಾಜೀವ ಗಾಂಧಿ ವಿವಿಯ ಕನ್ಸರ್ವೇಟಿವ್ ಡೆಂಟಿಸ್ಟ್ರಿ ಎಂಡ್ ಎಂಡೋಡೋಂಟಿಕ್ಸ್ ವಿಷಯದಲ್ಲಿ ಎಂಡಿಎಸ್ ಪೂರೈಸಿದ್ದು ಮೊದಲ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಬೆಂಗಳೂರಿನ ವಿಕ್ಟೋರಿಯಾ ಮೆಡಿಕಲ್ ಕಾಲೇಜಿನಲ್ಲಿ ಬಿಡಿಎಸ್ ಅಧ್ಯಯನ ನಡೆಸಿದ್ದ ಸೆಕೀಬಾ, ಹಾಸನದ ಹಾಸನಾಂಬ ಡೆಂಟಲ್ ಕಾಲೇಜಿನಲ್ಲಿ ಎಂಡಿಎಸ್ ವಿದ್ಯಾರ್ಥಿನಿಯಾಗಿದ್ದರು. 

ಈಕೆ ಪೈವಳಿಕೆ ಗ್ರಾಮ ಪಂಚಾಯತ್ ವ್ಯಾಪ್ತಿಯ ಕಾಡೂರಿನ ಮೊಹಮ್ಮದ್ ಅಲಿ ಮತ್ತು ಜೊಹರಾ ಅಲಿ ದಂಪತಿಯ ಪುತ್ರಿ. ಹುಟ್ಟೂರು ಕಾಡೂರಿನ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಣ ಆರಂಭಿಸಿದ್ದ ಸೆಕೀಬಾ, ಗಡಿಭಾಗದ ಕುರುಡಪದವು ಪ್ರೌಢಶಾಲೆಯಲ್ಲಿ ಹೈಸ್ಕೂಲ್, ಆನಂತರ ವಿಟ್ಲದ ಪಿಯು ಕಾಲೇಜಿನಲ್ಲಿ ಪಿಯುಸಿ ಮುಗಿಸಿದ್ದರು. ಪಿಯುಸಿಯಲ್ಲಿ ಗರಿಷ್ಠ ಅಂಕ ಪಡೆದು ಸರಕಾರಿ ಕೋಟಾದಲ್ಲಿ ಮೆಡಿಕಲ್ ಸೀಟು ಗಿಟ್ಟಿಸಿದ್ದರು. ಪ್ರಾಥಮಿಕ ಮತ್ತು ಪ್ರೌಢಶಾಲೆಯನ್ನು ಕನ್ನಡ ಮಾಧ್ಯಮದಲ್ಲಿ ಕಲಿತ ಹೆಣ್ಮಗಳು ಉನ್ನತ ಮಟ್ಟದ ಸಾಧನೆ ಮಾಡಿದ್ದು ಗಮನಾರ್ಹ. 

ಅಂದಹಾಗೆ, ಕರಾವಳಿಯ ಮುಸ್ಲಿಂ ಸಮುದಾಯದ ಹುಡುಗಿಯೊಬ್ಬಳು ವೈದ್ಯಕೀಯ ಕ್ಷೇತ್ರದಲ್ಲಿ ಗೋಲ್ಡ್ ಮೆಡಲ್ ಸಾಧನೆ ಮಾಡಿದ್ದು ಇದೇ ಮೊದಲು ಎನ್ನಲಾಗುತ್ತಿದೆ. ಈಕೆಯ ಸಾಧನೆಗೆ ಹಾಸನಾಂಬ ಕಾಲೇಜಿನ ಪ್ರಾಂಶುಪಾಲರು, ಸಿಬಂದಿ ವರ್ಗ ಹರ್ಷ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಕುಟುಂಬಸ್ಥರು  ಸಂತಸಗೊಂಡಿದ್ದಾರೆ.

Kasargod village girl Dr Sakiba Ali bags gold medal in MDS from RHGUS.