ಮರಳು ಮಾಫಿಯಾ ಕಮಿಷನ್ ; ಆಣೆ ಪ್ರಮಾಣಕ್ಕೆ ಧರ್ಮಸ್ಥಳಕ್ಕೆ ಬಂದ ಹರತಾಳು ಹಾಲಪ್ಪ ! ಆರೋಪ ಮಾಡಿ ತಪ್ಪಿಸಿಕೊಂಡ ಬೇಳೂರು ಗೋಪಾಲಕೃಷ್ಣ ! 

12-02-22 01:35 pm       Mangalore Correspondent   ಕರಾವಳಿ

ಮರಳು ಮಾಫಿಯಾದಲ್ಲಿ ಕಮಿಷನ್ ಪಡೆದ ಆರೋಪದಲ್ಲಿ ಆಣೆ ಪ್ರಮಾಣದ ಸವಾಲು ಸ್ವೀಕರಿಸಿದ್ದ ಶಾಸಕ ಹರತಾಳು ಹಾಲಪ್ಪ ತಮ್ಮ ಬೆಂಬಲಿಗರೊಂದಿಗೆ ಧರ್ಮಸ್ಥಳಕ್ಕೆ ಬಂದು ಆಣೆ ಮಾಡಿದ್ದಾರೆ. 

ಬೆಳ್ತಂಗಡಿ, ಫೆ.12 : ಮರಳು ಮಾಫಿಯಾದಲ್ಲಿ ಕಮಿಷನ್ ಪಡೆದ ಆರೋಪದಲ್ಲಿ ಆಣೆ ಪ್ರಮಾಣದ ಸವಾಲು ಸ್ವೀಕರಿಸಿದ್ದ ಶಾಸಕ ಹರತಾಳು ಹಾಲಪ್ಪ ತಮ್ಮ ಬೆಂಬಲಿಗರೊಂದಿಗೆ ಧರ್ಮಸ್ಥಳಕ್ಕೆ ಬಂದು ಆಣೆ ಮಾಡಿದ್ದಾರೆ. 

ಆರೋಪ ವಿಚಾರದಲ್ಲಿ ಆಣೆ ಪ್ರಮಾಣ ಮಾಡಲು ಹರತಾಳು ಹಾಲಪ್ಪ ಮತ್ತು ಬೇಳೂರು ಗೋಪಾಲಕೃಷ್ಣ ಇಬ್ಬರು ಕೂಡ  ಇಂದು ಧರ್ಮಸ್ಥಳಕ್ಕೆ ಬರುತ್ತಾರೆ ಎನ್ನಲಾಗಿತ್ತು.‌ ಇಂದು ಬೆಳಗ್ಗೆ ಶಾಸಕ ಹರತಾಳು ಹಾಲಪ್ಪ ಮಾತ್ರ ಧರ್ಮಸ್ಥಳಕ್ಕೆ ಬಂದಿದ್ದು ಮಂಜುನಾಥನ ದರ್ಶನ ಪಡೆದು ಆಣೆ ಪ್ರಮಾಣ ಮಾಡಿದ್ದಾರೆ. ಬೆಂಬಲಿಗರ ಜೊತೆ ದೇವರ ದರ್ಶನ ಪಡೆದು ದೇವರ ಎದುರೇ ಆಣೆ ಮಾಡಿದ್ದಾಗಿ ಶಾಸಕ ಹಾಲಪ್ಪ ಹೇಳಿಕೊಂಡಿದ್ದಾರೆ. ಆದರೆ ಬೇಳೂರು ಗೋಪಾಲಕೃಷ್ಣ ದೇವಸ್ಥಾನಕ್ಕೆ ಬರದೆ ದೂರ ಉಳಿದಿದ್ದಾರೆ.‌ 

ಮರಳು ಮಾಫಿಯಾದಿಂದ ತಾನಾಗಲಿ, ತನ್ನ ಸಂಗಡಿಗರಾಗಲಿ ಕಮಿಷನ್ ಪಡೆದಿಲ್ಲ. ಆದರೆ ಬೇಳೂರು ಗೋಪಾಲಕೃಷ್ಣ ವಿನಾಕಾರಣ ನನ್ನ ಮೇಲೆ ಆರೋಪ ಮಾಡುತ್ತಿದ್ದಾರೆ. ಆಬಳಿಕ ನನ್ನ ಜೊತೆಗಿರುವ ವಿನಾಯಕ ರಾವ್ ಮತ್ತು ಬಿ.ಟಿ ರವೀಂದ್ರ ಬಗ್ಗೆ ಆರೋಪ ಮಾಡಿದ್ದರು. ಈಗ ನಾವು ಎಲ್ಲ ಜೊತೆಗೆ ಬಂದು ಆಣೆ ಮಾಡಿ ಹೇಳಿದ್ದೇವೆ. ಮಾಜಿ ಶಾಸಕರ ಸವಾಲನ್ನು ಸ್ವೀಕರಿಸಿ ಫೆ.12 ರಂದು ಧರ್ಮಸ್ಥಳಕ್ಕೆ ತೆರಳುತ್ತಿರುವುದಾಗಿ ಮಾಧ್ಯಮದಲ್ಲಿ ಪ್ರಕಟಣೆ ಕೊಟ್ಟಿದ್ದೆ. ಆದರೆ ನನಗೆ ಆಣೆ ಪ್ರಮಾಣದ ಸವಾಲು ಹಾಕಿ ಅವರು ಈಗ ಪಲಾಯನ ಮಾಡುತ್ತಿದ್ದಾರೆ‌. ಈಗ ಗೋವಾ ಚುನಾವಣೆಯ ಸುಬೂಬು ಹೇಳ್ತಾ ಇದ್ದಾರೆ. ಬೇಳೂರು ಗೋಪಾಲಕೃಷ್ಣ ಅವರಿಗೆ ಬುದ್ಧಿ ಭ್ರಮಣೆಯಾಗಿದೆ.‌ ನನಗೆ ಸವಾಲು ಹಾಕಿದವರು ಈಗ ಧರ್ಮಸ್ಥಳಕ್ಕೆ ಬರಲಿ. ದೇವರೆದುರು ನಾನು ಆಣೆ ಪ್ರಮಾಣ ಮಾಡಿದ್ದೇನೆ. ಅವರೂ ಬಂದು ಮಾಡಲಿ ಎಂದು ಹರತಾಳು ಹಾಲಪ್ಪ ಹೇಳಿದ್ದಾರೆ.

Sand Commision, Halappa Harathalu visits Dharmasthala temple by taking oath as he challenged of doing it.