ಕಾರಿಂಜೇಶ್ವರ ಸನ್ನಿಧಿಯನ್ನು ಹಿಂದು ಸಮಾಜಕ್ಕೆ ಬಿಟ್ಟುಕೊಡಿ, ಗಣಿಗಾರಿಕೆ ನಿಲ್ಲಿಸಲು ನಮಗೆ ಗೊತ್ತಿದೆ ; ಗುಡುಗಿದ ವಜ್ರದೇಹಿ ಶ್ರೀ

21-12-21 10:54 pm       Mangalore Correspondent   ಕರಾವಳಿ

ಪ್ರಧಾನಿ ಮೋದಿ ಕಾಶಿ ವಿಶ್ವನಾಥನಿಗೆ ಕಾರಿಡಾರ್ ನಿರ್ಮಿಸಿದ್ದಾರೆ. ರಾಮ ಮಂದಿರಕ್ಕೂ ಕಾರಿಡಾರ್ ಮಾಡಲಾಗುತ್ತಿದೆ. ಮುಂದೆ ಮಥುರಾದಲ್ಲಿಯೂ ಕೃಷ್ಣನ ಕಾರಿಡಾರ್ ಆಗಲಿದೆ.

ಮಂಗಳೂರು, ಡಿ.21 : ಪ್ರಧಾನಿ ಮೋದಿ ಕಾಶಿ ವಿಶ್ವನಾಥನಿಗೆ ಕಾರಿಡಾರ್ ನಿರ್ಮಿಸಿದ್ದಾರೆ. ರಾಮ ಮಂದಿರಕ್ಕೂ ಕಾರಿಡಾರ್ ಮಾಡಲಾಗುತ್ತಿದೆ. ಮುಂದೆ ಮಥುರಾದಲ್ಲಿಯೂ ಕೃಷ್ಣನ ಕಾರಿಡಾರ್ ಆಗಲಿದೆ. ಕೈಲಾಸ ಶಿಖರ ಎಂದೇ ಖ್ಯಾತಿವೆತ್ತಿರುವ ರುದ್ರಭಯಂಕರ ಆವಾಸ ಸ್ಥಾನ ಕಾರಿಂಜೇಶ್ವರನಲ್ಲಿ ಕಾರಿಡಾರ್ ಮಾಡುವುದಕ್ಕೆ ಹಿಂದು ಸಮಾಜಕ್ಕೆ ಅಸಾಧ್ಯವೇ ? ಅದೇನೂ ಸಾಧ್ಯವಾಗದ ಮಾತಲ್ಲ. ಆದರೆ, ಕಾರಿಂಜೇಶ್ವರನ ಆಲಯವನ್ನು ಹಿಂದು ಸಮಾಜಕ್ಕೆ ಬಿಟ್ಟು ಕೊಡಿ.. ನಾವು ಹಿಂದು ಸಮಾಜದ ಸಾಮರ್ಥ್ಯವನ್ನು ತೋರಿಸುತ್ತೇವೆ ಎಂದು ಗುರುಪುರ ವಜ್ರದೇಹಿ ಮಠದ ರಾಜಶೇಖರಾನಂದ ಸ್ವಾಮೀಜಿ ಗುಡುಗಿದ್ದಾರೆ.

ಕಾರಿಂಜೇಶ್ವರ ಬೆಟ್ಟದ ಆಸುಪಾಸಿನಲ್ಲಿ ಗಣಿಗಾರಿಕೆ ನಿಲ್ಲಿಸಬೇಕು ಎಂದು ಆಗ್ರಹಿಸಿ, ಹಿಂದು ಜಾಗರಣಾ ವೇದಿಕೆ ವತಿಯಿಂದ ಮಂಗಳೂರಿನ ಮಿನಿ ವಿಧಾನಸೌಧದ ಬಳಿ ನಡೆದ ಧರಣಿ ಕಾರ್ಯಕ್ರಮದಲ್ಲಿ ಸ್ವಾಮೀಜಿ ಈ ಮಾತುಗಳನ್ನಾಡಿದ್ದಾರೆ.

ಕಾರಿಂಜೇಶ್ವರದ ದೇವಸ್ಥಾನ ಮುಜರಾಯಿ ಇಲಾಖೆಯಲ್ಲಿದೆ. ಅದನ್ನು ಸರಕಾರಕ್ಕೆ ಸುರಕ್ಷಿತವಾಗಿ ಇಟ್ಟುಕೊಳ್ಳಲು ಸಾಧ್ಯವಿಲ್ಲ ಅಂತಾದರೆ ಹಿಂದು ಸಮಾಜಕ್ಕೆ ಬಿಟ್ಟುಕೊಡಲಿ. ಅಲ್ಲಿನ ಬೆಟ್ಟದ ತುದಿಯಲ್ಲಿರುವ ಶಿವನ ಆಲಯ ಬಿರುಕು ಬಿಟ್ಟಿದೆ. 360 ಡಿಗ್ರಿ ನೇರ ಇರಬೇಕಾದ ಧ್ವಜ ಸ್ತಂಭ ಡೈನಮೈಟ್ ಸ್ಫೋಟಕ್ಕೆ ನಲುಗಿ ಅಡ್ಡಲಾಗಿ ನಿಂತಿದೆ. ಸುತ್ತಲಿನ ಕಾಡಿನ ಪ್ರದೇಶದಲ್ಲಿ ಗಣಿಗಾರಿಕೆ ನಡೆಸಕೂಡದು, ಅದರಿಂದ ದೇವಸ್ಥಾನಕ್ಕೆ ಧಕ್ಕೆಯಾಗುತ್ತದೆ ಎಂಬ ನಮ್ಮ ಕೂಗು ಜಿಲ್ಲಾಧಿಕಾರಿಗಳಿಗೆ ಕೇಳಿಸಿಲ್ಲವಾದರೇ ನಾವು ಯಾರಿಗೆ ಹೇಳಬೇಕು.

ಅಲ್ಲಿ ಅಕ್ರಮವೋ, ಸಕ್ರಮವೋ ಅದರ ಬಗ್ಗೆ ನಮ್ಮ ತಂಟೆ ತಕರಾರಿಲ್ಲ. ಸುತ್ತಲಿನ ಪ್ರದೇಶದಲ್ಲಿ ಗಣಿಗಾರಿಕೆಯನ್ನೇ ನಡೆಸಬಾರದು ಅನ್ನುವುದು ನಮ್ಮ ಬೇಡಿಕೆ. ದಕ್ಷಿಣದ ಭೂಕೈಲಾಸ ಎಂದು ಹೆಸರಾಗಿರುವ ಕ್ಷೇತ್ರಕ್ಕೆ ಗಣಿಗಾರಿಕೆಯಿಂದ ಧಕ್ಕೆ ಬರುವುದಿದ್ದರೆ ಅದನ್ನು ತಡೆಯಲು ಹಿಂದು ಸಮಾಜ ಅಧಿಕಾರಸ್ಥರಲ್ಲಿ ಅಲವತ್ತುಕೊಳ್ಳಬೇಕೇ.. ನಿಮಗೆ ನಿಲ್ಲಿಸಲು ಸಾಧ್ಯವಾಗದಿದ್ದರೆ ಹಿಂದು ಸಮಾಜಕ್ಕೆ ಹೇಗೆ ನಿಲ್ಲಿಸಬೇಕು ಅನ್ನುವುದು ಗೊತ್ತಿದೆ. ಸಮಸ್ತ ಹಿಂದು ಸಮಾಜದ ಬಾಂಧವರು ಗಣಿಗಾರಿಕೆ ನಡೆಸುವಲ್ಲಿಗೆ ಮುತ್ತಿಗೆ ಹಾಕುತ್ತೇವೆ. ನಾವೇ ಅಲ್ಲಿನ ಗಣಿಗಾರಿಕೆ ನಿಲ್ಲಿಸುತ್ತೇವೆ. ಅದರಿಂದ ನಮಗೆ ಜೈಲು ಪಾಲಾಗುವುದಾದರೆ ಅದಕ್ಕೆ ಸಿದ್ಧರಿದ್ದೇವೆ. ಶಿವನ ಆಲಯದ ಉಳಿವಿಗಾಗಿ ನಾವು ಜೈಲು ಪಾಲಾಗುವುದಕ್ಕೆ ಯಾವುದೇ ಭಯ ಪಡುವುದಿಲ್ಲ ಎಂದು ವಜ್ರದೇಹಿ ಸ್ವಾಮೀಜಿ ಹೇಳಿದರು.

ಹಿಂದು ಸಮಾಜ ಶಾಂತಿಯುತ ಹೋರಾಟ ಮಾಡಿಕೊಂಡು ಬಂದಿದೆ. ಆದರೆ, ಆಡಳಿತ ನಮ್ಮ ಆಗ್ರಹಕ್ಕೆ ಕಿವಿಕೊಡದೇ ಇರುವುದರಿಂದ, ಇಂದು ನಾವು ಸೂರ್ಯ ನಾರಾಯಣನ ಬಿಸಿಲ ಝಳದ ನಡುವೆ ಈ ರಸ್ತೆಯಲ್ಲಿ ಕುಳಿತುಕೊಳ್ಳುವ ಸ್ಥಿತಿ ಬಂದಿದೆ. ನಮ್ಮ ಪಣಕ್ಕೆ ಸೂರ್ಯ ನಾರಾಯಣನೇ ಸಾಕ್ಷಿ. ಹಿಂದು ಸಮಾಜದ ಸಮಸ್ತರು ಗಣಿಗಾರಿಕೆ ಸ್ಥಳಕ್ಕೆ ನುಗ್ಗುವುದಕ್ಕೆ ಅವಕಾಶ ಕೊಡುವುದಿಲ್ಲ ಎಂದು ಭಾವಿಸುತ್ತೇನೆ ಎಂದರು ವಜ್ರದೇಹಿ ಶ್ರೀಗಳು.

ಕಾಸರಗೋಡಿನ ಶಿವಾನಂದ ಸರಸ್ವತಿ ಸ್ವಾಮೀಜಿ, ವಿಹಿಂಪ ಮುಖಂಡ ಶರಣ್ ಪಂಪ್ವೆಲ್ ಸೇರಿದಂತೆ ಹಲವು ಪ್ರಮುಖರು ಉಪಸ್ಥಿತರಿದ್ದರು. ಬಂಟ್ವಾಳ ತಾಲೂಕಿನ ವಿವಿಧ ಕಡೆಗಳಿಂದ ಆಗಮಿಸಿದ ಮಹಿಳೆಯರು ಸೇರಿದಂತೆ ನೂರಾರು ಮಂದಿ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Hindu Jagarana Vedike (HJV) took out a protest march towards the DC’s office on Tuesday December 21 demanding a permanent end on quarrying and mining activities in the area around Karinjeshwar temple in Bantwal taluk.