"ಓಮಿಕ್ರಾನ್ ಹೈರಿಸ್ಕ್" ಘಾನಾದಿಂದ ಮಂಗಳೂರಿಗೆ ಬಂದ ಪ್ರಯಾಣಿಕರಲ್ಲಿ ಪಾಸಿಟಿವ್ ; ವೆನ್ಲಾಕ್ ದಾಖಲು, ರೋಗ ಲಕ್ಷಣವಿಲ್ಲ ! ತುರ್ತು ಸಭೆ ನಡೆಸಿದ ಜಿಲ್ಲಾಧಿಕಾರಿ

17-12-21 07:19 pm       HK Desk news   ಕರಾವಳಿ

ಓಮಿಕ್ರಾನ್ ರೂಪಾಂತರಿ ವೈರಸ್ ಹೈರಿಸ್ಕ್ ದೇಶವಾಗಿರುವ ಘಾನಾದಿಂದ ಮಂಗಳೂರಿಗೆ ಆಗಮಿಸಿದ ಪ್ರಯಾಣಿಕರೊಬ್ಬರಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿದ್ದು ಜಿಲ್ಲಾಧಿಕಾರಿ ಡಾ.ರಾಜೆಂದ್ರ ಕೆ.ವಿ. ಅವರು ತುರ್ತಾಗಿ ಸಭೆ ನಡೆಸಿದ್ದಾರೆ.

ಮಂಗಳೂರು, ಡಿ.17 : ಓಮಿಕ್ರಾನ್ ರೂಪಾಂತರಿ ವೈರಸ್ ಹೈರಿಸ್ಕ್ ದೇಶವಾಗಿರುವ ಘಾನಾದಿಂದ ಮಂಗಳೂರಿಗೆ ಆಗಮಿಸಿದ ಪ್ರಯಾಣಿಕರೊಬ್ಬರಲ್ಲಿ ಕೊರೊನಾ ಪಾಸಿಟಿವ್ ಪತ್ತೆಯಾಗಿದ್ದು ಜಿಲ್ಲಾಧಿಕಾರಿ ಡಾ.ರಾಜೆಂದ್ರ ಕೆ.ವಿ. ಅವರು ತುರ್ತಾಗಿ ಸಭೆ ನಡೆಸಿದ್ದಾರೆ. ಮಂಗಳೂರು ಏರ್ಪೋರ್ಟ್ ಮುಖ್ಯಸ್ಥರು, ಏರ್ಪೋರ್ಟ್ ಆರೋಗ್ಯಾಧಿಕಾರಿ (ಎ.ಪಿ.ಹೆಚ್.ಓ), ಜಿಲ್ಲಾ ಸರ್ವೇಕ್ಷಾಣಾಧಿಕಾರಿ (ಡಿ.ಎಸ್.ಓ), ಕೋವಿಡ್ ನೋಡಲ್ ಅಧಿಕಾರಿ ಹಾಗೂ ಅಪೋಲೊ ಲ್ಯಾಬ್ ಮುಖ್ಯಸ್ಥರ ಜೊತೆಗೆ ಜಿಲ್ಲಾಧಿಕಾರಿ ಸಭೆ ನಡೆಸಿ ನಿಗಾ ವಹಿಸಲು ಸೂಚನೆ ನೀಡಿದ್ದಾರೆ. 

ಶುಕ್ರವಾರ ಮಧ್ಯಾಹ್ನ ಏರ್ ಪೋರ್ಟ್ ಕಾನ್ಫರೆನ್ಸ್ ಸಭಾಂಗಣದಲ್ಲಿ ಹಮ್ಮಿಕೊಂಡ ಸಭೆಯಲ್ಲಿ ಅಧಿಕಾರಿಗಳೊಂದಿಗೆ ಚರ್ಚಿಸಿದ್ದಾರೆ. ಘಾನಾ ದೇಶದಿಂದ ಬಂದ ಒಬ್ಬರು ಪ್ರಯಾಣಿಕರನ್ನು ಗುರುವಾರ ರಾತ್ರಿಯೇ ವೆನ್‍ಲಾಕ್ ಆಸ್ಪತ್ರೆಯ ಐಸೋಲೇಶನ್ ವಾರ್ಡ್ ಗೆ ದಾಖಲಿಸಲಾಗಿದ್ದು, ಅವರಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಆ ಪ್ರಯಾಣಿಕರಲ್ಲಿ ಯಾವುದೇ ರೋಗ ಲಕ್ಷಣ ಕಂಡು ಬಂದಿರುವುದಿಲ್ಲ. ಆ ಪ್ರಯಾಣಿಕ ವಿಮಾನದಲ್ಲಿ ಕುಳಿತಿದ್ದ ಸೀಟಿನ 3 ಸಾಲಿನ ಎದುರು ಹಾಗೂ 3 ಸಾಲಿನ ಹಿಂದಿನ ಪ್ರಯಾಣಿಕರು ಸೇರಿದಂತೆ ಒಟ್ಟು 27 ಪ್ರಯಾಣಿಕರನ್ನು ಪ್ರಾಥಮಿಕ ಸಂಪರ್ಕಿತರೆಂದು ಗುರುತಿಸಿ ಅವರನ್ನು ಆರೋಗ್ಯ ಇಲಾಖೆಯಿಂದ ರ್ಯಾಪಿಡ್ ಆರ್.ಟಿ.ಪಿ.ಸಿ.ಆರ್ ಮತ್ತು ರೇಂಡಮ್ ಪರೀಕ್ಷೆಗೆ ಒಳಪಡಿಸಿ, ಕ್ವಾರಂಟೈನ್ ಮಾಡಲಾಗಿದೆ. ಪಾಸಿಟಿವ್ ಬಂದಿರುವ ಪ್ರಯಾಣಿಕರ ಗಂಟಲು ದ್ರವ ಮಾದರಿಯನ್ನು ಜಿನೋಮಿಕ್ ಸೀಕ್ವೆನ್ಸ್ ಪರೀಕ್ಷೆಗಾಗಿ ಬೆಂಗಳೂರಿಗೆ ಕಳುಹಿಸಿಕೊಡಲಾಗಿದೆ ಎಂಬ ಮಾಹಿತಿ ಪಡೆದುಕೊಂಡಿದ್ದಾರೆ.  

ಜಿಲ್ಲಾಧಿಕಾರಿಯವರು ವಿಮಾನ ನಿಲ್ದಾಣದ ಅಧಿಕಾರಿಯೊಂದಿಗೆ ಆರ್.ಟಿ.ಪಿ.ಸಿ.ಆರ್. ಪರೀಕ್ಷೆ, ಇಮಿಗ್ರೇಶನ್, ಏರ್‍ ಸುವಿಧಾ, ಚೆಕ್ಕಿಂಗ್ ಪಾಯಿಂಟ್, ಟ್ರಾನ್‍ಸಿಟ್ ಪ್ಯಾಸಿಂಜರ್ ಹಾಗೂ ರ್ಯಾಂಡಮೈಸ್ ಪರೀಕ್ಷೆಗಳ ಬಗ್ಗೆಯೂ ವಿವರವಾಗಿ ತಿಳಿದುಕೊಂಡು ಸೂಕ್ತ ಸಲಹೆ ಸೂಚನೆಗಳನ್ನು ನೀಡಿದರು. ಸಭೆಯಲ್ಲಿ ಚೀಫ್ ಏರ್‍ಪೋರ್ಟ್ ಆಫೀಸರ್ ನೀರವ್ ಶಾ, ಕೋವಿಡ್ ನೋಡಲ್ ಅಧಿಕಾರಿ ಡಾ. ಎಚ್. ಅಶೋಕ್, ಏರ್‍ಲೈನ್ ಸ್ಟೇಷನ್ ಮ್ಯಾನೇಜರ್ಸ್, ಟರ್ಮಿನಲ್ ಮ್ಯಾನೇಜರ್, ಇಮಿಗ್ರೇಶನ್ ಆಫೀಸರ್ಸ್ ಹಾಗೂ ಸಂಬಂಧಿಸಿದ ಅಧಿಕಾರಿಗಳಿದ್ದರು.

Omicron fear, Passenger who came from Ghana to Mangalore tested covid positive. Emergency meeting was held by DC in regards to this.