ನಳಿನ್ ಕುಮಾರ್ ಕಟೀಲರೇ ತಾಕತ್ತಿಲ್ಲದಿದ್ದರೆ ರಾಜಿನಾಮೆ ಕೊಟ್ಟು ಹೋಗಿ.. ಧಮ್ ಇಲ್ಲದೆ ಅಧಿಕಾರಕ್ಕೆ ಅಂಟಿಕೊಳ್ಳಬೇಡಿ ; ಬಜರಂಗದಳ ಕಾರ್ಯಕರ್ತರ ಬಹಿರಂಗ ಆಕ್ರೋಶ

12-12-21 03:39 pm       HK Desk news   ಕರಾವಳಿ

ನಳಿನ್ ಕುಮಾರ್ ಕಟೀಲ್ ಅವರೇ ನಿಮಗೆ ತಾಕತ್ತಿಲ್ಲದಿದ್ದರೆ, ರಾಜಿನಾಮೆ ಕೊಟ್ಟು ಹೋಗಿ.. ಧಮ್ ಇಲ್ಲದಿದ್ದರೆ ಅಧಿಕಾರಕ್ಕೆ ಅಂಟಿಕೊಂಡು ಕೂರಬೇಡಿ.. ಹಿಂದು ಸಮಾಜಕ್ಕಾಗಿ ದುಡಿಯುವ ಹಿಂದು ಕಾರ್ಯಕರ್ತರು ಪೊಲೀಸರ ಕಿರುಕುಳದಿಂದ ಒಡೆದು ಹೋಗುತ್ತಿದ್ದಾರೆ.. ನೀವು ಗೆದ್ದಿರುವುದು ನಿಮ್ಮ ಶಕ್ತಿಯಿಂದಲ್ಲ.

ಮಂಗಳೂರು, ಡಿ.12 : ನಳಿನ್ ಕುಮಾರ್ ಕಟೀಲ್ ಅವರೇ ನಿಮಗೆ ತಾಕತ್ತಿಲ್ಲದಿದ್ದರೆ, ರಾಜಿನಾಮೆ ಕೊಟ್ಟು ಹೋಗಿ.. ಧಮ್ ಇಲ್ಲದಿದ್ದರೆ ಅಧಿಕಾರಕ್ಕೆ ಅಂಟಿಕೊಂಡು ಕೂರಬೇಡಿ.. ಹಿಂದು ಸಮಾಜಕ್ಕಾಗಿ ದುಡಿಯುವ ಹಿಂದು ಕಾರ್ಯಕರ್ತರು ಪೊಲೀಸರ ಕಿರುಕುಳದಿಂದ ಒಡೆದು ಹೋಗುತ್ತಿದ್ದಾರೆ.. ನೀವು ಗೆದ್ದಿರುವುದು ನಿಮ್ಮ ಶಕ್ತಿಯಿಂದಲ್ಲ. ಕಾರ್ಯಕರ್ತರಿಂದ, ಸ್ವಲ್ಪ ನೆನಪಿಸಿಕೊಳ್ಳಿ.. ಈ ರೀತಿಯ ಪೋಸ್ಟ್ ಗಳು ಮಂಗಳೂರಿನಲ್ಲಿ ಭಾರೀ ವೈರಲ್ ಆಗಿದೆ. ಹೀಗೆ ಬಹಿರಂಗವಾಗಿ ಬಿಜೆಪಿ ರಾಜ್ಯಾಧ್ಯಕ್ಷರನ್ನು ಛೇಡಿಸಿದ್ದು ಬೇರಾರೂ ಅಲ್ಲ. ಬಿಜೆಪಿ, ಸಂಘ ಪರಿವಾರಕ್ಕಾಗಿ ಅವಿರತ ದುಡಿಯುತ್ತಿರುವ ಕಾರ್ಯತರ್ತರೇ ಹೀಗೆ ಸವಾಲು ಹಾಕಿದ್ದಾರೆ.

ದಕ್ಷಿಣ ಕನ್ನಡ ಸಂಸದರಾಗಿ ಮೂರು ಬಾರಿ ಅಧಿಕಾರ ಅನುಭವಿಸಿದರೂ, ಪಕ್ಷ ಮತ್ತು ಹಿಂದು ಸಮಾಜಕ್ಕಾಗಿ ಏನೂ ಮಾಡದಿದ್ದರೂ ಈಗ ರಾಜ್ಯಾಧ್ಯಕ್ಷರಾಗಿರುವ ನಳಿನ್ ಕುಮಾರ್ ಕಟೀಲ್ ಅವರನ್ನು ಬಹಿರಂಗ ಪ್ರಶ್ನೆ ಮಾಡುತ್ತಿದ್ದಾರೆ. ಕೆಲವು ಕಾರ್ಯಕರ್ತರು ವಾಟ್ಸಪ್, ಫೇಸ್ಬುಕ್ ಜಾಲತಾಣದಲ್ಲಿ ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದಾರೆ. ಇದಕ್ಕೆ ಕಾರಣವಾಗಿದ್ದು ಎರಡು ದಿನಗಳ ಹಿಂದೆ ಬಸ್ಸಿನಲ್ಲಿದ್ದ ಯುವಕ- ಯುವತಿಯನ್ನು ಪ್ರಶ್ನಿಸಿ, ನೈತಿಕ ಪೊಲೀಸ್ ಗಿರಿ ನಡೆಸಿರುವ ಘಟನೆಯಲ್ಲಿ ಪೊಲೀಸರು ಸ್ವಯಂಪ್ರೇರಿತ ಕೇಸು ದಾಖಲಿಸಿ, ನಾಲ್ವರನ್ನು ಬಂಧಿಸಿರುವ ಬೆಳವಣಿಗೆ.

ಮಂಗಳೂರಿನಿಂದ ಉಡುಪಿಗೆ ತೆರಳುವ ಬಸ್ಸಿನಲ್ಲಿ ಮುಸ್ಲಿಂ ಯುವಕನ ಜೊತೆ ಹಿಂದು ಯುವತಿ ಅಸಭ್ಯವಾಗಿ ವರ್ತಿಸುತ್ತಿದ್ದಾಳೆಂದು ಬಜರಂಗದಳ ಕಾರ್ಯಕರ್ತರು ಮತ್ತು ಅಲ್ಲಿದ್ದ ಬಸ್ ಸಿಬಂದಿ ಪ್ರಶ್ನೆ ಮಾಡಿದ್ದರು. ಅಲ್ಲದೆ, ಯುವಕನನ್ನು ದಬಾಯಿಸಿ, ಬಸ್ಸಿನಿಂದ ಕೆಳಗಿಳಿಸಿದ್ದರು. ಯುವತಿಯನ್ನೂ ತೀವ್ರವಾಗಿ ತರಾಟೆಗೆತ್ತಿಕೊಂಡಿದ್ದರು. ಮಂಗಳೂರಿನ ಖಾಸಗಿ ಬಸ್ ನಿಲ್ದಾಣದಲ್ಲಿ ನಡೆದ ಘಟನೆಯ ವಿಡಿಯೋ ವೈರಲ್ ಆಗಿತ್ತು. ವಿಡಿಯೋ ಬೆನ್ನಲ್ಲೆ ಮಂಗಳೂರಿನ ಪಾಂಡೇಶ್ವರ ಪೊಲೀಸರು ಕಮಿಷನರ್ ಶಶಿಕುಮಾರ್ ಸೂಚನೆಯಂತೆ ಸುಮೊಟೋ ಕೇಸು ದಾಖಲಿಸಿ, ನಾಲ್ವರು ಬಸ್ ಸಿಬಂದಿಯನ್ನು ಬಂಧಿಸಿದ್ದರು.

ಪೊಲೀಸರು ನಾಲ್ವರನ್ನು ಬಂಧಿಸಿದ ಬೆನ್ನಲ್ಲೇ ಹಿಂದು ಸಂಘಟನೆಯ ಕಾರ್ಯಕರ್ತರ ಆಕ್ರೋಶ ಸಂಸದ ನಳಿನ್ ಕುಮಾರ್ ಮತ್ತು ಬಿಜೆಪಿಯ ಇತರ ಶಾಸಕರ ವಿರುದ್ಧ ತಿರುಗಿದೆ. ಬಜರಗದಳ ಮಂಗಳೂರು ಘಟಕದ ಹೆಸರಲ್ಲಿ ಫೇಸ್ಬುಕ್ ಪೇಜ್ ನಲ್ಲೂ ಈ ಬಗ್ಗೆ ಬಹಿರಂಗ ಪ್ರಶ್ನೆ ಮಾಡಲಾಗಿದೆ. ಇದಲ್ಲದೆ, ವಿಶ್ವ ಹಿಂದು ಪರಿಷತ್ ವಿಭಾಗ ಕಾರ್ಯದರ್ಶಿ ಶರಣ್ ಪಂಪ್ವೆಲ್ ಕೂಡ, ಈ ರೀತಿಯ ಬೆಳವಣಿಗೆ ಬಗ್ಗೆ ಆಡಳಿತ ನಡೆಸುತ್ತಿರುವ ಬಿಜೆಪಿ ವಿರುದ್ಧ ನೊಂದು ಪೋಸ್ಟ್ ಮಾಡಿದ್ದಾರೆ. ನಿಮ್ಮ ಮೇಲೆ ಕೇಸು ದಾಖಲಾಗಿರಬಹುದು. ಆದರೆ ಹಿಂದು ಹುಡುಗಿಯನ್ನು ಲವ್ ಜಿಹಾದ್ ನಿಂದ ರಕ್ಷಣೆ ಮಾಡಿದ್ದೀರಾ.. ನಿಮಗೆ ನನ್ನದೊಂದು ನಮಸ್ಕಾರ ಎಂದು ಶರಣ್ ಪಂಪ್ವೆಲ್ ಪ್ರಶ್ನೆ ಮಾಡಿದ್ದಾರೆ.

ಬಜರಂಗದಳ ಜಿಲ್ಲಾ ಜವಾಬ್ದಾರಿ ಹೊಂದಿರುವ ಪುನೀತ್ ಅತ್ತಾವರ ಕೂಡ ಇದೇ ರೀತಿಯ ಪ್ರಶ್ನೆ ಎತ್ತಿ ಫೇಸ್ಬುಕ್ ಪೋಸ್ಟ್ ಮಾಡಿದ್ದಾರೆ. ಮಂಗಳೂರು ಹಿಂದುಸ್ ಎನ್ನುವ ಫೇಸ್ಬುಕ್ ಪೇಜ್ ನಲ್ಲಿ ಹಿಂದು ಸಹೋದರರೇ, ಇಷ್ಟು ದಿನ ತಾಳ್ಮೆಯಿಂದ ಇದ್ದಿದ್ದು ಸಾಕು. ಇನ್ನು ನಾವು ತಾಳ್ಮೆಯಿಂದ ಕುಳಿತರೆ ಇವರು ನಾಳೆ ನಮ್ಮ ಮನೆಯನ್ನೇ ಒತ್ತೆ ಇಡಲು ಹಿಂಜರಿಯಲ್ಲ. ಚುನಾವಣೆ ಹತ್ತಿರ ಬಂದಾಗ ಹಿಂದುತ್ವ ಎಂದು ನಮ್ಮ ಕಿವಿಗೆ ಹೂ ಇಟ್ಟು ಈಗ ಹಿಂದುತ್ವವನ್ನು ಎಡಗಾಲಿನಿಂದ ತುಳಿಯುತ್ತಿದ್ದಾರೆ ಎಂದು ಬರೆದು ನಳಿನ್ ಕುಮಾರ್, ಹರೀಶ್ ಪೂಂಜ, ಸುನಿಲ್ ಕುಮಾರ್, ವೇದವ್ಯಾಸ ಕಾಮತ್, ರಘುಪತಿ ಭಟ್ ಮೊಬೈಲ್ ನಂಬರ್ ಹಾಕಿ ಕರೆ ಮಾಡುವಂತೆ ಬಹಿರಂಗ ಪ್ರಶ್ನೆ ಎತ್ತಿದ್ದಾರೆ.

ಇನ್ನೊಂದು ಪೋಸ್ಟ್ ನಲ್ಲಿ ಉಳ್ಳಾಲ ಬಜರಂಗದಳ ಯುವಕರು, ಉಳ್ಳಾಲದಲ್ಲಿ ಮುಸ್ಲಿಂ ಯುವತಿಯನ್ನು ಪ್ರೀತಿಸಿದ್ದಕ್ಕಾಗಿ ಹಿಂದು ಯುವಕನ ಮೇಲೆ ಅತ್ಯಾಚಾರ ಕೇಸ್.. ಜಿಹಾದಿಗಳ ಜೊತೆ ಒಳ ಒಪ್ಪಂದ ಮಾಡಿಕೊಂಡಿದ್ದಾರೆಯೇ ಉಳ್ಳಾಲ ಪೊಲೀಸರು, ಇದಕ್ಕೆ ಕಾರಣ ನಮ್ಮ ರಾಜ್ಯದಲ್ಲಿ ಅಧಿಕಾರವಿದ್ದೂ ಮಲಗಿರುವ ಬಿಜೆಪಿ ಸರಕಾರ ಎಂದು ಟೀಕಿಸಿದ್ದಾರೆ.

ಪೋಸ್ಟ್ ಕಾರ್ಡ್ ಹೆಸರಲ್ಲಿ ಬಿಜೆಪಿ, ಸಂಘ ಪರಿವಾರದ ಪರವಾಗಿ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ಮಹೇಶ್ ವಿಕ್ರಮ್ ಹೆಗ್ಡೆ, ಇಷ್ಟೊಂದು ದುರ್ಬಲ ಬಿಜೆಪಿ ರಾಜ್ಯಾಧ್ಯಕ್ಷರನ್ನು ಈ ರಾಜ್ಯ, ಇಡೀ ದೇಶವೇ ಕಂಡಿಲ್ಲ. ಜನರಲ್ ರಾವತ್, ಸೈನ್ಯದ ಅವಹೇಳನ ಮಾಡುವವರ ವಿರುದ್ಧ ನಾವೇ ದಾಖಲೆ ಸಹಿತ ದೂರು ಸಲ್ಲಿಸಿದರೂ, ಕೇಸು ದಾಖಲಿಸಲು ಮೀನ ಮೇಷ ಎಣಿಸುವ ಬಿಜೆಪಿ ಸರಕಾರ. ಲವ್ ಜಿಹಾದ್ ತಡೆಯಲು ಹೋದ ಹಿಂದು ಕಾರ್ಯಕರ್ತರ ಮೇಲೆ ಸುಮೊಟೋ ಕೇಸು ಹಾಕುತ್ತದೆ ಅಂದರೆ ನಿಜಕ್ಕೂ ನಾಚಿಕೆಗೇಡು. ನಳಿನ್ ಕುಮಾರ್ ಕಟೀಲ್ ಅವರೇ ನೀವು ಬಜರಂಗದಳ ಹಿನ್ನೆಲೆಯಿಂದ ಬಂದವರು, ದೇವಸ್ಥಾನ ನೆಲಸಮ ಮಾಡುವಾಗಲೂ ನೀವು ಮಾತನಾಡಲಿಲ್ಲ. ಇಂದು ನಿಮ್ಮದೇ ಪ್ರದೇಶದಲ್ಲಿ ಈ ಕೆಲಸವಾಗಿದೆ. ದಯವಿಟ್ಟು ರಾಜಿನಾಮೆ ಕೊಟ್ಟು ನಿಮ್ಮ ಮರ್ಯಾದೆ ಉಳಿಸಿಕೊಳ್ಳಿ ಎಂದು ಬರೆದಿದ್ದಾರೆ.

ಅತ್ತ ಬಿಜೆಪಿ ರಾಜ್ಯಾಧ್ಯಕ್ಷರನ್ನು ಈಗಾಗ್ಲೇ ಬಿಜೆಪಿ ವರಿಷ್ಠರು ರಾಜಿನಾಮೆ ಕೊಟ್ಟು ಹೋಗಲು ತಿಳಿಸಿದ್ದು, ಇನ್ನು ಕೆಲವೇ ದಿನಗಳಲ್ಲಿ ರಾಜಿನಾಮೆ ನೀಡಲಿದ್ದಾರೆ ಎಂಬ ಸುದ್ದಿ ಹರಡಿರುವಾಗಲೇ ಕರಾವಳಿಯ ಹಿಂದು ಸಂಘಟನೆಯ ಕಾರ್ಯಕರ್ತರು ಕೂಡ ಇದೇ ರೀತಿಯ ಬೇಡಿಕೆ ಮುಂದಿಟ್ಟಿದ್ದು ಕಾಕತಾಳೀಯ.

Mangalore Bajarang Dal leaders slams MP and state president Nalin Kukar kateel over moral policing demand resignation. Some Hindu activist were arrested over moral policing case where MP Kateel has shown attention therefore Vhp Facebook post have become viral on social media.